ಇಂದಿನ ರೂರಲ್ ಮಿರರ್ ಡಿಜಿಟಲ್ ಮಾಧ್ಯಮದಲ್ಲಿ ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಹಾಗೂ ಆಸುಪಾಸಿನ ಜಲ ಪ್ರಳಯದ ಸುದ್ದಿ ಓದಿದೆ. ಒಂದೊಂದು ಚಿತ್ರವೂ ಭಯಾನಕ. ಹರಿಯುವ ನೀರು, ಕೊರೆಯುತ್ತಿರುವ ಮಣ್ಣು, ಕುಸಿಯುತ್ತಿರುವ ಮಾರ್ಗಗಳು ಸೇತುವೆಗಳು, ಕೊಚ್ಚಿ ಕೊಚ್ಚಿ ಬರುತ್ತಿರುವ ಮರದ ರಾಶಿಗಳು ಒಂದೆಡೆಯಾದರೆ, ಮುಂದಿನ ಸ್ಥಿತಿ ಏನು ಎಂದು ಯೋಚಿಸುತ್ತಿರುವ ಗ್ರಾಮಸ್ಥರ ಪರಿಸ್ಥಿತಿ ಇನ್ನೊಂದೆಡೆ.
ಸಂಪಾಜೆ ಆಸುಪಾಸಿನಲ್ಲಿ ನಡೆಯುತ್ತಿರುವ ವಸುಂಧರೆಯ ಸರಣಿ ನಡುಕದ ಸುದ್ದಿ ಮತ್ತೊಂದು ಕಡೆ. ತಮ್ಮ ಮನೆ ಮಠ ಯಾವ ಹೊತ್ತಿಗೆ ಬೀಳಬಹುದೋ? ಆಶಾ ಗೋಪುರಗಳು ಎಲ್ಲಿ ಕುಸಿದು ಬೀಳುವುದೋ? ಎಂಬ ಚಿಂತೆಯಲ್ಲಿ ಊರಜನ. ಕೇವಲ ದೃಶ್ಯಮಾಧ್ಯಮದಲ್ಲಿ ನೋಡುತ್ತಿರುವಾಗಲೇ ದೂರದಲ್ಲಿರುವ ನಮ್ಮಂತವರಿಗೆ ಭಯಹುಟ್ಟಿಸುವ ಸಂಗತಿಗಳು, ಅನುಭವಿಸುವವರ ಸಂಕಟ ದೇವರಿಗೆ ಪ್ರೀತಿ.
ನಮ್ಮ ದಕ್ಷಿಣ ಕನ್ನಡದ ಆಸುಪಾಸಿನಲ್ಲಿ ಇಂತಹ ಭಯಾನಕ ಸಂಗತಿಗಳು ನಡೆದದ್ದು ನನಗೆ ಗೊತ್ತಿಲ್ಲ. ಇತ್ತೀಚೆಗಿನ ಮೂರ್ನಾಲ್ಕು ವರ್ಷಗಳಲ್ಲಿ ಪ್ರತಿ ಮಳೆಗಾಲದಲ್ಲಿ ಒಂದೊಂದು ಕಡೆ ಇಂತಹ ಸಂಗತಿಗಳು ನಡೆಯುತ್ತಲೇ ಇದೆ. ಮೇಘ ಸ್ಫೋಟಕ್ಕೆ ಕಾರಣಗಳನ್ನು ಹುಡುಕುತ್ತಲೇ ಇದ್ದಾರೆ. ಒಬ್ಬೊಬ್ಬರ ವಿಶ್ಲೇಷಣೆ ಒಂದೊಂದು ತರನಾಗಿ ಇದೆ. ಸರಿ ಇಲ್ಲದ ಕೃಷಿ ಕ್ರಮ, ಭೂಮಿಯ ಮೇಲೆ ಅತಿಯಾದ ಅತ್ಯಾಚಾರ, ವಿವೇಚನೆ ಇಲ್ಲದ ಕಾಡು ನಾಶ, ಹವಾಮಾಲಿನ್ಯ ಹೀಗೆ ಪಟ್ಟಿ ಬೆಳೆಯುತ್ತದೆ. ಒಟ್ಟಿನಲ್ಲಿ ಎಲ್ಲವೂ ಆಗುವುದು ಪಶ್ಚಿಮ ಘಟ್ಟದ ಬುಡದಲ್ಲಿ ಎಂಬುದು ಸ್ಪಷ್ಟವಾಗಿದೆ.
ಈ ತಿಂಗಳ ಆದಿಯಲ್ಲಿ ನಡೆದ ಇಂತಹುದೇ ಘಟನೆಗಳನ್ನು ಆತ್ಮೀಯರಾದ ಚಿಂತಕರೊಬ್ಬರಲ್ಲಿ ಕೆಲದಿನಗಳ ಹಿಂದೆ ಹಂಚಿಕೊಂಡಿದ್ದೆ. ಆ ಸಂದರ್ಭದಲ್ಲಿ ಅವರು ಕೊಟ್ಟ ಉತ್ತರದಲ್ಲಿ ಕೆಲವು ತರ್ಕಗಳು ನನಗೆ ಸರಿ ಎಂದು ಕಂಡಿತ್ತು. ಈಗ ಒಂದೆರಡು ವರ್ಷದಿಂದ ಎಲ್ಲಕಡೆಯೂ ಮಳೆ ಹೆಚ್ಚಾಗಿ ಬರುತ್ತಾ ಇದೆ. ಬಂದ ಅನೇಕ ಜಾಗದಲ್ಲಿ ನೆರೆಹಾವಳಿಯು ಸಾಕಷ್ಟು ಸಾವು ನೋವನ್ನು ಕೊಟ್ಟಿದೆ. ಅದರೊಂದಿಗೆ ಬತ್ತಿಹೋದ ಸಾವಿರಾರು ತೂತು ಬಾವಿಗಳು ಮತ್ತೆ ಪುನರ್ಜೀವ ಹೊಂದಿದೆ. ಇನ್ನು ಪ್ರತಿವರ್ಷವೂ ಇದೇ ಪುನರಾವರ್ತನೆಯು ಆಗಲಿದೆ . ಕಾರಣ ಏನೆಂದರೆ ನಾವು ಕೃಷಿಯ ಹೆಸರಿನಲ್ಲಿ ಅತಿಯಾದ ನೀರಿನ ಬಳಕೆ ಮಾಡುವುದು. ನೀರನ್ನು ನೂರಾರು ಅಡಿಗಳ ಆಳದಿಂದ ತೆಗೆದು ಬಳಸುವುದರಿಂದಾಗಿ ಆವಿಯಾಗುವ ಪ್ರಮಾಣ ಭಾರಿ ಜಾಸ್ತಿಯಾಗಿದೆ. ಕಾಡಿದ್ದು, ಹುಲ್ಲಿದ್ದು, ಸಸ್ಯ ಗಳಿದ್ದು ಭೂಮಿಗೆ ಮುಚ್ಚಿಗೆ ಆಗಬೇಕಾದ ಜಾಗದಲ್ಲೆಲ್ಲ, ಸಕಲವನ್ನೂ ನಾಶಮಾಡಿ ನೀರನ್ನು ಅತಿಯಾಗಿ ಬಳಸುವಂತೆ ಮತ್ತು ಬಿಸಿಲಿಗೆ ಆವಿ ಆಗುವಂತ ಕೃಷಿ ಕ್ರಮವನ್ನು ಅನುಸರಿಸಿದ್ದೇವೆ. ಆವಿಯಾದ ನೀರು ಮೋಡವಾಗಿ ಮತ್ತೆ ಮಳೆಯಾಗಿ ಸುರಿಯಲೇ ಬೇಕಾಗುತ್ತದೆ. ಗಾಳಿ ಯಾವ ದಿಕ್ಕಿಗೆ ಜೋರಾಗಿ ಬೀಸುತ್ತದೋ, ದಟ್ಟವಾದ ಮೋಡವನ್ನು ಎಲ್ಲಿಗೆ ಕೊಂಡೊಯ್ಯುತ್ತದೋ, ಅಲ್ಲಿ ಪ್ರಕೃತಿಯಿಂದ ತಡೆ ಒಡ್ಡಿದಾಗ ಮೋಡದ ಸಾಂದ್ರತೆಯನ್ನು ಹೊಂದಿಕೊಂಡು ಮಳೆ ಸುರಿಯುತ್ತದೆ. ಬತ್ತಿಹೋದ ಅಂತರ್ಜಲವನ್ನು ತುಂಬಿಕೊಳ್ಳುವುದು ಕೂಡ ಪ್ರಕೃತಿಯ ಉದ್ದೇಶ ಇರುತ್ತದೆ.
ಈ ತರ್ಕ ನನಗಂತೂ ಬಹಳ ಸರಿಯಾದುದು ಎನಿಸಿತು. ಹವಾಮಾನ ತಜ್ಞರು, ಭೂಗರ್ಭ ತಜ್ಞರು ಈ ಕುರಿತು ಏನೆನ್ನುವರು ಎಂಬ ಕುತೂಹಲ ಇದೆ.ಈ ವರ್ಷ ಸುಳ್ಯ ತಾಲೂಕಿಗೆ, ಮುಂದಿನ ವರ್ಷ ಯಾವ ತಾಲೂಕಿಗೋ?
ಏನಾದೊಡೆ ಯಮಪ್ಪುದುಂಟು, ಸಿದ್ಧನಿರದಕೆ
ಭಾನು ತಣುವಾದಾನು,ಸೋಮ ಸುಟ್ಟಾನೂ
ಕ್ಷೋಣಿಯೇ ಕರಗೀತು,ಜಗ ಶೂನ್ಯವಾದೀತು
ಮೌನದಲ್ಲಿ ಸಿದ್ದನಿರು ಮಂಕುತಿಮ್ಮ
ಎಲ್ಲದಕ್ಕೂ ಸಿದ್ಧನಾಗಿರಬೇಕಾದ ಕಾಲ ಎಲ್ಲರಿಗೂ ಬಂದೀತು ಎಂದು ಆ ಭಯಾನಕ ಚಿತ್ರಗಳನ್ನು ನೋಡಿದಾಗ ನನಗೆ ಅನಿಸಿತು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…