Open ಟಾಕ್

ಅಡಿಕೆ ಬೆಳೆಗಾರರಿಗೆ ನಿಜವಾದ ಸಮಸ್ಯೆ ಯಾವುದು ? ಮುಂದೆ ಇರುವ ಸವಾಲುಗಳು ಯಾವುದು ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

“ಅಡಿಕೆ ಬೆಳೆಗೆ ರೋಗ ಬಾಧೆ ಹೆಚ್ಚಾಗುತ್ತಿದೆ, ನಿಯಂತ್ರಣವಾಗುತ್ತಿಲ್ಲ ಹೀಗಾಗಿ ಪರ್ಯಾಯ ಬೆಳೆಯನ್ನು ಬೆಳೆಯಲು ಸಿದ್ಧರಾಗಬೇಕು” ಎನ್ನುವುದು ಈಚೆಗಿನ ಸಲಹೆಗಳು. ವಾಸ್ತವದಲ್ಲಿ ಅಡಿಕೆ ಬೆಳೆಗೆ ರೋಗವೊಂದೇ ನಿಜವಾದ ಸಮಸ್ಯೆಯಾದರೆ ಅಥವಾ ರೋಗದ ಕಾರಣದಿಂದಲೇ ಅಡಿಕೆ ಬೆಳೆಯನ್ನು ನಿಲ್ಲಿಸಿ ಪರ್ಯಾಯ ಬೆಳೆಯತ್ತ ಮುಖ ಮಾಡಿದರೆ ಅದೂ ಅಪಾಯವೇ. ಈಗಿನ ಹವಾಮಾನ ವೈಪರೀತ್ಯದ ಕಾರಣದಿಂದ ಪರ್ಯಾಯ ಬೆಳೆಯಲ್ಲೂ ರೋಗ ಬಾಧಿಸಿದರೆ..?. ಹೀಗಾಗಿ ಅಡಿಕೆ ಬೆಳೆಗಾರರು ಈಗ ರೋಗ ಬಾಧೆಯಿಂದ ಅಡಿಕೆ ಬೆಳೆಯನ್ನು ನಿಲ್ಲಿಸಬೇಕಾಗಿಲ್ಲ,ಇಡೀ ಬೆಳೆಯನ್ನೇ ಬದಲಾಯಿಸಬೇಕಾಗಿಲ್ಲ. ಆದರೆ ಉಪಬೆಳೆಯತ್ತ ಮನಸ್ಸು ಮಾಡುವುದು ಹೆಚ್ಚು ಸೂಕ್ತ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಡಿಕೆಯ ಜೊತೆ ಇನ್ನೊಂದು ಬೆಳೆಯನ್ನು ಈಗ ಯೋಚಿಸುವುದಕ್ಕೆ ಸಕಾಲ.…..ಮುಂದೆ ಓದಿ….

Advertisement

ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ ಹೆಚ್ಚಾಗುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ 2023-24ರಲ್ಲಿ ಭಾರತದಲ್ಲಿ 9.4 ಲಕ್ಷ ಹೆಕ್ಟೇರ್‌ನಲ್ಲಿ 14.11 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದ್ದು, ಅದರಲ್ಲಿ 6.8 ಲಕ್ಷ ಹೆಕ್ಟೇರ್‌ನಲ್ಲಿ 10 ಲಕ್ಷ ಟನ್ ಅಡಿಕೆ ಉತ್ಪಾದನೆಯೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ.ಅಂದರೆ ಅಡಿಕೆ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಸದ್ಯ ಬಳಕೆಯೂ ಅದೇ ಪ್ರಮಾಣದಲ್ಲಿದೆ. ಬಹುತೇಕ ಅಡಿಕೆಯನ್ನು ತಿಂದು ಉಗುಳುವುದಕ್ಕೇ ಬಳಕೆಯಾಗುತ್ತಿದೆ. ಆದರೆ ವಿಸ್ತರಣೆಯಾದ ತೋಟಗಳಲ್ಲಿ ಅಡಿಕೆ ಇಳುವರಿ ಬರುವ ವೇಳೆ ಸಹಜವಾಗಿಯೇ ಧಾರಣೆ ಇಳಿಕೆಯಾಗಬಹುದು ಎನ್ನುವುದು ಈಗಿನ ಲೆಕ್ಕಾಚಾರ. ಹೀಗಾಗಿ ಅನೇಕ ವರ್ಷಗಳಿಂದ ಅಡಿಕೆಯನ್ನೇ ಬೆಳೆಯುತ್ತಿರುವ ಪ್ರದೇಶದ ಮಂದಿ ಉಪಬೆಳೆಯನ್ನೂ ಬೆಳೆಯಬೇಕಾದ ಅನಿವಾರ್ಯತೆ ಇದೆ. ಈಚೆಗೆ ವಿಸ್ತರಣೆಯಾದ ಕಡೆಗಳಲ್ಲಿ ಈಗಾಗಲೇ ಉಪಬೆಳೆಗೆ ಲಕ್ಷ್ಯ ಇರಿಸಿಯೇ ತೋಟವನ್ನು ವಿಸ್ತರಣೆ ಮಾಡಲಾಗಿದೆ. ಇತ್ತೀಚೆಗಿನ ಬೆಳವಣಿಗೆಯಲ್ಲಿ ದೇಶದ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಬೆಳೆ ವಿಸ್ತರಣೆಯನ್ನು ಕಾಣುತ್ತಿದೆ. ವಿಶೇಷವಾಗಿ ಮಿಜೋರಾಂ, ಅಸ್ಸಾಂ, ತ್ರಿಪುರಾದಲ್ಲಿ ಅಡಿಕೆ ಬೆಳೆಯ ಬಗ್ಗೆ ಆಸಕ್ತರಾಗಿದ್ದಾರೆ. ಮಿಜೋರಾಂ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯುವ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಹೀಗಾಗಿ ಆಹಾರ ಬೆಳೆಯಲ್ಲದ ಅಡಿಕೆ ಬೆಳೆಯ ವಿಸ್ತರಣೆ ಭವಿಷ್ಯದ ದಿನಗಳಲ್ಲಿ ಅಪಾಯ ಇರುವುದು ವಾಸ್ತವ ವಿಷಯ.

ಆದರೆ, ಈಗ ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಕಡೆ ಅಡಿಕೆಗೆ ವಿವಿಧ ರೋಗಗಳು ಕಾಣಲು ಆರಂಭವಾಗಿದೆ. ಅನೇಕ ವರ್ಷಗಳಿಂದ ಈ ಪ್ರದೇಶಗಳಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಭತ್ತದ ಬೆಳೆಯೇ ಸಮೃದ್ಧವಾಗಿದ್ದ ನಾಡಲ್ಲಿ ಭತ್ತದ ಕೃಷಿಯ ಸಂಕಷ್ಟದಿಂದ ಅಡಿಕೆ ಬೆಳೆಯತ್ತ ಕೃಷಿಕರು ಗಮನಹರಿಸಿ ಈಗ ಎಲ್ಲೆಡೆಯೂ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಅಂದು ಭತ್ತದಿಂದ ಅಡಿಕೆಯ ಕಡೆಗೆ ವರ್ಗಾವಣೆಯಾಗುವ ವೇಳೆಯೂ ಸಾಕಷ್ಟು ಚರ್ಚೆಗಳು ರೈತರ ಒಳಗೆ ನಡೆದಿದ್ದರು. ಆಗ ಅಷ್ಟೊಂದು ಗಂಭೀರವಾಗಿ ಚರ್ಚೆಗಳು ನಡೆದಿರಲಿಲ್ಲ, ಆಗ ಊರಿನ ಪ್ರಮುಖರು ಯಾವುದರ ಆಯ್ಕೆ ಮಾಡುತ್ತಾರೋ ಅದೇ ಆಯ್ಕೆಗಳನ್ನು ಉಳಿದವರೂ ಮಾಡುತ್ತಿದ್ದರು. ಅಡಿಕೆ ಜೊತೆಗೆ ಮಲೆನಾಡು ಭಾಗದಲ್ಲಿ ರಬ್ಬರ್‌ ಕೂಡಾ ಹಾಗೆಯೇ ಬೆಳೆದವು. ಪಾರಂಪರಿಕ ಬೆಳೆಯಾಗಿದ್ದ ಭತ್ತದ ಬದಲಾಗಿ ಅಡಿಕೆ ಪಾರಂಪರಿಕ ಬೆಳೆಯಾಗಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೆಳೆಯಲಾಗಿತ್ತು. ಈಚೆಗೆ ಹೊಸ ಹೊಸ ಬೆಳೆಯ ಕಡೆಗೆ ಕೃಷಿಕರು ಆಸಕ್ತರಾಗುತ್ತಿದ್ದಾರೆ. ಅಡಿಕೆಯ ಬದಲಾಗಿ ಹಣ್ಣಿನ ಬೆಳೆಗಳತ್ತಲೂ, ತರಕಾರಿ ಬೆಳೆಯತ್ತ, ಕಾಳುಮೆಣಸು ಕೃಷಿಯತ್ತ ಮನಸ್ಸು ಮಾಡುತ್ತಿದ್ದಾರೆ. ಸವಾಲು ಸ್ವೀಕರಿಸುತ್ತಿದ್ದಾರೆ. ಈಗಲೂ ಒಬ್ಬ ಒಂದು ಬೆಳೆಯಲ್ಲಿ ಯಶಸ್ವಿಯಾದರೆ ಅದೇ ಕೃಷಿಯನ್ನು ಇತರರು ಅನುಸರಿಸುವುದು ಈಗಲೂ ಇದೆ. ಆಯಾ ಪ್ರದೇಶದ ಮಣ್ಣು, ಹವಾಮಾನ ಇತ್ಯಾದಿಗಳ ಬಗ್ಗೆ ಈಗಲೂ ಅಧ್ಯಯನವಾಗದೆ ಕೃಷಿ ಮಾಡುವುದು ಇದೆ. ಇದೂ ಕೂಡಾ ಅಪಾಯವೇ.

ಸದ್ಯದ ಮಟ್ಟಿಗೆ ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಬಿಟ್ಟು ಇತರ ಕೃಷಿ ಅಸಾಧ್ಯ. ಅಡಿಕೆಯೇ ಮಲೆನಾಡು-ಕರಾವಳಿ ಭಾಗದ ಆರ್ಥಿಕ ಬೆಳೆ. ಅಡಿಕೆಯ ಜೊತೆಗೆ ಇನ್ನೊಂದು ಬೆಳೆ ಯಾವುದು ಅದರ ಆಯ್ಕೆ ನಡೆಯಬೇಕೇ ಹೊರತು ಅಡಿಕೆಯ ಬದಲಾಗಿ ಪರ್ಯಾಯ ಬೆಳೆ ಸದ್ಯ ಅಸಾಧ್ಯ. ಏಕೆಂದರೆ ಅಡಿಕೆ ಬೆಳೆಯುವ ಅಷ್ಟೂ ಪ್ರದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅನೇಕ ವರ್ಷಗಳ ಹಿಂದೆ ಅಡಿಕೆ ಧಾರಣೆ ಒಮ್ಮೆಲೇ ಏರಿಕೆ ಕಂಡಾಗ ಸುಳ್ಯದಂತಹ ಪ್ರದೇಶಕ್ಕೆ ಸಾಕಷ್ಟು ಜೀಪುಗಳು ಬಂದಿದ್ದವು. ಆಗ ಆ ಕಂಪನಿಯೇ ಸುಳ್ಯ ಕಡೆಗೆ ನೋಡಿತ್ತು.  ಈ ವರ್ಷ ಅಡಿಕೆ ಬೆಳೆ ಕಡಿಮೆಯಾಗಿದೆ. ಅನೇಕ ವ್ಯಾಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ. ಇಂತಹ ಘಟನೆ ಹಿಂದೆಯೂ ನಡೆದಿದೆ. ಈಗಾಗಲೇ ವಾತಾವರಣ ಕೈಕೊಡುತ್ತಿದೆ, ಅಡಿಕೆ ಬೆಳೆಯೂ ಕಡಿಮೆಯಾಗುತ್ತಿದೆ. ರೋಗ ಇಲ್ಲದೆಯೇ ಅಡಿಕೆ ಇಳುವರಿಯಲ್ಲಿ ಹೊಡೆತ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿ ಪರ್ಯಾಯವಾಗಿ ಯೋಚಿಸಿ ಅದು ಅನುಷ್ಟಾನವಾಗುವ ವೇಳೆ ಇರುವ ಆರ್ಥಿಕ ವ್ಯವಸ್ಥೆಗಳೂ ಕುಸಿತವಾಗುವ ಸಾಧ್ಯತೆಯೇ ಹೆಚ್ಚು. ಇದಕ್ಕಾಗಿ ಉಪಬೆಳೆಯ ಕಡೆಗೆ ಆದ್ಯತೆ ಹಾಗೂ ಗಮನ ಅಗತ್ಯ ಇರುವುದು ಹೌದು.…..ಮುಂದೆ ಓದಿ….

ದ ರೂರಲ್‌ ಮಿರರ್.ಕಾಂ WhatsApp ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಇಂದು ಅಡಿಕೆ ಬೆಳೆ ಮಲೆನಾಡು-ಕರಾವಳಿ ಮಾತ್ರವಲ್ಲ ಸುಮಾರು 11 ರಾಜ್ಯಗಳಲ್ಲಿ ಇದ್ದರೂ ಮಲೆನಾಡು ಅದರಲ್ಲೂ ಚಾಲಿ ಅಡಿಕೆಯನ್ನೇ ಮಾಡುತ್ತಿರುವ ಸುಳ್ಯ, ಪುತ್ತೂರು, ವಿಟ್ಲ, ಬಾಯಾರು, ಬದಿಯಡ್ಕ ಅಡಿಕೆ ಗುಣಮಟ್ಟದಿಂದ ಕೂಡಿದೆ. ಇನ್ನುಶಿರಸಿ, ಶಿವಮೊಗ್ಗ, ಸಾಗರ,ದಾವಣಗೆರೆಯ ಅಡಿಕೆಗೂ ಅದರದ್ದೇ ಆದ ಮಹತ್ವಗಳು ಇವೆ, ಗುಣಮಟ್ಟವೂ ಇದೆ. ಹೀಗಾಗಿ ಅಡಿಕೆಗೆ ಏಕಾಏಕಿ ಧಾರಣೆ ಕುಸಿಯುವ ಸಾಧ್ಯತೆಗಳು ಕಡಿಮೆ.ಹಾಗೆಂದು ಈ ಧಾರಣೆಯ ನಿರೀಕ್ಷೆಯಂತೂ ಇಡಲು ಸಾಧ್ಯವಿಲ್ಲ.

ಅಡಿಕೆ ಬೆಳೆಗಾರರಿಗೆ ಸದ್ಯ ಇರುವ ಸಮಸ್ಯೆ ಹವಾಮಾನದ್ದು. ತಾಪಮಾನ ಏರಿಕೆ ಹಾಗೂ ತೇವಾಂಶ(ಹ್ಯುಮಿಡಿಟಿ) ಕಾರಣದಿಂದ ಅಡಿಕೆ ಬೆಳೆಯ ಮೇಲೆ ಪರಿಣಾಮವಾಗುತ್ತಿದೆ. ತಾಪಮಾನ ಹಾಗೂ ತೇವಾಂಶದ ದಿಢೀರ್‌ ಆಗಿ ಬದಲಾವಣೆಯು ಎಳೆ ಅಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಹಿಂಗಾರ ಅರಳುವಾಗ ಇರುವ ಕಾಣುವ ಫಸಲು ನಂತರ ಇಲ್ಲವಾಗುತ್ತದೆ. ಅಂದರೆ ಹವಾಮಾನದ ವ್ಯತ್ಯಾಸದಿಂದ ಎಳೆ ಅಡಿಕೆ ಬೀಳುತ್ತದೆ. ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಿಂದೆಲ್ಲಾ ಕೊಳೆರೋಗಕ್ಕೆ ಮಾತ್ರವೇ ನಡೆಯುತ್ತಿದ್ದ ಸಿಂಪಡಣೆ ಈಗ ಅನಿವಾರ್ಯವಾಗಿ ಅಡಿಕೆ ಉಳಿಸಿಕೊಳ್ಳಲು ವಿಪರೀತವಾದ ಔಷಧಿ ಸಿಂಪಡಣೆಯ ಪ್ರಯತ್ನ ನಡೆಯುತ್ತಿದೆ, ಈ ಔಷಧಗಳಲ್ಲಿ ಕೆಲವು ಕಡೆ ಜೇನುನೊಣ ಹಾಗೂ ಇತರ ಪರಿಸರಸ್ನೇಹಿ ಜೀವಿಗಳ ಮೇಲೂ ಹಾನಿಯಾಗುತ್ತಿದೆ. ಈಗ ಇದೊಂದು ಗಂಭೀರ ಸಮಸ್ಯೆಯಾಗಿ ಅಡಿಕೆ ಬೆಳೆಗಾರರನ್ನು ಈಗ ಕಾಡುತ್ತಿದೆ.

ಈಗ ಬಹುಮುಖ್ಯವಾಗಿ ಕಾಡುವುದು ಕಾರ್ಮಿಕರ ಸಮಸ್ಯೆ. ಸೂಕ್ತ ಸಮಯದಲ್ಲಿಕೊಳೆರೋಗಕ್ಕೆ ಔಷಧಿ, ಗೊಬ್ಬರ ನೀಡುವುದು ಹಾಗೂ ಇತರ ಕೆಲಸಗಳು ನಡೆಯಬೇಕು. ಇದಕ್ಕೆ ಈಗ ಕಾರ್ಮಿಕರ ಕೊರತೆ ಹಲವು ಕಡೆ ಕಾಡುತ್ತದೆ. ಇದಕ್ಕಾಗಿ ಯಂತ್ರಗಳ ಬಳಕೆ ಅನಿವಾರ್ಯವಾಗಿ ಮಾಡಬೇಕಾಗಿದೆ. ಈ ಯಂತ್ರಗಳ ಕೂಡಾ ಕೈಗೆಟಕುವ ದರದಲ್ಲಿ ಅಡಿಕೆ ಬೆಳೆಗಾರರಿಗೆ ಸಿಗುತ್ತಿಲ್ಲ. ಹೀಗಾಗಿ ತೋಟ ನಿರ್ವಹಣೆಯೂ ಕಷ್ಟವಾಗಿದೆ.

ವಿಶೇಷವಾಗಿ ಸುಳ್ಯ ಹಾಗೂ ಪುತ್ತೂರಿನ ಕೆಲವು ಕೃಷಿಕರಿಗೆ, ಶೃಂಗೇರಿ,ಕೊಪ್ಪ, ಚಿಕ್ಕಮಗಳೂರಿನ ಕೆಲವು ಕಡೆ ಕೃಷಿಕರಿಗೆ ಕಾಡುವುದು ಅಡಿಕೆ ಹಳದಿ ಎಲೆರೋಗ. ಮಲೆನಾಡಿನ ಹಲವು ಕಡೆ ಎಲೆಚುಕ್ಕಿ ರೋಗ. ಹಳದಿ ಎಲೆರೋಗಕ್ಕೆ ವಿಜ್ಞಾನದ ಮೂಲಕ ಈಗ ಹಳದಿ ಎಲೆರೋಗ ನಿರೋಧಕ ತಳಿಯ ಅಭಿವೃದ್ಧಿ ಮಾಡಲಾಗುತ್ತಿದೆ, ಬಹುತೇಕವಾಗಿ ಒಂದು ಹಂತಕ್ಕೆ ಬಂದಿದೆ. ಎಲೆಚುಕ್ಕಿ ರೋಗಕ್ಕೆ ಈಗಾಗಲೇ ಔಷಧಿ ಸಿಂಪಡಣೆಯ ವಿವರ ಹೇಳಲಾಗಿದೆ, ನಿರ್ವಹಣಾ ಕ್ರಮಗಳ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಇದರ ಪ್ರಾಯೋಗಿಕ ಅನುಷ್ಟಾನ ಕೃಷಿಕರಿಗೆ ಕಷ್ಟವಾಗುತ್ತಿದೆ. ಕಾರಣ ಕಾರ್ಮಿಕರ ಸಮಸ್ಯೆ. ಅಡಿಕೆ ಹಳದಿ ಎಲೆರೋಗ ಇರುವ ಪ್ರದೇಶಗಳಲ್ಲಿ ಸದ್ಯಕ್ಕೆ ಉಪಬೆಳೆಯನ್ನೇ ಪ್ರಧಾನ ಬೆಳೆಯನ್ನಾಗಿ ಕೆಲವು ಕೃಷಿಕರು ಬೆಳೆಯುತ್ತಿದ್ದಾರೆ. ಸಂಪಾಜೆಯಂತಹ ಪ್ರದೇಶದಲ್ಲಿ ರಬ್ಬರ್‌ ಕೃಷಿಯ ಸಹಿತ ಇತರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಅಡಿಕೆಯನ್ನು ಬಿಟ್ಟು ಬದುಕುವುದಕ್ಕೆ ಇಲ್ಲಿಯೂ ಅಸಾಧ್ಯ ಇದೆ. ಈಗಲೂ ಅಡಿಕೆ ಗಿಡಗಳ ನಾಟಿ ಇಲ್ಲಿ ನಡೆಯುತ್ತಿದೆ. ಏಕೆಂದರೆ ಅಡಿಕೆಯ ಜೊತೆಗಿನ ನಂಟು ಹಾಗೆ ಇದೆ.

ಇದೆಲ್ಲದರ ಜೊತೆಗೆ ಅಡಿಕೆ ಆಮದು ಕೂಡಾ  ಅಡಿಕೆ ಧಾರಣೆಯ ಮೇಲೆ ಮುಂದೆ ಪರಿಣಾಮ ಬೀರಬಹುದಾಗಿದೆ. ಈಗಾಗಲೇ ಇಲ್ಲಿ ಇಳುವರಿ ಕಡಿಮೆ, ಆಮದು ಹೆಚ್ಚುತ್ತಿದೆ. ಕಳ್ಳದಾರಿಯ ಮೂಲಕ ಅಡಿಕೆ ಬರುತ್ತಿದೆ. ಈಗಾಗಲೇ ಬರ್ಮಾ ಅಡಿಕೆಯನ್ನು ಅಸ್ಸಾಂ, ಮಿಜೋರಾಂನಲ್ಲಿ ಪತ್ತೆ ಮಾಡಿದ್ದಾರೆ. ಈ ಅಡಿಕೆ ಆಮದು ತಡೆಯಾಗಬೇಕು. ಆಗ ಇಲ್ಲಿನ ಅಡಿಕೆ ಬೆಳೆಗಾರರಿಗೆ ಸಹಜವಾಗಿಯೇ ಇರುವ ಬೆಳೆಯಲ್ಲಿ ಉತ್ತಮ ಧಾರಣೆ ಲಭ್ಯವಾಗಬಹುದಾಗಿದೆ.

ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ಮುಂದೆ ಹೋಗಲು ಸರ್ಕಾರಗಳ , ಜನಪ್ರತಿನಿಧಿಗಳ ಸಹಕಾರ ಅಡಿಕೆ ಬೆಳೆಗಾರರಿಗೆ ಬೇಕಾಗಿದೆ. ಆಡಳಿತಾತ್ಮಕವಾಗಿ ಕೆಲವು ಮಹತ್ವದ ಕ್ರಮ ಕೈಗೊಳ್ಳಲು ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕು, ಪ್ರತಿನಿಧಿಗಳು ಒತ್ತಾಯಿಸಬೇಕಾಗಿದೆ. ಇದಿಷ್ಟಾದರೆ ಅಡಿಕೆ ಬೆಳೆಗಾರರಿಗೆ ಸದ್ಯ ಅಡಿಕೆ ಧಾರಣೆಯ ಬಗ್ಗೆ ಚಿಂತೆ ಇಲ್ಲ, ಉಪ ಬೆಳೆಯ ಬಗ್ಗೆ ಯೋಚಿಸಿ ಹೆಜ್ಜೆ ಇರಿಸಿಕೊಂಡರೆ  ಈಗ ಆತಂಕದಲ್ಲಿರುವ ಮಲೆನಾಡು-ಕರಾವಳಿ ಭಾಗದಲ್ಲಿ ಅಡಿಕೆ ಬೆಳೆದ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಬದುಕು ಸಾಗಿಸಲು ಸಾಧ್ಯವಿದೆ.ಇದನ್ನು ಪ್ರತಿನಿಧಿಗಳು ಮಾಡಿಸಿಕೊಡಬೇಕು.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಡಿಕೆ ಕೃಷಿ ಹಾಗೂ ಅಡಿಕೆಯು ಒಂದು ರಾಜಕೀಯ ಇಶ್ಯೂ ಕೂಡಾ ಹೌದು. ಸಾಕಷ್ಟು ಜನರು ಅಡಿಕೆ ಬೆಳೆಗಾರರು ಇರುವುದರಿಂದ ಅಡಿಕೆಯ ಬಗ್ಗೆ ಲಘುವಾಗಿ ಮಾತನಾಡುವುದು ರಾಜಕೀಯವಾಗಿಯೂ ಡ್ಯಾಮೇಜ್‌ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಈ ಹಿಂದೆ ಅಡಿಕೆಯ ಪರವಾಗಿ ಪಾದಯಾತ್ರೆ, ಅಡಿಕೆಯ ಬಗ್ಗೆ ಹೋರಾಟ, ಅಡಿಕೆ ಮಾರುಕಟ್ಟೆ ಕುಸಿತವಾದಾಗ ಪ್ರತಿಭಟನೆ ನಡೆದಿದೆ. ಈಗಲೂ ಸದನಗಳಲ್ಲಿ ಕರಾವಳಿ ಜಿಲ್ಲೆಯ ಸಂಸದರು, ಶಾಸಕರು ಅಡಿಕೆಯ ಪರವಾಗಿ ಧ್ವನಿ ಎತ್ತುತ್ತಾರೆ. ಹಾಗಾಗಿ ಅಡಿಕೆ ರಾಜಕೀಯ ಇಶ್ಯೂ ಕೂಡಾ ಹೌದು.

ಎಲ್ಲಾ ಇದ್ದರೂ ಅಡಿಕೆ ಬೆಳೆಗಾರರಿಗೆ ಅಡಿಕೆ ಭವಿಷ್ಯದ ಬಗ್ಗೆ ಯಾವಾಗಲೂ ಆತಂಕವೇ. ಅಡಿಕೆ ಹಾನಿಕಕಾರಕ, ಕ್ಯಾನ್ಸರ್‌ಕಾರಕ ಇತ್ಯಾದಿಗಳ ಗುಮ್ಮ ಸದಾ ಇದೆ. 2030 ರ ವೇಳೆಗೆ ಅಡಿಕೆಯ ಬಗ್ಗೆ ನೀತಿ ನಿಯಮಗಳು ಬೇಕು ಎಂದು ವಿಶ್ವಆರೋಗ್ಯ ಸಂಸ್ಥೆ ಆಗಾಗ ಹೇಳುತ್ತದೆ. ಅಡಿಕೆ ಪಾರಂಪರಿಕವಾಗಿ, ಆಯುರ್ವೇದದಲ್ಲೂ ಬಳಕೆ ಇದೆ ಎನ್ನುವುದು ಅಡಿಕೆ ಬೆಳೆಗಾರರ ಹಾಗೂ ಅಡಿಕೆ ಪರವಾಗಿ ಇರುವವರ ವಾದ ಇದೆ. ಅಡಿಕೆಯ ಉತ್ತಮ ಅಂಶಗಳ ಬಗ್ಗೆ ಅಧ್ಯಯನ ಮಾಡಿದವರು ಇದ್ದಾರೆ.  ಆದರೆ ಇದನ್ನು ಪರಿಣಾಮಕಾರಿಯಾಗಿ ಯಾವ ಪ್ರತಿನಿಧಿಗಳೂ ಸದನದಲ್ಲಿ ಮಾತನಾಡಿಲ್ಲ, ಅಡಿಕೆ ಸಂಶೋಧನೆಯ ಬಗ್ಗೆ ಅನುದಾನಗಳನ್ನು ತರುವಲ್ಲಿಯೂ ಪ್ರಯತ್ನಗಳು ನಡೆದಿಲ್ಲ. ಈಗ ಅಡಿಕೆಯ ಬಗ್ಗೆ ಅಧ್ಯಯನ ಆರಂಭಗೊಂಡಿದೆ. ಸಿಪಿಸಿಆರ್‌ಐ ಸಹಿತ ಇತರ ಸಂಸ್ಥೆಗಳು ಈ ಬಗ್ಗೆ ಅಧಿಕೃತ ಅಧ್ಯಯನ ನಡೆಸುತ್ತಿದ್ದಾರೆ. ಅಡಿಕೆಯ ಪರ್ಯಾಯ ಉಪಯೋಗದ ಬಗ್ಗೆ ಮಾತುಗಳು ಕೇಳಲು ಆರಂಭಿಸಿದೆ. ಅಡಿಕೆಯ ಧಾರಣೆಯ ಕಾರಣದಿಂದ ಅಡಿಕೆಯಿಂದ ಪರ್ಯಾಯವಾದ ಯಾವ ಉತ್ಪನ್ನಗಳ ತಯಾರಿಕೆಯೂ ದುಬಾರಿಯಾಗಲಿದೆ. ಅಡಿಕೆಯಲ್ಲಿರುವ ಅರೆಕೋಲಿನ್‌‌ ಅಥವಾ ಟ್ಯಾನಿನ್ ಬೇರೆ ಬೇರೆ ಕಡೆ ಬಳಕೆ ಇದೆ. ಆದರೆ ಅದರ ಬಳಕೆಗೂ ಕೆಲವು ಅಧ್ಯಯನಗಳು ಅಡ್ಡವಾಗಿದೆ. ಅಡಿಕೆಯ ಹಾಳೆ ಪರಿಸರ ಸ್ನೇಹಿ, ಅಡಿಕೆ ಮರದಿಂದ ವಿವಿಧ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಕೆ ಮಾಡಬಹುದಾಗಿದೆ. ಇಂತಹ ಕೆಲವು ಉದ್ಯಮಗಳಿಗೆ ಅಡಿಕೆಯ ನಾಡಿನಲ್ಲಿ ಪ್ರೇರಣೆ ನೀಡುವ ಮೂಲಕ ಕೃಷಿ ಆದಾಯದಲ್ಲಿ ಹೆಚ್ಚುವರಿ ಮಾಡಿಸಬೇಕಾದ ಅಗತ್ಯ ಇದೆ. ಇದು ಬಿಟ್ಟರೆ ಅಡಿಕೆ ತಿಂದು ಉಗುಳುವ ವಸ್ತುವಾಗಿಯೇ ಹೆಚ್ಚು ಬಳಕೆ. ಹೀಗಾಗಿ ಅಡಿಕೆಯ ಬಗ್ಗೆ ಈಗ ಬೇಕಿರುವುದು ಬೆಳೆಗಾರರಿಗೆ ಉಪಬೆಳೆಯತ್ತ ಒಂದು ಹೆಜ್ಜೆ ಹೋಗುವುದಕ್ಕೆ ಸಲಹೆ, ಅಡಿಕೆ ಬೆಳೆ ಯಥೇಚ್ಛವಾಗಿ ನೀರುಕೂಡಾ ಬಯಸುವುದರಿಂದ ಅಡಿಕೆ ವಿಸ್ತರಣೆಯನ್ನು ನೀರಿನ ಲಭ್ಯತೆ ಕಡಿಮೆ ಇರುವ ಜಾಗದಲ್ಲಿ ಮಾಡದಂತೆಯೂ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

1 hour ago

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…

8 hours ago

ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

15 hours ago

ಹೊಸರುಚಿ | ಗುಜ್ಜೆ ಮೊಸರು ಗೊಜ್ಜು

ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು :  ಗುಜ್ಜೆ 1 ಕಪ್ ಬೇಯಿಸಿ…

15 hours ago

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ

ಜಮ್ಮು- ಕಾಶ್ಮೀರದ  ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ  ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…

1 day ago