ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಬಾರಿ ದೇಶದಾದ್ಯಂತ ರಬಿ ಬಿತ್ತನೆ ಹೊಸ ದಾಖಲೆ ಮಟ್ಟ ತಲುಪಿದೆ. ಈ ವರ್ಷ ರಬಿ ಬೆಳೆಗಳ ಒಟ್ಟು ವಿಸ್ತೀರ್ಣ 660.48 ಲಕ್ಷ ಹೆಕ್ಟೇರ್ ಆಗಿದ್ದು, ಇದು ಕಳೆದ ವರ್ಷದ ಬಿತ್ತನೆಗಿಂತ 18.24 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಳವಾಗಿದೆ. ಈ ಬಿತ್ತನೆ ಹೆಚ್ಚಳವು ರೈತರ ಶ್ರಮ, ಸಮಯಪಾಲನೆ ಹಾಗೂ ಅನುಕೂಲಕರ ಹವಾಮಾನದ ಪರಿಣಾಮವಾಗಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಪ್ರಮುಖ ಬೆಳೆಗಳಲ್ಲಿ ಗಣನೀಯ ಪ್ರಗತಿಯಾಗಿದ್ದು ಗೋಧಿ ಬಿತ್ತನೆ ಹೆಚ್ಚಳ ಕಂಡಿದೆ. ರಬಿ ಹಂಗಾಮಿನ ಪ್ರಮುಖ ಆಹಾರ ಧಾನ್ಯವಾದ ಗೋಧಿಯ ಬಿತ್ತನೆ ಈ ಬಾರಿ 334.17 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 6.13 ಲಕ್ಷ ಹೆಕ್ಟೇರ್ ಹೆಚ್ಚಳ ಕಂಡುಬಂದಿದೆ. ಇದು ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.
ಭತ್ತದ ವಿಸ್ತೀರ್ಣದಲ್ಲಿಯೂ ಏರಿಕೆಯಾಗಿದ್ದು, ಭತ್ತದ ಬಿತ್ತನೆಯ ವಿಸ್ತೀರ್ಣ 31.03 ಲಕ್ಷ ಹೆಕ್ಟೇರ್ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 1.80 ಲಕ್ಷ ಹೆಕ್ಟೇರ್ ಹೆಚ್ಚಾಗಿದೆ.
ದ್ವಿದಳ ಧಾನ್ಯಗಳಲ್ಲಿ ಉತ್ತೇಜನ ಕಂಡುಬಂದಿದ್ದು, ಕಡಲೆ ಬೆಳೆಯ ಬಿತ್ತನೆ ಈ ಬಾರಿ ವಿಶೇಷವಾಗಿ ಹೆಚ್ಚಾಗಿದ್ದು, 4.66 ಲಕ್ಷ ಹೆಕ್ಟೇರ್ ಹೆಚ್ಚಳದೊಂದಿಗೆ ಒಟ್ಟು ವಿಸ್ತೀರ್ಣ 95.88 ಲಕ್ಷ ಹೆಕ್ಟೇರ್‌ಗೆ ತಲುಪಿದೆ. ಆದರೆ ಉದ್ದು ಬೆಳೆಯ ವಿಸ್ತೀರ್ಣದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳ ಸ್ಥಿತಿಯಲ್ಲಿ ಸ್ಥಿರತೆ ಕಂಡುಬಂದಿದ್ದು,ಜೋಳದ ವಿಸ್ತೀರ್ಣವು ಈ ಬಾರಿ 2.905 ಮಿಲಿಯನ್ ಹೆಕ್ಟೇರ್‌ಗಳಲ್ಲೇ ಸ್ಥಿರವಾಗಿದೆ. ಇನ್ನು ಬಾರ್ಲಿ ಬೆಳೆಗಳ ಬಿತ್ತನೆಯಲ್ಲೂ ಏರಿಕೆ ಕಂಡುಬಂದಿದೆ. ಸೂರ್ಯಕಾಂತಿ ಸೇರಿದಂತೆ ವಿವಿಧ ಎಣ್ಣೆಕಾಳು ಬೆಳೆಗಳ ನಾಟಿಯೂ ಈ ಬಾರಿ ಹೆಚ್ಚಾಗಿರುವುದು ಕೃಷಿ ಸಚಿವಾಲಯದ ವರದಿಯಲ್ಲಿ ಉಲ್ಲೇಖಗೊಂಡಿದೆ.
ಈ ವರ್ಷ ರೈತರು ಸಮಯಕ್ಕೆ ಸರಿಯಾಗಿ ಬಿತ್ತನೆ ಕಾರ್ಯ ಆರಂಭಿಸಿದ್ದು, ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಬೆಂಬಲ ನೀತಿಗಳ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಈ ಬಿತ್ತನೆ ಋತುವು ಮುಂದಿನ ದಿನಗಳಲ್ಲಿ ಉತ್ತಮ ಇಳುವರಿ, ರೈತರ ಆದಾಯ ಹೆಚ್ಚಳ, ದೇಶದ ಆಹಾರ ಭದ್ರತೆಗೆ ಬಲ ಎಂಬ ಸಕಾರಾತ್ಮಕ ನಿರೀಕ್ಷೆ ಮೂಡಿಸಿದೆ. ಒಟ್ಟು ಅಂಕಿಅಂಶಗಳು ಈ ಋತುವಿನಲ್ಲಿ ರೈತರು ತಮ್ಮ ಹೊಲಗಳಲ್ಲಿ ಶ್ರಮಪಟ್ಟು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ರಬಿ ಹಂಗಾಮು ಕೃಷಿ ವಲಯಕ್ಕೆ ಭರವಸೆ ಮತ್ತು ಹೊಸ ಅವಕಾಶದ ಕಾಲವೆಂದು ತೋರಿಸುತ್ತಿದೆ ಎಂದು ಸಚಿವಾಲಯವು ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




