ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

February 5, 2025
8:40 PM
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ ರಾಮಪರಿವಾರದ ಪುನರ್ಮಿಲನದ ಉತ್ಸವವನ್ನು ಆಚರಿಸುವುದಾಗಿ ಪ್ರಜೆಗಳು ಘೋಷಿಸುತ್ತಾರೆ. ಅದನ್ನು ಹಿರಿಯ ರಾಣಿಯರೂ ಸಮ್ಮತಿಸುತ್ತಾರೆ. ಅಯೋಧ್ಯೆಯ ಅಲಂಕಾರ ಆರಂಭವಾಗುತ್ತದೆ.
ಕಳೆದ ವಾರದ ಲೇಖನದಲ್ಲಿ SONY SAB ನಲ್ಲಿ ಪ್ರದರ್ಶನವಾಗುತ್ತಿರುವ ವಿಶಿಷ್ಟ ಸರಣಿಯ ರಾಮಾಯಣದಲ್ಲಿ ಸೀತೆಯನ್ನು ಪುನೀತೆ ಎಂದು ಅಯೋಧ್ಯೆಯ ಪ್ರಜಾಜನರೇ ಒಪ್ಪಿ ಸೀತಾ ಪರಿತ್ಯಾಗಕ್ಕೆ ಕಾರಣವಾದ ತಮ್ಮ ಟೀಕೆಯನ್ನು ತಪ್ಪೆಂದು ಕ್ಷಮೆ ಬೇಡಿದ್ದನ್ನು ಪುರಸ್ಕರಿಸಿ ಅಯೋಧ್ಯೆಯ ರಾಜಪರಿವಾರದವರೇ ವಾಲ್ಮೀಕಿ ಆಶ್ರಮಕ್ಕೆ ಹೋಗಿ ಸೀತೆಯನ್ನು ಆಹ್ವಾನಿಸಿದ ಪ್ರಕರಣದ ಕುರಿತಾಗಿ ಬರೆದಿದ್ದೆ. ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ ರಾಮಪರಿವಾರದ ಪುನರ್ಮಿಲನದ ಉತ್ಸವವನ್ನು ಆಚರಿಸುವುದಾಗಿ ಪ್ರಜೆಗಳು ಘೋಷಿಸುತ್ತಾರೆ. ಅದನ್ನು ಹಿರಿಯ ರಾಣಿಯರೂ ಸಮ್ಮತಿಸುತ್ತಾರೆ. ಅಯೋಧ್ಯೆಯ ಅಲಂಕಾರ ಆರಂಭವಾಗುತ್ತದೆ.
ಶೂರ್ಪನಖಿಯ ಆತ್ಮಹತ್ಯೆ: ಸೀತೆಯನ್ನು ಅಯೋಧ್ಯೆಯಲ್ಲಿ ಸ್ವಾಗತಿಸುವ ಉತ್ಸವದ ಸಿದ್ಧತೆಗಳ ಬಗ್ಗೆ ತಿಳಿದ ಶೂರ್ಪನಖಿ ಕ್ರುದ್ಧಳಾಗುತ್ತಾಳೆ. ಸೀತಾ-ರಾಮರ ಪುನರ್ಮಿಲನ ಆಗಲೇಬಾರದೆಂಬ ಆಕೆಯ ಬಯಕೆಯನ್ನು ಸಾಧಿಸಲು ಸೀತೆಯನ್ನು ಕೊಂದೇ ಬಿಡುವೆನೆಂದು ಎದುರಿಸುತ್ತಾಳೆ. ಆದರೆ ಸೀತೆಯು ಲಕ್ಷ್ಮಿಯಾಗಿ ಕಾಳಿಯ ರೂಪದಲ್ಲಿ ಕಾಣಿಸಿಕೊಂಡು ಶೂರ್ಪನಖಿಯನ್ನು ಧರೆಗೊರಗಿಸುತ್ತಾಳೆ. ಆಗ ಆಕೆಯನ್ನು ಹೊಡೆದು ಕೊಲ್ಲಲು ಗದೆಯೆತ್ತಿದ ಹನುಮನನ್ನು “ಸ್ತ್ರೀಹತ್ಯೆ ಮಾಡಬೇಡ” ಎಂಬುದಾಗಿ ಸೀತೆ ತಡೆದು ಜೀವದಾನ ಮಾಡುತ್ತಾಳೆ. ಬದುಕುಳಿದ ಶೂರ್ಪನಖಿಯು ಲವಕುಶರನ್ನು ಕೊಲ್ಲಲು ಒಬ್ಬ ರಕ್ಕಸನನ್ನು ನೇಮಿಸುತ್ತಾಳೆ.
ಋಷಿ ಕುಮಾರರಾಗಿದ್ದ ಲವಕುಶರು ಯಾವುದೇ ರಾಜ್ಯಾಧಿಕಾರವಿಲ್ಲದೆ ಶ್ರೀರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿದ್ದು ಏಕೆ? ಈ ಪ್ರಶ್ನೆಗೆ ಆ ಬಾಲಕರ ಮರುಪ್ರಶ್ನೆ ಏನೆಂದರೆ “ಸೀತೆಯನ್ನು ರಾಮನು ತ್ಯಜಿಸಿದ್ದು ನ್ಯಾಯವೇ? ನಾವು ರಾಮಾಯಣವನ್ನು ಕಲಿತವರು. ಸೀತೆಯು ರಾಮನೊಂದಿಗೆ ಸೇರದೆ ಅದು ಪೂರ್ಣವಾಗುವುದಿಲ್ಲ. ನಾವು ಅದನ್ನು ಪೂರ್ಣ ಮಾಡುತ್ತೇವೆ. ಅದಕ್ಕಾಗಿ ಕುದುರೆಯನ್ನು ಬಂಧಿಸಿದ್ದೇವೆ”. ಇದಕ್ಕೆ ಉತ್ತರಿಸಲಾಗದ ಶತ್ರುಘ್ನ, ಭರತ ಮತ್ತು ಲಕ್ಷ್ಮಣರು ಮೂರ್ಛಿತರಾದ ಬಳಿಕ ರಾಮನೇ ಯುದ್ಧಕ್ಕೆ ಬಂದಾಗಲೂ ಇದೇ ಪ್ರಶ್ನೆಯನ್ನು ಎತ್ತುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವಕುಶರಿಗೆ ಜನ್ಮದ ಗುಟ್ಟನ್ನು ಹೇಳಿ ಯುದ್ಧದಿಂದ ವಿರಮಿಸುವಂತೆ ಹೇಳುತ್ತಾರೆ. ಆದರೆ ಅದನ್ನು ಗುಟ್ಟಾಗಿ ಇಡುವಂತೆಯೂ ಹೇಳುತ್ತಾರೆ. ಮುಂದೆ ನಿಜ ತಿಳಿದ ಬಳಿಕ ಸೀತೆಯ ಸ್ವಾಗತೋತ್ಸವದ ಆಮಂತ್ರಣವನ್ನು ನೀಡಲು ತಾವೇ ಮುಂದಾಗುತ್ತಾರೆ.
ಸೀತೆಯ ಸ್ವಾಗತೋತ್ಸವದ ಆಮಂತ್ರಣವನ್ನು ಮಿಥಿಲೆಗೆ ಕೊಟ್ಟು ಬರಲು ಕುಶಲವರು ಹೋಗುತ್ತಾರೆ. ಅಲ್ಲಿ ಅವರಲ್ಲಿ ಪ್ರಶ್ನಿಸುವ ಬುದ್ಧಿ ಜಾಗೃತವಾಗುತ್ತದೆ. ಅಜ್ಜನಲ್ಲಿ “ನಿಮಗೆ ಸೀತೆಯು ಮಗಳೆಂಬ ಮಮಕಾರವಿರಲಿಲ್ಲವೇ? ರಾಮ ಪರಿತ್ಯಜಿಸಿದರೂ ನೀವೇಕೆ ಅವಳ ಕ್ಷೇಮದ ಬಗ್ಗೆ ವಿಚಾರಿಸಿ ವ್ಯವಸ್ಥೆ ಮಾಡಲಿಲ್ಲ?” ಎಂದು ವಿಚಾರಿಸುತ್ತಾರೆ. ಇದೊಂದು ಸಹಜ ಪ್ರಶ್ನೆ. ಆದರೆ ಜನಕರಾಜ ಮೊಮ್ಮಕ್ಕಳೆದುರು ತಬ್ಬಿಬ್ಬಾಗುತ್ತಾರೆ.  “ತಮ್ಮದು ಅಯೋಧ್ಯೆಯ ಅಧೀನ ರಾಜ್ಯವಾದುದರಿಂದ ಮತ್ತು ರಾಮನ ನಿರ್ಣಯದಲ್ಲಿ ತಪ್ಪು ಕಾಣುವುದಕ್ಕಾಗದೆ ಇದ್ದುದರಿಂದ ಸೀತೆಯ ಬಗ್ಗೆ ನಿರ್ಲಿಪ್ತವಾಗಿ ಇರಬೇಕಾಯಿತು. ಆದರೆ ನಿರಂತರ ಸೀತೆಯ ಶ್ರೇಯಸ್ಸನ್ನು ಬಯಸುತ್ತಿದ್ದೆವು” ಎಂದು ಜನಕರಾಯ ಉತ್ತರಿಸುತ್ತಿದ್ದಾಗಲೇ ಶೂಪನಖಿ ಕಳಿಸಿದ ರಕ್ಕಸನು ಆಕ್ರಮಿಸುತ್ತಾನೆ. ಲವಕುಶರು ಅವನನ್ನು ಎದುರಿಸಿದರೂ ಜನಕರಾಜನಿಂದಲೇ ಆತನ ವಧೆಯಾಗುತ್ತದೆ. ಆಗ ಹತಾಶಳಾದ ಶೂರ್ಪನಖಿಯು ಸ್ವತಃ ಕಾಣಿಸಿಕೊಂಡು ಯುದ್ಧ ಮಾಡುತ್ತಾಳೆ. ಕುಶಲವರು ಆಕೆಯನ್ನು ಬಾಣಗಳಿಂದ ಬಂಧಿಸುತ್ತಾರೆ. ಆಗ ಮಿಥಿಲೆಯ ಜನರು ಆಕೆಯನ್ನು ಕೊಲ್ಲಲು ಹವಣಿಸುತ್ತಾರೆ. ಅವರನ್ನು ತಡೆದ ಕುಶವಲವರು “ಸ್ತ್ರೀ ಹತ್ಯೆ ಸಲ್ಲದು, ಆಕೆಯೂ ಒಬ್ಬ ಮಾತೆಯಲ್ಲವೇ?” ಎಂದು ಶೂರ್ಪನಖಿಯನ್ನು ಬಿಟ್ಟು ಬಿಡುತ್ತಾರೆ. ಹೀಗೆ ಸೀತೆಯಿಂದಲೂ ಲವಕುಶರಿಂದಲೂ ಜೀವದಾನ ಪಡೆದ ಶೂರ್ಪನಖಿಯು ತನ್ನ ಜೀವನ ವ್ಯರ್ಥವಾಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಸಹಸ್ರಮುಖ ರಾವಣನ ಹನನ: ರಾಮ ರಾಜ್ಯವು ಸ್ಥಾಪನೆಗೊಳ್ಳಲೇ ಬಾರದು ಎಂಬ  ಹಟವಿದ್ದ ಸಹಸ್ರಮುಖ ರಾವಣನು ತನ್ನ ಮಾಯಕದ ಯಾವುದೇ ಉಪಾಯ ಫಲಿಸದಿದ್ದಾಗ ನೇರವಾಗಿ ರಾಮನನ್ನು ಎದುರಿಸುತ್ತಾನೆ. ಆತ ತನ್ನ ವರಬಲದಿಂದ ರಾಮನನ್ನು ಯುದ್ಧದಲ್ಲಿ ಕಂಗೆಡಿಸುತ್ತಾನೆ. ಆಗ  ಸೀತೆಯು ಲಕ್ಷ್ಮೀ ರೂಪವನ್ನು ತಾಳಿ ಕಾಳಿಯಂತೆ ಉಗ್ರಳಾಗಿ ತನ್ನ ತ್ರಿಶೂಲದಿಂದ ಸಹಸ್ರಮುಖ ರಾವಣನ ಕತ್ತನ್ನು ಕತ್ತರಿಸುತ್ತಾಳೆ. ತಾನು ಸತ್ತರೂ ತನ್ನ ದುಷ್ಟ ಯೋಚನೆಯು ಜೀವಂತವಾಗಿರುತ್ತದೆ ಎಂದು ಹೇಳುತ್ತ ಸಾಯುವ ಆತನ ರಕ್ತವು ಹೊಳೆಯ ನೀರಿನಲ್ಲಿ ಹರಿಯುತ್ತ ಕೆಳಗೆ ಸಾಗುತ್ತದೆ. ಅದೇ ಹೊಳೆಯ ಬದಿಯಲ್ಲಿ ನೀರು ಕುಡಿಯುತ್ತಿದ್ದ ಅಯೋಧ್ಯೆಯ ಸಜ್ಜನ ಪ್ರಜೆಯೊಬ್ಬನ ಗುಟುಕಿಗೆ ಈ ರಕ್ತ ಸೇರುತ್ತದೆ. ಅದನ್ನು ಕುಡಿದ ಆತನ ವ್ಯಕ್ತಿತ್ವವು ರಾಕ್ಷಸೀ ಸ್ವಭಾವವನ್ನು ಪಡೆಯುತ್ತದೆ. ಏನಿದ್ದರೂ ಸೀತಾರಾಮರು ಒಂದುಗೂಡಬಾರದು, ಕುಶಲವರು ರಾಮರಾಜ್ಯವನ್ನು ಸ್ಥಾಪಿಸಬಾರದು ಎಂಬ ಜಿದ್ದಿಗೆ ತೊಡಗಿದ್ದ ರಾಕ್ಷಸನ ದುಷ್ಟ ಚಿಂತನೆಯು ಈ ಪ್ರಜೆಯ ಮಾತು ಮತ್ತು ಕೃತಿಗಳಲ್ಲಿ ವ್ಯಕ್ತವಾಗತೊಡಗಿತು. ಅಯೋಧ್ಯೆಯ ಬೀದಿಗಳಲ್ಲಿ “ಮತ್ತೊಮ್ಮೆ ಪ್ರಜೆಗಳ ಎದುರೇ ಸೀತೆಯ ಚಾರಿತ್ರ್ಯದ ಬಗ್ಗೆ ಅಗ್ನಿ ಪರೀಕ್ಷೆ ಆಗಬೇಕು” ಎಂದು ಆತ ವಾದಿಸುತ್ತಾನೆ. ಆಗ ಪ್ರಜೆಗಳೆಲ್ಲರೂ ಅವನಿಗೆ ಹೊಡೆಯಲು ಮುಂದಾಗುತ್ತಾರೆ. ಅದೇ ಹೊತ್ತಿಗೆ ಅಲ್ಲಿಗೆ ತಲುಪಿದ ಲಕ್ಷ್ಣಣನು ಪ್ರಜೆಗಳನ್ನು ತಡೆದು ತಾನೇ ಆತನನ್ನು ವಿಚಾರಿಸುವುದಾಗಿ ಹೇಳುತ್ತಾನೆ. ಆದರೆ ಆ ಪ್ರಜೆಯು ತನಗೆ ರಾಮನನ್ನು ಭೇಟಿ ಮಾಡಿಸೆಂದು ಹೇಳುತ್ತಾನೆ. ಆದರೆ ಲಕ್ಷ್ಮಣನು ಆ ಸಾಧ್ಯತೆಯನ್ನು ತಿರಸ್ಕರಿಸುತ್ತಾನೆ.
ಮೈಯಲ್ಲಿ ಆವಾಹನೆಗೊಂಡ ರಾಕ್ಷಸನ ಮನಸ್ಸಿನ ಮಾತುಗಳನ್ನಾಡುತ್ತಿದ್ದ ಅಯೋಧ್ಯೆಯ ಪ್ರಜೆಯು ತನ್ನ ದುಷ್ಟಚಿಂತನೆಗಳನ್ನು ಹಂಚಿಕೊಳ್ಳುವ ಕೂಟವನ್ನು ಸೃಷ್ಟಿಸಿಕೊಳ್ಳುತ್ತಾನೆ. ಲಕ್ಷ್ಮಣನ ಕಣ್ಣು ತಪ್ಪಿಸಿ ರಾಮನ ಆಸ್ಥಾನದೊಳಕ್ಕೆ ನುಗ್ಗಿ ‘ಜೈ ಶ್ರೀರಾಮ್’ ಎಂದು ಕೂಗುತ್ತ ರಾಮನ ಗಮನ ಸೆಳೆಯುತ್ತಾನೆ. ತನ್ನನ್ನು ವಿರೋಧಿಸುವ ಅಯೋಧ್ಯೆಯ ಪ್ರಜಾಜನರಿದ್ದಾಗಲೂ ಗಟ್ಟಿಸ್ವರದಲ್ಲಿ, “ಲೋಕಾಪವಾದದಿಂದಾಗಿ ರಾಮನು ಸೀತೆಯನ್ನು ತ್ಯಜಿಸಿದ ಬಳಿಕ ಮಕ್ಕಳು ಹುಟ್ಟಿದ್ದಾರೆ. ಅನೇಕ ವರ್ಷಗಳಲ್ಲಿ ಅರಮನೆಯಿಂದ ಹೊರಗೆ ಇದ್ದ ಸೀತೆಯು ಎಲ್ಲಿದ್ದಳು ಮತ್ತು ಯಾರೊಂದಿಗಿದ್ದಳು ಎಂಬುದೇ ಗೊತ್ತಿಲ್ಲ. ಹಾಗಾಗಿ ಆಕೆ ಪವಿತ್ರಳು ಎನ್ನುವುದಕ್ಕೆ ಅಗ್ನಿಪರೀಕ್ಷೆ ನಡೆಯಬೇಕು” ಎಂದು ಬಿನ್ನವಿಸುತ್ತಾನೆ. ಎಲ್ಲರೂ ಇಂತಹ ಬೇಡಿಕೆಯನ್ನು ಕೇಳಿ ಅವಾಕ್ಕಾಗುತ್ತಾರೆ. ಪ್ರಜಾಜನರು ಆತನ ಬೇಡಿಕೆಯನ್ನು ಖಂಡಿಸುತ್ತಾರೆ. ಲಕ್ಷ್ಮಣನು ಉಗ್ರವಾಗಿ ಪ್ರತಿಕ್ರಯಿಸುತ್ತಾನೆ. ಆಗ ರಾಮನು ಎದ್ದು ನಿಂತು ತಾನು ಪತಿಯಾಗಿ ಸೀತೆಯ ಚಾರಿತ್ರ್ಯವನ್ನು ಶಂಕಿಸುವುದಿಲ್ಲ. ಆಕೆಯನ್ನು ಮತ್ತೆ ಸ್ವೀಕರಿಸಲು ಸಿದ್ಧನಿದ್ದೇನೆ. ಆದರೆ ಸಾಕೇತದ ರಾಜನಾಗಿ ಸೀತೆಯ ಅಗ್ನಿಪರೀಕ್ಷೆಗೆ ಒಪ್ಪುತ್ತೇನೆ ಎಂದು ಹೇಳಿದಾಗ ಎಲ್ಲರೂ ದಿಗ್ಮೂಢರಾಗುತ್ತಾರೆ. ಸಭೆಯನ್ನು ವಿಸರ್ಜಿಸಿದ ರಾಮನು ಅಯೋಧ್ಯೆಯ ಶಿವಮಂದಿರದಲ್ಲಿ ಧ್ಯಾನ ನಿರತಳಾಗಿರುವ ಸೀತೆಗೆ ವಿಚಾರವನ್ನು ತಿಳಿಸಲು ಹನುಮಂತನಿಗೆ ಆಜ್ಞೆ ನೀಡುತ್ತಾನೆ. ದುಃಖಿತನಾಗಿ ಹೊರಟ ಹನುಮನೊಂದಿಗೆ ಲಕ್ಷ್ಮಣ ಮತ್ತು ಭರತರಿಬ್ಬರೂ ಸೀತೆಯಿದ್ದಲ್ಲಿಗೆ ಹೋಗುತ್ತಾರೆ.
(ಸೀತೆಯ ಅಗ್ನಿಪರೀಕ್ಷೆ ಮತ್ತೊಮ್ಮೆ ಜರಗಿತೇ ಎಂಬುದನ್ನು ಮುಂದಿನ ಲೇಖನದಲ್ಲಿ ತಿಳಿಯೋಣ) 
ಚಂದ್ರಶೇಖರ ದಾಮ್ಲೆ
Advertisement

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಸುಕ್ಕಾ
April 30, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಗುಜ್ಜೆ ಚಟ್ನಿ
April 29, 2025
8:00 AM
by: ದಿವ್ಯ ಮಹೇಶ್
ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ
ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror

Join Our Group