ಪಾಶ್ಚಾತ್ಯ ಚಿಂತನೆಯಲ್ಲಿ ಮೂಢನಂಬಿಕೆ ಎನಿಸಿಕೊಂಡಿದ್ದ ಎಷ್ಟೋ ಭಾರತೀಯ ಆಚರಣೆಗಳ ಮಹತ್ವ ಕೊರೋನಾ ಸಂದರ್ಭದಲ್ಲಿ ವಿಶ್ವಕ್ಕೆ ಪರಿಚಯವಾಯಿತು. ಭಾರತದಲ್ಲಿ ಪ್ರತಿಯೊಂದು ಆಚರಣೆಗಳಿಗೂ ವೈಜ್ಞಾನಿಕ ತಳಹದಿ ಇದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಶ್ರೀ ಸಂದೇಶ ನೀಡಿದ ಅವರು, ಅನಗತ್ಯವಾಗಿ ಮತ್ತೊಬ್ಬರನ್ನು ಅಥವಾ ವಸ್ತುಗಳನ್ನು ಸ್ಪರ್ಶಿಸುವುದು ಕೂಡಾ ಭಾರತೀಯ ಪದ್ಧತಿಯಲ್ಲಿ ನಿಷಿದ್ಧ. ಇಂಥ ಸ್ಪರ್ಶದಿಂದ ಗುಣ-ದೋಷಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಿಯುತ್ತದೆ. ಇದನ್ನು ಆಧುನಿಕ ಜಗತ್ತು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆದರೆ ಪರಸ್ಪರ ಸ್ಪರ್ಶದ ಮೂಲಕ ಕೊರೋನಾ ವೈರಸ್ ಹರಡುತ್ತದೆ ಎನ್ನುವುದನ್ನು ಆಧುನಿಕ ವಿಜ್ಞಾನ ಇಡೀ ಜಗತ್ತಿಗೆ ತಿಳಿಸಿಕೊಟ್ಟಿತು. ಆಗ ಭಾರತದ ಆಚರಣೆಯ ಮಹತ್ವವನ್ನು ವಿಶ್ವ ಅರಿಯಿತು ಎಂದು ವಿಶ್ಲೇಷಿಸಿದರು.
ಕಣ್ಣು, ಕಿವಿ, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸಿದಲ್ಲಿ ಕೈತೊಳೆದುಕೊಳ್ಳಬೇಕು ಎನ್ನುವುದು ಭಾರತೀಯ ಆಚರಣೆ. ಕೊರೋನಾ ಸಂದರ್ಭದಲ್ಲಿ ವಿಶ್ವಕ್ಕೆ ಇದರ ಅರಿವು ಉಂಟಾಯಿತು. ಸ್ಪರ್ಶದ ಮೂಲಕ ವೈರಸ್ ಹರಡುವಂತೆ ಗುಣ- ದೋಷಗಳು ಕೂಡಾ ಹರಿಯುತ್ತವೆ. ಈ ಹಿನ್ನೆಲೆಯಲ್ಲೇ ಭಾರತದಲ್ಲಿ ಇಬ್ಬರು ಪರಸ್ಪರ ಭೇಟಿಯಾದಾಗ ಹಸ್ತಲಾಘವ ನೀಡುವ ಬದಲು ನಮಸ್ಕರಿಸುವ ಪದ್ಧತಿ ಬೆಳೆದು ಬಂದಿದೆ ಎಂದು ವಿವರಿಸಿದರು.
ಭಾರತೀಯ ಶಿಕ್ಷಣವೂ ಅಷ್ಟೇ ಮಹತ್ವದ್ದಾಗಿದ್ದು, ಮೊದಲು ನಮ್ಮನ್ನು, ನಮ್ಮ ದೇಹವನ್ನು, ನಮ್ಮ ಮನಸ್ಸನ್ನು, ನಮ್ಮ ಇಂದ್ರಿಯಗಳನ್ನು ತಿಳಿದುಕೊಳ್ಳಲು ನೆರವಾಗುವುದು ಭಾರತೀಯ ಶಿಕ್ಷಣ ಪದ್ಧತಿ. ಬಳಿಕ ನಮ್ಮ ಒಳಗಿರುವ ಪರಮಾತ್ಮನನ್ನು ತಿಳಿದುಕೊಳ್ಳುವುದು ನಮ್ಮ ವಿದ್ಯೆಯ ಉದ್ದೇಶ ಎಂದರು.
ಉದಾಹರಣೆಗೆ ಸ್ಪರ್ಶ ಹೊರಜಗತ್ತನ್ನು ತಿಳಿದುಕೊಳ್ಳುವ ಒಂದು ಸಾಧನ, ಮೇಲ್ನೋಟಕ್ಕೆ ಸ್ಪರ್ಶದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆದರೆ ಒಳಹೊಕ್ಕು ನೋಡಿದರೆ, ಬಿಸಿ/ ತಂಪು, ಒರಟು/ ಮೆದು, ಗಾತ್ರ- ಆಕೃತಿ ಹೀಗೆ ಸ್ಪರ್ಶದಿಂದ ಅನೇಕ ವ್ಯತ್ಯಾಸ ಗಮನಿಸಬಹುದು. ಇನ್ನೂ ಶೋಧಿಸಿದರೆ ಭಾವಸ್ಪರ್ಶದ ಅನುಭವ ಆಗುತ್ತದೆ. ಉದಾಹರಣೆಗೆ ತಂದೆ ಸಿಟ್ಟಿನಿಂದ ಹೊಡೆದರೆ ಮಗುವಿಗೆ ತಂದೆಯ ಸಿಟ್ಟಿನ ಭಾವ ತಿಳಿಯುತ್ತದ.ಎ ಅಂತೆಯೇ ಸಾಂತ್ವನದ ಸ್ಪರ್ಶ, ಮಗುವಿನ ಕೆನ್ನೆ ನೇವರಿಸುವ ತಾಯಿಯ ಮೃದುಸ್ಪರ್ಶ ಹೀಗೆ ವೈವಿಧ್ಯತೆಯ ವಿಶಾಲ ವಿಶ್ವವೇ ತೆರೆದುಕೊಳ್ಳುತ್ತದೆ ಎಂದು ವಿಶ್ಲೇಷಿಸಿದರು.
ರಾಮಾಯಣದಲ್ಲಿ ಬರುವ ಅಹಲ್ಯೋದ್ಧಾರದ ಕಥೆಯನ್ನು ವಿವರಿಸಿದ ಶ್ರೀಗಳು, ಕಲ್ಲಾಗಿದ್ದ ಅಹಲ್ಯೆ ರಾಮನ ಪಾದಸ್ಪರ್ಶದಿಂದ ಹೆಣ್ಣಿನ ರೂಪ ಪಡೆದಳು ಎಂದಾದರೆ ಸ್ಪರ್ಶದ ಪಾವಿತ್ರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಗಂಗೆಯ ಸ್ಪರ್ಶ ಜನ್ಮಾಂತರಗಳ ಪಾಪವನ್ನು ಕಳೆಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಎಂಥ ಸ್ಪರ್ಶವೂ ಗಂಗೆಯನ್ನು ಮಲಿನಗೊಳಿಸಲಾಗದು ಎಂದು ಹೇಳಿದರು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯಕರ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಏನನ್ನೂ, ಯಾರನ್ನೂ ಸ್ಪರ್ಶಿಸಬಾರದು. ಸ್ಪರ್ಶಿಸಿ ನಾವು ಕೆಡಬಾರದು ಅಥವಾ ಬೇರೆಯವನ್ನು ಕೆಡಿಸಬಾರದು. ಅನಗತ್ಯವಾದ ಏನನ್ನೂ ಮಾಡದಿದ್ದಾಗ ನಮ್ಮ ಪಾವಿತ್ರ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಿತವಾದ, ನಮ್ಮ ಪಾವನತೆಗೆ ಕಾರಣವಾಗುವ ಸ್ಪರ್ಶವಾಗಿ ನಮ್ಮ ಮನಸ್ಸು ಹಂಬಲಿಸಬೇಕು ಎಂದು ಅಭಿಪ್ರಾಯಪಟ್ಟರು.
ವಿವಿವಿ ವಿದ್ಯಾ ಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಮಂಗಳೂರಿನ ಉದ್ಯಮಿ, ದಾನಿ ಎನ್.ಜಿ.ಮೋಹನ್ ಮತ್ತಿತರರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…