ಕೇವಲ ಒಂಭತ್ತು ತಿಂಗಳ ಹಿಂದೆ ಇದೇ ಹೊಳೆಯಲ್ಲಿ 15 ಫೀಟ್ ಗಿಂತಲೂ ಹೆಚ್ಚು ಎತ್ತರದಲ್ಲಿ ಕೆಂಪುಹಳದಿ ಬಣ್ಣದ ನೀರು ಹರಿದು ಸಾಗರ ಸೇರಿತ್ತು. ನಿರಂತರವಾಗಿ ಬಂದ ಮಳೆಯಲ್ಲಿ ಕೊಚ್ಚಿಬಂದ ಮರಗಳು, ಕಾಡಿನ ಹೆಬ್ಬಾವುಗಳು, ಜೀವಂತ, ಸತ್ತ ದನದ, ಪ್ರಾಣಿಗಳ ಹೆಣಗಳು, ತೆಂಗಿನಕಾಯಿಗಳು, ಕಸಗಳು, ಪ್ಲಾಸ್ಟಿಕ್ ಬಾಟಲಿಗಳು, ವಿಷದ ಬಾಟಲ್ ಗಳು, , ಜೆಸಿಬಿ ಕೆಲಸದ ರಾಶಿಮಣ್ಣಿನ ಕಲ್ಲುಗಳು ಇನ್ನು ಏನೇನೋ ಬಂದು ರೈಲಿನ ಸೇತುವೆ, ರಸ್ತೆಯ ಸಂಕಗಳಿಗೆ ಢಿಕ್ಕಿ ಹೊಡೆದು ಸಾಗರ ಸೇರಿದ್ದವು. ದಿನಾ ಇದೇ ಮಾರ್ಗದಲ್ಲಿ ಹೋಗುವವರೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದರು ಕೂಡಾ. ಕೆಂಪುನೀರಿನ ರುದ್ರ ಭೀಕರತೆಯನ್ನು ನೋಡಿದ ನೆನಪು ಸ್ಮೃತಿ ಪಟಲದಲ್ಲಿ ಇನ್ನೂ ಇದೆ.
ಚರಿತ್ರೆಯ ಪುಟಸೇರಿದ ಪ್ರಕೃತಿ ಕೌತುಕವನ್ನು ಇನ್ನೂ ಆಳಕ್ಕಿಳಿದು ನೋಡಬೇಕೆಂಬ ಹಂಬಲದಿಂದ ಮೆಲ್ಲಗೆ ರೈಲು ಸಂಕದ ಬದಿಯಲ್ಲಿ ಹೊಳೆಯ ದಾರಿಗೆ ಇಳಿದು ನೋಡಬೇಕೆನಿಸಿತು. ಈಗಿನ ಸುಡು ಬಿಸಿಲಿಗೆ ಕಲ್ಲು ಚರಳುಗಳು ಕಾಲಿನ ಚರ್ಮಕ್ಕೆ ತಾಗುವಾಗ ಚುರುಕ್ ಎನಿಸುತ್ತಿತ್ತು. ವಾಹನ ಸಂಚರಿಸುವ ಸೇತುವೆಯ ಕೆಳಗಡೆ ಮಾನವ ಹೇಸಿಗೆಯ ಪ್ಯಾಂಪರ್ಸ್, ಡೈಪರ್ಸ್, ಗೋಣಿಚೀಲದಲ್ಲಿ ಕಟ್ಟಿಬಿಸಾಕಿದ ಹಕ್ಕಿ ಪುಕ್ಕಗಳು,ಮೀನುಹಿಡಿಯುವ ಬಲೆಗಳು, ದುರ್ನಾತ ಬೀರುವ ಅದೇನೋ ದರಿದ್ರ ವಸ್ತುಗಳನ್ನು ಕಂಡರೆ, ರೈಲ್ವೆ ಸೇತುವೆಯ ಕೆಳಗಡೆ ಕಲ್ಲಿದ್ದಲಿನ ತುಂಡುಗಳು, ಪ್ಲಾಸ್ಟಿಕ್ ಬಾಟಲ್ಗಳು ಕಾಣುತ್ತಿತ್ತು.
