ಮನೆಯ ಹಿಂದೆ ಇರುವ ಈ ಗುಡ್ಡದ ಪ್ರದೇಶಕ್ಕೆ 2020 ರಲ್ಲಿ ಚಾರಣಕ್ಕೆ ಹೋಗಿದ್ದೆವು. ಆದರೆ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರಲಿಲ್ಲ. ಇದಕ್ಕೆ ಮೂಲ ಕಾರಣ ಇಷ್ಟೇ, ಒಂದು ಫೋಟೋ ನೂರು ಜನ ನೋಡಿ ಅದರಲ್ಲಿ ಹತ್ತು ಜನ ಆ ಪ್ರದೇಶಕ್ಕೆ ಹೋದರೆ ಸಾಕು ಅದರ ಪರಿಣಾಮ ಏನಾಗುತ್ತದೆ ಅಂತ ಕುಖ್ಯಾತ ಪ್ರವಾಸಿ ಸ್ಥಳಗಳ ಮಲಿನಗೊಂಡಿರುವ ಪರಿಸ್ಥಿತಿಯಿಂದಲೇ ಕಾಣಬಹುದು.
ನಾವು ಹೋದ ಸಮಯದಲ್ಲಿ ಗುಡ್ಡದ ತುದಿಯಿಂದ ಮೇಲೆ ನೋಡಿದರು ಸೂರ್ಯನ ಬೆಳಕು ಅಲ್ಪ ಸ್ವಲ್ಪ ಕಾಣುತ್ತಿತ್ತು. ಅಷ್ಟು ದಟ್ಟವಾದ ಕಾಡು. ಜಿಗಣೆಗಳಂತೂ zoombie ಗಳಂತೆ ಒಂದೇ ಸಮನೆ ಕಾಲು, ಕೈ , ತೊಡೆಗಳ ಮೇಲೆ ದಾಳಿ ಮಾಡಿದ್ದವು. ನಂತರದ 2 ದಿನ ಕೈ ಕಾಲು ತುರಿಸುವುದರಲ್ಲೇ ಹೋಗಿತ್ತು. ಈ ಕಾಡಿಗೆ ಕಾಲುದಾರಿಯೂ ಇಲ್ಲ, ಕಡವೆ, ಕಾಡುಹಂದಿಗಳು ಹೋದ ದಾರಿಯನ್ನು ಅರಸಿ ಹೋಗಬೇಕು. ಪುನಃ ಇಳಿದುಕೊಂಡು ಬರುವಾಗ ದಾರಿ ತಪ್ಪಿದ್ದೆವು. ಹಾಗೆಯೇ ಈ ಕಾಡು-ಗುಡ್ಡದ ಬಗ್ಗೆ ಹಲವಾರು ಕತೆಗಳೂ ಇವೆ. ಯಾರೋ ಸತ್ತಿದ್ರು, ದೈವದ ವಾಸಸ್ಥಳ, ಒಬ್ಬೊಬ್ಬರೇ ಹೋಗ್ಬಾರ್ದು; ಹೋದರೆ ದಾರಿ ತಪ್ತಾರೆ ಅಂತೆಲ್ಲ. ಊರಿನ ಜನ ಸಾಮಾನ್ಯವಾಗಿ ಅಡಿಕೆ ತೆಗಿಲಿಕೆ ಕೊಕ್ಕೆ ತಯಾರಿಸಲು ಓಟೆ ತರ್ಲಿಕೆ ಹೋಗ್ತಾರೆ. ಹಳ್ಳಿಯ ಜನರ ಜೀವನ ಶೇಕಡಾ 70 % ಕಾಡಿನ ಸಂಪನ್ಮೂಲಗಳ ಮೇಲೆಯೇ ಅವಲಂಬಿತವಾಗಿರುತ್ತದೆ. ಪರ್ಯಾಯ ಆಯ್ಕೆಗಳನ್ನು ಕೊಡದೆ, ಹಠಾತ್ತಾಗಿ ನೀವು ಕಾಡಿನ ಸಂಪನ್ಮೂಲಗಳನ್ನು ಉಪಯೋಗಿಸಬೇಡಿ ಎಂದು ಜನರಿಗೆ ಹೇಳಲು ಸಾಧ್ಯವಿಲ್ಲ.
ಯಾಕೆ ಈಗ ಈ ಕಥೆ ಅಂತ ಕೇಳ್ಬೋದು ನೀವು. ನಿನ್ನೆ ನನ್ನ ತಂದೆಯವರಲ್ಲಿ, “ಹೌದಾ ಅಪ್ಪ? ವರ್ಪಾರೆ ಕಡೆ ಕಾಡಿಗೆ ಬೆಂಕಿ ಬಿದ್ದಿದೆಯಂತೆ, ಗೊತ್ತುಂಟಾ?” ಅಂತ. ಅವ್ರಿಗೂ ಮೊದಲು ಗೊತ್ತಿರ್ಲಿಲ್ಲ. ಆಮೇಲೆ ಕಾಲ್ ಮಾಡಿ ಅಮ್ಮ ಹೇಳಿದ್ರು ಹೌದು ಬೆಂಕಿ ಬಿದ್ದಿದೆ, ಇನ್ನೂ ಆರಿಸಲಿಕೆ ಆಗ್ತಿಲ್ಲ, ಈಗ ಒಣಗಿದ ಎಲೆಗಳೆಲ್ಲ ಜಾಸ್ತಿ ಬಿದ್ದಿರುವ ಕಾರಣ ಬೆಂಕಿ ಜಾಸ್ತಿ ಆಗ್ತಿದೆ, ಸುಮಾರು 400 ಎಕರೆ ಕಾಡಿಗೆ ಬೆಂಕಿ ಬಿದ್ದಿದೆ ಅಂತಿದ್ದಾರೆ, ಯಾರೋ ಬೀಡಿ ಸೇದಿ ಬಿಸಾಕಿರಬೇಕು, ವೇಸ್ಟ್ ರಾಶಿ ಹಾಕಿ ಬೆಂಕಿ ಹಾಕಿರ್ತಾರೆ ಇಲ್ಲಾ ಓಟೆಗಳಿಗೆ ಬೆಂಕಿ ಹಾಕಿರ್ತಾರೆ. ಜನರಿಗೆ ಭಾಷೆ ಇಲ್ಲಾ, ಅದರ ಮೇಲೆ ಈ ಬಿಸಿಲು ಬೇರೆ ಅಂತ ಹೇಳಿದ್ರು.
ಇಷ್ಟು ವರ್ಷಗಳಲ್ಲಿ ನೀರಿನ ಸಮಸ್ಯೆ ಬಂದಿರಲಿಲ್ಲ. ಬಾವಿಯ ಆಳದಲ್ಲಿ ನೀರು ಸಿಗದೆ ಎರಡು ಮೂರು ಮನೆಗಳು ಕೊಳವೆ ಬಾವಿ ತೆಗೆಸುವ ಸದ್ದು ಇತ್ತೀಚೆಗೆ ಕಿವಿಗೆ ಬಿತ್ತು. ಈ ಸುತ್ತಮುತ್ತಲಿನ ಕಾಡಿನಿಂದಾಗಿಯೇ ಅತಿ ಹೆಚ್ಚು ಮಳೆ ನಮ್ಮ ಊರಿನಲ್ಲಿ ಬೀಳುತ್ತದೆ. ಕಾಡಿಗೆ ಬೆಂಕಿ ಬಿದ್ರೆ, ಮಣ್ಣಿನ ಫಲವತ್ತತೆ ಕಡಿಮೆಯಾಗಿ ಸವಕಳಿ ಉಂಟಾಗುವ ಅವಕಾಶಗಳು ಜಾಸ್ತಿಯಾಗುತ್ತದೆ.ಕಾಡಿನ ಮರ ಗಿಡಗಳನ್ನು ಯಾರೂ ನೀರು, ಯೂರಿಯಾ ಹಾಕಿ ಬೆಳೆಸಿರುವುದಿಲ್ಲ!ಎಷ್ಟೋ ವರ್ಷಗಳಿಂದ ಬದುಕಿರುವ ಮರಗಳು ಸಾಯುತ್ತವೆ. ಓಟೆ, ಬಿದಿರು ಮತ್ತು ಇತರ ದೊಡ್ಡ ಮರಗಳು ಮಣ್ಣಿನಲ್ಲಿ ನೀರಿನ ಅಂಶ ಜಾಸ್ತಿ ಮಾಡುತ್ತವೆ. ಅವುಗಳೇ ಇಲ್ಲದೆ ಹೋದರೆ, ನಾಡಿದ್ದು ಕೂದಲು ಉದುರುತ್ತದೆ ಅಂತ ಸೊಪ್ಪು ಹುಡುಕಿಕೊಂಡು ಹೋದ್ರೆ ಸೊಪ್ಪಲ್ಲಾ, ಬಜಾವ್ ಸ ಸಿಗ್ಲಿಕಿಲ್ಲ!!
ಅದೊಂದು ಕಾಲ ಇತ್ತು ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡ್ತಾರೆ ಅಂತ ಅದರ ಬಗ್ಗೆ ಗೊತ್ತಿರುವವರು, ಗೊತ್ತಿಲ್ದೇ ಇರುವವರೂ ಎಲ್ಲ ಸೇರಿ ಭಾರಿ ವಿರೋಧ ಪ್ರತಿಭಟನೆ ಎಲ್ಲ ಮಾಡಿದ್ರು. ಜನರ ವಿರುದ್ಧ ಹೋದ್ರೆ ನಮಗೆ ವೋಟ್ ಸಿಗ್ಲಿಕ್ಕಿಲ್ಲ ಅಂತ ಅಧಿಕಾರದಲ್ಲಿದ್ದವರು ಅಂದ್ಕೊಂಡು ಅದ್ಕೆ ಸಪೋರ್ಟ್ ಮಾಡ್ಲಿಲ್ಲ್ವೋ ಏನೋ? ಈಗ ಈ ರೀತಿಯ ಘಟನೆಗಳನ್ನು ನೋಡ್ವಾಗ ನನಿಗೆ ವ್ಯಯಕ್ತಿಕವಾಗಿ ಅನಿಸ್ತದೆ, “ಓ! ಆ ರೂಲ್ ಬರ್ತಿದ್ರೆ ನಮಗೆ, ಊರವ್ರಿಗೆ ಎಲ್ಲ ಕಷ್ಟ ಆಗ್ತಿತ್ತು ಆದರೆ ಇರುವ ಅಳಿದುಳಿದ ಕಾಡಾದ್ರು ಉಳೀತಿತ್ತೇನೋ?” ಅಂತ. ಪ್ರಕೃತಿಗೆ ಎಷ್ಟೇ ಹಾನಿ ನಾವು ಮಾಡಿದ್ರು, ಪ್ರಕೃತಿ ಚೇತರಿಸಿಕೊಳ್ತದೆ, ಆದರೆ ಆ ಚೇತರಿಸಿಕೊಳ್ಳುವ ಸಮಯದಲ್ಲಿ ಹಾನಿಗೊಳಗಾಗುವುದು ಅಲ್ಲಿ ಜೀವಿಸುತ್ತಿರುವ ಮಾನವರು ಮತ್ತು ಇತರ ಪ್ರಾಣಿಗಳು.
ಅಗ್ನಿ ದೇವರಿಗೆ ಅಜೀರ್ಣ ಆಗಿದೆ ಅಂತ ಕಾಡಿಗೆ ಬೆಂಕಿ ಹಚ್ಲಿಕೆ, ಯಾರೂ ಅರ್ಜುನರಲ್ಲ, ಕಾಡು ಖಾಂಡವ ವನವಲ್ಲ, ಎಲ್ಲದರಕ್ಕಿಂತ ಮೊದಲಾಗಿ ಇದು ದ್ವಾಪರಯುಗವಲ್ಲ!!ಹವಾಮಾನ ವೈಪರೀತ್ಯಕ್ಕೆ ಒಳಗಾಗುತ್ತಿರುವ ಕಲಿಯುಗ ಎಂಬುದನ್ನು ಮರೆಯದಿರಿ….!!
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…