ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ

November 13, 2024
9:43 PM
ಇಡೀ ಸಮುದಾಯ ಮತ್ತು ದೇಶದ ದೃಷ್ಠಿಯಿಂದ ನೋಡಿದರೆ ಅಕ್ಕಿಯನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಅದರಲ್ಲೂ ಸಾವಯವ ಕೃಷಿಯಲ್ಲಿ ತೊಡಗಿರುವವರಿಗೆ ವಿಶೇಷ ಪ್ರೋತ್ಸಾಹ ಬೇಕಾಗಿದೆ.

ಅಕ್ಕಿ ನಮ್ಮ ದೇಶದ ಬಹುಭಾಗಗಳಲ್ಲಿ ಪ್ರಮುಖ ಆಹಾರ ಧಾನ್ಯ. ಅಕ್ಕಿ ಸಿಕ್ಕುವುದು ಭತ್ತದ ಒಳಗೆ. ಹಾಗಾಗಿ ಕೃಷಿ ವ್ಯವಸಾಯದಲ್ಲಿ ಭತ್ತವನ್ನು ಬೆಳೆಸುವುದು ತಲೆ ತಲಾಂತರದಿಂದ ಅವಲಂಬಿಸಿಕೊಂಡು ಬಂದ ಜೀವನೋಪಾಯವಾಗಿತ್ತು. ನಿರಂತರವಾಗಿ ನೀರು ಅಗತ್ಯವಾಗಿರುವುದರಿಂದ ಮಳೆಗಾಲದ ಬೆಳೆ ಮಾತ್ರ ವಿಸ್ತಾರವಾಗಿ ನಮ್ಮ ಊರುಗಳಲ್ಲಿ ಕಂಗೊಳಿಸುತ್ತಿತ್ತು. ನಾಲ್ಕು ತಿಂಗಳಲ್ಲಿ ಆ ಬೆಳೆ ಕೊೈದ ಬಳಿಕ ಗದ್ದೆಗಳು ಖಾಲಿ ಬಿದ್ದಿರುತ್ತಿದ್ದುವು. ನೀರು ಲಭ್ಯ ಇರುವ ಗದ್ದೆಗಳಲ್ಲಿ ಮಾತ್ರ ಎರಡನೇ ಬೆಳೆಯಾಗಿ ಭತ್ತವನ್ನು ಬೆಳೆಸುತ್ತಿದ್ದರು. ಹಾಗಾಗಿ ಡಿಸೆಂಬರ್‌ನಿಂದ ಫೆಬ್ರವರಿಯ ತನಕ ಅರ್ಧಕ್ಕರ್ಧ ಗದ್ದೆಗಳು ಮಾತ್ರ ಹಸಿರಾಗಿರುತ್ತಿದ್ದುವು. ಇವುಗಳಲ್ಲಿ ಕೊೈಲು ಮುಗಿದ ಬಳಿಕ ಮೂರನೇ ಬೆಳೆಯ ಭಾಗ್ಯವಿದ್ದುದು ಅಪರೂಪವಾಗಿ ಕೆಲವೇ ಕೆಲವು ಗದ್ದೆಗಳಿಗೆ ಮಾತ್ರ. ಮತ್ತೆ ಪುನಃ ಮಳೆಗಾಲದ ಬೆಳೆ ಬೆಳೆಸಲು ರೈತರು ಸಿದ್ಧರಾಗುತ್ತಿದ್ದರು. ಈ ಮಧ್ಯೆ ಮಳೆಗಾಲದ ಬೆಳೆಯ ಬಳಿಕ ಮೆಣಸು, ತರಕಾರಿ, ಉದ್ದು, ಗೆಣಸು ಇತ್ಯಾದಿ ಉಪಬೆಳೆಗಳನ್ನು ಬೆಳೆಸುವ ಮೂಲಕ ಮಣ್ಣಲ್ಲಿ ಸಸಾರಜನಕ ತುಂಬುತ್ತಿದ್ದರು. ಇದೊಂದು ಉಪ ಆದಾಯವೂ ಆಗಿತ್ತು. ಹೀಗೆ ಭೂಮಿಯು ರೈತನ ಬದುಕಿಗೆ ಸ್ಥಿರತೆಯನ್ನು ಕೊಡುತ್ತಿತ್ತು. ಗದ್ದೆಯ ಮಣ್ಣು ಅನ್ನ ಕೊಡುವ ಮೂಲಕ ರೈತನ ಪಾಲಿಗೆ ಅದು ಹೊನ್ನೇ ಆಗಿತ್ತು. ರೈತರು ಪರಸ್ಪರ ಕೃಷಿಕಾರ್ಯಗಳಲ್ಲಿ ಸಹಕರಿಸುತ್ತ ಗ್ರಾಮ ಸಮುದಾಯಗಳಲ್ಲಿ ಸಹಕಾರ ತತ್ವವು ವಸ್ತುಶಃ ಬಳಕೆಯಲ್ಲಿತ್ತು.…..ಮುಂದೆ ಓದಿ….

Advertisement
Advertisement
Advertisement

ತಮ್ಮ ಗದ್ದೆಯಲ್ಲಿ ಬೆಳೆಸಿದ ಭತ್ತದಲ್ಲಿ ರೈತರಿಗೆ ಮಾರುವುದಕ್ಕೆ ಎಷ್ಟು ಸಿಗುತ್ತದೆ ಎಂಬುದರ ಆಧಾರದಲ್ಲಿ ಅವರ ಆರ್ಥಿಕತೆ ಅವಲಂಬಿಸಿರುತ್ತಿತ್ತು. ಗೇಣಿ ಒಕ್ಕಲುಗಳನ್ನಿಟ್ಟುಕೊಂಡು ಬೇಸಾಯ ನಡೆಸುತ್ತಿದ್ದ ಭೂಮಾಲಕ ರೈತರಿಗೆ ಶ್ರಮ ಮತ್ತು ರಿಸ್ಕ್ ಇಲ್ಲದೆ ಆದಾಯ ಬರುತ್ತಿತ್ತು. ಹಾಗಾಗಿ ಅವರು ಭತ್ತದ ಕೃಷಿಯನ್ನು ಬದಲಾಯಿಸಲಿಲ್ಲ. ಆದರೆ ಭೂಸುಧಾರಣೆಯಿಂದಾಗಿ ಗೇಣಿ ಒಕ್ಕಲುಗಳಿಗೆ ಭೂಮಿಯನ್ನು ಬಿಟ್ಟುಕೊಡಬೇಕಾಗಿ ಬಂದಾಗ ಮಾಜಿ ಭೂಮಾಲಕರು ಆರ್ಥಿಕ ಆದಾಯಕ್ಕಾಗಿ ಪರ್ಯಾಯ ಉದ್ಯಮಗಳಲ್ಲಿ ತೊಡಗಿದರು. ಭತ್ತ ಬೆಳೆಯುವ ಕೃಷಿ ಭೂಮಿಯ ಮೇಲೆ ಮಾಲಕತ್ವ ಪಡೆದ ಮಾಜಿ ಒಕ್ಲುಗಳವರು ಗೇಣಿ ಭೂಮಿ ತಮಗೆ ಸ್ವಂತವಾದ ಬಳಿಕ ಸಾಧ್ಯವಿರುವಲ್ಲಿ ಆರ್ಥಿಕ ಬೆಳೆಗಳತ್ತ ಮನ ಮಾಡಿದರು. ಅಡಿಕೆ, ಕೊಕ್ಕೊ, ಕಾಳುಮೆಣಸು, ಗೇರುಬೀಜ ಮುಂತಾದ ಆರ್ಥಿಕ ಬೆಳೆಗಳ ಕೃಷಿಗೆ ಬದಲಾಯಿಸಿದರು. ಈ ಪ್ರಕ್ರಿಯೆಯಲ್ಲಿ ಭತ್ತ ಬೆಳೆಸುವುದಕ್ಕಾಗಿ ಒಂದಿಷ್ಟೂ ಗದ್ದೆಯನ್ನು ಉಳಿಸಿಕೊಳ್ಳದಿದ್ದುದರಿಂದ ಇತ್ತೀಚೆಗೆ ಈ ರೈತರಲ್ಲಿ ಭತ್ತದ ಕೃಷಿಯಲ್ಲಿ ಬಳಸುತ್ತಿದ್ದ ಉಪಕರಣಗಳೂ ಇಲ್ಲ, ಕೃಷಿ ಕೆಲಸಗಳ ಕೌಶಲಗಳೂ ಇಲ್ಲ. ಆರ್ಥಿಕ ಬೆಳೆಗಳಿಂದ ಬಂದ ಆದಾಯವು ಅಕ್ಕಿಯನ್ನು ಖರೀದಿಸಿ ತಂದು ಜೀವನ ನಡೆಸಲು ಸಾಕಾಗಿ ಮಿಗುತ್ತಿದ್ದುದರಿಂದ ಮತ್ತೆ ಭತ್ತ ಬೆಳೆಸುವತ್ತ ಮರಳುವ ಅಗತ್ಯ ಬೀಳಲಿಲ್ಲ. ಹೀಗಾಗಿ ಭತ್ತದ ಕೃಷಿಯ ಅನುಭವ ಇಲ್ಲದೆ ಒಂದೆರಡು ತಲೆಮಾರುಗಳೇ ಕಳೆದಿರುವ ಕರಾವಳಿಯಲ್ಲಿ ಈಗ ಕೃಷಿಯ ಚಿತ್ರಣವೇ ಬದಲಾಗಿದೆ. ನೀರಿನ ಸೌಲಭ್ಯ ಇರುವಲ್ಲಿ ಭತ್ತದ ಬೆಳೆಯನ್ನು ನಿಲ್ಲಿಸಿ ಅಡಿಕೆ ಮತ್ತು ತೆಂಗಿನ ತೋಟಗಳನ್ನು ಮಾಡಿದ್ದಾರೆ. ಗುಡ್ಡಗಳಲ್ಲಿ ರಬ್ಬರ್ ಬೆಳೆಸಿದ್ದಾರೆ. ಇನ್ನು ನೀರಿಲ್ಲದಲ್ಲಿ ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ. ಮಳೆಗಾಲದ ಒಂದು ಬೆಳೆಯನ್ನು ಮಾಡದೆ ಎಷ್ಟೋ ವರ್ಷಗಳಾಗಿವೆ. ಇಂತಹ ಪಲ್ಲಟವು ಒಂದು ಯುಗದ ಸಾಂಸ್ಕೃತಿಕ ಚಹರೆಗಳನ್ನು ಮಸುಕಾಗಿಸಿದೆ.

Advertisement

ಜನರ ಆರ್ಥಿಕತೆಯು ಹೇಗೆ ಬೇಕಾದರೂ ಬದಲಾಗಬಹುದು. ಕೃಷಿ ಭೂಮಿಗಳನ್ನು ಮಾರಿ ನಗರಕ್ಕೆ ವಲಸೆ ಹೋಗಿ ಕೃಷಿಯೇತರ ಉದ್ಯೋಗಗಳಲ್ಲಿಯೂ ತೊಡಗಬಹುದು. ಆದರೆ ಊಟಕ್ಕೆ ಅಕ್ಕಿ ಬೇಕೇ ಬೇಕು. ಅದನ್ನು ಯಾರಾದರೂ ಬೆಳೆಯಲೇ ಬೇಕು. ಇಡೀ ಸಮುದಾಯ ಮತ್ತು ದೇಶದ ದೃಷ್ಠಿಯಿಂದ ನೋಡಿದರೆ ಅಕ್ಕಿಯನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಅದರಲ್ಲೂ ಸಾವಯವ ಕೃಷಿಯಲ್ಲಿ ತೊಡಗಿರುವವರಿಗೆ ವಿಶೇಷ ಪ್ರೋತ್ಸಾಹ ಬೇಕಾಗಿದೆ. ಅಲ್ಲದೆ ಅಕ್ಕಿಯ ಖರೀದಿ ಬೆಲೆಯನ್ನು ಕೃಷಿಕರಿಗೆ ಲಾಭದಾಯಕವಾಗುವಂತೆ ಏರಿಸಬೇಕಾಗಿದೆ. ಭತ್ತ ಬೆಳೆಯುವ ರೈತರ ಮಕ್ಕಳಿಗೆ ಶಾಲೆ ಕಾಲೇಜುಗಳಲ್ಲಿ, ಮತ್ತು ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟುಗಳಲ್ಲಿ ಮೀಸಲಾತಿಯನ್ನು ನೀಡಬೇಕು. ಹೀಗೆ ಸೀಟು ಪಡೆದವರು ವಿದ್ಯಾವಂತರಾಗಿ ವೈದ್ಯಕೀಯ ಅಥವಾ ತಾಂತ್ರಿಕ ವೃತ್ತಿಗೆ ರಿಜಿಸ್ಟ್ರೇಶನ್ ಮಾಡುತ್ತಲೇ ಅವರಿಗೆ ಪಿತ್ರಾರ್ಜಿತವಾಗಿ ಭತ್ತದ ಗದ್ದೆಗಳ ಮೇಲೆ ಉತ್ತರಾಧಿಕಾರ ನದಾರದು (NIL) ಆಗಬೇಕು. ಅವರ ಪೋಷಕರು ಕೃಷಿಯಿಂದ ನಿವೃತ್ತಿ ಹೊಂದುವಾಗ ಸರಕಾರವು ಕಾಯಿದೆ ಪ್ರಕಾರ ಸೂಕ್ತ ಪರಿಹಾರ ನೀಡಬೇಕು. ಬಳಿಕ ಭತ್ತದ ಬೇಸಾಯಕ್ಕೆ ಬೇರೆಯವರು ಬರುತ್ತಾರೆ ಮತ್ತು ಅವರ ಮಕ್ಕಳು ಮೀಸಲಾತಿಯ ಲಾಭ ಪಡೆಯುತ್ತಾರೆ. ಹಾಗಾಗಿ ಮೀಸಲಾತಿ ಸೌಲಭ್ಯವು ಒಂದು ತಲೆಮಾರಿಗೆ ಮಾತ್ರ ಸೀಮಿತವಾಗಿರುತ್ತದೆ. ಅದು ಜಾತಿ ಅಥವಾ ಮನೆತನದ ಆಧಾರದಲ್ಲಿ ಮುಂದುವರಿಯುವುದಿಲ್ಲ. ಇದರಿಂದಾಗಿ ಭತ್ತ ಬೆಳೆಯುವ ಗೆಯ್ಮೆಯಲ್ಲಿ ಹೊಸ ಉತ್ಸಾಹಿಗಳು ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಶಾಸನಾತ್ಮಕ ಪರಿವರ್ತನೆಯ ಮೂಲಕ ಭತ್ತದ ಕೃಷಿಯನ್ನು ಹಾಗೂ ಮಾರುಕಟ್ಟೆ ಬೆಲೆಯನ್ನು ಉಳಿಸಿಕೊಳ್ಳದೆ ಇದ್ದರೆ ಅಡಿಕೆ, ಗೇರುಬೀಜ, ರಬ್ಬರ್ ಇತ್ಯಾದಿಗಳು ಜನರ ಹೊಟ್ಟೆ ತುಂಬಿಸಲಾರವು.…..ಮುಂದೆ ಓದಿ….

Advertisement

ಸಾಮಾನ್ಯವಾಗಿ ಸಾರ್ವಜನಿಕವಾಗಿ ಕೇಳಿ ಬರುವ ಎರಡು ಮಾತುಗಳೆಂದರೆ, “ಈಗಿನ ಮಕ್ಳಿಗೆ ಹಾಲು ಸಿಕ್ಕುವುದು ಡೈರಿಯಲ್ಲಿ ಮತ್ತು ಅಕ್ಕಿ ಸಿಕ್ಕುವುದು ಅಂಗಡಿಯಲ್ಲಿ ಎಂತ ಮಾತ್ರ ಗೊತ್ತಿದೆ. ಹಟ್ಟಿಯಲ್ಲಿ ದನ ಸಾಕುವುದೂ ಗೊತ್ತಿಲ್ಲ, ಗದ್ದೆಯಲ್ಲಿ ಭತ್ತ ಬೆಳೆಯುತ್ತದೆಂದೂ ಗೊತ್ತಿಲ್ಲ”. ಹೀಗೆ ಹೇಳುವ ಅನೇಕ ಪೆÇೀಷಕರಿಗೂ ಶಿಕ್ಷಕರಿಗೂ ಹಟ್ಟಿಯ ವಾಸನೆಯೂ ಗೊತ್ತಿರುವುದಿಲ್ಲ. ಅಂಗಡಿಯಲ್ಲಿ ಎಷ್ಟು ಬಗೆಯ ಅಕ್ಕಿ ಸಿಗುತ್ತವೆಂದೂ ಗೊತ್ತಿರುವುದಿಲ್ಲ. ಹಾಗೆಂದು ಅವರಿಗೆ ಕನಿಷ್ಠ ಹಾಲಿನ ಮತ್ತು ಅಕ್ಕಿಯ ಮೂಲ ಗೊತ್ತಿರುತ್ತದೆ. ಆದರೆ ಅವರ ಮಕ್ಕಳಿಗೆ ಅದೇನೂ ಗೊತ್ತಿರುವ ಸಾಧ್ಯತೆಗಳಿಲ್ಲವಾಗಿದೆ. ಮನೆಯಿಂದ ಶಾಲೆ ಮತ್ತು ಶಾಲೆಯಿಂದ ಮನೆಗೆ ದಿನಚರಿ ಇರುವ ಮತ್ತು ರಜಾದಿನದಲ್ಲಿ ಮಾಲ್ ಗಳಲ್ಲಿ ಸುತ್ತಾಡುವ ಮಕ್ಕಳು ಹಾಲಿನ ಮತ್ತು ಅಕ್ಕಿಯ ಪೆಕೆಟ್‍ಗಳನ್ನಷ್ಟೇ ನೋಡಿರುತ್ತಾರೆ. ಇದು ಮಕ್ಕಳ ಕಾಲದ ಸಂಸ್ಕೃತಿ. ನಮ್ಮ ಕಾಲಕ್ಕಿಂತ ಎಷ್ಟೋ ಪರಿವರ್ತನೆ ಹೊಂದಿರುವ ಸಂಸ್ಕೃತಿ. ಆದರೂ ನಮಗೇನು ಅನ್ನಿಸುತ್ತದೆಂದರೆ ಈಗ ಬೆಳೆಯುತ್ತಿರುವ ಮಕ್ಕಳಿಗೆ ಹಳೆಯ ಕಾಲದ ಸಂಸ್ಕೃತಿಯ ದರ್ಶನ ನೀಡಬೇಕು. ಜನ ಜಾನುವಾರುಗಳ ಹೊಕ್ಕು ಬಳಕೆ ಹೇಗಿತ್ತು ಎಂಬುದನ್ನು ತಿಳಿಸಬೇಕು. ಆದರೆ ಅಂತಹ ಅವಕಾಶವನ್ನು ಸಂಘಟಿಸುವುದು ಕಷ್ಟ. ಏಕೆಂದರೆ ಹಾಲು ಮತ್ತು ತರಕಾರಿಗಳನ್ನು ಪೇಟೆಯಿಂದಲೇ ತರುವ ಅಡಿಕೆ ಬೆಳೆಗಾರರು ಅನೇಕರಿದ್ದಾರೆ. ಆದರೆ ನಮಗೆ ಸ್ನೇಹ ಶಾಲೆಯಲ್ಲಿ ಅದು ಕಷ್ಟವಾಗಲಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ದೊಡ್ಡ ನೆರೆ ಬಂದಾಗ ಪಯಸ್ವಿನಿಯ ಬದಿಯಲ್ಲಿ ಮನೆ ಮಾಡಿಕೊಂಡಿದ್ದ ಅರ್ಚಕ ಗುರುರಾಜರವರ ಕುಟುಂಬಕ್ಕೂ ಅವರ ಹಸುಗಳಿಗೂ ಆಶ್ರಯ ಕೊಟ್ಟಿದ್ದೆವು. ಆಗ ನಮ್ಮ ಶಾಲಾ ಮಕ್ಕಳಿಗೆ ದಿನಾಲೂ ದನಕರುಗಳನ್ನು ನೋಡುವುದೇ ಥ್ರಿಲ್. ಈ ವರ್ಷ ಶಾಲಾ ಆಟದ ಅಂಗಳದಲ್ಲಿ ನೀರು ನಿಂತಿರುವ ಭಾಗದಲ್ಲಿ ಉಳುಮೆ ಮಾಡಿ ಭತ್ತ ಬೆಳೆಸಿದೆವು. ತೆನೆ ನೆಡುವುದರಲ್ಲಿಯೂ ಮಕ್ಕಳಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ದಿನಾಲೂ ಶಾಲೆಗೆ ಬಂದವರು ಗದ್ದೆಯಲ್ಲಿ ತೆನೆಯ ಬೆಳವಣಿಗೆಯ ವೀಕ್ಷಣೆ ಮಾಡುತ್ತಿದ್ದರು. ಮೊನ್ನೆ 09-11-2024 ರಂದು ಕೊೈಲಿನ ಕೆಲಸದಲ್ಲಿಯೂ ಭಾಗವಹಿಸಿದರು. ಭತ್ತ ಕುಟ್ಟಿ ಅಕ್ಕಿ ಆಯ್ದುಕೊಳ್ಳುವುದನ್ನು ಕಂಡ ಮಕ್ಕಳಿಗೆ ನವಾನ್ನದ (ಕಾಯಿಗಂಜಿಯ) ಪ್ರಸಾದದ ಸ್ವಾದ ಅಪರಿಮಿತವೆನ್ನಿಸಿತು. ಅಂತೂ ಮಕ್ಕಳಿಗೆ ಕಾಯಕ ಸಂಸ್ಕೃತಿಯ ಸುಖವನ್ನೂ ಭತ್ತ ಬೆಳೆಸುವ ಅರಿವನ್ನೂ ನೀಡುವಲ್ಲಿ ಸ್ನೇಹ ಶಾಲೆಯ ಆಡಳಿತ ಮತ್ತು ಶಿಕ್ಷಕರ ಪ್ರಯತ್ನ ಸಾರ್ಥಕವಾಯಿತು.
ಸ್ನೇಹ ಶಾಲೆಯ ಆವರಣದಲ್ಲಿ ಶೇಕಡಾ 80% ಭಾಗ ವೈವಿಧ್ಯಮಯ ಸಸ್ಯಗಳೇ ತುಂಬಿದ್ದು ಅವುಗಳಲ್ಲಿ ಅನೇಕ ಔಷಧೀಯ ಸಸ್ಯಗಳಿವೆ. ಇವು ಭೂಮಿಗೆ ಸಾಕಷ್ಟು ನೆರಳನ್ನು ನೀಡುತ್ತಿದ್ದು ವಾತಾವರಣವನ್ನು ತಂಪಾಗಿಡಲು ಸಹಾಯಕವಾಗಿದೆ. ವಿದ್ಯಾರ್ಥಿಗಳಿಗೆ ಮರಗಿಡಗಳ ಹೆಸರು ಮತ್ತು ಪ್ರಯೋಜನಗಳನ್ನು ತಿಳಿಸಲಾಗುತ್ತದೆ. ಶಾಲೆ ಮತ್ತು ವಿದ್ಯಾರ್ಥಿಗಳ ಮನೆಗಳ ನಡುವೆ ಸಸ್ಯಗಳ ಕೊಡುಕೊಳ್ಳುವಿಕೆ ಇರುತ್ತದೆ. ಇದೀಗ ಭತ್ತ ಬೆಳೆಸುವ, ಅದಕ್ಕಾಗಿ ತೆನೆಯನ್ನು ನೆಡುವ, ಅವುಗಳಲ್ಲಿ ಮೂಡಿದ ಹಸಿರು ಕದಿರು ಬೆಳೆದಾಗ ಹಳದಿಯಾಗುವ, ಅದರ ಕೊೈಲು ಮಾಡಿ ಪಡಿಮಂಚಕ್ಕೆ ಹೊಡೆದು ಭತ್ತವನ್ನು ಬೇಪರ್ಡಿಸುವ ಹಾಗೂ ಭತ್ತದ ಹೊಟ್ಟಿನಿಂದ ಅಕ್ಕಿಯನ್ನು ಬೇರ್ಪಡಿಸಲು ಸಾಂಪ್ರದಾಯಿಕವಾಗಿ ಒನಕೆಗಳಿಂದ ಕುಟ್ಟುವ, ಗೆರಸೆಗಳಲ್ಲಿ ಜಾಳನ್ನು ಜಾರಿಸಿ ಕಾಳನ್ನು ಉಳಿಸಿಕೊಳ್ಳುವ ಪ್ರಕ್ರಿಯೆಗಳೆಲ್ಲವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಮಕ್ಕಳು ಅವಲೋಕಿಸಿ ಹೃದ್ಗತ ಮಾಡಿಕೊಂಡಿದ್ದಾರೆ.

ಬರಹ :
ಚಂದ್ರಶೇಖರ ದಾಮ್ಲೆ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ
November 6, 2024
6:42 AM
by: ಡಾ.ಚಂದ್ರಶೇಖರ ದಾಮ್ಲೆ
ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ
ಹಲವಾರು ಸವಾಲುಗಳ ನಡುವೆ ಅಡಿಕೆ ಬೆಳೆ ಭವಿಷ್ಯವೇನು…?
November 3, 2024
7:08 AM
by: ಪ್ರಬಂಧ ಅಂಬುತೀರ್ಥ
ಭಾರತೀಯ ಪ್ರಜೆ
October 31, 2024
6:25 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror