ಸಣ್ಣ ಕಥೆಗಳೆಂಬ ಕಂದೀಲುಗಳು

September 16, 2025
8:40 PM
ಮಂಗಳೂರಿನಲ್ಲಿ 1951 ರಲ್ಲಿ ಸ್ಥಾಪನೆಯಾದ ಶ್ರೀ ರಾಮಕೃಷ್ಣಾಶ್ರಮವು ಈ ವರ್ಷ ತನ್ನ 75 ವರ್ಷಗಳ ಸಾಧನೆಗಳ ದ್ಯೋತಕವಾಗಿ ಅಮೃತಮಹೋತ್ಸವವನ್ನು ಆಚರಿಸಿತು. ಅದನ್ನು ಅರ್ಥಪೂರ್ಣಗೊಳಿಸಲು ತನ್ನ ಶಿಕ್ಷಣ ಸೇವೆಯ ಸಾರ್ಥಕತೆಯ ಕುರುಹಾಗಿ ಒಂದು ದಿನದ ಗೋಷ್ಠಿಯಲ್ಲಿ ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿ.ಎಡ್. ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದರು. ಆ ಸಮಾವೇಶದಲ್ಲಿ ಮಾತಾಡಲು  ನನಗೆ ಅವಕಾಶ ಸಿಕ್ಕಿದ್ದು ಒಂದು ಭಾಗ್ಯವಾಗಿತ್ತು. ಮುಂದೆ ಶಿಕ್ಷಕರಾಗಲಿರುವ ಅವರಿಗೆ  ತರಗತಿಗಳಲ್ಲಿ ಮಕ್ಕಳನ್ನು ಪ್ರಭಾವಿಸಲು ಸಣ್ಣ ಕತೆಗಳು ಹೇಗೆ ಸಹಾಯವಾಗುತ್ತವೆ ಎಂಬುದನ್ನು ವಿವರಿಸಿದೆ. ಪ್ರತಿದಿನವೂ ಶಿಕ್ಷಕರು ಒಂದೊಂದು ಹೊಸಕತೆಯನ್ನು ತನ್ನ ಅಂದಿನ ವಿಷಯಕ್ಕೆ ಸಮೀಕರಿಸಿ ಹೇಳುವ ಕಲೆಯನ್ನು ಕರಗತ  ಮಾಡಿಕೊಂಡರೆ ವಿದ್ಯಾರ್ಥಿಗಳ ಶಿಸ್ತಿಗೆ ಬೇರೆ ಬೆತ್ತ ಬೇಕಾಗಿಲ್ಲ. ಆದರೆ ಕತೆಗಳ ಸಂಗ್ರಹಕ್ಕೆ ಬೇಕಾದ ಓದುವಿಕೆ ಹಾಗೂ ಸೃಜನಾತ್ಮಕವಾಗಿ ಹೇಳುವಿಕೆ ನಿಮ್ಮದೇ ಆಗಿರಬೇಕು ಎಂದು ಮನವರಿಕೆ ಮಾಡಿದೆ.
ಕಿರುಕಥೆಗಳನ್ನು ನಾವು ಹೇಗೆ ಓದುತ್ತೇವೆಯೋ ಹಾಗೆಯೇ ಹೇಳಬೇಕಾಗಿಲ್ಲ. ಸಾಂದರ್ಭಿಕವಾಗಿ ಅವುಗಳನ್ನು ನಮ್ಮ ಪಾಠದ ಆಶಯಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳಬಹುದು. ಹೀಗೆ ಪರಿವರ್ತಿಸಿಕೊಳ್ಳುವುದೂ ಕೂಡಾ ಶಿಕ್ಷಕರ ಒಂದು ಸೃಜನಶೀಲ ಸಾಮರ್ಥ್ಯವಾಗಿದೆ. ಉದಾಹರಣೆಗೆ ಬುದ್ಧಿವಂತಿಕೆಗೆ ಸಂಬಂಧಿಸಿ ಒಂದು ಕಥೆ ಇದೆ. ಒಬ್ಬಾತ ತನ್ನ ಹಣದ ಅಗತ್ಯಕ್ಕಾಗಿ ತನ್ನ ಜಾಗದಲ್ಲಿದ್ದ ಬಾವಿಯನ್ನು ಪಕ್ಕದ ಮನೆಯವನಿಗೆ ಮಾರಿದ. ಕ್ರಯ ಕೊಟ್ಟು ಕೊಂಡವನಿಗೆ ತನ್ನ ಕೃಷಿಗೆ ಸುಲಭದಲ್ಲಿ ನೀರು ಸಿಗುತ್ತದೆ ಎಂಬ ಸಂತೋಷವಾಯಿತು. ಹಾಗಾಗಿ ಚೌಕಾಶಿ ಮಾಡಿದರೂ ಪೂರ್ತಿ ನೂರು ವರಹ ಕೊಟ್ಟು ಬಾವಿಯನ್ನು ಖರೀದಿಸಿದ. ಆ ಬಳಿಕ ಬಾವಿಯ ಒಡೆತನ ಅವನದ್ದೇ ಆಯಿತು. ಆದರೆ ಬಾವಿಯನ್ನು ಮಾರಿದ ನೆರೆಮನೆಯಾತ ಆ ಬಾವಿಯನ್ನು ಉಪಯೋಗಿಸುವುದನ್ನು ನಿಲ್ಲಿಸಲಿಲ್ಲ. ಆತ ಮತ್ತೂ ನೀರನ್ನು ತೆಗೆಯುತ್ತಲೇ ಇದ್ದ. ಇದು ಬಾವಿಯನ್ನು ಖರೀದಿಸಿದವನಿಗೆ ಕಿರಿಕಿರಿಯಾಯಿತು. ಹಾಗಾಗಿ ಆತ ತನಗೆ ಬಾವಿಯನ್ನು ಮಾರಿದ್ದ ಪಕ್ಕದ ಮನೆಯವನಲ್ಲಿ ಆಕ್ಷೇಪ ಹೇಳಿದ. ಇನ್ನು ನೀನು ಇದರಿಂದ ನೀರನ್ನು ಉಪಯೋಗಕ್ಕೆ ತೆಗೆದುಕೊಳ್ಳಬಾರದು ಎಂದು ಹೇಳಿದ. ಆಗ ಬಾವಿಯನ್ನು ಮಾರಿದಾತನು, “ನಾನು ನಿನಗೆ ಬಾವಿಯನ್ನು ಮಾತ್ರ ಮಾರಿದ್ದೆ. ಅದರಲ್ಲಿರುವ ನೀರನ್ನು ಮಾರಿಲ್ಲ. ಹಾಗಾಗಿ ನನಗೆ ನೀರನ್ನು ತೆಗೆದು ಉಪಯೋಗಿಸುವ ಹಕ್ಕು ಇದೆ” ಎಂಬುದಾಗಿ ಪ್ರತಿಪಾದಿಸಿದ. ಅಬ್ಬಾ! ಎಂತಹ ಬುದ್ಧಿವಂತಿಕೆ ನೋಡಿ!  ಈ ಮಾತನ್ನು ಕೇಳಿ ಬಾವಿಯನ್ನು ಖರೀದಿಸಿದವನು ಪೆಚ್ಚಾದ.  ತಾನು ಮೋಸ ಹೋದೆನಲ್ಲಾ ಎಂದು ಪರಿತಪಿಸಿದ. ಆದರೂ ತನಗೆ ಅನ್ಯಾಯವಾಗಿದೆ ಎಂದು ಆತನಿಗೆ ಅನ್ನಿಸಿತು. ಹಾಗಾಗಿ ರಾಜನಲ್ಲಿ ದೂರು ನೀಡಿದ. ರಾಜನು ಆಪಾದಿತನನ್ನು ವಿಚಾರಣೆಗೆ ಕರೆದ. ರಾಜನ ಬಳಿ ಒಬ್ಬ ಬುದ್ಧಿವಂತ ಮಂತ್ರಿ ಇದ್ದ. ಆತನಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ತಿಳಿಸಿದ. ಮಂತ್ರಿಯು ಇಬ್ಬರನ್ನೂ ಆಸ್ಥಾನದಲ್ಲಿ ವಿಚಾರಿಸಲು ರಾಜನ ಎದುರು ನಿಲ್ಲಿಸಿದ. “ಬಾವಿಯನ್ನು ಮಾರಿದ ಬಳಿಕ ನೀನೇಕೆ ಅದರಿಂದ ನೀರನ್ನು ಉಪಯೋಗಿಸುತ್ತಿರುವೆ? ಅದು ತಪ್ಪಲ್ಲವೇ?” ಎಂದು ಮಂತ್ರಿ ಕೇಳಿದ. ಆಗ ಆಪಾದಿತನು “ಇಲ್ಲ ಸ್ವಾಮಿ. ನಾನು ಬಾವಿಯನ್ನು ಮಾರಿದ್ದೇನೆಯೇ ಹೊರತು ನೀರನ್ನು ಮಾರಿಲ್ಲ” ಎಂದು ತನ್ನ ಹಳೇ ರಾಗವೆಳೆದ. ಆತನ ಮೋಸದ ಬುದ್ಧಿವಂತಿಕೆಗೆ ರಾಜ ಸಭೆಯಲ್ಲಿದ್ದವರು ಬೆರಗಾದರು. ಆದರೆ ಮಂತ್ರಿಯ ಜಾಣ್ಮೆ ಇನ್ನೂ ಹೆಚ್ಚಿತ್ತು. ಅವರು “ಹೋ, ಹೌದಲ್ಲವೆ? ಅಂದರೆ ನಿಮ್ಮ ಒಡೆತನದ ನೀರು ಖರೀದಿಸಿದವನ ಬಾವಿಯಲ್ಲಿತ್ತಲ್ಲವೆ?” ಎಂದು ವಿಚಾರಿಸಿದರು. “ಹೌದು ಸ್ವಾಮಿ” ಎಂದ ಆಪಾದಿತನು ತಾನು ಗೆದ್ದೆನೆಂದು ಭಾವಿಸಿದ. ಮಂತ್ರಿಯ ಪ್ರಶ್ನೆಗೆ  “ನಾನು ನೀರನ್ನು ಮಾರದಿದ್ದಾಗ ಅದನ್ನು ಉಪಯೋಗಿಸುವುದರಲ್ಲಿ ತಪ್ಪೇನು?” ಎಂದು ಮರು ಪ್ರಶ್ನಿಸಿದ. ಆಗ ಮಂತ್ರಿವರ್ಯರು ತಾಳ್ಮೆಯಿಂದ, “ಅದು ಸರಿ. ಆದರೆ ಒಂದು ಸಮಸ್ಯೆ ಇದೆ. ನೀನು ಉಪಯೋಗಿಸುವುದು ನಿನ್ನ ನೀರೇ ಎಂದಿಟ್ಟುಕೊಳ್ಳೂಣ. ಆದರೆ ಅದು ಅವನ ಬಾವಿಯಲ್ಲಿ ಇದೆಯಲ್ಲವೆ? ಅದಕ್ಕೆ ನೀನು ಬಾಡಿಗೆ ಕೊಟ್ಟಿದ್ದೀಯಾ? ನಿನ್ನ ನೀರನ್ನು ಅವನು ಯಾಕೆ ನಿನಗೆ ಉಳಿಸಿ ಕೊಡಬೇಕು? ಅವನಿಗೆ ಇನ್ನೂರು  ವರಹ ಬಾಡಿಗೆ ಕೊಡು” ಎಂದರು. ಮಂತ್ರಿಯ ಬುದ್ಧಿವಂತಿಕೆಗೆ ಸಭಾಸದರು ಬೆರಗಾದರು. ಆಪಾದಿತನು ಈಗ ಪೆಚ್ಚಾದ. “ನನ್ನದು ತಪ್ಪಾಯಿತು ಸ್ವಾಮಿ” ಎಂದು ಕ್ಷಮೆ ಕೇಳಿದ. “ಇನ್ನೂರು ವರಹ ಕೊಡುವ ಶಿಕ್ಷೆ ನೀಡಬೇಡಿ” ಎಂದು ಬೇಡಿಕೊಂಡ. ರಾಜನು ಮಂತ್ರಿಯ ಬುದ್ಧಿವಂತಿಕೆಗೆ ಮೆಚ್ಚಿ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿದ್ದಕ್ಕೆ ಪುರಸ್ಕಾರ ನೀಡಿದ. ಜನರಿಗೂ ಸಂತೋಷವಾಯಿತು. ಬಾವಿ ಖರೀದಿಸಿದವನು ರಾಜನಿಗೂ ಮಂತ್ರಿಗೂ ಧನ್ಯವಾದ ಹೇಳಿದ. ಬಾವಿಯನ್ನು ಮಾರಿದವರು ತನ್ನ ತಪ್ಪಿಗೆ ಮರುಗಿದ. ಹೀಗೆ ಸಮಸ್ಯೆ ಬಗೆಹರಿದು ಪ್ರಕರಣ ಸುಖಾಂತ್ಯವಾಯಿತು.
ಬುದ್ಧಿವಂತಿಕೆಯ ಇಂತಹ ಕಥೆ ಮಕ್ಕಳ ಮನಸ್ಸನ್ನು ಮುಟ್ಟುತ್ತದೆ. ಇದು ಯಾವ ಕಾಲದಲ್ಲಿ ಯಾರಿಂದ ಹೇಳಲ್ಪಟ್ಟಿತು ಎಂಬ ಮಾಹಿತಿ ಸಿಗುವುದಿಲ್ಲ. ಅದನ್ನು ಅಕ್ಬರನ ಆಸ್ಥಾನದಲ್ಲಿದ್ದ ಬೀರಬಲ್ಲನ ಕಥೆಗಳಲ್ಲೂ ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮನ ಕಥೆಗಳಲ್ಲೂ ಕಾಣಬಹುದು. ಅದನ್ನು ಬಳಸಿಕೊಳ್ಳುವುದೇ ಅದರ ವಿಶಿಷ್ಟತೆ. ಶಿಕ್ಷಕರು ಅದರ ಲಾಭವನ್ನು ಪಡೆಯಬಹುದು. ಅವರು ಬಾವಿಯನ್ನು ಮಾರಿದವನಿಗೂ ಅದನ್ನು ಕೊಂಡುಕೊಂಡವನಿಗೂ ಏನಾದರೂ ಕಾಲ್ಪನಿಕ ಹೆಸರುಗಳನ್ನು ಕೊಡಬಹುದು. ಆಗ ಮಕ್ಕಳಿಗೆ ಕಥೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ. ಇದನ್ನು ಯಾವುದೇ ಕಾಲದ ಸಂದರ್ಭಕ್ಕೂ ಸೂಕ್ತವಾಗಿ ಪ್ರಸ್ತುತಪಡಿಸಬಹುದು. ಉದಾಹರಣೆಗೆ ಚಾಣಕ್ಯ ಸಿನೆಮಾದಲ್ಲಿ ಚಂದ್ರಗುಪ್ತನು ಇಂತಹದೇ ಒಂದು ದೂರನ್ನು ಇದೇ ರೀತಿಯಲ್ಲಿ ತೀರ್ಮಾನಿಸಿದ ಚಿತ್ರೀಕರಣ ನಡೆದಿದೆ. ಇಂದು ಈ ಕಥೆ ಹೇಳುವಾಗ  ಬೇಕಿದ್ದರೆ ಬಾವಿ ಮಾರಿದವನು ತನ್ನ ಪಂಪ್‍ನ್ನು ಬಳಸಿ ನೀರನ್ನು ತೆಗೆಯುತ್ತಿದ್ದ ಎಂದು ಆಧುನಿಕ ತಾಂತ್ರಿಕತೆಯ ಚಿತ್ರಣ ನೀಡಿ ಕಥೆಯನ್ನು ವಿವರಿಸಬಹುದು. ಇನ್ನು ಇದನ್ನು ಬಾವಿ ನೀರಿಗೆ ಬದಲಾಗಿ ಬೇರೆ ವ್ಯವಹಾರಗಳನ್ನು ಉಲ್ಲೇಖಿಸಿ ಕಥೆ ಹೇಳಬಹುದು. ಅದು ಶಿಕ್ಷಕರ ಸೃಜನಶೀಲತೆಯನ್ನು ಅವಲಂಬಿಸಿದೆ. ಅಂತೂ ಶಿಕ್ಷಕರು ಪರಿಣಾಮಕಾರಿಯಾಗಿ ಪಾಠ ಮಾಡಲು ಕಥೆಗಳನ್ನು ಬಳಸಿಕೊಳ್ಳುವುದು ಉಪಯುಕ್ತವಾಗುತ್ತದೆ.
ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸೇರಿದ ಬಿ.ಎಡ್. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದ ಬಳಕೆ ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ಇನ್ನೊಂದು ಕಥೆಯ ಮೂಲಕ ಹೇಳಿದೆ. ಅದು ಪರಿಣಾಮಕಾರಿಯಾಯಿತು. ನಾನು ಹೇಳಿದ ಕಥೆ ಹೀಗಿದೆ: ಮಳೆಗಾಲದಲ್ಲಿ ಹೊಳೆ ದಾಟಲು ಹಿಂದೆ ದೋಣಿಗಳ ಬಳಕೆ ಇತ್ತು. ಒಮ್ಮೆ ಒಬ್ಬ ಪಂಡಿತರಿಗೆ ಪ್ರವಾಹ ತುಂಬಿದ ಹೊಳೆಯನ್ನು ದಾಟಬೇಕಾಗಿತ್ತು. ಅಂಬಿಗ ಅವರನ್ನು ಕೂಡಿಸಿ ದೋಣಿ ನಡೆಸಿದ. ಸ್ವಲ್ಪ ದೂರ ಸಾಗಿದಾಗ ಪಂಡಿತರು ಅಂಬಿಗನಲ್ಲಿ ರಾಮಾಯಣ ಓದಿದ್ದೀಯಾ? ಎಂದರು. ಆತ “ಇಲ್ಲ ಸ್ವಾಮಿ” ಎಂದ. ಹಾಗಿದ್ದರೆ ನಿನ್ನ  ಕಾಲಂಶ ಜೀವನ ವ್ಯರ್ಥವಾಯ್ತು ಎಂದರು. ಅರ್ಧಾಂಶ ಹೊಳೆ ದಾಟುತ್ತಿದ್ದಂತೆ ಪಂಡಿತರು “ಮಹಾಭಾರತ ಓದಿದ್ದೀಯಾ?” ಎಂದರು. ಆತ “ಇಲ್ಲಾ ಸ್ವಾಮಿ” ಎಂದ. “ಹಾಗಿದ್ದರೆ ನಿನ್ನ ಅರ್ಧಾಂಶ ಜೀವನ ವ್ಯರ್ಥ” ಎಂದರು. ಮತ್ತೆ ಮುಂದುವರಿದು ಮುಕ್ಕಾಲಂಶ ಹೊಳೆ ದಾಟುತ್ತಿದ್ದಾಗ “ನೀನು ಭಗವದ್ಗೀತೆ ಓದಿದ್ದೀಯಾ?” ಎಂದು ಪಂಡಿತರು ಕೇಳಿದರು. ಆತ “ಇಲ್ಲ ಸ್ವಾಮಿ” ಎಂದ.  “ಹಾಗಿದ್ದರೆ ನಿನ್ನ ಮುಕ್ಕಾಲಂಶ ಜೀವನ ವ್ಯರ್ಥ” ಎಂದರು.  ಅಷ್ಟರಲ್ಲಿ ಜೋರು ಗುಡುಗು ಮಿಂಚು ಮತ್ತು ಮಳೆ ಆರಂಭವಾಯಿತು. ದೋಣಿ ಅಲ್ಲಾಡತೊಡಗಿತು. ಅದು  ಮಗುಚಿ ಬೀಳುವುದರಲ್ಲಿತ್ತು. ಆಗ ಅಂಬಿಗನು ಪಂಡಿತರಲ್ಲಿ “ನಿಮಗೆ ಈಜಲು ಬರುತ್ತದೆಯೇ” ಎಂದು ಕೇಳಿದ. ಅವರು “ಇಲ್ಲವಲ್ಲಾ?” ಎಂದರು. ಆಗ ಅಂಬಿಗನು “ಹಾಗಿದ್ದರೆ ನಿಮ್ಮ ಪೂರ್ತಿ ಜೀವನ ವ್ಯರ್ಥ” ಎಂದು ತಾನು  ಬದುಕಿಕೊಳ್ಳಲು ಹೊಳೆಗೆ ಹಾರಿದ. ಪಂಡಿತರು ಪ್ರವಾಹದ ಪಾಲಾದರು. ಅಂದರೆ ಎಷ್ಟೇ ಓದಿಕೊಂಡಿದ್ದರೂ ಪ್ರಾಯೋಗಿಕ ಬದುಕಿನ ಕಲಿಕೆ ಬೇಕಾಗುತ್ತದೆ ಎಂದು ಅರ್ಥ. ತಮ್ಮ ಪಾಠಗಳ ಎಡೆಯಲ್ಲಿ ಶಿಕ್ಷಕರು ಇಂತಹ ಕಥೆಗಳನ್ನು ಹೇಳಿ ಮಕ್ಕಳನ್ನು ಮುದಗೊಳಿಸಬಹುದು.
ಜಾಣ್ಮೆಗೆ ಸಂಬಂಧಿಸಿದಂತೆ ಗಣಪತಿ ದೇವರ ಒಂದು ಕಥೆ ಹೀಗಿದೆ. ಗಣಪತಿ ಮತ್ತು ಷಣ್ಮುಖ ಅಣ್ಣತಮ್ಮಂದಿರು. ಅವರಿಗೆ ಒಂದು ಸ್ಪರ್ಧೆ ಏರ್ಪಡುತ್ತದೆ. ಜಗತ್ತಿಗೆ  ಮೂರು ಪ್ರದಕ್ಷಿಣೆ ಹಾಕಿ ಯಾರು ವೇಗವಾಗಿ ಓಡಬಲ್ಲರು?  ಷಣ್ಮುಖ ತಕ್ಷಣ ವೇಗವಾಗಿ ಓಡತೊಡಗಿ ಮುಂದೆ ಹೋಗಿದ್ದ. ಗಣಪತಿಗೆ ವೇಗವಾಗಿ ಓಡುವುದು ಕಷ್ಟ. ಹಾಗಾಗಿ “ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ”ಎಂತ ಅಪ್ಪ ಅಮ್ಮನ ಸುತ್ತ ಮೂರು ಸುತ್ತು ಬಂದು “ನಾನೇ ಗೆದ್ದೆ” ಎಂದ.  ಜಗತ್ತಿಗೆ ಮೂರು ಸುತ್ತು ಮುಗಿಸಿದ ಷಣ್ಮುಖನಿಗೆ ಅಣ್ಣನ ಬುದ್ಧಿವಂತಿಕೆಯ ಪರಿಚಯವಾಯ್ತು. ಸುಲಭದ ದಾರಿ ಇರುವಾಗ ಸರಿಯಾಗಿ ಯೋಚಿಸದೆ ಕಷ್ಟ ಪಡುವುದು ವ್ಯರ್ಥವೆಂದು ಈ ಕಥೆ ಹೇಳುತ್ತದೆ. ಇದನ್ನು ಹೇಳಿದಾಗ ಮಕ್ಕಳು ಗಣಪತಿ ಷಣ್ಮುಖರನ್ನು ದೇವರೆಂದು ಭಾವಿಸದೆ ಸ್ಪರ್ಧಿಗಳೆಂದೇ ತಿಳಿಯುವುದರಿಂದ ಕಥೆಯ ಪರಿಣಾಮ ಸರಿಯಾಗಿ ಆಗುತ್ತದೆ.
ಹೀಗೆ ಹುಡುಕುತ್ತ  ಹೋದರೆ ಬುದ್ಧಿವಂತಿಕೆಯ ಅನೇಕ ಕಥೆಗಳು ಸಿಗುತ್ತವೆ. ಕಥೆಗಳಿಂದ ಮಕ್ಕಳಲ್ಲಿ ಚಿಂತನಶೀಲತೆಯನ್ನು ಸೃಜನಶೀಲತೆಯನ್ನು ಬೆಳೆಸಬಹುದಾಗಿದೆ. ಆದರೆ ಪರಿಣಾಮಕಾರಿಯಾಗಿ ಕಥೆ ಹೇಳುವ ಚಾತುರ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಕ್ರಮಬದ್ಧವಾಗಿ ಘಟನೆಗಳನ್ನು ಪೋಣಿಸಿ ಹೆಣೆದ ಕಥೆಗಳಷ್ಟೇ ಪರಿಣಾಮಕಾರಿಯಾಗಿರುತ್ತವೆ. ಸರಿಯಾಗಿ ಮಾತು ಕೇಳದ ಪುಂಡ ಹುಡುಗರನ್ನು ನಿಯಂತ್ರಿಸಲು ಪಂಚತಂತ್ರ ಕಥೆಗಳೇ ಹುಟ್ಟಿದುವು. ಹಾಗೆಯೇ ಶಿಕ್ಷಕರೂ ತಮ್ಮ ಸುತ್ತಲೂ ನಡೆಯುವ ಘಟನೆಗಳನ್ನೇ ಕಥೆಗಳಾಗಿ ಹೇಳಿ ಮಕ್ಕಳಲ್ಲಿ ಶಿಸ್ತು ಮತ್ತು ಅಧ್ಯಯನ ಶೀಲತೆಯನ್ನು ಬೆಳೆಸಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ
ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!
January 8, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror