ಯಂತ್ರಮೇಳ ಕೃಷಿಕರಿಗೆ ಏಕೆ ಬೇಕು ? | ಹುಡುಕಿದರೆ ಹೆಚ್ಚೇನು ಸಿಗದು…! , ಆದರೆ ಒಳನೋಟಕ್ಕೆ ಹೆಚ್ಚು ಸಿಗುವುದು..! | ಕೃಷಿಕ ಎ ಪಿ ಸದಾಶಿವ ಅಭಿಪ್ರಾಯ |

February 15, 2023
12:58 PM
 ಯಂತ್ರಮೇಳ ಅಥವಾ ಕೃಷಿ ಮೇಳಗಳ ಬಗ್ಗೆ ಆಗಾಗ್ಗೆ ಚರ್ಚೆ ಆಗುತ್ತದೆ. ಹೆಚ್ಚೇನು ಇಲ್ಲ, ಹೊಸದು ಇಲ್ಲ, ಮೇಳ ಮಾತ್ರಾ, ಅದೊಂದು ಜಾತ್ರೆ… , ಹೀಗೆಲ್ಲಾ ಉತ್ತರಗಳು ಇರುತ್ತವೆ. ಆದರೆ ಕೃಷಿಕ ಎ ಪಿ ಸದಾಶಿವ ಅದರ ಆಚೆಗೆ ವಿಶ್ಲೇಷಣೆ ಮಾಡಿದ್ದಾರೆ. ಪುತ್ತೂರಿನ ಕೃಷಿ ಯಂತ್ರಮೇಳದ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ… 

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಪುತ್ತೂರಿನ ಯಂತ್ರಮೇಳ ಜನಾಕರ್ಷಣೀಯವಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿತು. ಹೊಸತೇನಾದರೂ ಇದೆಯೇ ಎಂದು ಹುಡುಕಿ ಬಂದವರಿಗೆ ಹೆಚ್ಚೇನೂ ದೊರೆತಿರಲಾರದು. ಬಹುಶಃ ಇನ್ನು ಮುಂದೆ ಯಾವುದೇ ಮೇಳಗಳಲ್ಲಿ ಹೊಸತೇನನ್ನೂ ನಿರೀಕ್ಷಿಸಲಾಗದು. ಯಾವುದೇ ಹೊಸತು ಬಂದರೂ ನೂರಾರು ಯೂಟ್ಯೂಬ್ ಚಾನೆಲ್‌ ಗಳಲ್ಲಿ, ಫೇಸ್ಬುಕ್ ಗಳಲ್ಲಿ, ವಾಟ್ಸಪ್ ಗುಂಪುಗಳಲ್ಲಿ ಹರಿದು ಹಂಚಿ ಹೋಗಿಬಿಡುತ್ತದೆ. ಮೇಳಗಳಿಗೆ ಬರುವಾಗ ಸುದ್ದಿ ಹಳತಾಗಿಬಿಡುತ್ತದೆ.

ಅದೂ ಅಲ್ಲದೆ ಊರೂರುಗಳಲ್ಲಿ ಅಲ್ಲಲ್ಲಿ ಆಗಾಗ ಕೃಷಿ ಮೇಳಗಳು ನಡೆಯುತ್ತಲೇ ಇರುತ್ತದೆ. ಇಷ್ಟೆಲ್ಲಗಳ ಮಧ್ಯೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಆದರೂ ಕಣ್ಣಲ್ಲಿ ನೋಡದ ಅನೇಕ ವಸ್ತುಗಳನ್ನು ಕಾಣುವಂತಾಯಿತು. ಸ್ಕೂಟರಿಗೆ ಜೋಡಿಸಿದ ಡಂಪರ್, ಎಚ್ ಡಿ ಪಿ ಪೈಪನ್ನು ಜೋಡಿಸುವ ಸುಲಭ ಕನೆಕ್ಟರ್, ಎಚ್ ಡಿ ಪಿ ಕಮ್ ಪಿವಿಸಿ ಜೋಡಣೆ , ಮಣ್ಣಾಳದಲ್ಲಿ ಪಿವಿಸಿ ಪೈಪ್ ಅನ್ನು ಜೋಡಿಸುವ ಗಮ್ಲೆಸ್ ಕಪ್ಲಿಂಗ್ ಮುಂತಾದವು. ಹೋಲಿಸಿ ಪರಾಮರ್ಶಿಸಿ ತೆಗೆಯುದಿದ್ದರೆ ಒಂದೇ ತರದ ಯಂತ್ರಗಳ ಹಲವು ಕಂಪನಿಗಳು ಒಂದೇ ಜಾಗದಲ್ಲಿ ನೋಡುವಂತಾದುದು ಇಂತಹ ದೊಡ್ಡ ಮೇಳದ ವಿಶೇಷ.

ಹೆಚ್ಚು ಕಮ್ಮಿ ಎಲ್ಲಾ ಮೇಳಗಳಲ್ಲಿ ಗೋಷ್ಠಿಗಳು ಜನಾಕರ್ಷಣೆಯಲ್ಲಿ ವಿಫಲವಾಗುತ್ತದೆ. ತಿರುತಿರುಗಿ ಸುಸ್ತಾದಾಗ ಒಂದರೆ ಗಳಿಗೆಯ ವಿಶ್ರಾಂತಿಗಾಗಿ ಗೋಷ್ಠಿಯ ಸಭಾಭವನಕ್ಕೆ ಜನ ಬರುತ್ತಾರೆಯೇ ವಿನಹ : ವಿಷಯ ಸಂಗ್ರಹಕ್ಕಾಗಿ ಬರುವವರ ಸಂಖ್ಯೆ ಬಲು ವಿರಳ. ಇಂತಹ ವಿರಳಗಳ ಮಧ್ಯೆ ಆರಂಭದಲ್ಲಿ ಕಳೆ ಕಟ್ಟದಿದ್ದರೂ, ನಿಧಾನಕ್ಕೆ ಕಳೆಯೇರಿಸಿಕೊಂಡದ್ದು ಕೃಷಿ ರಸಪ್ರಶ್ನೆಗಳು. ಪಾಂಚಜನ್ಯ ರೇಡಿಯೋ ತಂಡ ಅನೇಕ ಕೃಷಿಕರನ್ನು ಕುಟ್ಟಿ ತಟ್ಟಿ ಎಬ್ಬಿಸಿ ಕೃಷಿ ಸಂಬಂಧಿ ವೈವಿಧ್ಯಮಯವಾದ ಪ್ರಶ್ನೆಗಳನ್ನು ಬಲು ಶ್ರಮದಿಂದ ತಯಾರಿಸಿಟ್ಟಿದ್ದರು. ಆ ಮೂಲಕ ಹಲವಾರು ಹೊಸ ವಿಷಯಗಳನ್ನು ತಿಳಿಯುವುದು ಅನೇಕರಿಗೆ ಸಾಧ್ಯವಾಗಿತ್ತು. ವಿದ್ಯಾರ್ಥಿ ಬಂಧುಗಳಲ್ಲಿ ಕೆಲವರಿಗೆ ನಮ್ಮ ಮನೆಯಲ್ಲೇ ನಡೆಯುವ ಕೃಷಿ ಪ್ರಕ್ರಿಯೆಗಳ ಬಗ್ಗೆ ಘೋರ ನಿರಾಸಕ್ತಿ ಆಶ್ಚರ್ಯ ತರುವಂತಿತ್ತು.

ಉದಾ : ಕುಸುಲಕ್ಕಿ ಮಾಡುವ ಬಗೆಎಂತು? ಅಡಿಕೆ ಕೊಯ್ಲಿನ ಸಮಯ ಯಾವಾಗ? ದನವೊಂದರ ಉದ್ದದ ಬಗ್ಗೆ ಕಲ್ಪನೆ ಬಾರದಿರುವುದು ಇವುಗಳೆಲ್ಲ ಕೆಲವು ನಿದರ್ಶನಗಳು. ಶಾಲಾ ವಿದ್ಯೆಯನ್ನು ಕಲಿಸಲು ಪ್ರೋತ್ಸಾಹಿಸುವ ಆತುರದಲ್ಲಿ ನಾವುಣ್ಣುವ ನೆಲದ ವಿದ್ಯೆಯನ್ನು ಬೋಧಿಸುವಲ್ಲಿ ನಮ್ಮಂತಹ ತಂದೆ ತಾಯಿಗಳ ವಿಫಲತೆಯೇ ಇದಕ್ಕೆ ಕಾರಣ.

