ಬಂಗಾಳಕೊಲ್ಲಿಯಲ್ಲಿನ ಡಾನಾ ಚಂಡಮಾರುತದಿಂದಾಗಿ ರಾಜ್ಯದ ಹಲವೆಡೆ ಧಾರಕಾರ ಮಳೆ ಸುರಿಯುತ್ತಿದೆ. ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭಗೊಂಡಿದ್ದು, ಸಾಮಾನ್ಯ ಜನಜೀವನ ಬಾಧಿತಗೊಂಡಿದೆ. ಮಳೆಯಿಂದಾಗಿ ಮಾಯಕೊಂಡ, ಆನಗೋಡು, ಬಾಡ, ತ್ಯಾವಣಿಗೆ ಬಸವಾಪಟ್ಟಣ ಹೋಬಳಿಗಳಲ್ಲಿ ಕೊಯಿಲಿಗೆ ಬಂದಿದ್ದ ಭತ್ತ ಮೆಕ್ಕೆಜೋಳ ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾದ್ಯಂತ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಮೂವತ್ತಕ್ಕೂ ಅಧಿಕ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.