ಆರ್‌ ಎಸ್ ಎಸ್ ನ ಲಾಠಿ ಮತ್ತು ಸಂಯಮ

October 22, 2025
11:41 AM
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಈಗ ಕನ್ನಡಿ ಒರೆಸಿಕೊಳ್ಳುವ ಸಮಯ. ಕುಚೋದ್ಯದ ಮಾತುಗಳಿಗೆ ವಯಲೆಂಟ್ ಆಗದೆ ಸೈಲೆಂಟಾಗಿ ಇದ್ದುದರಿಂದ ಅಂಟಿರುವ ಧೂಳನ್ನು ತೆಗೆಯದೆ ಬಿಂಬ ಸರಿಯಾಗಿ ಕಾಣದು. ತನ್ನ ಅಸ್ತಿತ್ವದ ನೂರನೇ ವರ್ಷಾಚರಣೆಯನ್ನು ಸ್ಥಳೀಯವಾಗಿ ಪಥಸಂಚಲನದ ಮೂಲಕ ಆಚರಿಸಲು ತೊಡಗಿದ್ದರ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಅದನ್ನು ನಿರ್ಬಂಧಿಸುವ ನಿರ್ಧಾರವೇ ಸಂಘಕ್ಕೀಗ ವರದಾನವಾಗಿದೆ.
ಸಮದರ್ಶಿತ್ವದಿಂದ ನೋಡುವವರಿಗೆ ನಾಡಿನ ರಸ್ತೆಗಳಲ್ಲಿ ಆರ್.ಎಸ್.ಎಸ್.ನ ಸ್ವಯಂ ಸೇವಕರು ಕಂಕುಳಲ್ಲಿ ಲಾಠಿ ಧರಿಸಿ ಪಥ ಸಂಚಲನ ನಡೆಸಿದ ದೃಶ್ಯವು ಭಯ ಪಡಿಸುವಂತಿರಲಿಲ್ಲ. ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆಯವರಿಗೆ ಅತಿಯಾದ ಆತಂಕವುಂಟಾಯಿತು. ಅವರು ತಮ್ಮ ಮಾತುಗಳಲ್ಲಿ ಆರ್.ಎಸ್.ಎಸ್.ನ ಒಂದು ಭೀಕರ ಚಿತ್ರಣ ನೀಡಿ ಅದನ್ನು ನಿಯಂತ್ರಿಸಬೇಕೆಂದು ಒತ್ತಾಯ ಪಡಿಸುವ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದರು. ಪತ್ರವಿಲ್ಲದೆ ಆಗಬಹುದಾಗಿದ್ದ ಕೆಲಸವನ್ನು ಮಾಡಲು ಈ ಪತ್ರವು ಒಂದು ಅಸ್ತ್ರವಾಯಿತು. ಮುಖ್ಯ ಮಂತ್ರಿಯವರೂ ಈ ಪತ್ರಕ್ಕೆ ಎಲ್ಲಿಲ್ಲದ ಆದ್ಯತೆಯನ್ನು ನೀಡಿದರು. ಏಕೆಂದರೆ ಅವರಿಗೂ ಆರ್.ಎಸ್.ಎಸ್. ವಿರುದ್ಧ ತೀವ್ರವಾದ ಉರಿ ಇತ್ತು.  ಆದರೆ ಅವರು ಸುದ್ದಿ ವಾಹಿನಿಗಳಲ್ಲಿ ಮಾಡಿದಷ್ಟು ಸದ್ದನ್ನು ಆದೇಶದ ರೂಪದಲ್ಲಿ ಮಾಡಿಲ್ಲ. ಬದಲಾಗಿ ಕೆಲವು ವರ್ಷಗಳ ಹಿಂದೆ ಬಿ.ಜೆ.ಪಿ ಮುಖ್ಯಮಂತ್ರಿಯಾಗಿದ್ದ ಶ್ರೀ ಜಗದೀಶ ಶೆಟ್ಟರ್‍ರವರ ಕಾಲದಲ್ಲಿ ಜಾರಿಗೊಂಡಿದ್ದ ಆದೇಶವನ್ನು ಹೊರಗೆ ತೆಗೆದರು. ಇದರಿಂದ ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ, ಆದರೆ ಗುಲ್ಲು ದೊಡ್ಡದಾಯಿತು. ಸಂಘಕ್ಕೆ ಅದು ಒಳ್ಳೆಯದೇ ಆಯಿತು. ಏಕೆಂದರೆ ಆರ್.ಎಸ್.ಎಸ್. ನಿಜಕ್ಕೂ ತನ್ನ ಪಥ ಬಿಡಲಿಲ್ಲ ಮತ್ತು ಬಿಡಬೇಕಾಗಿಯೂ ಇಲ್ಲ ಎಂಬುದು ಸಾಬೀತಾಯಿತು.