ಕೆಲವೇ ತಿಂಗಳಲ್ಲಿ ಇದೇ ಹೊಳೆಯಲ್ಲಿ ಮತ್ತೆ ಸಮುದ್ರ ಸೇರುವ ತವಕದಿಂದ ತಲೆ ಮಟ್ಟದ ನೀರಿನ ಪ್ರವಾಹವಿರುವುದರಿಂದ ಸ್ವಲ್ಪ ದೂರ ನೋಡಿಯೇ ಬಿಡೊಣ ಎಂದು ಬಿಸಿ ಮರಳಿನಲ್ಲಿ ನಡೆದೆ. ಎಂಥಹಾ ಕಠಿಣ ಪರಸರದಲ್ಲೂ ಬದುಕಲು ಅರ್ಹವಿರುವ ಕೆಲ ಸಸ್ಯ ಕುಟುಂಬಗಳಿದ್ದವು. ಕೆಲಭಾಗಗಳಲ್ಲಿ ತುಂಬಾ ಆಳದ ಕೆಸರಿನ ಹೊಂಡ, ಸ್ವಲ್ಪ ಮುಂದೆ ಎತ್ತರದ ಗುಪ್ಪೆ. ಹೊಳೆ ತಿರುಗುವಲ್ಲಿ ಒಂದುಕಡೆ ಕಂದಕವಾದರೆ ಇನ್ನೊಂದು ಕಡೆ ಮರಳಿನ ರಾಶಿ. ಕೆಲ ವಿಚಿತ್ರ ಆಕಾರದ ಹಾವಸೆ ಹಿಡಿದ ಬಂಡೆಗಳು, ಬೇರು ಸಮೇತ ಬಂದ ದೊಡ್ಡಗಾತ್ರದ ಮರಗಳು, ಕೆಲ ಆಳ ಭಾಗದಲ್ಲಿ ಉಳಿದ ನೀರಲ್ಲಿದ್ದ ಸಣ್ಣ ಮೀನನ್ನು ತಿನ್ನಲು ಕಾದು ಕುಳಿತ ಕೊಕ್ಕರೆಗಳು. ಅದೇ ಕೊಕ್ಕರೆ ಕಲ್ಲಲ್ಲಿ ಚಿತ್ರಿಸಿದ ಬಿಳಿ ಕಕ್ಕಗಳು, ಏಡಿಯ ಅವಶೇಷಗಳು, ಯಾರೋ ಬಿಸಾಡಿದ ಎಲುಬುಗಳು, ಗಾಜಿನ ತುಂಡುಗಳು, ಕಂದಡಿ ಹಾವಿನ ಬೆನ್ನೆಲುಬಿನ ತುಂಡುಗಳು, ತೋಟಕ್ಕೆ ನೀರು ಹಾಯಿಸಲು ಹಾಕಿ ಬೊಳ್ಳದ ರಭಸಕ್ಕೆ ಪಲ್ಲಟವಾದ ಸಿಮೆಂಟ್ ರಿಂಗ್ ಗಳು, ಹೊಳೆಯ ಮಧ್ಯದ ದ್ವೀಪದ ಗಿಡಗಳಲ್ಲಿ ಸಿಕ್ಕಿಹಾಕಿದ ಸೀರೆಯ ತುಂಡುಗಳು, ಹರಿದು ಹೋದ ಗೀಟಿನ ನೀಲಚಡ್ಡಿಗಳು, ಒಂಟಿ ಚಪ್ಪಲಿ,ವಿದೇಶದಿಂದ ಕಳಿಸಿದ ತುಕ್ಕುಹಿಡಿದ ಪ್ಲಾಸ್ಕ್, ದೊಡ್ಡಮರವನ್ನು ಕೇಂದ್ರವಾಗಿಟ್ಟುಕೊಂಡು ರಾತ್ರಿವೇಳೆ ಸಂಚಾರಕ್ಕೆ ಅಣಿಯಾದ ಬಾವಲಿ ಕೂಡು ಕುಟುಂಬದ ಮರ,ಇನ್ನೂ ಅನೇಕ ಸವೆದುಹೋದ, ಹೋಗಲಿರುವ ವಸ್ತುಗಳು.
ಸ್ನೋವಾಕ್, ಇವಿನಿಂಗ್ ವಾಕ್, ಮೌಂಟೇನ್ ವಾಕ್ ಇದ್ದಂತೆ ಪ್ರಕೃತಿಯ ವೈಚಿತ್ರ್ಯಗಳು ಮಕ್ಕಳಿಗೂ ಗೊತ್ತಾಗಲಿ ಅಂತ ರಜೆಯ ಮಜ ಉಡಾಯಿಸುವ ಮಕ್ಕಳನ್ನೂ ರಿವರ್ ವಾಕ್ ಕರೆದುಕೊಂಡು ಹೋಗಿದ್ದೆ. ಪ್ರಕೃತಿಯೊಂದಿಗೆ ಮಾನವನ ಅಕ್ರಮಣದಿಂದಾಗಿ ಹೊಳೆಯ ಆಳ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಡೊಸರ್ ಮೆಷಿನ್ ಗಳ ಕಾರುಬಾರಿನಿಂದಾಗಿ ಮಣ್ಣು ಸವೆದು ರಣಭೀಕರ ಮಳೆ ಬೊಳ್ಳದೊಂದಿಗೆ ಹೊಳೆ ಸೇರುತ್ತಿದೆ. ಕೊಳಕು ದುರ್ನಾತ ಬೀರುವ ವಸ್ತುಗಳನ್ನು ನಾವು ಹೊಳೆಗೆ ಬಿಸಾಡಿದರೆ ಪೇಟೆಯ ಜನರಿಗೆ ಡ್ಯಾಮ್ ನಿಂದ ಫಿಲ್ಟರ್ ಆದರೂ ಆ ನಳ್ಳಿ ನೀರನ್ನು ಕುಡಿಯಬೇಡವೇ. ಹೊಳೆಯಲ್ಲಿ ವಾಸಿಸುವ ಪ್ರಭೇದಗಳು ಇವುಗಳನ್ನು ತಿಂದರೆ ಗತಿಯೇನು.ನಾವಿಂದು ಸ್ವಲ್ಪ ಪ್ರಕೃತಿಯ ಏರಿಳಿತವಾದರೂ ಆರಾಮಜೀವನವೇ ಅಲ್ಲೋಲ ಕಲ್ಲೋಲವಾದಂತೆ ವರ್ತಿಸುತ್ತೇವೆ.
ಡೋಂಟ್ ವರಿ, ನಮ್ಮ ಪಾಲನ್ನು ನಮಗೆ ಕೊಡುವುದರಲ್ಲಿ ಪ್ರಕೃತಿ ಯಾವುದೇ ತಾರತಮ್ಯ ಮಾಡೋದಿಲ್ಲ. ಸೂರ್ಯ ನೀರಿನ ಟ್ಯಾಕ್ಸ್ ಕಲೆಕ್ಟ್ ಮಾಡ್ತಾ ಇದ್ದಾನೆ ಅಷ್ಟೆ. ಬೇಕಾದಷ್ಟು ಮೋಡ ಡೆಪಾಸಿಟ್ ಆದಕೂಡಲೇ ನಿಮಗೇ ರಿಟರ್ನ್. ಅದೂ ಬೇಕಾದಷ್ಟು. ಆತನ ಲೆಕ್ಕಾಚಾರ ಎಲ್ಲೂ ತಪ್ಪಿಲ್ಲ. ಎಲ್ಲಾ ಸೈಕಲ್ ಥಿಯರಿ. ನಾವು ಏಳುನೂರು ಅಡಿಯಿಂದ ನಿರಂತರ ನೀರೆಳೆಯುವುದು ಆತನಿಗೆ ಗೊತ್ತಿಲ್ಲ. ಇವೆಲ್ಲ ಪ್ರಕೃತಿಗೆ ವಿರುಧ್ಧ. ನಮ್ಮ ಬೆನ್ನಿಗೆ ನಾವೇ ಬರೆ ಎಳೆದುಕೊಳ್ಳುತ್ತಿದ್ದೇವೆ. ಯಾವ ಪ್ರಾಣಿಯಾದರೂ ಕೂಡಿಟ್ಟುಕೊಳ್ಳುವ ಪ್ರವೃತ್ತಿ ನೋಡಿದ್ದೀರಾ. ಇದೇ ಇದೇ ನಮ್ಮ ಸಮಸ್ಯೆ. ಯಾವುದಾದರೂ ಸಮತೋಲನ ತಪ್ಪಿದರೆ ಬುಡಸಮೇತ ಬೀಳದಿರುತ್ತದೆಯೇ.