ತೆಂಗಿನಕಾಯಿಯ ಗೆರಟೆಯಿಂದ ರಕ್ಷಾಬಂಧನ RakshaBandhan ತಯಾರಿಕೆಯ ಪ್ರಯತ್ನ ನಡೆಯುತ್ತಿದೆ. ಈ ಹೆಜ್ಜೆಯಲ್ಲಿ ಮಹಿಳೆಯರು ಯಶಸ್ಸು ಕಾಣುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟದ ಮಹಿಳೆಯರು ತೆಂಗಿನ ಕಾಯಿಯ ಗೆರಟೆಯ ಮೂಲಕ ವಿವಿಧ ವಸ್ತುಗಳನ್ನು ತಯಾರಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸದಸ್ಯರು ಈಗ ತೆಂಗಿನಕಾಯಿಯ ಗೆರಟೆಯ ಮೂಲಕ ಕಲಾಕೃತಿ ರಚನೆಯ ಮೂಲಕ ಈಗಾಗಲೇ ಸುದ್ದಿಯಾಗಿದ್ದಾರೆ. ಸುಮಾರು ಮಂದಿ ಮಹಿಳೆಯರು ಗೆರಟೆಯಿಂದ ಮಾಡಬಹುದಾದ ಕಲಾಕೃತಿಗಳ ಬಗ್ಗೆ ತರಬೇತಿ ಪಡೆದಿದ್ದಾರೆ. ತೆಂಗಿನ ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳಾ ಆರ್ಥಿಕ ಸ್ವಾವಲಂಬನೆಯ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಹಲವು ಉತ್ಪನ್ನಗಳನ್ನು ತಯಾರು ಮಾಡಿದ್ದಾರೆ. ಇದೀಗ ರಕ್ಷಾಬಂಧನದ ಪ್ರಯುಕ್ತ ತೆಂಗಿನ ಗೆರಟೆಯಿಂದ ರಕ್ಷಾಬಂಧನವನ್ನು ತಯಾರಿಸುತ್ತಿದ್ದಾರೆ.
ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸಂಜೀವಿನಿ ಒಕ್ಕೂಟ ಹಾಗೂ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ತೆಂಗಿನ ಗೆರಟೆಯ ಮೂಲಕ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಿಳೆಯರು ಫೆಬ್ರವರಿ ತಿಂಗಳಲ್ಲಿ ತರಬೇತಿ ಪಡೆದಿದ್ದು, ಒಟ್ಟು ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಮೂರೂ ತಂಡಗಳಿಗೆ ಪಾಲಿಶ್ ಮತ್ತು ಕಟಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಪರಿಣತಿ ಇದೆ.ಈಗ ಗಟ್ಟಿಮುಟ್ಟಾದ ಕೀಚೈನ್, ಅಡುಗೆ ಮನೆಗೆ ಬೇಕಾದ ಪಾತ್ರೆಗಳು, ಕಪ್, ಸ್ಮರಣಿಕೆ ಇತ್ಯಾದಿ ಮಾಡಿದ್ದಾರೆ. ಈ ಬಾರಿ ತ್ರಿವರ್ಣದ ಬ್ಯಾಡ್ ಕೂಡ ತಯಾರಿಸಿದ್ದಾರೆ. ಮಹಿಳಾ ತಂಡದ ಕೆಲಸಗಳು ಹೆಚ್ಚು ಗಮನ ಸೆಳೆದಿದೆ.
ಈ ತಂಡದಲ್ಲಿ 30 ಮಂದಿ ಮಹಿಳೆಯರು 3 ತಂಡಗಳಾಗಿ ಕೆಲಸ ಮಾಡುತ್ತಿದ್ದಾರೆ. ಜನನಿ, ಅಕ್ಷಯ ಹಾಗೂ ಜ್ಞಾನ ಸಂಜೀವಿನಿ ಘಟಕಗಳಾಗಿ ಕೆಲಸ ಆರಂಭಿಸಿದ್ದಾರೆ. ಕೆಲವರು ಮನೆಗಳಲ್ಲಿ ಹಾಗೂ ಕೋಡಿಂಬಾಡಿ ಗ್ರಾಪಂ ನೀಡಿರುವ ಕಟ್ಟದಲ್ಲಿ ಕೆಲಸ ಮಾಡುತ್ತಾರೆ. ಕಳೆದ 3 ತಿಂಗಳಿನಿಂದ ಕೆಲಸ ಮಾಡುತ್ತಿರುವ ಮಹಿಳೆಯರು ಪ್ಲಾಸ್ಟಿಕ್ ಬಳಸದೆಯೇ ಹಲವು ಉತ್ಪನ್ನಗಳನ್ನು ತಯಾರು ಮಾಡುವಷ್ಟು ಕುಶಲತೆಯನ್ನು ಈಗ ಪಡೆದಿದ್ದಾರೆ. ಸದ್ಯ ಸಂಜೀವಿನಿ ಒಕ್ಕೂಟವು ಸದಸ್ಯರು ತಯಾರಿಸಿರುವ ಉತ್ಪನ್ನಗಳ ಮಾರಾಟವನ್ನೂ ಮಾಡುತ್ತಿದ್ದಾರೆ.
ತಮ್ಮ ಬಿಡುವಿನ ವೇಳೆ ಮಹಿಳೆಯರು ಮನೆಯಲ್ಲಿಯೇ ವಿವಿಧ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಮನೆಯಲ್ಲಿಯೇ ಇರುವ ಆದರೆ ಎಸೆದು ವ್ಯರ್ಥವಾಗುವ ವಸ್ತುಗಳು ಈಗ ಕಲಾತ್ಮಕವಾಗಿ ಮಾರುಕಟ್ಟೆಗೆ ತಲುಪು ಸಾಧ್ಯವಾಗಿದೆ. ಸದ್ಯ ಮಹಿಳೆಯರು ಆನ್ ಲೈನ್ ಹಾಗೂ ಪರಿಚಯಸ್ಥರ ಮೂಲಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮುಂದೆ ಗ್ರಾಮೀಣ ಸಂತೆಯ ಮೂಲಕ ಮಹಿಳೆಯರು ಇಂತಹ ವಸ್ತುಗಳ ಮಾರಾಟ ಮಾಡಲು ಸಾಧ್ಯವಿದೆ. ತೆಂಗಿನ ಗೆರಟೆಯ ಉತ್ಪನ್ನಗಳನ್ನು ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯು ಮಾರುಕಟ್ಟೆ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಹೀಗಾಗಿ ಮಹಿಳೆಯರಿಗೆ ಮಾರುಕಟ್ಟೆ ವ್ಯವಸ್ಥೆಯೂ ಲಭ್ಯವಾದರೆ ಗ್ರಾಮೀಣ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದಾಗಿದೆ.
ಮಹಿಳಾ ಸ್ವಾವಲಂಬನೆಯ ಮೂಲಕ ಗ್ರಾಮೀಣ ಭಾಗದಲ್ಲೂ ಹೆಚ್ಚು ಚಟುವಟಿಕೆ ಆರಂಭವಾಗಲು ಮತ್ತು ಈ ಮೂಲಕ ಗ್ರಾಮೀಣ ಆರ್ಥಿಕತೆ ಬೆಳವಣಿಗೆಗೆ ಪ್ರಯತ್ನ ಸಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಹಾಗೂ ಗೆರಟೆಯ ಉತ್ಪನ್ನಗಳಿಗೆ : 9880454373
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…