ಶತಮಾನದ ಸುಂದರ ದಾಖಲೆಗಳಲ್ಲಿ ಮಹಾಕುಂಭ ಮೇಳವೂ ಒಂದು. 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಮುಗಿಯುವ ಹಂತಕ್ಕೆ ಬಂದಿದೆ. ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಈ ಪುಣ್ಯಸ್ನಾನದಲ್ಲಿ ಸುಮಾರು 60 ಕೋಟಿಗೂ ಅಧಿಕ ಮಂದಿ ಗಂಗೆಯಲ್ಲಿ ಮಿಂದಿದ್ದಾರೆ ಎನ್ನುವುದು ದಾಖಲೆ. ಅವರೆಲ್ಲರೂ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಪಾಲ್ಗೊಂಡಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಪ್ರಯಾಗ್‌ರಾಜ್‌ಗೆ ಜನರು ಬಂದಿದ್ದಾರೆ.ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ವ್ಯವಸ್ಥೆಗಳನ್ನೂ ಮಾಡಿದೆ. ಎಲ್ಲಾ ವ್ಯವಸ್ಥೆಗಳ ನಡುವೆ ಮಹಾಕುಂಭ ಮೇಳ ಮುಗಿಯುವ ಹೊತ್ತಾಗುತ್ತಿರುವಂತೆಯೇ ಗಂಗೆಯ ಬಗ್ಗೆ ಚರ್ಚೆಗಳು ಆರಂಭವಾದವು. “ಗಂಗೆ ಮಲಿನವಾಗಿದೆ” ಎನ್ನುವುದು ಚರ್ಚೆಯ ವಿಷಯವಾಗಿತ್ತು. ಈ ಕುಂಭ ಮೇಳವು ಭಾವನಾತ್ಮಕವಾಗಿ ಎಷ್ಟು ಮುಖ್ಯವಾಗಿತ್ತೋ, ಅಷ್ಟೇ ಮುಖ್ಯವಾಗಿ ಇಡೀ ದೇಶದಲ್ಲಿ ಇಲ್ಲಿಂದ ಮುಂದೆ ಪವಿತ್ರ ನದಿಗಳ ಸ್ವಚ್ಛತೆ, ಪರಿಸರದ ಸ್ವಚ್ಛತೆಯ ಜವಾಬ್ದಾರಿಗಳು ಹೆಚ್ಚಾಗಬೇಕು. ಗಂಗೆ-ಯಮುನೆಯ ಮಲಿನದ ಬಗ್ಗೆ ಇಂದಲ್ಲ ಕೆಲವು ವರ್ಷಗಳಿಂದಲೂ ಈ ಬಗ್ಗೆ ಚರ್ಚೆಗಳು ಇವೆ. ಹಲವು ಅಧ್ಯಯನ ವರದಿಗಳನ್ನು ಸರ್ಕಾರವೇ ಮಾಡಿದೆ.ಸುಮಾರು 10 ವರ್ಷದ ಹಿಂದೆ ಸರ್ಕಾರವೇ ಗಂಗೆಯ ಸ್ವಚ್ಛತೆಗೆ ಪ್ರಾಜೆಕ್ಟ್ ಸಿದ್ಧ ಮಾಡಿದೆ.………ಮುಂದೆ ಓದಿ……..
ಈ ದೇಶದಲ್ಲಿ ನದಿಯಷ್ಟೇ ಅಲ್ಲ ಪರಿಸರವೂ ದೇವರು. ಈ ಪರಿಸರದ ಒಳಗೆ ಇರುವ ಎಲ್ಲವೂ ಇಲ್ಲಿ ದೇವರೇ. ದೇವರು ಇರುವಲ್ಲಿ ಸ್ವಚ್ಛತೆ ಹಾಗೂ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕಾದ್ದೂ ಅಷ್ಟೇ ಮುಖ್ಯ. ಇದಕ್ಕಾಗಿಯೇ ಗಂಗೆಯ ಶುದ್ಧತೆಗಾಗಿ ಇಂದಲ್ಲ ಸುಮಾರು 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರವು “ನಮಾಮಿ ಗಂಗೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಇದು ಒಂದು ಸಮಗ್ರ ಸಂರಕ್ಷಣಾ ಮಿಷನ್ ಆಗಿದ್ದು, ಕೇಂದ್ರ ಸರ್ಕಾರವು ಜೂನ್ 2014 ರಲ್ಲಿ 20,000 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದೊಂದಿಗೆ ರಾಷ್ಟ್ರೀಯ ನದಿ ಗಂಗಾನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ಉದ್ದೇಶಗಳನ್ನು ಸಾಧಿಸಲು ‘ಪ್ರಧಾನ ಕಾರ್ಯಕ್ರಮ’ ಎಂದು ಅನುಮೋದಿಸಿತ್ತು ಕೂಡಾ. ಅಂದಿನ ಕೇಂದ್ರ ಹಣಕಾಸು ಸಚಿವ, ಅರುಣ್ ಜೇಟ್ಲಿ ಅವರು ನಮಾಮಿ ಗಂಗೆಯ ಅನುಷ್ಠಾನವನ್ನು ಘೋಷಿಸಿದ್ದರು. ಈ ಯೋಜನೆಯು 8 ವಿಭಾಗಗಳಿಂದ ಕೆಲಸ ಮಾಡುವುದಾಗಿತ್ತು. ಒಳಚರಂಡಿ ಮೂಲಸೌಕರ್ಯ, ನದಿ-ಮುಂಭಾಗದ ಅಭಿವೃದ್ಧಿ, ನದಿ-ಮೇಲ್ಮೈ ಸ್ವಚ್ಛಗೊಳಿಸುವಿಕೆ, ನದಿಯ ಜೀವ ವೈವಿಧ್ಯ, ಅರಣ್ಯೀಕರಣ, ಸಾರ್ವಜನಿಕ ಜಾಗೃತಿ, ಕೈಗಾರಿಕಾ ತ್ಯಾಜ್ಯ ಮಾನಿಟರಿಂಗ್ ಹಾಗೂ ಗಂಗಾ ಗ್ರಾಮ ಎಂಬ ವಿಭಾಗದಲ್ಲಿ ಕೆಲಸ ಮಾಡುವ ಯೋಜನೆ ಇದಾಗಿತ್ತು. ಇದರ ಅನುಷ್ಠಾನವನ್ನು ಕೂಡಾ ಯೋಜಿಸಲಾಗಿತ್ತು, 10 ವರ್ಷಗಳಲ್ಲಿ ಸಂಪೂರ್ಣ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿತ್ತು. ಇದರಲ್ಲಿ ಸಾಕಷ್ಟು ಕೆಲಸಗಳೂ ನಡೆದಿವೆ. ಕೊರತೆ ಇರುವುದು ಜನಜಾಗೃತಿಯಲ್ಲಿ. ಇಂದಿಗೂ ಪವಿತ್ರ ನದಿಗಳು ಮಲಿವಾಗುವುದು ಭಕ್ತಿ, ಭಾವಪರವಶವಾದ ಭಕ್ತರಿಂದಲೇ. ಈಚೆಗೆ ಆಗಿರುವ ಚರ್ಚೆಗಳೂ ಇದೇ ಮಾದರಿಯದ್ದು.ವಾಸ್ತವ ಮತ್ತು ಭಕ್ತಿಯ ನಡುವಿನ ಚರ್ಚೆಗಳಲ್ಲಿ ಯಾವತ್ತೂ ಭಕ್ತಿ-ಭಾವನೆಗಳೇ ಗೆಲ್ಲುತ್ತವೆ.
ಗಂಗೆ ಸಹಿತ ಈ ದೇಶದಲ್ಲಿ ಯಾವುದೆಲ್ಲಾ ನದಿಗಳು ಪವಿತ್ರ ಎಂದು ಹೆಸರಿಸಿದೆಯೋ ಅದೆಲ್ಲಾ ಇಂದಿಗೂ ಪವಿತ್ರವೇ ಆಗಿದೆ. ಆದರೆ, ಎಲ್ಲಿ ಎನ್ನುವ ಪ್ರಶ್ನೆ ಇದೆ ಅಷ್ಟೇ. ಇಂದಿಗೂ ಗಂಗೆ-ಯುಮುನೆ ಸಹಿತ ಎಲ್ಲಾ ಪವಿತ್ರ ನದಿಗಳೂ ಆರಂಭದಲ್ಲಿ ಅತ್ಯಂತ ಪವಿತ್ರ, ಶುದ್ಧವಾಗಿದೆ. ಎಲ್ಲಾ ನದಿಗಳು ಉಗಮದಲ್ಲಿ ಎಷ್ಟು ಪರಿಶುದ್ಧವಾಗಿರುತ್ತದೆ ಎಂದರೆ ಇಂದಿನ ವಿಜ್ಞಾನವು ನಡೆಸುವ ಯಾವ ಶುದ್ಧೀಕರಣಕ್ಕಿಂತಲೂ, ಮೀಟರಿಗಿಂತಲೂ ಪರಿಶುದ್ಧವಾಗಿದೆ. ಹಲವಾರು ಉಪಯುಕ್ತ ಅಂಶಗಳು ಆ ನೀರಿನಲ್ಲಿ ಇರುತ್ತದೆ. ಅಂತಹ ಕೆಲವು ಅಂಶಗಳ ಕಾರಣದಿಂದಲೇ ಒಂದು ಹಂತದವರೆಗೆ ಎಲ್ಲಾ ಪವಿತ್ರ ನದಿಗಳು ತಾಳಿಕೊಳ್ಳುತ್ತವೆ. ಅದಕ್ಕೊಂದು ಸಾಮರ್ಥ್ಯ ಇರುತ್ತದೆ. ಅದಕ್ಕಾಗಿಯೇ ಗಂಗಾಜಲ ಎನ್ನುವುದಕ್ಕೆ ಗೌರವ, ಮಾನ್ಯತೆ. ಅದೇ ಕಾರಣದಿಂದ ಇಂದಿಗೂ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಂಗೆ-ಯುಮನಾ-ಗೋದಾವರಿ-ನರ್ಮದೆ-ಸಿಂಧು-ಕಾವೇರಿಯನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು ಅದೇ ನೀರು ಭಾವಿಸಿಕೊಂಡೇ ಕಾರ್ಯಕ್ರಮಗಳು ಆರಂಭವಾಗುತ್ತದೆ. ಪಿತೃಕಾರ್ಯಗಳಲ್ಲೂ ಸಪ್ತ ಕ್ಷೇತ್ರಗಳನ್ನೂ ನೆನಪಿಸಿಕೊಳ್ಳಲಾಗುತ್ತದೆ. ಆದರೆ ಇಂತಹ ಪವಿತ್ರ ನದಿಗಳು ಮುಂದೆ ಹರಿಯುತ್ತಾ ಮಲಿನವಾಗುವುದು ಕಣ್ಣ ಮುಂದೆಯೇ ಇದೆ. ಕೈಗಾರಿಕೆ, ಜನಸಂಖ್ಯೆ ಹೆಚ್ಚಾದಂತೆಯೇ ಯಾವ ಪವಿತ್ರ ನದಿಯಾದರೂ ಮಲಿನವಾಗುವುದು ನಿಶ್ಚಿತ. ಒಂದು ನದಿಗೆ ಧಾರಣಾ ಶಕ್ತಿ ಎನ್ನುವುದು ಇದೆ. ಒಂದು ಹಂತದವರೆಗೆ ನದಿ ತನ್ನಡೊಲ ಒಳಗೆ ನಡೆಯುವ ಮಾಲಿನ್ಯವನ್ನು ತಡೆಯುತ್ತದೆ. ಅದರಾಚೆಗೆ ಯಾವ ನದಿಗೂ ಸ್ವಚ್ಛತೆ, ಪರಿಶುದ್ಧತೆ ಇರಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರಿತುಕೊಳ್ಳಬೇಕಾದ್ದು ಪರಿಶುದ್ಧತೆಯನ್ನು ಬಯಸುವ ಭಕ್ತರು. ಹೀಗಾಗಿ ಇಂತಹ ವಿಷಯಗಳಲ್ಲಿ ಚರ್ಚೆಯಾದಷ್ಟು ಒಂದಷ್ಟು ಜನರಿಗೆ ಜಾಗೃತಿಗೂ, ಒಂದಷ್ಟು ಜನರು ಧ್ವನಿ ಏರಿಸಲೂ ಕಾರಣವಾಗುತ್ತದೆ. ಹೇಗೆ ಭಕ್ತಿ-ಭಾವಗಳು ಮುಖ್ಯವೋ ಅಷ್ಟೇ ಪರಿಶುದ್ಧತೆ ಉಳಿಸಿಕೊಳ್ಳಬೇಕಾದ್ದೂ ಮುಖ್ಯ ಎನ್ನುವ ಅರಿವು ಅಗತ್ಯ ಇದೆ. ರಾಜಕೀಯ ಪ್ರವೇಶ ಮಾಡಿರುವ ಕಡೆ, ಭಾವನಾತ್ಮಕ ಸಂಗತಿಗಳೇ ಮುಖ್ಯ. ಅದೇ ರಾಜಕೀಯ ಇಶ್ಯೂಗಳು ಆಗುವ ವೇಳೆ ಪರಿಸರ, ಸ್ವಚ್ಛತೆ, ನದಿಗಳಲ್ಲಿ ನಿಜವಾದ ಶುದ್ಧತೆ ಕಾಣುವುದು ಕಷ್ಟ ಎನ್ನುವುದು ಒಂದಷ್ಟು ಮಂದಿಗಾದರೂ ಅರ್ಥವಾಗಬೇಕು. ಧಾರ್ಮಿಕ ಭಾವನೆಗಳಲ್ಲಿ ನಿಜವಾಗೂ ಪರಿಶುದ್ಧತೆಯನ್ನು ಕಾಣುವ ಮಂದಿ ನದಿಯನ್ನೂ ಸ್ವಚ್ಛವಾಗಿ ಕಾಣುವ ಹಂಬಲದಲ್ಲೂ ಇರಬೇಕು. ಧಾರ್ಮಿಕ ಭಾವನೆಯೊಳಗೆ ರಾಜಕೀಯವೂ ಇರುವ ಕಡೆ ಇದು ಸಾಧ್ಯವಿಲ್ಲದಾಗಿದೆ ಇಂದು. ವಾಸ್ತವಗಳಿಗೆ ಅಲ್ಲಿ ಜಾಗವಿಲ್ಲ.
ಈ ಹಿಂದೆಯೇ ನಡೆದ ಅಧ್ಯಯನದಲ್ಲಿ ಗಂಗಾನದಿಯು ಕೊಳಚೆನೀರು, ದಹನದ ಬೂದಿ ಮತ್ತು ಇತರ ಮಾಲಿನ್ಯಕಾರಕಗಳಿಂದ ಕಲುಷಿತಗೊಂಡಿದೆ ಎಂದು ವರದಿಗಳು ಹೇಳಿತ್ತು. ದಿನಕ್ಕೆ ಸುಮಾರು 3,000 ಮಿಲಿಯನ್ ಲೀಟರ್ ಕೊಳಚೆ ನೀರನ್ನು ನದಿಯ ಉದ್ದಕ್ಕೂ ಇರುವ ಪಟ್ಟಣಗಳಿಂದ ಗಂಗಾ ನದಿಗೆ ಬಿಡಲಾಗುತ್ತದೆ. ಉತ್ತರದ ಬಯಲು ಸೀಮೆಯಿಂದ ಬರುವ ಮುಕ್ಕಾಲು ಪಾಲು ಕೊಳಚೆ ನೀರು ಶುದ್ಧೀಕರಣಗೊಳ್ಳದೆ ಬಿಡಲಾಗುತ್ತಿದೆ, 2022 ರಲ್ಲಿ, ಇಡೀ ನದಿಗೆ ಬರುವ ಉತ್ಪತ್ತಿಯಾದ ಕೊಳಚೆನೀರಿನ 40% ಅನ್ನು ಮಾತ್ರ ಸಂಸ್ಕರಿಸಲಾಗಿತ್ತು. ಗಂಗಾನದಿಯ ಉದ್ದಕ್ಕೂ ಇರುವ ಘಾಟ್‌ಗಳಲ್ಲಿ ವಾರ್ಷಿಕವಾಗಿ 30,000 ಕ್ಕೂ ಹೆಚ್ಚು ದೇಹಗಳನ್ನು ಸುಡಲಾಗುತ್ತದೆ, ಸುಮಾರು 300 ಮೆಟ್ರಿಕ್ ಟನ್ ಬೂದಿಯನ್ನು ಪ್ರತೀ ವರ್ಷ ನೀರಿನಲ್ಲಿ ಬಿಡಲಾಗುತ್ತದೆ ಎಂಬುದು ವರದಿಯಾಗಿದೆ. ಗಂಗೆಯು 1,00,000 ನಿವಾಸಿಗಳನ್ನು ಮೀರಿದ ಜನಸಂಖ್ಯೆಯನ್ನು ಹೊಂದಿರುವ 100 ನಗರಗಳ ಮೂಲಕ ನದಿ ಹರಿಯುತ್ತದೆ, 50,000ದ ಒಳಗಿನ ಜನಸಂಖ್ಯೆಯನ್ನು ಹೊಂದಿರುವ 97 ನಗರಗಳನ್ನು ದಾಟಿ ಬರುತ್ತದೆ ಎನ್ನುವುದು ವರದಿಗಳು. ಇದರ ಜೊತೆಗೆ ಈಚೆಗೆ ಹವಾಮಾನ ಬದಲಾವಣೆಯೂ ಕೂಡಾ ಗಂಭೀರವಾದ ಪರಿಣಾಮ ಬೀರುತ್ತಿದೆ ಎಂದು ವರದಿಗಳು ಹೇಳಿತ್ತು.
ಹಾಗಿದ್ದರೆ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲವೇ..? ಎನ್ನುವುದು ಪ್ರಶ್ನೆ. ಸರ್ಕಾರಗಳು ಈ ಬಗ್ಗೆ ಕ್ರಮಗಳನ್ನೂ ಕೈಗೊಂಡಿದೆ. ನದಿಗಳ ಪಾವಿತ್ರ್ಯತೆ ಉಳಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆ ಮಾಡಿದೆ. ಯೋಜನೆಗಳನ್ನೂ ಮಾಡಿವೆ. ಆದರೆ ಭಕ್ತಿಯ ಹೆಸರಿನಲ್ಲಿ ಭಾವಪರವಶವಾಗುವ ಜನರನ್ನು ತಡೆಯುವುದು ಹೇಗೆ..? 130 ಕೋಟಿ ಜನರು ಇರುವ ಭಾರತದಂತಹ ದೇಶದಲ್ಲಿ ಕಾನೂನುಗಳನ್ನು ಬಿಗಿ ಮಾಡುವುದು ಹೇಗೆ? ಜಾಗೃತಿಯಾಗಬೇಕಾದ್ದು, ಜನಜಾಗೃತಿ ಮಾಡಬೇಕಾದ್ದು ಹೇಗೆ..? ಇದು ಬಹುದೊಡ್ಡ ಸವಾಲಿನ ಕೆಲಸ. ಸರ್ಕಾರವು ಗಂಗಾ ಶುದ್ಧೀಕರಣದ ರಾಷ್ಟ್ರೀಯ ಮಿಷನ್ ಸೇರಿದಂತೆ ಪರಿಸರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ವೈಯಕ್ತಿಕ ನೈರ್ಮಲ್ಯವನ್ನು ಉತ್ತೇಜಿಸಲು ಮತ್ತು ಶೌಚಾಲಯಗಳನ್ನು ಸ್ಥಾಪಿಸಲು ಸಾಕಷ್ಟು ವ್ಯವಸ್ಥೆ ಆಗಿದೆ. ಆದರೆ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಅನೇಕ ನಗರಗಳ ತ್ಯಾಜ್ಯ ನದಿಯ ಮೂಲಕ ಹರಿಯುತ್ತದೆ, ಇದು ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ. ಜನಸಂಖ್ಯೆಯು ಬೆಳೆಯುತ್ತಿದೆ, ಇದು ನದಿಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ. ಹೀಗಾಗಿಯೇ ಎಷ್ಟೇ ವಿಜ್ಞಾನ, ಶುದ್ಧತೆ, ಪಾವಿತ್ರ್ಯತೆಯ ಬಗ್ಗೆ ಹೇಳಿದರೂ ಒಂದು ನದಿಯ ಧಾರಣಾ ಶಕ್ತಿಯು ಕುಸಿತವಾಗುತ್ತದೆ.
ಈ ಬಾರಿ ಕುಂಭ ಮೇಳದ ಸಮಯದಲ್ಲಿ ಗಂಗಾ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ಇತರ ನದಿಗಳಿಗೆ ತ್ಯಾಜ್ಯವನ್ನು ಬಿಡುವ ಕೈಗಾರಿಕೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಡಿಸೆಂಬರ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಎರಡು ಜಿಲ್ಲೆಗಳಲ್ಲಿ ಪ್ರಯಾಗರಾಜ್ ಮಹಾಕುಂಭದ ಸಮಯದಲ್ಲಿ ಶಾಹಿ ಸ್ನಾನದ ಅಂಗವಾಗಿ ಗಂಗಾ ಅಥವಾ ಅದರ ಜಲಾನಯನ ಪ್ರದೇಶಕ್ಕೆ ತ್ಯಾಜ್ಯವನ್ನು ಬಿಡುವ ಕೈಗಾರಿಕಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮ ಕೈಗೊಂಡಿತ್ತು. ಅದಾದ ಬಳಿಕ ಜನವರಿಯಲ್ಲಿ ಭಕ್ತರ ಸ್ನಾನಕ್ಕೆ ನೀರಿನ ಗುಣಮಟ್ಟವು ಸೂಕ್ತವೆಂದು ಅಧಿಕಾರಿಗಳು ಶಿಫಾರಸನ್ನೂ ಮಾಡಿದ್ದರು. ಹೀಗಾಗಿ ಕುಂಭ ಮೇಳದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತಾದಿಗಳಿಗೆ ತಮ್ಮ ನಂಬಿಕೆಯ ಮೇಲೆ ಯಾವುದೇ ಹೊಡೆತ ಬೀಳದಂತೆ ಸರ್ಕಾರಗಳು ಎಚ್ಚರ ವಹಿಸಿದೆ.
ಅದೇ ಮಾದರಿಯಲ್ಲಿ ಪವಿತ್ರ ಯುಮುನಾ ನದಿಯೂ ಕಲುಷಿತವಾಗುತ್ತಿದೆ. 2015 ರಲ್ಲಿ ಅಂತರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾದ ಯುಮುನಾ ನದಿಯ ಅಧ್ಯಯನ ವರದಿಯಲ್ಲಿಯೂ ಕಲುಷಿತವಾಗುತ್ತಿರುವ ಪವಿತ್ರ ನದಿಯನ್ನು ರಕ್ಷಿಸಬೇಕಿದೆ ಎಂದು ಉಲ್ಲೇಖಿಸಲಾಗಿತ್ತು. ನದಿ ನೀರಿನ ಗುಣಮಟ್ಟದಲ್ಲಿನ ತುಲನಾತ್ಮಕ ವಿಶ್ಲೇಷಣೆಗಳು, ನದಿಯ ಉಗಮದಿಂದ ನಂತರ ಹಂತ ಹಂತವಾದ ಮಾಲಿನ್ಯಗಳ ಬಗ್ಗೆಯೂ ಮತ್ತು ಆ ಬಳಿಕದ ನೀರಿನ ಶುದ್ಧತೆಯ ಬಗ್ಗೆಯೂ ಈ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.ಅಂತಿಮವಾಗಿ ನದಿಯ ನೀರು ಬಳಕೆಗಳಿಗೆ ಸೂಕ್ತವಲ್ಲ ಎಂಬ ಫಲಿತಾಂಶಗಳೂ ಉಲ್ಲೇಖಿಸಿದ್ದವು.
ಗಂಗೆ-ಯುಮುನೆಯಷ್ಟೇ ಅಲ್ಲ, ಈ ದೇಶದ ಎಲ್ಲಾ ಪವಿತ್ರ ನದಿಗಳಿಗೂ ಕೂಡಾ ಧಾರಣಾ ಸಾಮರ್ಥ್ಯಕ್ಕೊಂದು ಮಿತಿ ಇದೆ. ಶತಮಾನಗಳ ಹಿಂದೆ ಜನಸಂಖ್ಯೆ ಕಡಿಮೆ ಇತ್ತು, ಭಕ್ತಿಯ ಹೆಸರಿನಲ್ಲಿ ವಿಪರೀತವಾದ ಆಚರಣೆಗಳು ನದಿಯ ಒಡಲಲ್ಲಿ ನಡೆಯುತ್ತಿರಲಿಲ್ಲ. ಅನೇಕ ಕಡೆ ನದಿಗೆ ಇಳಿಯುವಾಗಲೂ ಪೂಜಿಸಿ, ನದಿಯಲ್ಲಿ ಉಗುಳುವುದು ಕೂಡಾ ಇರಲಿಲ್ಲ. ಇಂದಿಗೂ ಯಾವುದೇ ಪವಿತ್ರ ಕ್ಷೇತ್ರದ ಪಕ್ಕದಲ್ಲಿ ಹರಿಯುವ ನದಿಗೆ ಇಳಿಯುವಾಗ ಅನೇಕರು ನಮಸ್ಕರಿಸಿಯೇ ತೆರಳುತ್ತಾರೆ. ಪವಿತ್ರ ನದಿ ಎಂದು ಭಾವಿಸಿಕೊಂಡಿರುವ, ನಂಬಿರುವ ನದಿಗಳಲ್ಲಿ, ಕೆರೆಗಳಲ್ಲಿ ಆ ನೀರು ಮಲಿನ ಅಂತ ಭಾವಿಸಿಕೊಳ್ಳದೆ ಸ್ನಾನ ಮಾಡುವ ಮಂದಿ ಹಲವಾರು ಮಂದಿ. ಒಂದು ವೇಳೆ ಸ್ನಾನ ಮಾಡಲು ಅಸಾಧ್ಯವಾದರೆ ಪ್ರೋಕ್ಷಣೆಯನ್ನಾದರೂ ಮಾಡಿಕೊಳ್ಳುತ್ತಾರೆ. ಅಂದರೆ ಆ ನೀರು, ನದಿಯ ಮೇಲಿನ ಗೌರವ, ಪೂಜ್ಯ ಭಾವನೆ ಭಕ್ತರೊಳಗೆ ಇರುತ್ತದೆ.
ಜನಸಂಖ್ಯೆ ಹೆಚ್ಚಾದಂತೆಯೇ ಮಾಲಿನ್ಯಗಳು ಹೆಚ್ಚಾಗಲು ಆರಂಭವಾಗುತ್ತದೆ. ನಮ್ಮದೇ ರಾಜ್ಯದ ಪವಿತ್ರ ನದಿಗಳಾದ ಕುಮಾರಧಾರಾ, ನೇತ್ರಾವತಿ, ಕೊಡಗಿನಲ್ಲಿ ಉಗಮವಾಗುವ ಕಾವೇರಿ, ತುಂಗಾನದಿ ಇದೆಲ್ಲವೂ ಉಗಮದಲ್ಲಿ ಇಂದಿಗೂ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆ. ಕುಮಾರಧಾರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ರಸ್ತೆಯಲ್ಲಿ ಸುಮಾರು 2 ಕಿಮೀ ಉರುಳಿಕೊಂಡು ದೇವಸ್ಥಾನಕ್ಕೆ ಹೋದರೂ ರೋಗಗಳು ಬರುವುದಿಲ್ಲ, ರೋಗಗಳು ವಾಸಿಯಾಗುತ್ತವೆ ಎನ್ನುವುದು ನಂಬಿಕೆ ಇದೆ. ಹಾಗೊಂದು ವೇಳೆ ಚರ್ಚೆ ಮಾಡುವುದೇ ಆದರೆ ರಸ್ತೆಯಲ್ಲಿ ಸಾಕಷ್ಟು ರೋಗಕಾರಕ ಅಂಶಗಳು ಇರಲಾರದೇ..? ಆದರೆ ನದಿಯಲ್ಲಿ ಸ್ನಾನ ಮಾಡಿದ ನಂತರ ಸಾಗುವ ಆ ಕ್ಷಣಗಳೇ ಭಾವನಾತ್ಮಕ. ಹೀಗಾಗಿ ಅಲ್ಲಿ ನದಿಯೂ ಒಂದು ಪ್ರಮುಖ ಪಾತ್ರ ವಹಿಸುತ್ತದೆ.
ಆದರೆ, ಅಂತಹ ಕುಕ್ಕೆಸುಬ್ರಹ್ಮಣ್ಯದ ಬಳಿಯ ಕುಮಾರಧಾರಾ ನದಿಯಲ್ಲಿ ಎರಡು ವರ್ಷಗಳ ಹಿಂದೆ ಯುವಬ್ರಿಗೆಡ್ ನಡಸಿದ ಅಭಿಯಾನದಲ್ಲಿ ಸಾಕಷ್ಟು ತ್ಯಾಜ್ಯಗಳನ್ನು ನದಿಯಿಂದ ಮೇಲೆತ್ತಿದೆ. ಆ ಬಳಿಕ ಪ್ರತೀ ತಿಂಗಳಿಗೊಮ್ಮೆ ಸ್ವಚ್ಛತಾ ಅಭಿಯಾನ ನಡೆದಾಗಲೂ ಅದೇ ಪ್ರಮಾಣದಲ್ಲಿ ತ್ಯಾಜ್ಯಗಳು, ಬಟ್ಟೆಗಳು ಲಭ್ಯವಾಗುತ್ತದೆ. ಅದೇ ಪಕ್ಕದ ಇನ್ನೊಂದು ನದಿಗೆ ಸಾಕಷ್ಟು ತ್ಯಾಜ್ಯಗಳು ಇಂದಿಗೂ ಬಿಡಲಾಗುತ್ತಿದೆ. ಹೀಗಿರುವಾಗ ಕುಮಾರಧಾರಾ ನದಿಯೂ ಪಾವಿತ್ರ್ಯತೆ ಉಳಿಸಿಕೊಳ್ಳುವುದು ಹೇಗೆ..?
ಹೀಗಾಗಿ, ಈ ದೇಶದಲ್ಲಿ ಎಲ್ಲಾ ಪವಿತ್ರ ನದಿಗಳು ಮುಂದಿನ ತಲೆಮಾರಿಗೂ ಪಾವಿತ್ರ್ಯತೆ ಉಳಿಸಿಕೊಳ್ಳಬೇಕು, ಇನ್ನೊಮ್ಮೆ ಮಹಾಕುಂಭ ಮೇಳ ನಡೆಯುವಾಗಲೂ ನಿರ್ಭೀತವಾಗಿ ಸ್ನಾನ ಮಾಡಬೇಕು ಎನ್ನುವ ಮನಸ್ಥಿತಿ ನಮ್ಮದಾಗಿದ್ದರೆ ಈ ಮಹಾಕುಂಭ ಮೇಳದ ಮೂಲಕ ಹೊಸದೊಂದು ಸಂಕಲ್ಪವನ್ನು ಮಾಡಬೇಕು. ಈ ಬಾರಿ ಕುಂಭಮೇಳದಲ್ಲಿ ಸುಮಾರು 60 ಕೋಟಿ ಜನರು ಸ್ನಾನ ಮಾಡಿದ್ದಾರೆ ಎನ್ನುವ ವರದಿ ಇದೆ. ಅಂದರೆ ಈ ದೇಶದ ಅರ್ಧದಷ್ಟು ಜನರು ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಇನ್ನು ಒಂದಷ್ಟು ಜನರು ಅಲ್ಲಿನ ವ್ಯವಸ್ಥೆ, ಚರ್ಚೆಗಳ ಬಗ್ಗೆ ಅರಿತಿರುತ್ತಾರೆ. ಇಷ್ಟೂ ಜನರು ಸ್ವಚ್ಛತಾ ಅಭಿಯಾನದಲ್ಲಿ ಅದರಲ್ಲೂ ಪವಿತ್ರ ನದಿಗಳನ್ನು ಮಲಿನ ಮಾಡುವುದಿಲ್ಲ, ಮಲಿನ ಮಾಡಲು ಬಿಡುವುದಿಲ್ಲ, ಈ ದೇಶದಲ್ಲಿ ಸ್ವಚ್ಛತೆಯನ್ನು ಉಳಿಸುತ್ತೇನೆ ಹಾಗೂ ಬೆಳೆಸುತ್ತೇನೆ ಎಂದು ಸಂಕಲ್ಪಿಸಿಕೊಂಡರೆ ಸ್ವಚ್ಛತಾ ಅಭಿಯಾನವೂ ಯಶಸ್ವಿ.”ನದಿ ಮತ್ತು ಪರಿಸರ”ದ ಶುದ್ಧತೆಯನ್ನು ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ , ಧಾರ್ಮಿಕವಾಗಿ ಅಷ್ಟೇ ಅಲ್ಲ ಕನೆಕ್ಟ್ ಆಗಬೇಕಾದ್ದಲ್ಲ, ಸ್ವಚ್ಛತೆಯ ನೆಲೆಯಲ್ಲೂ ಕನೆಕ್ಟ್ ಆಗಬೇಕು, ತಕ್ಷಣದಿಂದಲೇ ಇದು ಜಾರಿಯಾಗಬೇಕಾದ್ದು ಸರ್ಕಾರದಿಂದಲ್ಲ ನಮ್ಮ ಮನಸ್ಸಿನಿಂದ.
ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಠಿಸಲು ಹಾಗೂ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು…
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ…
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಶಿವರಾತ್ರಿಯಂದು(ಇಂದು) ಸಂಪನ್ನಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ…
ಶಿವಮೊಗ್ಗ ಜಿಲ್ಲೆಯ ಸಾಗರದ ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ ವಿವಿಧೋದ್ದೇಶ…
ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…