ಕನ್ನಡದ ಎಲ್ಲಾ ಚ್ಯಾನಲ್‍ಗಳು ಆರ್.ಎಸ್.ಎಸ್.ನ ಮೇಲೆ ಸರಕಾರ ಬ್ಯಾನ್ ಮಾಡಲಿದೆ ಎಂಬಂತೆ ಚರ್ಚಾ ಕೂಟಗಳನ್ನು ನಡೆಸಿದುವು. ಸಂಘದ ಪ್ರಚಾರಕರನ್ನೇ ಮುಂದಿಟ್ಟುಕೊಂಡು ಪ್ರಶ್ನಿಸುವ ಬಳಗವನ್ನೇ ಅವರ ಎದುರಿಗಿರಿಸಿ ನಡೆದ ಚರ್ಚೆಗಳಲ್ಲಿ ಮಾನ್ಯ ಪ್ರಿಯಾಂಕ ಖರ್ಗೆಯವರು ಚಿತ್ರಿಸಿರುವಂತೆ ಯಾವುದೇ ಭಯ ಪಡಬೇಕಾದ ಅಗತ್ಯವಿಲ್ಲವೆಂಬುದು ಸ್ಪಷ್ಟವಾಯಿತು. ಅಲ್ಲದೆ ತಾವು ಬ್ಯಾನ್ ಮಾಡುವ ಶಾಸನವನ್ನು ತರುವುದಾಗಿ ಹೇಳಿಯೇ ಇಲ್ಲವೆಂದು ಪ್ರಕಟಪಡಿಸಿದರು. ಆದರೂ ಹೇಳಿದ್ದನ್ನು ಮಾಡದಿರುವುದಿಲ್ಲವೆನ್ನುತ್ತ ಹಳೆಯ ಶಾಸನವೊಂದರ ಧೂಳು ಕೊಡವಿ ಎದುರಿಗೆ ತಂದರು. ಹೀಗೆ ಮಾಡಿ ಅಸಲಿಗೆ ತಮ್ಮಿಂದ ಸಂಘವನ್ನು ಬ್ಯಾನ್ ಮಾಡಲಾಗುವುದಿಲ್ಲ ಎಂಬುದನ್ನು ತೋರಿಸಿಕೊಂಡರು. ಕೊನೆಗೂ “ಬಯಲಿನಲ್ಲಿ ಆಟ, ಹಾಡು, ರಾಷ್ಟ್ರೀಯತೆಯ ಪಾಠ, ಇಷ್ಟೇ ಆದರೆ ಒ.ಕೆ.,  ಕೈಯಲ್ಲಿ ಲಾಠಿ ಯಾಕೆ?” ಎಂಬಲ್ಲಿಗೆ ವಾಹಿನಿಗಳಲ್ಲಿ ನಡೆದ ಚರ್ಚೆ ಸರಳಗೊಂಡಿತು.
ಸಂಘ ನಡೆಸಿದ ಪಥ ಸಂಚಲನಗಳಲ್ಲಿ ಸ್ವಯಂಸೇವಕರು ಲಾಠಿ ಬೀಸಿದ ಚಿತ್ರಣವನ್ನು ನಾನು ಕಂಡಿಲ್ಲ. ಮಿಲಿಟರಿ ಕವಾಯತಿನಂತೆ ಅದು ಶಿಸ್ತುಬದ್ಧವಾಗಿತ್ತು. ಆದರೆ ಮಹಿಳಾ ಸ್ವಯಂ ಸೇವಕಿಯರು ಮುಖ್ಯವಾಗಿ ತರುಣಿಯರು ತಮ್ಮಿಂದ ಲಾಠಿ ಬೀಸಲು ಸಾಧ್ಯ ಎಂಬುದನ್ನು ತೋರಿಸಿದರು. ಅಧಿಕ ಪ್ರಸಂಗಿಗಳನ್ನು ಹೆದರಿಸಲು ಇದು ಅಗತ್ಯವಾಗಿದೆ. ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಬೇಕೆಂದು ಹೇಳುವ ಸರಕಾರವು ಸಂಘದ ಶಾಖೆಗಳಲ್ಲಿ ಲಾಠಿ ಬೀಸುವುದನ್ನು ಕಲಿಸಬಾರದು ಎನ್ನುವುದಕ್ಕೆ ಅರ್ಥವಿಲ್ಲ. ಅಪಾಯದ ಸಂದರ್ಭಗಳನ್ನು ಎದುರಿಸಲು ಯುವತಿಯರಿಗೆ ಆತ್ಮಸ್ಥೈರ್ಯ ಮತ್ತು ಭುಜಬಲ ಇವೆರಡೂ ಬೇಕು. ಅವರಿಗೆ ಅದನ್ನು ಸಂಘದಲ್ಲಿ ಕಲಿಯುವುದು ಇಷ್ಟವೆಂದಾದರೆ ಅದಕ್ಕೆ ಸರಕಾರದ ಆಕ್ಷೇಪವೇಕೆ? ಅದನ್ನು ಸಂಜೆ ವೇಳೆಯಲ್ಲಿ ಶಾಲಾ ಮೈದಾನಗಳಲ್ಲಿ ಕಲಿಸಿದರೆ ಅದರಿಂದ ಸಮಾಜಕ್ಕಾಗಲೀ ಸರಕಾರಕ್ಕಾಗಲೀ ಆಗುವ ನಷ್ಟವೇನು? ಸಂಘಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದೆಯೆಂದು ಎಲ್ಲಾ ಚರ್ಚೆಗಳಲ್ಲಿ ಬಹಿರಂಗವಾಗಿರುವಾಗ ಸ್ವಯಂ ರಕ್ಷಣೆಯ ಪಟ್ಟುಗಳನ್ನು ಕಲಿಯಲು ಶಾಲಾ ಮೈದಾನಗಳಿಗೆ ಬರಲು ಹಿಂದುವೇತರ ಹುಡುಗಿಯರಿಗೂ ಅವಕಾಶವಿದೆ. ಈ ಬಗ್ಗೆ ಇಷ್ಟೊಂದು ನಿಖರವಾಗಿ ತಿಳಿಸಿ ಆಹ್ವಾನಿಸುವ ಸಂದರ್ಭ ಸಂಘಕ್ಕೂ ಒದಗಿರಲಿಲ್ಲ. ಈಗ ಅದೂ ಕೂಡಾ ಸಾಧ್ಯವಾಗಿದೆ. ಸರಕಾರದ ಸಚಿವರಾದಿಯಾಗಿ ಯಾವುದೇ ಪಕ್ಷದವರೂ, ಮತದವರೂ ಶಾಖೆಗಳಿಗೆ ಬರಲು ಸ್ವಾಗತವಿದೆಯೆಂದು ಸಂಘ ಪ್ರಚಾರಕರು ದೃಶ್ಯ ಮಾಧ್ಯಮಗಳ ವೇದಿಕೆಗಳಲ್ಲೇ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ಸ್ನೇಹಾಚಾರದ ನೆಲೆಯಲ್ಲಿ ಶಾಖೆಗಳಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಾಲಿಕೆಯರೂ ಬಂದು ಸ್ವಯಂ ರಕ್ಷಣೆಯ ಚಾಲುಗಳನ್ನು ಕಲಿತರೆ ಅದರಿಂದಾಗಿ ದೇಶವೇ ಬಲಿಷ್ಟವಾಗುವುದರಲ್ಲಿ  ಸಂಶಯವಿಲ್ಲ. ಆಗ ಅದು ಕೇವಲ ಸಂಘದ ಶಾಖೆಯಾಗಿ ಉಳಿಯುವುದಿಲ್ಲ. ಬದಲಾಗಿ ದೇಶದ ಸಂಸ್ಕೃತಿಯಾಗಿ ಬೆಳೆಯುತ್ತದೆ. ಏಕೆಂದರೆ ಮೋದಿಯವರ ಸರಕಾರವು inclusive (ಒಳಗೊಳ್ಳುವ) ಆಶಯ ಹೊಂದಿದೆ. ಅವರು ಕೈಗೊಂಡಿರುವ ಅನೇಕ ನಿರ್ಧಾರಗಳು, ಮುಖ್ಯವಾಗಿ ಮುಸ್ಲಿಂ ಮಹಿಳೆಯರನ್ನು ಅತಂತ್ರ ಸ್ಥಿತಿಗೆ ತಳ್ಳುವ ತಲಾಖ್‍ನ ನಿಷೇಧ, ಬಾಂಗ್ಲಾದಿಂದ ಬರುವ ಅಕ್ರಮ ವಲಸಿಗರ ತಡೆ, ವಕ್ಫ್ ಮಂಡಳಿಗಳ ನಿರಂಕುಶ ಅಧಿಕಾರಗಳಿಗೆ ನಿಯಂತ್ರಣ ಇತ್ಯಾದಿಗಳನ್ನು ಮೆಚ್ಚಿಕೊಂಡಿರುವ ಮುಸ್ಲಿಮರು ಅನೇಕರಿದ್ದಾರೆ. ಸ್ವಭಾವತಃ ಹಿಂದೂ ಮನಸ್ಸು ಎಲ್ಲರನ್ನು ಒಳಗೊಳ್ಳುವ “ವಸುಧೈವ ಕುಟುಂಬ” ಮಾದರಿಯದ್ದು ಎಂಬುದನ್ನು ಸಂಘದ ಪ್ರಚಾರಕರಾಗಿದ್ದು ಶ್ರೀ ಮೋದಿಯವರು ತನ್ನ ಆಡಳಿತದ ಕ್ರಮದಿಂದ ಅಂತಾರಾಷ್ಟ್ರೀಯವಾಗಿ ತೋರಿಸಿಕೊಟ್ಟಿದ್ದಾರೆ. ಹಿಂದೂ ಧರ್ಮೀಯರ ಒಳಗಿನ ಜಾತಿಭೇದ, ಅಸ್ಪಶ್ಯತೆ ಮತ್ತು ಸ್ತೀಯರ ಅಸಮಾನತೆ ಇತ್ಯಾದಿಗಳ ನಿವಾರಣೆಯಲ್ಲಿ ಸಂಘದ ಒಳಗಿನಿಂದಲೂ ಸಾಕಷ್ಟು ಪರಿಶ್ರಮ ನಡೆದಿದೆ. ಹಾಗಾಗಿ ಸಂಘದ ಶಾಖೆಗಳಿಗೆ ಬಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಯುವತಿಯರು ಸ್ವತಃ ಸ್ತ್ರೀ ಸಬಲೀಕರಕಣದ ಅನುಭವವನ್ನು ಪಡೆದರೆ ಆರ್.ಎಸ್.ಎಸ್. ಪ್ರಿಯಾಂಕ ಖರ್ಗೆಯವರಂತೆ ಹೆದರ ಬೇಕಾಗಿಲ್ಲದ ಸಂಘಟನೆ ಎಂದು ವೇದ್ಯವಾಗುತ್ತದೆ. ಶತಮಾನೋತ್ತರ ಪಯಣದಲ್ಲಿ ಆರ್.ಎಸ್.ಎಸ್. ಇಂತಹ ಬೆಳವಣಿಗೆಯನ್ನು ಕಂಡರೆ ಈ ತನಕ ಅವರ ಸಂಯಮ ಮತ್ತು ನಿಷೇಧಗಳಿಗೆ ಕಂಗೆಡದ ಮನಸ್ಥಿತಿಯ ಸಾಧನೆಯು ಸಫಲವಾಗುತ್ತದೆ.
ಚ್ಯಾನಲ್‍ಗಳಲ್ಲಿ ನಡೆದ ಚರ್ಚೆಗಳಲ್ಲಿ ಭಾಗವಹಿಸಿದ ಸಂಘದ ಪ್ರಚಾರಕರು ಆರ್.ಎಸ್.ಎಸ್.ನ ಉದ್ದೇಶಗಳು, ಕಾರ್ಯವಿಧಾನಗಳು, ಸಮಾಜದ ಎಲ್ಲಾಸ್ತರಗಳ ಏಕತೆ ಹಾಗೂ ವಿಕಾಸದ ಕಾರ್ಯ ಯೋಜನೆಗಳನ್ನು ವಿವರಿಸಿದ್ದಾರೆ. ಆದರೂ ಅರ್ಥ ಮಾಡಿಕೊಳ್ಳದವರು ಕೂಡಾ ಕೊನೆಗೆ ಉಳಿಸಿದ ಪ್ರಶ್ನೆ ಎಂದರೆ ಪಥ ಸಂಚಲನದಲ್ಲಿ ಲಾಠಿ ಏಕೆ? ಈಗ ಲಾಠಿ ಮಾತ್ರ ಹಿಡಿಯುತ್ತೀರಿ, ಮುಂದೆ ಮಚ್ಚು, ಲಾಂಗು ಮತ್ತು ಗನ್ನುಗಳನ್ನು ಹಿಡಿಯಬಹುದು ಎಂಬ ಭವಿಷ್ಯದಲ್ಲಿ ಸಂಭವಿಸಬಹುದಾದ ಆತಂಕವನ್ನು ಹೊರಹಾಕಿದರು. ಇಂತಹ ಊಹಾತ್ಮಕ ಭಯಗಳಿಗೆ ಯಾವುದೇ ಉತ್ತರವೂ ಸಮಾಧಾನ ನೀಡಲಾರದು. ಆದರೆ ಸಂಘದಲ್ಲಿ ಸ್ತ್ರೀಯರಿಗೆ ಪ್ರಾತಿನಿಧ್ಯವಿಲ್ಲ ಎಂಬ ಪ್ರಶ್ನೆಯನ್ನು ಎತ್ತಿದ ಮಹಿಳೆಗೆ ಆಧಾರ ಸಹಿತ ಉತ್ತರವನ್ನು ನೀಡಿದ ಬಳಿಕ ಆಕೆ ಸುಮ್ಮನಾದರು. ಸಂಘಕ್ಕೆ ಬರುವ ಯಾರದ್ದೂ ಜಾತಿ ಮತ್ತು ಮತವನ್ನು ಕೇಳಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದ  ಬಳಿಕ ಸಂಘವೂ ಜಾತ್ಯಾತೀತವಾಗಿ ಎಲ್ಲರೂ ಸೇರಿ ಆಟ, ಹಾಡು ಹಾಗೂ ವಿಚಾರ ವಿಮರ್ಶೆಯಲ್ಲಿ ಭಾಗವಹಿಸುತ್ತಾರೆಂಬುದು ವಿದಿತವಾಯಿತು. ಹಾಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲಾ ರೀತಿಯಲ್ಲೂ ದೇಶದ ಏಕತೆ ಮತ್ತು ಸಮಗ್ರತೆಯ ದೃಷ್ಠಿಕೋನ ಹೊಂದಿರುವ ಬಗ್ಗೆ ಯಾರೂ ಸಂಶಯದಿಂದ ನೋಡಬೇಕಾಗಿಲ್ಲ. ಅಲ್ಲದೆ ಸಂಶಯ ಇರುವವರೆಲ್ಲರೂ ಅಲ್ಲಲ್ಲಿ ನಡೆಯುತ್ತಿರುವ ಸಂಘದ ಶಾಖೆಗಳಿಗೆ ಹೋಗಿ ನೋಡಲು ಮುಕ್ತ ಆಹ್ವಾನವಿದೆ. ಅಲ್ಲಿ ಯಾರಾದರೂ ಜಾತಿ, ಮತ ಭೇದಗಳನ್ನು ಮಾಡಿದರೆ ಅಲ್ಲೇ ಪ್ರಶ್ನಿಸಲು  ಕೂಡಾ ಅವಕಾಶವಿದೆ. ಆದರೆ ಅಂತಹ ಅವಕಾಶ ಬಾರದಂತಹ ಮನೋಧರ್ಮವನ್ನು ಸಂಘದಲ್ಲಿ ರೂಢಿಸಲಾಗಿದೆ.
ಭಾರತದಲ್ಲಿ ಹಿಂದೂಗಳನ್ನು ಹಾಗೂ ಸನಾತನ ಸಂಸ್ಕೃತಿಯನ್ನು ಹೀಗಳೆಯುವ ಪ್ರಕರಣಗಳನ್ನು ನೋಡಿದರೆ ಲಾಠಿ ಹಿಡಿದ ಸ್ವಯಂಸೇವಕರಿರುವ ಸಂಘದ ಅವಶ್ಯಕತೆ ಇದೆ. ನೂರು ವರ್ಷಗಳಲ್ಲಿ ವಿಸ್ತರಣೆಗೊಳ್ಳುತ್ತ ಸಾಗಿದ ಸಂಘವು ಇರುವುದರಿಂದಲೇ ಭಾರತದ ಬಹುತೇಕ ಭಾಗಗಳಲ್ಲಿ ಹಿಂದೂ ಸಂಸ್ಕೃತಿ ಉಳಿದು ಬಂದಿದೆ. ಅದಲ್ಲವಾಗಿದ್ದರೆ ಇಷ್ಟರಲ್ಲೇ ಕೇರಳದ ಮಲಪ್ಪುರಂನಲ್ಲಿ ಆಗಿರುವಂತೆ ದುರ್ಬಲ ಬದುಕಿನಲ್ಲೇ ಹಿಂದೂಗಳು ದಿನ ದೂಡುವಂತಾಗುತ್ತಿತ್ತು. ಅಷ್ಟರಮಟ್ಟಿಗೆ ಸಂಘದ ಲಾಠಿಯು ಹೆದರಿಕೆ ಹುಟ್ಟಿಸಿದೆ ಎಂಬ ವಾದವನ್ನು ತಳ್ಳಿಹಾಕುವಂತಿಲ್ಲ.
ಇತ್ತೀಚೆಗೆ ಸುಳ್ಯ ವಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಾನು ಕಂಡಂತೆ ಸಂಘದ ಕವಾಯತಿನಲ್ಲಿಇದ್ದವರಲ್ಲಿ 90% ಕ್ಕಿಂತಲೂ ಹೆಚ್ಚು ಮಂದಿ ಬ್ರಾಹ್ಮಣೇತರರು. ಸಂಘವೆಂದರೆ ಅದು ಬ್ರಾಹ್ಮಣರದ್ದು, ಎಲ್ಲವೂ ಅವರ ನಿರ್ದೇಶನದಂತೆ ನಡೆಯುತ್ತದೆಂಬ ಕಾಲ್ಪನಿಕ ವಿವರಣೆಗೆ ಆಸ್ಪದವೇ ಇರಲಿಲ್ಲ. ಬೆರಳೆಣಿಕೆಯಷ್ಟಿದ್ದ ಬ್ರಾಹ್ಮಣರು ವೇದಿಕೆಗೆ ಏರಿರಲಿಲ್ಲ. ಇನ್ನುಳಿದವರು ನನಗೆ ಗೊತ್ತಿರುವಂತೆ ವಿವಿಧ ಜಾತಿಗಳವರು ಒಂದೇ ಧ್ವಜದಡಿ ಸೇರಿ ದೇಶಪ್ರೇಮದ ಭಾವನೆಗಳನ್ನು ಬಲಪಡಿಸಿಕೊಂಡಿದ್ದರು. ಅಂದರೆ ಇದೀಗ ಸಂಘದ ಶಕ್ತಿ ವೃದ್ಧಿಸುತ್ತಿರುವುದು ಮೇಲ್ಜಾತಿಗಳಿಂದಲೂ ಅಲ್ಲ, ಮೇಲ್ವರ್ಗದವರಿಂದಲೂ ಅಲ್ಲ. ಅದು ಎಲ್ಲಾ ಜಾತಿಗಳಿಂದ ಮತ್ತು ಎಲ್ಲಾ ವರ್ಗದವರಿಂದ ಎಂಬುದು ಸ್ಪಷ್ಟ.
ಪಥ ಸಂಚಲನ ಮಾಡುವಾಗ ಎಡ ಕಂಕುಳಲ್ಲಿ ಲಾಠಿ ಇದ್ದರೂ ಬಲ ಕೈಯ ಮುಷ್ಟಿಯಲ್ಲಿ ಸಂಯಮವನ್ನು ಕಾಪಿಟ್ಟುಕೊಂಡು ಸಂಘವು ಶತಮಾನ ಕಳೆದಿದೆ. ಬೀಸದೇನೇ ಲಾಠಿ ಎಚ್ಚರ ಹುಟ್ಟಿಸಿದೆ. ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರಲ್ಲಿ ಬೆತ್ತ ಇರುತ್ತಿತ್ತು. ಅದರ ಉಪಯೋಗದ ಭಯಕ್ಕೇ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈಗ ಬೆತ್ತವೇ ಇಲ್ಲದಿರುವ ಪರಿಣಾಮವನ್ನು ಕಾಣುತ್ತಿದ್ದೇವೆ. ಕಲಿಯದೇನೇ ತೇರ್ಗಡೆಯಾಗುವುದಕ್ಕೆ ಅವಕಾಶವಾಗಿದೆ. ತರಗತಿಗಳಲ್ಲಿ ಮಕ್ಕಳು ಏರುತ್ತರಷ್ಟೇ ಹೊರತು ಸಾಮರ್ಥ್ಯದಲ್ಲಿ ಅಲ್ಲ. ಹಾಗಾಗಿ ಈಗಿನ ಸರಕಾರ ಹೇಳುತ್ತದೆಂದು ಸಂಘವು ಲಾಠಿಯನ್ನು ಬಿಟ್ಟರೆ ಭಾರೀ ಕಷ್ಟವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ
‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?
January 7, 2026
10:43 PM
by: ದ ರೂರಲ್ ಮಿರರ್.ಕಾಂ
2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ
January 7, 2026
10:14 PM
by: ದ ರೂರಲ್ ಮಿರರ್.ಕಾಂ
ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ
January 7, 2026
10:04 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror