ಸಂಬಂಧಗಳ ಶಾಖ ಕಳೆದುಹೋಗುವಾಗ…

August 29, 2025
3:21 PM

“ಒಬ್ಬ ಅಜ್ಜ ತನ್ನ ಮೊಮ್ಮಗನನ್ನು ಕೈಹಿಡಿದು ಹತ್ತಿರದ ಪೇಟೆಗೆ  ಕರೆದುಕೊಂಡು ಹೋದರು. ಮಾರ್ಗಮಧ್ಯೆ ಹಡಿಲು ಬಿದ್ದ ಗದ್ದೆಯನ್ನು ತೋರಿಸುತ್ತಾ  “ಇದು ನಮ್ಮ ಮನೆಯ ದಾರಿಗೆ   ಸಾಕ್ಷಿ… ನಿನ್ನ ಅಪ್ಪ ಇಲ್ಲಿ ಬೆಳೆದ,ಇಲ್ಲೇ ನಡೆದ , ಗದ್ದೆಯ ನೀರಿನಲ್ಲಿ ಆಟವಾಡುತ್ತಾ ಮಾವಿನ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾ  ನಿನ್ನ ಚಿಕ್ಕಪ್ಪನ ಜೊತೆ ಇಲ್ಲಿ ಆಟ ಆಡಿದ. ನಾವು ಒಟ್ಟಿಗೆ ಬದುಕಿದ್ದೇವೆ” ಎಂದು ಹೇಳಿದ. ಆ ಮಾತುಗಳನ್ನೆಲ್ಲ ಅಜ್ಜ ಶ್ರದ್ಧೆಯಿಂದ ಹೇಳುತ್ತಿದ್ದರೂ, ಮೊಮ್ಮಗನ ಕಿವಿಯಲ್ಲಿ ಹೆಡ್‌ಫೋನ್. ಅವನಿಗೆ ಆ ಕಥೆಗಳ ಶಬ್ದ ತಲುಪಲೇ ಇಲ್ಲ. ಮೊಬೈಲ್ ಪರದೆ ಅವನಿಗೆ ಹೆಚ್ಚು ಹತ್ತಿರವಾಗಿತ್ತು, ಅಜ್ಜನ ಹೃದಯವಲ್ಲ.” ಈ ದೃಶ್ಯವು ನಮ್ಮ ಇಂದಿನ ಬದುಕಿನ ಕಹಿ ಚಿತ್ರಣ. ಸಂಬಂಧಗಳ ಶಾಖ ಕಡಿಮೆಯಾಗುತ್ತಿದೆ.

ಹಳೆಯ ದಿನಗಳಲ್ಲಿ ಒಂದು ಮನೆ ಎಂದರೆ ಕೇವಲ ಅಪ್ಪ, ಅಮ್ಮ, ಮಕ್ಕಳು ಅಲ್ಲ – ಅದರಲ್ಲಿ ಅಣ್ಣ-ತಂಗಿ, ಮಾವ, ಅಜ್ಜ, ಅತ್ತೆ, ಚಿಕ್ಕಮ್ಮ, ನೆಂಟರು ಎಲ್ಲರೂ ಸೇರಿದ್ದರು. ಬಿಸಿಯನ್ನೂ, ತಂಪನ್ನೂ, ಸಿಹಿಯನ್ನೂ, ಕಹಿಯನ್ನೂ ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಇಂದಿಗೆ ಆ ಕೂಡು ಕುಟುಂಬಗಳು ಇತಿಹಾಸವಾಗುತ್ತಿವೆ. ದೊಡ್ಡ ಮನೆಗಳನ್ನು ಕಟ್ಟಿದ್ದೇವೆ, ಆದರೆ ಆ ಮನೆಗಳಲ್ಲಿ ಒಡನಾಡಿಗಳು ವಿರಳ.

ಒಂದೇ ತಟ್ಟೆಯಿಂದ ತಿಂದು ಬೆಳೆದವರು, ಇಂದು ಒಂದೇ ಊಟದ ನೆನಪುಗಳಿಲ್ಲ.

ಒಂದೇ ಬಾಗಿಲಲ್ಲಿ ಆಟವಾಡಿದವರು, ಇಂದು ಒಂದೇ ಹಾದಿಯಲ್ಲಿ ಹತ್ತಿರ ಬರುವುದಿಲ್ಲ.

“ಹಿತ್ತಲಲಿ ಬೆಳೆದ ಬಾಳೆಮರ – ಹತ್ತಿರದ ನೆರಳು, ಇಂದಿಗೆ ಅದೇ ಹಿತ್ತಲೂ ಖಾಲಿ, ಬಾಳೂ ಒಂಟಿ.”

Advertisement

ಬಾಳು ಸಮೃದ್ಧವಾಗಬೇಕೆಂಬ ಹಂಬಲದಲ್ಲಿ ನಾವು ಸಂಪಾದನೆಗೆ ಮಾತ್ರ ಅಂಟಿಕೊಂಡಿದ್ದೇವೆ.

ಮನುಷ್ಯನ ಕೈಯಲ್ಲಿ ಗಡಿಯಾರ, ಆದರೆ ಅವನ ಕೈಯಲ್ಲೇ ಸಮಯ ಇಲ್ಲ. ಬೆಳಗ್ಗೆ ಹೋದವನು ರಾತ್ರಿ ಬಂದು ಮೌನವಾಗುತ್ತಾನೆ. ಒಮ್ಮೆ ಮನೆ ಮಾತುಕತೆಗೆ ಕನ್ನಡಿ ಇದ್ದರೆ, ಇಂದು ಮನೆಯ ಗೋಡೆಗಳಿಗೆ ಮೌನದ ನೆರಳು. ಒಮ್ಮೆ ಊಟದ ಮೇಜು ಮಾತುಕತೆಗೆ ಸಾಕ್ಷಿಯಾಗುತ್ತಿತ್ತು. ಇಂದಿಗೆ ಅದೇ ಊಟವೂ ಮೊಬೈಲ್ ಪರದೆಯೊಂದಿಗೆ ಮೌನದ ಹಸಿವು ತೀರಿಸುವ ಕಾರ್ಯಕ್ರಮ.

ಹೆಸರಿಗಾಗಿ, ಆಕರ್ಷಕವಾಗಿ ತೋರುವುದಕ್ಕಾಗಿ ದೊಡ್ಡ ಸಭಾಂಗಣಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಮದುವೆಗಳು, ಹಬ್ಬಗಳು, ಸಂತೋಷದ ಕೂಟಗಳು – ಮನೆಯ ಹಿತ್ತಲಲ್ಲಿ ಹಾಸಿದ ಹಾಸಿಗೆಯ ಮೇಲೆ ಕುಳಿತು ನಡೆದ ಸಂಭ್ರಮಗಳನ್ನು ಕಳೆದುಕೊಂಡಿದ್ದೇವೆ. ಬದಲಿಗೆ ಬೆಳಕಿನ ಹೊಳೆಯೊಂದಿಗೆ ಸಭಾಂಗಣಗಳ ಚಕಚಕ. ಆದರೆ ಅಲ್ಲಿ ಹೃದಯದ ತೇವವಿಲ್ಲ. ಇಂದಿಗೆ ಅದೇ ಹಬ್ಬ – ಹೋಟೆಲ್‌ನ ಪ್ಲೇಟ್, ಬಾಡಿಗೆಗೆ ತೆಗೆದ ಮಿನುಗುವ ದೀಪ, ಆದರೆ ಹೃದಯದಲ್ಲಿ ಕತ್ತಲೆ.

“ಸಂತೋಷ ಮಾರುಕಟ್ಟೆಯ ವಸ್ತುವಲ್ಲ, ಅದು ಮನಸ್ಸಿನ ಹೊತ್ತಿಗೆಯಲ್ಲೇ ಬೆಳಗುವ ದೀಪ.” ಎಂಬುದನ್ನು ಮರೆತಿದ್ದೇವೆ. ಮಕ್ಕಳ ಬಾಲ್ಯದಲ್ಲಿ ಕಸಿದುಕೊಳ್ಳುತ್ತಿರುವ ನೆನಪು.

ಒಮ್ಮೆ ಬೇಸಿಗೆ ರಜೆ ಬಂದರೆ, ಮಕ್ಕಳು ನೆಂಟರ ಮನೆಗೆ ಹೋಗುವುದು ಪವಿತ್ರ ಸಂಪ್ರದಾಯವಾಗಿತ್ತು. ಮಕ್ಕಳು ಅಜ್ಜಿಯ ಕಥೆಗೆ ನಗುತಿದ್ದರು, ಮಾವನ ಜೊತೆ ತೋಟದಲ್ಲಿ ಹಾರಾಡುತ್ತಿದ್ದರು. ಇಂದು ಮಕ್ಕಳು ಪರದೆಗೆ ಅಂಟಿಕೊಂಡು, ಅವರ ಬಾಲ್ಯವನ್ನು ಪರದೆಗೆ ಬಲಿಕೊಡುತ್ತಿದ್ದಾರೆ.

Advertisement

“ಅಜ್ಜಿಯ ಅಕ್ಕಿ ರುಚಿ – ಬದುಕಿನ ಪಾಠ, ಆದರೆ ಇಂದಿಗೆ ಪಿಜ್ಜಾ ಬಾಕ್ಸ್ – ಕ್ಷಣಿಕ ತೃಪ್ತಿ ”ಎಂಬಲ್ಲಿಗೆ ತಲುಪಿದೆ.  ಇಂದಿಗೆ ಮಕ್ಕಳು ರಜೆಯಲ್ಲೂ ಟ್ಯೂಷನ್, ಕ್ಯಾಂಪ್, ಮೊಬೈಲ್ ಆಟ – ರಕ್ತಸಂಬಂಧದ ಅನುಭವವೇ ಸಿಗುತ್ತಿಲ್ಲ.

ಈ ಬದಲಾವಣೆ ಕೇವಲ ಕುಟುಂಬವನ್ನು ಮಾತ್ರವಲ್ಲ, ಸಮಾಜವನ್ನೇ ಬದಲಿಸುತ್ತಿದೆ. ವಿಶ್ವಾಸ, ನಂಬಿಕೆ, ಆತ್ಮೀಯತೆ – ಇವುಗಳ ಬದಲು ಒಂಟಿತನ, ಸ್ಪರ್ಧೆ, ಅಹಂಕಾರಗಳು ಹೆಚ್ಚುತ್ತಿವೆ. ಬದುಕಿನ ನಿಜವಾದ ಆನಂದವೇ ಕಳೆದು ಹೋಗಿದೆ. ಸಂಬಂಧ ಕಳೆದುಹೋದ ಮನೆ –ಆಕಾಶವಿಲ್ಲದ ಹಕ್ಕಿಯಂತೆ.ಅಜ್ಜ-ಅಜ್ಜಿಯಿಲ್ಲದ ಬಾಲ್ಯ –ಹಾಡಿಲ್ಲದ ಹಬ್ಬದಂತೆ.

ಒಂದೇ ಮನೆಯವರು ಒಬ್ಬರಿಗೊಬ್ಬರು ಪರರಂತೆ, ಇದರಿಂದ  ಸಮಾಜವೇ ಭಾವ ರಹಿತವಾಗುತ್ತಿದೆ.  ಇದಕ್ಕೆ ಪರಿಹಾರ – ಹೃದಯದ ಬಾಗಿಲು ತೆರೆಯುವುದು. ಸಂಬಂಧಗಳು ಸ್ವಾಭಾವಿಕವಾಗಿ ಬಲವಾಗುವುದಿಲ್ಲ. ಅವನ್ನು ಪಾಲಿಸಬೇಕು, ಕಾಪಾಡಬೇಕು. ತಿಂಗಳಲ್ಲಿ ಒಂದಾದರೂ ಎಲ್ಲರೂ ಸೇರಿ ಊಟ ಮಾಡುವ ಸಂಪ್ರದಾಯ ಹಿಂತಿರುಗಿಸೋಣ.

ಹಬ್ಬಗಳನ್ನು ಮನೆಯಲ್ಲೇ ಆಚರಿಸೋಣ. ಮಕ್ಕಳಿಗೆ ನೆಂಟರ ಮನೆಗೆ ಹೋಗುವ ಅವಕಾಶ ನೀಡಿ. “ಸಮಯವಿಲ್ಲ” ಎಂಬ ನೆಪದ ಬದಲು “ಸಮಯ ಮಾಡಿಕೊಳ್ಳಿ” ಎಂಬ ಮನೋಭಾವ ಬೆಳೆಸೋಣ. ನಾವು ಕಟ್ಟುವ ಕಟ್ಟಡಗಳು ಎತ್ತರವಾಗುತ್ತಿವೆ, ಆದರೆ ಸಂಬಂಧಗಳ ಸೇತುವೆಗಳು ಕುಸಿಯುತ್ತಿವೆ. ಸಂಪಾದನೆ ಬದುಕನ್ನು ಸುಖಮಯ ಮಾಡಬಹುದು, ಆದರೆ ಸಂಬಂಧಗಳು ಬದುಕಿಗೆ ಅರ್ಥ ನೀಡುತ್ತವೆ.

“ರಕ್ತಸಂಬಂಧ ಒಣಗಿದರೆ – ಬದುಕಿನ ಹೂವು ಒಣಗುತ್ತದೆ. ಸಂಬಂಧಗಳ ಶಾಖ ಕಳೆದು ಹೋದರೆ – ಬದುಕಿನ ಬೆಂಕಿ ತಂಪಾಗುತ್ತದೆ.”

Advertisement

ಅಜ್ಜ ಹೇಳಿದ ಕಥೆಗೆ ಮೊಮ್ಮಗ ಕಿವಿಗೊಡದಿದ್ದರೆ – ಅದು ಕೇವಲ ಒಂದು ಕಥೆ ಕಳೆದುಹೋದ ದುರಂತವಲ್ಲ, ಅದು ಪೀಳಿಗೆಯ ಸೇತುವೆ ಕುಸಿದ ಎಚ್ಚರಿಕೆ. ಆದ್ದರಿಂದ   ಕಳೆದು ಹೋಗುವ ಮುನ್ನ ಈಗಲೇ ಎಚ್ಚೆತ್ತುಕೊಳ್ಳೋಣ .

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror