ಹೌದು, ಚಂದ್ರಭಾಗಾ ನದೀ (ಭೀಮಾ ನದಿ) ತಟ ಸ್ಥಾಪಿತ ವಿಠೋಬನ ಚರಣಗಳಲ್ಲಿ ಸಂಪನ್ನಗೊಂಡ ನಮ್ಮ “ವಾರ್ಕರಿ” (ಭಕ್ತಿಯಾತ್ರೆ) ಹದಿನಾರನೇ ತಾರೀಕಿನ ಬೆಳಗಿನ ಏಳೂವರೆಗೆ ಉಜೈನಿಯ ಮಹಾಕಾಳೇಶ್ವರನ ನೆಲೆಯತ್ತ ಹೊರಟೇ ಬಿಟ್ಟಿತು….
ರಸ್ತೆಯ ಇಕ್ಕೆಲಗಳಲ್ಲೂ ಕಚ್ಚೆಯುಟ್ಟು ಬಿಳಿಟೋಪಿ ಧಾರಿಗಳಾದಂತಹ ಕೃಷ್ಣ ಜನಮಾನಸ, ಘಲ್ ಘಲ್ ಘಲ್ಲೆಂಬ ಗೆಜ್ಜೆ ನಾದ ಹೊಮ್ಮಿಸುತ್ತಾ ಸಾಗುತಿದ್ದ ಗೋಹಿಂಡು ಮತ್ತು ಪಾಲಕ ವೃಂದ, ಅನತಿಯಲ್ಲಿ ಸರಕಾರೀ ಪ್ರಾಯೋಜಿತ ಅಣೆಕಟ್ಟೆಗಳಿಂದ ಹಳ್ಳಿ ಹಳ್ಳಿಗಳಿಗೆ ಹರಿದು ಬರುತಿದ್ದ ಕೃಷ್ಣೆ, ಭೀಮೆಯರು… ಜಲಧಿಯ ತಂಪೆರಲ ಉಂಡು ಜನರ ಬೆವರ ಚೈತನ್ಯದ ಮರುಹುಟ್ಟೋ ಎಂಬಂತೆ ಮೊಗೆಮೊಗೆದು ಬೆಳೆದು ಬಂದ ದ್ರಾಕ್ಷಿ, ಕಿತ್ತಳೆ, ಜೋಳ, ಗೋಧಿ, ತರಕಾರಿಗಳು, ಇದನ್ನೆಲ್ಲಾ ನೋಡುತ್ತಾ ಇರಬೇಕಾದರೆ ನಮ್ಮ ಗಮ್ಯಸ್ಥಾನಕ್ಕೆ ಕರೆದೊಯ್ಯುತಿದ್ದ ಸಪಾಟವಾಗಿದ್ದ ಆಕರ್ಷಕ ರಸ್ತೆ ಮೂಲಕ , ಸುಮಾರು 780 ಕಿಮೀ ದೂರದ ನಮ್ಮ ಆ ದಿನದ ಗಮ್ಯ ಸ್ಥಾನ ಉಜೈನಿಯತ್ತ ನಮ್ಮ ವಾಹನ ಪುಟಿದೋಡುತಿತ್ತು…..
ಭೂಮ್ ಎನ್ನುವ ಪ್ರದೇಶದಲ್ಲಿ ದಕ್ಷಿಣ ಭಾರತೀಯ ಉಪಾಹಾರ ಲಭ್ಯವೆಂಬ ಬೋರ್ಡ್ ಕಂಡು ಬೆಳಗಿನ ಉಪಾಹಾರಕ್ಕಾಗಿ ಅಲ್ಲಿ ನಿಲ್ಲಿಸಿ, ದೋಸೆ ಎನ್ನಬಹುದಾದಂತಹ ದೋಸೆಯನ್ನು ತಿಂದು ಚಾ ಕುಡಿದು ಹೊರಬರಬೇಕಾದರೆ ರಸ್ತೆಯ ಇಕ್ಕೆಲಗಳಲ್ಲೂ ಇದ್ದ ಹೋಟೆಲ್/ಡಾಬಾಗಳಲ್ಲೂ ದೊಡ್ಡ ದೊಡ್ಡ ಪ್ಲಾಸ್ಟಿಕ್ ಮುಚ್ಚಿದ್ದ ಬಿಳಿಯದಾದ ಮುದ್ದೆಗಳು ಕಂಡು ಬಂದು,ಏನೆಂದು ವಿಚಾರಿಸಿದಾಗ, ಸಿಹಿತಿಂಡಿ ಹಾಲಿನ ಉತ್ಪನ್ನ “ಮಾವೇ ಕಿ ಬರ್ಫೀ” ಎಂದು ತಿಳಿಯಿತು…. ನಮ್ಮನ್ನು ಕಂಡಕೂಡಲೇ ಅದರ ಮುಚ್ಚಿಕೆಯನ್ನು ಸರಿಸಿ ಪದರ ಪದರವಾಗಿ ಕತ್ತರಿಸಿ ನಮಗೆ ಕೊಡಲು ಮುಂದಾದರು…. ಆದರೆ ಆ ಉತ್ಪನ್ನ ನಮ್ಮ ಪ್ರಯಾಣದ ಆರೋಗ್ಯಕ್ಕೆ ಹಾನಿಯಾಗಬಹುದೆಂದು ಮುಂದೊತ್ತಿ ನಮ್ಮ ಕಾರ್ ಏರಿ ಹೊರಟೆವು…. ನಯವಾದ ರಸ್ತೆಯಲ್ಲಿ ಕಾರು ಓಡೀಯೇ ಒಡುತಿತ್ತು, ಕಾರಿನೊಳಗೆ ಹಳೇ ಹಿಂದಿ ಸಿನಿಮಾ ಹಾಡಿನ ಲಹರಿ ತೇಲುತಿತ್ತು…. ರಸ್ತೆಗಳಲ್ಲಿ ಸುತ್ತಲೂ ಛತ್ರಪತಿ ಶಿವಾಜಿ ಮಹಾರಾಜರ ಉತ್ಸವದ ನಿಮಿತ್ತ ಎಲ್ಲೆಂದರಲ್ಲಿ ಕೇಸರಿ ಭಗವಾ ರಾರಾಜಿಸುತಿತ್ತು….. ಭೀಡ್… ಚಾಲೀಸ್ ಗಾಂವ್ ಪ್ರದೇಶಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಸ್ಥಾಪಿತವಾದ ಬೃಹತ್ ಗಾಳಿ ಯಂತ್ರಗಳು ಗಿರಗಿರನೆ ತಿರುಗಿ ವಿದ್ಯುತ್ ಉತ್ಪಾದನೆ ಮಾಡುತಿದ್ದವು… ಹಾಗೇ…. ಧುಲೇ ಮೂಲಕ ಸಾಗಿ ಸೇಂಧ್ವಾ ಎನ್ನುವಲ್ಲಿ ಮಧ್ಯಪ್ರದೇಶ ಪ್ರವೇಶಿಸಿದೆವು. ಧುಲೇ ಎನ್ನುವಲ್ಲಿ ಕಲ್ಲುಬಂಡೆಗಳಿಂದಲೇ ತುಂಬಿದ ದೊಡ್ಡ ದೊಡ್ಡ ಪರ್ವತಗಳನ್ನು ದಾಟಿ ಕೆಳಕ್ಕಿಳಿಯುತ್ತಾ ಇದ್ದಾಗ ಬೃಹತ್ ಸೋಲಾರ್ ಪಾರ್ಕ್ ಕಂಡುಬಂತು, ಕಡಿದಾದ ಒಣ ಪ್ರದೇಶವದು….
ಆದರೂ ದೂರದ ಸರೋವರ,ಕಾಲುವೆಗಳ ಆಶ್ರಯದಲ್ಲಿ ಜನಮಾನಸದ ಜೀವನ ಚಕ್ರ ನಿರಂತರವಾಗಿತ್ತು. ಸಂಜೆಯ ವೇಳೆಗೆ ಮಧ್ಯಪ್ರದೇಶದ ನರ್ಮದಾ ನದಿಯನ್ನು ದಾಟಿ ಸಾಗಿ ಇಂದೋರ್ ತಲುಪುವಾಗ ಸೂರ್ಯದೇವ ದಿನದ ಕಾಯಕ ಮುಗಿಸಿ ಮಹೋಧದಿಯಲ್ಲಿ ಸ್ನಾನ ಮಾಡಿ ವಿರಮಿಸುವ ತವಕದಲ್ಲಿದ್ದ…. ಅಂತೆಯೇ ದೆವಾಸ್ ಮೂಲಕ ಸಾಗುತಿದ್ದ ನಮಗೆ “ನ್ಯೂಯಾರ್ಕ್” ಒಂದು ಕಿಮೀ ಎಂಬ ರಸ್ತೆ ಸೂಚಕ ಕಂಡು ತಮಾಷೆಗೆ ಒಂದು ಕಾರಣವಾಯಿತು…ಅಂತೂ ರಾತ್ರೆಯ ಒಂಬತ್ತು ಗಂಟೆಗೆ ಉಜೈನಿ ತಲುಪಿದ ನಾವು ರಾತ್ರಿಯ ಊಟ ಮುಗಿಸಿ ,ರೂಮ್ ಪಡೆದು, ಸ್ನಾನಾದಿ ಪೂರೈಸಿ , ಮರುದಿನ ಮಹಾಕಾಲೇಶ್ವರನ ದರ್ಶನ ಮಾಡಿ ಮುಂದೆ ಸಾಗುವ ಬಗ್ಗೆ ಹೋಟೆಲ್ ಯಜಮಾನರಲ್ಲಿ ವಿಚಾರಿಸಿಕೊಂಡು , ಗೂಗಲ್ ಮಾಮನಲ್ಲೂ ನೋಡುತ್ತಾ ಇದ್ದಂತೆಯೇ ನಿದ್ರೆ ಆವರಿಸಿತ್ತು .
(ಮುಂದುವರಿಯುವುದು…. ಜ್ಯೋತಿರ್ಲಿಂಗ ಮಹಾಕಾಲೇಶ್ವರ,ಹಾಗೂ ಶಕ್ತಿ ಪೀಠ ದರ್ಶನ)
ಕುಂಭಮೇಳ | ಪ್ರಯಾಗದೆಡೆಗೆ ಸೆಳೆದ ಅದ್ಭುತ ಶಕ್ತಿ ಯಾವುದು..? |
Advertisement