ರಾಜ್ಯದ ಕೃಷಿ ಸಮಸ್ಯೆ, ಕೃಷಿಕರ ಸಂಕಷ್ಟದ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಧ್ವನಿ ಎತ್ತಿದರು. ರಾಜ್ಯದಲ್ಲಿ ಹೈನುಗಾರಿಕೆ, ಕಬ್ಬು, ಅಡಿಕೆ ಬೆಳೆಗಾರರು ಸೇರಿದಂತೆ ರೈತರು ಸಂಕಷ್ಟದಲ್ಲಿದ್ದಾರೆ. ಹೇಗೆ ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ರಾಜ್ಯದಲ್ಲಿ ಕುಂಠಿತಗೊಳ್ಳುತ್ತಿರುವ ಕೃಷಿ ಚಟುವಟಿಕೆಗಳು, ನಷ್ಟದಲ್ಲಿರುವ ರೈತರು, ಸಾಂಕ್ರಾಮಿಕ ರೋಗಗಳಿಂದ ಹಾನಿಗೀಡಾದ ಬೆಳೆಗಳು ಮತ್ತು ಅವುಗಳ ಬಗ್ಗೆ ಸರಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.
ಚರ್ಮಗಂಟು ರೋಗದಿಂದ 21,305 ಜಾನುವಾರು ಬಲಿಯಾಗಿವೆ. ಈ ರಾಸುಗಳಿಗೆ ತಕ್ಷಣ ಪರಿಹಾರ ನೀಡಬೇಕು.ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರ ರೈತರು ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡದಂತಾಗಿದೆ. ಗೋವುಗಳ ಮಾರಾಟ ಕೂಡಾ ಸಾಧ್ಯವಾಗುತ್ತಿಲ್ಲ. ಹೈನುಗಾರಿಕೆ ಸಂಕಷ್ಟದಲ್ಲಿದೆ ಎಂದರು.
ರಾಜ್ಯದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಾರೆ, ಸುಮಾರು 25 ಲಕ್ಷ ರೈತ ಕುಟುಂಬಗಳು ಇದರ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 6.5 ಕೋಟಿ ಟನ್ ಕಬ್ಬು ಉತ್ಪಾದನೆಯಾಗುತ್ತದೆ ಎಂದು ಸಿದ್ಧರಾಮಯ್ಯ ತಿಳಿಸಿದರು. 2022-23ರಲ್ಲಿ ಎಫ್‍ಆರ್‍ಪಿ ಬೆಲೆ 3050 ರೂ. ಆಗಿದೆ. ಇಳುವರಿ 10.25 ಎಂದು ನಿಗದಿ ಮಾಡಲಾಗಿದೆ. ಒಂದು ಕಡೆ ಇಳುವರಿಯನ್ನು ಹೆಚ್ಚಿಸಿ, ಮತ್ತೊಂದು ಕಡೆ ಸರ್ಕಾರ 150 ರೂ.ಹೆಚ್ಚಿಗೆ ನೀಡಿದೆ ಎಂದು ಪ್ರಚಾರ ಪಡೆಯುತ್ತಿದೆ. ಒಂದು ಟನ್ ಕಬ್ಬಿನಿಂದ 300 ಕೆ.ಜಿ.ಸಿಪ್ಪೆ ಸಿಗುತ್ತದೆ, ಕೋ ಜನರೇಷನ್ ಇದ್ದರೆ 140 ಯುನಿಟ್ ವಿದ್ಯುತ್ ಉತ್ಪಾದನೆ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಭೂತಾನ್, ಬರ್ಮಾ, ವಿಯಟ್ನಾಂ ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ 55 ಸಾವಿರ ರೂ.ಒಂದು ಕ್ವಿಂಟಾಲ್ ಗೆ ಇದ್ದ ಬೆಲೆ ಇಂದು 35 ಸಾವಿರ ದಿಂದ 40 ಸಾವಿರ ರೂ.ಗಳಿಗೆ ಇಳಿದಿದೆ ಎಂದು ಸಿದ್ದರಾಮಯ್ಯ ಹೇಳಿದರು. ಎಲೆಚುಕ್ಕಿ ರೋಗದಿಂದ ಬಾಧಿತವಾಗಿರುವ ಅಡಿಕೆ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು.ಭೂತಾನ್‌ನಿಂದ ಬರುತ್ತಿರುವ ಅಡಿಕೆಯನ್ನು ಕೂಡಲೇ ನಿಲ್ಲಿಸಬೇಕು. ಭೂತಾನ್ ಅಡಿಕೆಯ ಮುಂದೆ ರಾಜ್ಯದ ಅಡಿಕೆ ಬೆಳೆಗಾರರು ಸ್ಪರ್ಧೆ ಮಾಡಲು ಆಗುವುದಿಲ್ಲ. ಇಲ್ಲಿ ಖರ್ಚು ಜಾಸ್ತಿ ಎಂದರು. ಕಾಳು ಮೆಣಸು ಕೆ.ಜಿ 800 ರಿಂದ 500 ಕ್ಕೆ ಇಳಿದಿದೆ. ಇದನ್ನು ಕೂಡ ವಿಯೆಟ್ನಾಂ ಇಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಾಡಿನ ರೈತರು ವಿಯೆಟ್ನಾಂನ ಬೆಳೆಗಾರರ ಜೊತೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಇದನ್ನು ನಿಲ್ಲಿಸಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತದೆ. ದೇಶದ ಒಟ್ಟು ತೆಂಗು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು 31%. ತೆಂಗಿನ ಬೆಲೆ ಒಂದು ಕ್ವಿಂಟಾಲ್ ಗೆ 19,000 ಇತ್ತು, ಈಗ 11,000 ಕ್ಕೆ ಇಳಿದಿದೆ ಎಂದರು.
ರೋಗಗಳಿಂದ ನಷ್ಟಕ್ಕೀಡಾದ ತೊಗರಿ, ಅಡಿಕೆ, ರಾಗಿ, ಮೆಕ್ಕೆಜೋಳ ಮುಂತಾದ ಬೆಳೆಗಾರರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು. ಬೆಂಬಲ ಬೆಲೆ ಅಡಿ ಖರೀದಿಸುವ ಕೃಷಿ ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡಬೇಕು. ಸ್ವಾಮಿನಾಥನ್ ವರದಿಯನ್ನು ಯಥಾವತ್ತು ಜಾರಿ ಮಾಡಬೇಕು ಎಂದು ಅವರು ತಿಳಿಸಿದರು.
800ಕೋಟಿ ರೂ.ಮೊತ್ತದ ಕೃಷಿ ಭಾಗ್ಯ ಯೋಜನೆ, ಅರಿವು ಯೋಜನೆಗಳನ್ನು ನಿಲ್ಲಿಸಿರುವ ಸರ್ಕಾರ, ರೈತರ ಮಕ್ಕಳಿಗೆ 600 ಕೋಟಿ ರೂ.ಅನುದಾನದಲ್ಲಿ ವಿದ್ಯಾರ್ಥಿವೇತನ ನೀಡಿ ಕೃಷಿಗೆ ಒತ್ತು ನೀಡಿದ್ದೇವೆ ಎಂದು ಡೋಂಗಿ ಬಿಡುತ್ತಿದೆ ಎಂದು ಸಿದ್ಧರಾಮಯ್ಯ ಟೀಕಿಸಿದರು.