ಪರಕೀಯ,ಸ್ವಕೀಯ,ಉಭಯ ರೀತಿಯಲ್ಲೂ ಪರಾಗಸ್ಪರ್ಶಿಸುವ ಸಸ್ಯ ವೈವಿಧ್ಯಗಳ ಕುರಿತಿನ ಅರಿವು ಕೆಲವಾರು ಪ್ರಶ್ನೆಗಳ ಮೂಲಕ ಹೊಸತನವನ್ನು ಸೃಷ್ಟಿಸಿತ್ತು. 1978 ನೇ ಇಸವಿಯಲ್ಲಿ ಹಾಳೆ ತಟ್ಟೆಯನ್ನು ಪ್ರಥಮವಾಗಿ ಸಂಶೋಧಿಸಿದವರು ಸುಳ್ಯದ ಗೌರಿಶಂಕರ್ ಎಂಬವರೆಂದು ಹೆಚ್ಚು ಕಮ್ಮಿ ಯಾರಿಗೂ ಗೊತ್ತಿರಲಾರದು. ಅವರು ಸಂಶೋಧಿಸಿದ ಈ ತಟ್ಟೆ ಈ ಮಟ್ಟಿಗೆ ವಿದೇಶಕ್ಕೆ ಪ್ರಯಾಣಿಸಬಲ್ಲುದೆಂದು ಆ ಕಾಲಕ್ಕೆ ಅರಿವೇ ಇದ್ದಿರಲಾರದು. ತೆರೆಯ ಮರೆಯಲ್ಲಿ ಕಳೆದು ಹೋಗುತ್ತಿದ್ದ ಇವರ ಹೆಸರು ಈ ಕಾರ್ಯಕ್ರಮದ ಮೂಲಕ ಮುನ್ನೆಲೆಗೆ ಬಂತು. ಇಂದಿನ ಬಲು ಸಣ್ಣ ಕಿಡಿಯೆ ಮುಂದಿನ ಬಲು ದೊಡ್ಡ ಉದ್ದಿಮೆ ಯಾಗಬಹುದು ಎಂಬುದಕ್ಕೆ ಇದು ಸಾಕ್ಷಿ. ಇಂತಹ ಹಲವು ವಿಷಯಗಳನ್ನು ರಸಪ್ರಶ್ನೆಯ ಮೂಲಕ ಸಂಗ್ರಹಿಸಿದ ರೇಡಿಯೋ ಪಾಂಚಜನ್ಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.

ಒಟ್ಟಿನಲ್ಲಿ ಸಂಪೂರ್ಣ ಯಂತ್ರ ಮೇಳ ವ್ಯವಸ್ಥಿತವಾದ ಅಚ್ಚುಕಟ್ಟಾದ ಕಾರ್ಯಕ್ರಮವಾಗಿ ಮೂಡಿ ಬಂದಿದೆ.

ಬರಹ :
ಎ.ಪಿ. ಸದಾಶಿವ ಮರಿಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಹವಾಮಾನ ವರದಿ | 17-06-2026 | ಜೂನ್ 21 ರವರೆಗೆ ಕರಾವಳಿಯಲ್ಲಿ ಅಲ್ಪ ಮಳೆ, ಎಲ್ ನಿನೋ ಹಿನ್ನೆಲೆ ರೈತರಿಗೆ ನೀರು ಸಂಗ್ರಹದ ಸಲಹೆ
June 17, 2026
11:49 AM
by: ಸಾಯಿಶೇಖರ್ ಕರಿಕಳ
ಎಲ್ ನಿನೋ ಪರಿಣಾಮ – 10 ರಾಜ್ಯಗಳಲ್ಲಿ ಜಾಗೃತಿ ಅಭಿಯಾನ
June 17, 2026
11:39 AM
by: ದ ರೂರಲ್ ಮಿರರ್.ಕಾಂ
ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ
June 16, 2026
8:15 PM
by: ದ ರೂರಲ್ ಮಿರರ್.ಕಾಂ
ಬಿಡದಿ ಟೌನ್‌ಶಿಪ್‌ಗೆ 2 ಲಕ್ಷಕ್ಕೂ ಹೆಚ್ಚು ಮರಗಳ ಕತ್ತರಿ…? – ಯೋಜನೆಗೆ ಪರಿಸರವಾದಿಗಳು, ರೈತರಿಂದ ತೀವ್ರ ವಿರೋಧ
June 16, 2026
7:33 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror