ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?

July 10, 2025
7:53 PM
ಇಂದ್ರಿಯ ನಿಗ್ರಹವನ್ನೊಳಗೊಂಡ ಬ್ರಹ್ಮಚರ್ಯವು ಕೇವಲ ಬಾಲ್ಯಕಾಲದ ನಿಬಂಧನೆಯಲ್ಲ. ಅದು ಅವಿವಾಹಿತರಿಗಷ್ಟೇ ಅಲ್ಲ, ವಿವಾಹಿತರಿಗೂ ವಿಧಿಸಲ್ಪಟ್ಟಿದೆ.  ಅದು ಗ್ರಹಸ್ಥಾಶ್ರಮದಲ್ಲಿಯೂ ವಾನಪ್ರಸ್ಥಾಶ್ರಮದಲ್ಲಿಯೂ ಇರಬೇಕೆಂಬುದು ಭಾರತೀಯ ಚಿಂತನೆಯಾಗಿದೆ.
ಒಂದು ದನದ ಹೆಣ್ಣು ಕರುವಿನ ದೈಹಿಕ ಬೆಳವಣಿಗೆ ಮತ್ತು ಪ್ರಾಯದ ಆಧಾರದಲ್ಲಿ ದನ ಸಾಕುವವರು “ಇನ್ನು ಇದು ಗಬ್ಬ ಧರಿಸುವುದಕ್ಕಾಯಿತು. ಹೆಚ್ಚೆಂದರೆ ಒಂದೆರಡು ತಿಂಗಳು”. ಅವರು ಅದನ್ನು ಅನುಭವದಿಂದ ತಿಳಿದು ಹೇಳುತ್ತಾರೆ. ಇದು ಎಲ್ಲಾ ಪ್ರಾಣಿಗಳ ಕುರಿತಾಗಿಯೂ ಹೇಳಬಹುದಾದ ಒಂದು ವಾಸ್ತವ ಸಂಗತಿ. ಸಂತಾನೋತ್ಪತ್ತಿಯ ಬಗ್ಗೆ ಸೊರ್ಕಾಲ ಮತ್ತು ಪ್ರಾಯಗಳಷ್ಟೇ ಪ್ರಾಣಿಗಳ ಬದುಕಿನಲ್ಲಿ ಮುಖ್ಯ. ಅದಕ್ಕೆ ಮೀರಿದ ನಿಯಮಗಳಿಲ್ಲ. ಹಾಗೆ ನೋಡಿದರೆ ಒಂದು ಹೆಣ್ಣುಕರು ಕಂಡ ಹೋರಿಗಳಿಗೆಲ್ಲ ಏರಲು ಬಿಡುವುದಿಲ್ಲ. ಗರ್ಭ ಧರಿಸಿ ಪ್ರಸವಿಸಿದರೆ ಮತ್ತೆ ಮಾತೃ ವಾತ್ಸಲ್ಯವನ್ನು ಸುರಿಸುವ ಪ್ರಾಣಿಗಳ ಗುಣವಂತೂ ಮನುಷ್ಯರಿಗಿಂತ ಕಡಿಮೆ ಇಲ್ಲ. ಇದು ಆನೆಯಿಂದ ತೊಡಗಿ ಆಡಿನ ತನಕವೂ, ಬೆಕ್ಕು ನಾಯಿಗಳವರೆಗೂ ಕಾಣಬಹುದಾದ ಜೀವ ಪ್ರೀತಿ. ಗರ್ಭಾದಾನಕ್ಕೆ ಗಂಡು ಪ್ರಾಣಿಗಳು ತಮ್ಮ ಸಹಜ ಕಾಮವಾಂಛೆಯನ್ನು ತೀರಿಸಿಕೊಳ್ಳುವುದೇ ಕಾರಣವಾದರೂ ಹೆಣ್ಣು ಪ್ರಾಣಿಯು ಭ್ರೂಣವನ್ನು ಬೆಳೆಸಿ ಕರು/ಮರಿಯನ್ನು ಹಡೆದು (ಹಕ್ಕಿಗಳಾದರೆ ಮೊಟ್ಟೆಯನ್ನಿಟ್ಟು) ತಮ್ಮ ಸಂಕುಲ ಸೃಷ್ಟಿ ಮಾಡಿ ಸ್ವತಂತ್ರವಾಗಿ ಹೊರಸಾರುವವರೆಗೆ ರಕ್ಷಿಸುತ್ತವೆ.
ಮನುಷ್ಯನ ವಿಚಾರದಲ್ಲಿ ಇದೆಲ್ಲ ಭಿನ್ನವಾಗಿದೆ. ಪ್ರಾಣಿಗಳಂತೆ ಮಾನವರ ಬದುಕು ಆಹಾರ ನಿದ್ರಾ-ಭಯ-ಮೈಥುನಗಳಿಗೆ ಸೀಮಿತವಾಗಿಲ್ಲ. ಅದು ಭಾಷೆ, ಆಸ್ತಿ, ಉದ್ಯೋಗ, ಜ್ಞಾನ, ಸಂಸ್ಕೃತಿ, ಸಂಬಂಧಗಳು, ದೀರ್ಘಾಯುಷ್ಯ, ಪುನರ್ಜನ್ಮ, ಸಮಾಜ ಸಂರಚನೆ ಮುಂತಾಗಿ ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ವ್ಯವಸ್ಥೆಗಳನ್ನು ಹೊಂದಿದೆ. ಅರ್ಥಾತ್ ಮನುಷ್ಯನ ಬದುಕಿಗೊಂದು ಅರ್ಥ, ಗುರಿ, ಶಿಕ್ಷಣ, ಸಾಧನೆಯ ಮಾರ್ಗ, ಕೊಡುಗೆ-ದೇಣಿಗೆಗಳು, ಜೀವನದ ಸಾರ್ಥಕತೆ ಮುಂತಾದ ಪ್ರಶ್ನೆಗಳನ್ನಿಟ್ಟುಕೊಂಡು ರೂಪಿಸಿರುವ ಭಾರತೀಯ ಜೀವನ ದೃಷ್ಠಿಯನ್ನು ಚತುರ್ವಿಧ ಪುರುಷಾರ್ಥಗಳಲ್ಲಿ ಹಾಗೂ ನಾಲ್ಕು ಆಶ್ರಮಗಳ ವಿವರಣೆಯಲ್ಲಿ ಹೇಳಲಾಗಿದೆ. ಧರ್ಮ, ಅರ್ಥ ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಗಳೆಂಬ ನಾಲ್ಕು ಹಂತಗಳಲ್ಲಿ ಹೇಗೆ ಸಾಧಿಸಬೇಕೆಂಬುದನ್ನು ಹೇಳಲಾಗಿದೆ. ಮನುಷ್ಯರ ಆಯುಷ್ಯವನ್ನು ನೂರು ವರ್ಷಗಳೆಂದು ಪರಿಭಾವಿಸಿ ಮೊದಲ 25 ವರ್ಷಗಳಲ್ಲಿ ಬ್ರಹ್ಮಚರ್ಯದ ಪಾಲನೆ, ನಂತರದ 25 ವರ್ಷಗಳಲ್ಲಿ ವಿವಾಹವಾಗಿ ಮಕ್ಕಳನ್ನು ಪಡೆದು ಗೃಹಸ್ಥಾಶ್ರಮದ ನಿರ್ವಹಣೆ ಮಾಡಿ 50 ವರ್ಷಗಳ ಬಳಿಕ ಮಕ್ಕಳಿಗೆ ಆಸ್ತಿ ಸಂಪತ್ತುಗಳನ್ನು ಬಿಟ್ಟುಕೊಟ್ಟು ವಾನಪ್ರಸ್ಥದ ಜೀವನ ನಡೆಸಿ ಕೊನೆಯ 25 ವರ್ಷಗಳಲ್ಲಿ ಸನ್ಯಾಸತ್ವದ ಜೀವನ ನಡೆಸಬೇಕೆಂಬ ಚಿಂತನೆಯು ಆಶ್ರಮ ಧರ್ಮದ  ವಿವರಣೆಯಲ್ಲಿ ಇದೆ. ಇಲ್ಲಿ ಹೇಳಲಾದ 25 ವರ್ಷಗಳೆಂಬುದು ತಾತ್ವಿಕವಷ್ಟೇ ಹೊರತು ವ್ಯಕ್ತಿಗಳ ಜೀವನದ ಸಂದರ್ಭಕ್ಕೆ ಅನುಸಾರವಾಗಿ ಬದಲಾಗಬಹುದು.
ಆಶ್ರಮ ಧರ್ಮವು ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಗದವರಿಗಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ಅನ್ವಯ ಆಗಬೇಕಾದ ಅಗತ್ಯ ಕಾಣುತ್ತಿದೆ. ಆದರೆ ಇಂದು ದಿನನಿತ್ಯದ ವಾರ್ತೆಗಳಲ್ಲಿ ಬಾಲ್ಯದಲ್ಲೇ ಲವ್, ಸೆಕ್ಸ್, ದೋಖಾ ಎಂಬ ವಾರ್ತೆಗಳು ಗಮನ ಸೆಳೆಯುತ್ತವೆ. ಹೈಸ್ಕೂಲಿನದ್ದಾಗಲೇ ಪ್ರೇಮಾಂಕುರವಾಗಿ ಪಾಠಗಳನ್ನು ಮರೆತು ಪ್ರೇಮಲೋಕದಲ್ಲಿ ವಿಹರಿಸುತ್ತ ತಮ್ಮ ಕೃತ್ಯದ ಹೊಣೆ ಹೊರಬೇಕಾದಾಗ ತಪ್ಪಿಸಿಕೊಳ್ಳಲು ಬಯಸಿದ ಘಟನೆಗಳು ವರದಿಯಾಗುತ್ತಿವೆ. ಇದು ಇನ್ನೂ ಮುಂದುವರಿದು ಪ್ರೇಮಿಗಳು ಬದಲಾಗಿ ಈರ್ಷ್ಯೆ, ದ್ವೇಷ ಹಾಗೂ ಪ್ರತೀಕಾರದ  ಕೃತ್ಯಗಳು ನಡೆದು ಪ್ರಾಣಹಾನಿಯಾದ ಘಟನೆಗಳು ನಡೆಯುತ್ತಿವೆ. ಇದಲ್ಲದೆ ನಾನು ಈ ಹಿಂದಿನ ಲೇಖನದಲ್ಲಿ ಬರೆದಿರುವಂತೆ ವಯಸ್ಕರಲ್ಲೂ ವಿವಾಹಿತರಲ್ಲೂ ಅಕ್ರಮ ಸಂಬಂಧಗಳು ಚಿಗುರಿ ಗುಪ್ತವಾಗಿದ್ದ ಪ್ರೇಮಾಲಾಪಗಳು ಬಹಿರಂಗವಾಗಿ ಸುಪಾರಿ ಕೊಲೆಗಳಲ್ಲಿ ಪರ್ಯಾವಸಾನಗೊಂಡಿವೆ. ಇವೆಲ್ಲವುಗಳ ಹಿಂದೆ sex education ಇಲ್ಲದಿರುವುದು ಕಾರಣವೆಂದು ಹೇಳಲಾಗುತ್ತದೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಅತಿಯಾದ ವಿಷಯಾಸಕ್ತಿಯಿಂದ ಮನೋವಿಕಾರಗಳು ಪ್ರಚೋದಕಗಳಾಗಿ ಜನರಲ್ಲಿ ವರ್ತನೆಗಳು ದಾರಿ ತಪ್ಪುತ್ತಿರುವುದೂ ಪ್ರಧಾನ ಕಾರಣವಾಗಿದೆ. ಶಾಲಾ ವಿದ್ಯಾರ್ಥಿಗಳ ಹಂತದಲ್ಲಿ ಇಂತಹ ಲೈಂಗಿಕ ಲಾಲಸೆಯ ಸಂಬಂಧಗಳು ಚಿಗುರದಂತೆ ಮನಸ್ಸಿನ ಮೇಲೆ ನಿಯಂತ್ರಣ ಇರಬೇಕಾದ್ದೇ ಮುಖ್ಯವಾಗುತ್ತದೆ. ಪ್ರಾಚೀನ ಭಾರತೀಯ ಚಿಂತನೆಯ ಆಶ್ರಮ ತತ್ವಗಳು ಮನಸ್ಸಿಗೆ ಸಂಯಮ ನೀಡಿ ಜೀವನ ನಿಷ್ಠೆಯ ಹೊಣೆಗಾರಿಕೆಯ ಎಚ್ಚರ ನೀಡುತ್ತವೆ.
ಉದಾಹರಣೆಗೆ ಬ್ರಹ್ಮಚರ್ಯಾಶ್ರಮವು ಸಾಮಾನ್ಯವಾಗಿ ಇಂದ್ರಿಯ ನಿಗ್ರಹದೊಂದಿಗೆ ಬಾಲಕರಿಗೆ ಆಧ್ಯಾತ್ಮಿಕ ಬೆಳವಣಿಗೆಯ ದಾರಿಯನ್ನು ತೋರಿಸುತ್ತದೆ. ಬ್ರಹ್ಮಚರ್ಯವು ಲೈಂಗಿಕತೆಯಿಂದ ದೂರವಿರುವುದನ್ನು ಮಾತ್ರವಲ್ಲದೆ ಸ್ವಯಂ ನಿಯಂತ್ರಣ, ವ್ಯಕ್ತಿತ್ವ ವಿಕಸನ ಹಾಗೂ ಉನ್ನತ ಬುದ್ಧಿವಂತಿಕೆಯತ್ತ ಮನಸ್ಸನ್ನು ಕೇಂದ್ರೀಕರಿಸಲು ಪ್ರೇರೇಪಿಸುತ್ತದೆ. ಇದಕ್ಕಾಗಿ ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ  ಸ್ವಯಂ ಶೋಧನೆಯ ಗುರಿಯನ್ನಿರಿಸಿಕೊಳ್ಳಲು ಬ್ರಹ್ಮಚರ್ಹದ, ತತ್ವಗಳು ಸಹಾಯಕವಾಗಿವೆ. ಇವು ಕಲಿಕೆಯಲ್ಲಿ ಏಕಾಗ್ರತೆ, ಸ್ಮರಣ ಶಕ್ತಿಯಲ್ಲಿ ವೃದ್ಧಿ, ಧೈರ್ಯ ಮತ್ತು ಸಕಾರಾತ್ಮಕತೆಯನ್ನು ಸುಧಾರಿಸುವ ಸಾಧಕಗಳಾಗಿವೆ. ಉನ್ನತ ಸಾಧನೆಯಲ್ಲಿ ತೊಡಗುವ ಬಾಲ್ಯದ ಪ್ರಾಯದಲ್ಲಿ ಉದ್ದೇಶ ಪೂರ್ವಕವಾಗಿ ಲೈಂಗಿಕ ಆಸಕ್ತಿಗಳಿಂದ ದೂರವಿರಲು ಪ್ರಯತ್ನಿಸಬೇಕಾಗುತ್ತದೆ. ಭಾರತೀಯ ಯೋಗ ಪದ್ಧತಿಯಲ್ಲಿ ‘ಯಮ’ ಮತ್ತು ‘ನಿಯಮ’ಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾನಸಿಕ ಏರಿಳಿತಗಳ ಸಂಪೂರ್ಣ ನಿಲುಗಡೆ ಮಾಡುವಂತಹ “ಚಿತ್ತ ವೃತ್ತಿ ನಿರೋಧ”ದ ಸಾಧನೆಯು ಬ್ರಹ್ಮಚರ್ಯವನ್ನು ಬಲಗೊಳಿಸುತ್ತದೆ. ಅಹಿಂಸೆ, ಸತ್ಯ, ಅಸ್ತೇಯ (ಕದಿಯದಿರುವುದು), ಇಂದ್ರಿಯ ವಿಗ್ರಹ ಮತ್ತು ಅಪರಿಗ್ರಹ (ಅರ್ಹತೆ ಇಲ್ಲದಿದ್ದಾಗ ಪಡೆಯದಿರುವುದು) ಇವು ಅಷ್ಟಾಂಗ ಯೋಗದ ಮೊದಲ ಮೆಟ್ಟಿಲಾದ ‘ಯಮ’ ತತ್ವಗಳು. ಇನ್ನು ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣೀಧಾನ ಅಂದರೆ ದೈವಿಕ ಸಮರ್ಪಣೆ ಇವುಗಳು ‘ನಿಯಮ’ ತತ್ವಗಳು. ಅಂದರೆ ಅವು ಬದುಕಿನ ಆಚರಣೆಗಳು. ಹೀಗೆ ವಿಧಿ ನಿಶೇಷದ ಅಂಶಗಳಿರುವ ಯಮ ನಿಯಮಗಳು ಬ್ರಹ್ಮಚಾರಿಯ ಬದುಕಿಗೆ ನೆಲೆಯನ್ನು ಒದಗಿಸುತ್ತವೆ.
ಯುವ ಜನರೆಲ್ಲರೂ 14ನೇ ವಯಸ್ಸಿನಿಂದ 20ನೇ ವರ್ಷದ ನಡುವಿನ ಹಂತದಲ್ಲಿ ಬ್ರಹ್ಮಚರ್ಯ ಪಾಲಿಸುವುದನ್ನು ಸ್ಮರಣೆಯಲ್ಲಿಟ್ಟುಕೊಂಡರೆ ಸಹಜವಾಗಿ ಸ್ವನಿಯಂತ್ರಣ ಬರುತ್ತದೆ. ಅಷ್ಟರಲ್ಲಿ ಜವಾಬ್ದಾರಿ, ಬದ್ಧತೆ, ಋಣ, ಹೆತ್ತವರು ಮಾಡಿರುವ ತ್ಯಾಗ ಮುಂತಾದ ಬದುಕಿನ ಸತ್ಯಗಳು ಅನುಭವಕ್ಕೆ ಬರುತ್ತವೆ. ಸಿನೆಮಾ ಹಾಗೂ ಟಿ.ವಿ ಧಾರಾವಾಹಿಗಳ ಕಲುಷಿತ ಸಂದೇಶಗಳಿಂದ ಮುಕ್ತರಾಗಿ ಆತ್ಮನಿರ್ಭರತೆಯ ದಾರಿಯಲ್ಲಿ ಮುಂದುವರಿಯಲು ಇಂದಿನ ಯುವಜನರಿಗೆ, ಗಂಡು ಹಾಗೂ ಹೆಣ್ಮಕ್ಕಳಿಗೂ, ಬ್ರಹ್ಮ್ರಚರ್ಯದಪಾಲನೆ ಅಗತ್ಯವಾಗಿದೆ.
ಇಂದ್ರಿಯ ನಿಗ್ರಹವನ್ನೊಳಗೊಂಡ ಬ್ರಹ್ಮಚರ್ಯವು ಕೇವಲ ಬಾಲ್ಯಕಾಲದ ನಿಬಂಧನೆಯಲ್ಲ. ಅದು ಅವಿವಾಹಿತರಿಗಷ್ಟೇ ಅಲ್ಲ, ವಿವಾಹಿತರಿಗೂ ವಿಧಿಸಲ್ಪಟ್ಟಿದೆ.  ಅದು ಗ್ರಹಸ್ಥಾಶ್ರಮದಲ್ಲಿಯೂ ವಾನಪ್ರಸ್ಥಾಶ್ರಮದಲ್ಲಿಯೂ ಇರಬೇಕೆಂಬುದು ಭಾರತೀಯ ಚಿಂತನೆಯಾಗಿದೆ. ಗೃಹಸ್ಥಾಶ್ರಮಿಗಳೂ ಸತಿಪತಿಗಳಾಗಿ ಕೆಲವೊಂದು ವೃತಾಚರಣೆಗಳ ಸಂದರ್ಭದಲ್ಲಿ ಲೈಂಗಿಕ ನಿಯಂತ್ರಣದ ವ್ರತಗಳನ್ನು ಅನುಸರಿಸಬೇಕು. ಈ ಎಚ್ಚರ ಇಟ್ಟುಕೊಂಡವರು ಯಾರೂ ಅಕ್ರಮ ಸಂಬಂಧಗಳ ದಾಳಕ್ಕೆ ಸಿಲುಕುವುದಿಲ್ಲ. ಈ ದೃಷ್ಠಿಯಿಂದ ನೋಡಿದರೆ ಬ್ರಹ್ಮಚರ್ಯಾಶ್ರಮವು  ಗೃಹಸ್ಥಾಶ್ರಮಕ್ಕೆ ಮಾಡುವ ಪೂರ್ವತಯಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು, ತನ್ನ ಬಂಧುಗಳನ್ನು, ಪರಿಸರವನ್ನು ಸಂಲಗ್ನಗೊಳಿಸಿ ಏಳಿಗೆ ಸಾಧಿಸುವತ್ತ ಯತ್ನಿಸುತ್ತಿದ್ದರೆ ಆಗ ವಸ್ತು ಸುಖಗಳ ಆಸೆ, ಲಾಲಸೆ ಮತ್ತು ಆಮಿಷಗಳಿಗೆ ಬಲಿ ಬೀಳದಿರುವ ಸಾಧ್ಯತೆ ಇರುತ್ತದೆ. ಆಗ ಅವರ ಬದುಕು ಭದ್ರವಾಗುವುದಲ್ಲದೆ ಇನ್ನೊಬ್ಬರ ಬದುಕಿಗೂ ಆಧಾರವಾಗುವ ಶಕ್ತಿ ಇರುತ್ತದೆ.
ಬ್ರಹ್ಮ ಚರ್ಯದ ಪಾಠವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲೇ ಮಾಡಬಹುದು. ಸೆಕ್ಯುಲಾರ್ ನೆಪದಲ್ಲಿ ಶಾಲೆಗಳಲ್ಲಿ ಮಾಡುವುದಿಲ್ಲವಾದರೆ ಮನೆಗಳಲ್ಲಾದರೂ ಬ್ರಹ್ಮಚರ್ಯದ ಬೋಧನೆ ಗಂಡು ಮಕ್ಕಳಿಗೂ ಹೆಣ್ಮಕ್ಕಳಿಗೂ ಬೇಕು. ಇದು ಎಲ್ಲಾ ಜಾತಿ ಧರ್ಮಗಳ ಮಕ್ಕಳಿಗೆ ಅಗತ್ಯವಾದ್ದರಿಂದ ಉಪನಯನದ ಆಚರಣೆಗೆ ಆಧಾರಿತವಾಗಿರಬೇಕಾಗಿಲ್ಲ. ಹೆತ್ತವರು ಮಕ್ಕಳಿಗೆ ಬೋಧಿಸಿದರೆ ಸಾಕು. ಹೀಗೆ ಮಾಡಿದರೆ ನಮ್ಮ ಹೆಣ್ಮಕ್ಕಳೂ ತಮ್ಮ ಜೀವನ ಹಾಳಾಯಿತು ಎಂತ ಗೋಳಿಡುವ ಪರಿಸ್ಥಿತಿಯಿಂದ ಪಾರಾಗಿ ತಲೆಯೆತ್ತಿ ನಡೆಯಬಹುದು.
ತರುಣ ತರುಣಿಯರು ಹೋಟೆಲಿನಲ್ಲಿ ಜತೆಯಲ್ಲಿ ಕುಳಿತು ಮಾತಾಡುತ್ತ ಕಾಫಿ ಕುಡಿದು ಬದಿಗಿಟ್ಟ ಲೋಟವನ್ನು ತೊಳೆದಾಗ ಅದು ಶುದ್ಧವಾಗುತ್ತದೆ. ಮತ್ತೊಬ್ಬರಿಗೆ ಉಪಯೋಗಕ್ಕೆ ಬರುತ್ತದೆ. ಆದರೆ ಸೆಕ್ಸ್ ಮಾಡಿದರೆ ಹಾಗಲ್ಲ! ಅದಕ್ಕೆ ವಾಸನೆ ಇದೆ; ಅಂದರೆ ಪರಿಣಾಮವಿದೆ. ತೊಳೆದರೆ ಅಷ್ಟು ಸುಲಭದಲ್ಲಿ ಶುದ್ಧವಾಗುವುದಿಲ್ಲ. ಒಬ್ಬರೊಡನೆ ಉಪಯೋಗಿಸಲ್ಪಟ್ಟ ದೇಹ ಮತ್ತೊಬ್ಬರಿಗೆ ಉಪಯೋಗಕ್ಕೆ ಆಗುವುದಿಲ್ಲ. ಈ ಎಚ್ಚರ ಯುವಕ ಯುವತಿಯರಲ್ಲಿರಬೇಕು. ಅದಕ್ಕೆ ಬ್ರಹ್ಮಚರ್ಯದ ನಿಯಮಗಳನ್ನು ತಿಳಿದಿರಬೇಕು. ಈ ತಿಳುವಳಿಕೆ ಇದ್ದರೆ ಸೆಕ್ಸ್ ಎಂದರೆ ಭಯವಿರುತ್ತದೆ. ಅದರ ಪಾವಿತ್ರ್ಯದಲ್ಲಿ ಗೌರವ ಇರುತ್ತದೆ. ಅದಿಲ್ಲದಿದ್ದರೆ ಮನುಷ್ಯರೂ ಪ್ರಾಣಿಗಳಂತೆ ಅಲ್ಲವೆ?
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror