ಸುಮಾರು 800 ಪುಟಗಳಷ್ಟು ವಿಸ್ತಾರವಾಗಿ ಬರೆದಿರುವ ಕೃತಿ “ಶ್ರೀಕೃಷ್ಣ ಚರಿತಾಮೃತ -ಕಾವ್ಯಮಾಲೆ”. ಇದರ ಕೃತಿಕಾರರು ನಿವೃತ್ತ ಮುಖ್ಯೋಪಾಧ್ಯಾಯರಾದಗೋಪಾಲ ಭಟ್ ಸಿಎಚ್. ಇದರ ವಿಶೇಷತೆ ಏನು ಎಂಬುದರ ಬಗ್ಗೆ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಇವರು ವಿವರಿಸಿದ್ದಾರೆ.
ಲೀಲಾ ಮೂರ್ತಿಯಾದ ಶ್ರೀ ಕೃಷ್ಣನ ಮಹಿಮೆಯನ್ನು ವಿದ್ವಾಂಸರು ಅವರವರ ಭಾವಕ್ಕೆ ಸರಿಯಾಗಿ ವ್ಯಾಖ್ಯಾನಿಸಿದ್ದಾರೆ.
ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೇ ಪರಿಪೂರ್ಣವೆಂದು ಪ್ರಾಜ್ಞರ ಅನಿಸಿಕೆ. ಅಂತಹ ಮಹಾಮಹಿಮನ ಚರಿತ್ರೆ ಒಂದು ಪುಣ್ಯ ಕಥನವೂ, ಭಕ್ತಿ ಸಾಹಿತ್ಯವು ಆಗಿದೆ. ಪಾಪ ಹಾರಕ ಮತ್ತು ಮಾರ್ಗದರ್ಶಕ ವಾಗಿರುವುದರಿಂದ ಅದಕ್ಕೆ ವಿಶೇಷ ಮಹತ್ವ. ಇಂತಹ ಕಥಾನಕವನ್ನು ಸುಮಾರು 800 ಪುಟಗಳಷ್ಟು ವಿಸ್ತಾರವಾಗಿ ಬರೆದಿರುವ ಕೃತಿ “ಶ್ರೀಕೃಷ್ಣ ಚರಿತಾಮೃತ -ಕಾವ್ಯಮಾಲೆ”. ಇದರ ಕೃತಿಕಾರರು ನಿವೃತ್ತ ಮುಖ್ಯೋಪಾಧ್ಯಾಯರಾದ ಗೋಪಾಲ ಭಟ್ ಸಿ ಎಚ್. ಇದು ಅವರ ಒಂದು ಉತ್ಕೃಷ್ಟವಾದ ಕೊಡುಗೆ. ಷಟ್ಪದಿ ರೂಪದಲ್ಲಿ ಸರಳವಾಗಿ ಓದಿಸಿಕೊಂಡು ಹೋಗುವ ಭಾಮಿನಿಯ ರೂಪದಲ್ಲಿದೆ.
ಒಟ್ಟು 172 ಖಂಡಗಳಲ್ಲಿ (ಅಧ್ಯಾಯಗಳಲ್ಲಿ) ರಚಿಸಲ್ಪಟ್ಟ ಈ ಸುದೀರ್ಘ ಚರಿತಾಮೃತ ಓದುಗ ಸ್ನೇಹಿಯಾಗಿರುವುದು ಕೃತಿಯ ಹೆಗ್ಗಳಿಕೆ. ಸರಳ ಕನ್ನಡದಲ್ಲಿ ಬರೆದಿರುವುದರಿಂದ ಹೆಚ್ಚಿನ ವಿದ್ವತ್ತನ್ನು ಬೇಡುವುದಿಲ್ಲ. ಭಾಷಾ ಚಮತ್ಕಾರ ವನ್ನು ಪ್ರಯತ್ನಪೂರ್ವಕವಾಗಿ ತುರುಕದಿರುವುದರಿಂದ ಸ್ವಾಭಾವಿಕವಾಗಿ ಮೂಡಿಬಂದಿದೆ.
ಈ ಕೃತಿಯ ಮಹತ್ತು ಎಂದರೆ ಅಧ್ಯಾಯ 144-161ರ ವರೆಗೆ ಭಗವದ್ಗೀತೆಯ ಅಷ್ಟಾದಶ ಅಧ್ಯಾಯಗಳು ಈ ಕೃತಿಯಲ್ಲಿ ಅಡಕವಾಗಿವೆ. ಕೃಷ್ಣಾಮೃತದಲ್ಲಿ ಕಲ್ಲುಸಕ್ಕರೆಯ ಸವಿಯು ಸೇರಿಕೊಂಡು ಸ್ವಾದಿಷ್ಟವಾಗಿದೆ.
ಗೋಪಾಲ್ ಭಟ್ ಸಿಎಚ್ ಅವರು ಪ್ರಕಾಶನ ಮಾಡಿದ ಈ ಕೃತಿಯ ಬೆಲೆ ರೂ 700. ಈ ಪತ್ರಿಕೆಯ ಓದುಗರಿಗೆ ಅಂಚೆ ವೆಚ್ಚ ಸೇರಿ ರೂ 500 ರಲ್ಲಿ ಪ್ರತಿಗಳನ್ನು 9745492565 ನಂಬರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.