ಈಚೆಗಿನವರೆಗೂ ಕೃಷಿ ಒಂದು ಪರಂಪರೆಯಾಗಿ ಭಾರತದಲ್ಲಿ ಬೆಳೆದು ಬಂದಿತ್ತು, ಈಗಲೂ ಕೃಷಿ ಪರಂಪರೆಗೆ ಇಲ್ಲಿ ಮಹತ್ವ ಇದೆ. ಆದರೆ ಈಗ ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಿಕೊಳ್ಳುವುದು, ರೋಗಗಳ ನಿಯಂತ್ರಣ ಹಾಗೂ ಆದಾಯ ಅತೀ ಅಗತ್ಯವಾಗಿದೆ. ಕೃಷಿ ಉಳಿಸಿಕೊಳ್ಳಲು, ಯುವಜನತೆಯನ್ನು ಕೃಷಿಗೆ ಆಕರ್ಷಿಸಲು ಕೃಷಿಯಲ್ಲಿ ಹೊಸತನಗಳು, ಕೆಲವು ಹೊಸ ಅಂಶಗಳೂ ಪ್ರಮುಖವಾಗಿದೆ. ಹೀಗಾಗಿ ಈಗ ಅನುಭವ ಆಧಾರಿತ ಕೃಷಿಯಿಂದ ತಂತ್ರಜ್ಞಾನ ಆಧಾರಿತವಾಗಿ ಸ್ಮಾರ್ಟ್ ಫಾರ್ಮಿಂಗ್‌ಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫಾರ್ಮಿಂಗ್ ಬಹುಮುಖ್ಯವಾದ ಹೆಜ್ಜೆಯಾಗಲಿದೆ.…..ಮುಂದೆ ಓದಿ….
ಕೆಲವು ಸಮಯಗಳವರೆಗೆ ಗಿಡಗಳ ಬೆಳವಣಿಗೆ ನೋಡಿ, ವಾತಾವರಣದ ಬದಲಾವಣೆ ಗಮನಿಸಿ ಕೃಷಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿತ್ತು. ನೆಲದಲ್ಲಿ ಹಾತೆಗಳು ಕಂಡರೆ ಮಳೆಯ ನಿರೀಕ್ಷೆಯನ್ನು ಹೇಳುತ್ತಿದ್ದರು. ಗದ್ದೆಯಲ್ಲಿ ಸಣ್ಣ ಬದಲಾವಣೆ ಮುಂದಿನ ಕೃಷಿ ಪದ್ಧತಿಯ ಬಗ್ಗೆ ಹೇಳಲಾಗುತ್ತಿತ್ತು. ಒಂದು ಕಟಾವು ಬಳಿಕ ಎರಡನೇ ಬೆಳೆಯಾಗಿ ಬೇರೆಯೇ ಕೃಷಿಯನ್ನು ಮಾಡುತ್ತಿದ್ದರು, ಈ ಮೂಲಕ ರೋಗ ಅಥವಾ ಕೀಟಗಳ ನಿಯಂತ್ರಣ ಮಾಡುತ್ತಿದ್ದರು. ವಿಜ್ಞಾನದ ಭಾಷೆಯಲ್ಲಿ “ಕ್ರಾಪ್ ರೊಟೇಶನ್” ಮಾಡುತ್ತಿದ್ದರು. ಹೀಗೇ ಕೃಷಿಯಲ್ಲಿ “ಅನೇಕ ವರ್ಷಗಳ ಅನುಭವಗಳೇ” ಡಾಟಾಗಳಾಗುತ್ತಿದ್ದವು, ಕೃಷಿಕನ, ಕೃಷಿಕಾರ್ಮಿಕನ ಜಾಣ್ಮೆಯೇ ಟೆಕ್ನಾಲಜಿಯಾಗುತ್ತಿತ್ತು, ಕೃಷಿ ಸಮಸ್ಯೆಗಳಿಗೆ, ರೋಗಗಳಿಗೆ ಪರಿಹಾರಗಳು ಅನುಭವವೇ ಮದ್ದಾಗುತ್ತಿತ್ತು. ಈಗ ಅದೇ “ಸ್ಮಾರ್ಟ್ ಕೃಷಿ”ಯಾಗಿ ಬದಲಾಗುತ್ತಿದೆ. ಕೃಷಿ ಉತ್ಪಾದನೆಯಲ್ಲಿ ಸುಸ್ಥಿರತೆಯನ್ನು ಹೊಂದಲು ಹಾಗೂ ಕೃಷಿ ಸುಧಾರಣೆಗೆ ಸುಧಾರಿತ ತಂತ್ರಜ್ಞಾನಗಳು ಮತ್ತು ಡೇಟಾ-ಚಾಲಿತ ಕೃಷಿ ಕಾರ್ಯಾಚರಣೆಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಸ್ಮಾರ್ಟ್ ಕೃಷಿಯಾಗಿದೆ. ಅಂದರೆ ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪನ್ನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯವಿರುವ ಮಾನವ ಶ್ರಮ ಅಥವಾ ಯಂತ್ರಗಳನ್ನು ಕೃಷಿಯಲ್ಲಿ ಬಳಕೆ ಮಾಡುವುದು ಮುಖ್ಯವಾಗಿದೆ.
ಸ್ಮಾರ್ಟ್ ಫಾರ್ಮಿಂಗ್ ಎನ್ನುವುದು ಆಧುನಿಕ ಕೃಷಿ ಪದ್ಧತಿ. ಯುವ ಕೃಷಿಕರನ್ನು ಸೆಳೆಯಲು ಇದೆಲ್ಲವೂ ಅಗತ್ಯ ಇದೆ ಕೂಡಾ. ಅಂದರೆ ಕೃಷಿಯಲ್ಲಿ ಸುಸ್ಥಿರತೆಯನ್ನು ಹೆಚ್ಚಿಸಲು ಸುಧಾರಿತ ತಂತ್ರಜ್ಞಾನಗಳನ್ನು ಇಲ್ಲಿ ಬಳಸಿಕೊಳ್ಳುತ್ತದೆ. ರೈತರು ಸಾಂಪ್ರದಾಯಿಕ ವಿಧಾನಗಳನ್ನು ಅವಲಂಬಿಸುವ ಬದಲು ಬೆಳೆಗಳನ್ನು ಬೆಳೆಯಲು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂವೇದಕಗಳು, ಡ್ರೋನ್‌ಗಳು, ಎಐ(AI) ಮತ್ತು ಸ್ವಯಂಚಾಲಿತ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ರೈತರಿಗೆ ಸಮಯವನ್ನು, ಹಣವನ್ನು ಉಳಿಸುತ್ತದೆ ಮತ್ತು ಅವರ ಇರುವ ಭೂಮಿಯಲ್ಲಿನ ಸಂಪನ್ಮೂಲಗಳ ಬಗ್ಗೆ ಹೆಚ್ಚು ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಸ್ಮಾರ್ಟ್ ಫಾರ್ಮಿಂಗ್ ನಲ್ಲಿ ದೈನಂದಿನ ಕೃಷಿ ಚಟುವಟಿಕೆಗಳಿಗೆ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಯಾಂತ್ರೀಕರಣದ ಬಳಕೆ ನಡೆಯುತ್ತದೆ. ರೈತರು ತಮ್ಮ ಬೆಳೆಗಳನ್ನು ಯಾವಾಗ ನೆಡಬೇಕು, ಯಾವಾಗ ನೀರು ಹಾಕಬೇಕು ಅಥವಾ ಕೊಯ್ಲು ಮಾಡಬೇಕು ಎಂಬುದನ್ನು ನಿರ್ಧರಿಸಲು ಇದು ಸೂಚಿಸುತ್ತದೆ.ಬೆಳೆಯ ರೋಗಗಳ ಬಗ್ಗೆ ಮಾಹಿತಿ ನೀಡುತ್ತದೆ, ಗಾಳಿ ಸುದ್ದಿಗಳಿಗೆ ಅಥವಾ ಅನಗತ್ಯವಾದ ಔಷಧಿ ಸಿಂಪಡಣೆಗಳಿಗೆ ಅವಕಾಶಗಳು ಕಡಿಮೆ ಇರುತ್ತದೆ. ಈ ತಂತ್ರಜ್ಞಾನವು ಆಯಾ ಕೃಷಿ ಪರಿಸರದ ಡೇಟಾ ಮತ್ತು ವಿವರಣೆಯನ್ನು ನೀಡುತ್ತದೆ. ಹೀಗಾಗಿ ರೈತರಿಗೆ ನಿರ್ಧಾರ ತೆಗೆದುಕೊಳ್ಳಲು, ಪೂರ್ವನಿರ್ಧರಿತವಾಗಿ ಯೋಚಿಸಲು ಸುಲಭವಾಗುತ್ತದೆ.
ಸ್ಮಾರ್ಟ್ ಕೃಷಿಯು ಪ್ರಮುಖವಾಗಿ ನೀರು, ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಡೀ ತೋಟಕ್ಕೆ ಕೀಟನಾಶಕ, ನೀರು ಹಾಯಿಸುವ ಬದಲಾಗಿ ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮಾತ್ರಾ ಅನ್ವಯವಾಗುವಂತೆ ಸಿಂಪಡಣೆ ಸಾಧ್ಯವಾಗುತ್ತದೆ. ಇಲ್ಲಿ ಉಪಗ್ರಹ ಚಿತ್ರದ ಮೂಲಕ, ರೈತರು ಮಣ್ಣಿನ ಪರಿಸ್ಥಿತಿಗಳನ್ನು , ಸಸ್ಯ ಆರೋಗ್ಯದ ಅಸ್ಥಿರತೆಗಳನ್ನು ಪತ್ತೆಹಚ್ಚಬಹುದು ಮತ್ತು ಆರಂಭಿಕ ಹಂತಗಳಲ್ಲಿ ಕೀಟಗಳ, ಕೀಟ ಬಾಧೆಯ, ರೋಗಗಳ ಬಗ್ಗೆ ಮಾಹಿತಿ ಪಡೆಯಬಹುದು. ಸ್ವಯಂ ಚಾಲಿತ ಯಂತ್ರಗಳಿದ್ದರೆ ಅವುಗಳನ್ನೂ ಈ ಸಮಯದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ರೋಗ ಬಾಧೆ ಕಂಡು ಬಂದ ತಕ್ಷಣವೇ ಸ್ವಯಂಚಾಲಿತವಾಗಿ ಆಯಾ ಪ್ರದೇಶದಲ್ಲಿ ಔಷಧಿ ಸಿಂಪಡಣೆ, ನೀರಿನ ಕೊರತೆಯಾದರೆ ಸ್ವಯಂಚಾಲಿತವಾಗಿ ನೀರನ್ನೂ ಹಾಯಿಸಬಹುದಾಗಿದೆ. ಈ ಹಂತದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ವ್ಯವಸ್ಥೆ ಇಲ್ಲಿ ಇನ್ನಷ್ಟೇ ಬರಬೇಕಿದೆ.
ವಿದೇಶಗಳಲ್ಲಿ ಕೃಷಿ ಯಂತ್ರಗಳ ಆವಿಷ್ಕಾರದ ವೇಳೆ ಈಗ ಚಾಲಕರಹಿತ ಯಂತ್ರಗಳು, ಜಿಪಿಎಸ್ ಅಳವಡಿಕೆ ಮೊದಲಾದ ವ್ಯವಸ್ಥೆಗಳ ಅಳವಡಿಕೆ ನಡೆಯುತ್ತಿದೆ. ಹೀಗಾಗಿ ಮಾನವ ರಹಿತವಾಗಿ ಕೊಯ್ಲು, ಸಿಂಪಡಣೆ , ರಸಗೊಬ್ಬರ ನೀಡುವುದು ಇತ್ಯಾದಿಗಳು ನಡೆಯುತ್ತದೆ. ಇದು ರೈತರು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಿಂದ ತಮ್ಮ ಹೊಲಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರಕ್ಕೆ ಪ್ರವೇಶ ಮಾಡುವ ದಿನಗಳು ಇನ್ನು ಹೆಚ್ಚು ದೂರವಿಲ್ಲ, ಹೊಸ ಕೃಷಿ ಯುವ ಜನರಿಗಾಗಿ ತೆರೆಯುತ್ತಿದೆ.
ಸ್ಮಾರ್ಟ್ ಕೃಷಿಯಲ್ಲಿ ಡೇಟಾಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಇಂತಿಷ್ಟು ಮಳೆಯಾದರೆ, ಇಂತಹ ಹವಾಮಾನದಲ್ಲಿ ರೋಗಗಳು ಬಾಧಿಸುತ್ತವೆ, ಇಳುವರಿ ಕುಸಿತವಾಗುತ್ತದೆ ಎನ್ನುವುದು ಡಾಟಾ ಆಧಾರಿತವಾಗಿರುತ್ತದೆ. ಸ್ವಯಂ ಚಾಲಿತ ಯಂತ್ರಗಳು ಡಾಟಾವನ್ನು ಸಂಗ್ರಹಿಸಿಡುತ್ತದೆ. ಹೀಗಾಗಿ ಮಣ್ಣಿನ ತೇವಾಂಶ, ತಾಪಮಾನ ಮತ್ತು ಬೆಳೆ ಆರೋಗ್ಯದ ಬಗ್ಗೆ ನಿಖರವಾದಾ ಡಾಟಾ ಇರಿಸಿಕೊಳ್ಳುತ್ತದೆ. ಇದು ನೀರಾವರಿ, ರಸಗೊಬ್ಬರ ಮತ್ತು ಕೀಟ ನಿಯಂತ್ರಣದ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಬೆಳೆ ನಷ್ಟವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಅತಿಯಾದ ನೀರಿನ ಬಳಕೆ, ಅತಿಯಾದ ರಾಸಾಯನಿಕ ಬಳಕೆಯನ್ನೂ ಕಡಿಮೆ ಮಾಡುತ್ತದೆ, ಮಣ್ಣಿನ ಆರೋಗ್ಯವನ್ನೂ ಹೆಚ್ಚು ಮಾಡಲು ನೆರವಾಗುತ್ತದೆ. ಆದರೆ ಇಲ್ಲೂ ಎರರ್ ಇಲ್ಲ ಎನ್ನಲು ಸಾಧ್ಯವಿಲ್ಲ. ಡಾಟಾಗಳ ಆಧಾರಿತವಾದ ಕೃಷಿಯಾದ್ದರಿಂದ ಪ್ರಕೃತಿಯ ವೈಪರೀತ್ಯಗಳಲ್ಲಿನ ವ್ಯತ್ಯಾಸ ಕೃಷಿಯ ಮೇಲೆ ಬೀಳಬಹುದು.
ವಿದೇಶಗಳಲ್ಲಿ ಸ್ಮಾರ್ಟ್ ಕೃಷಿ ತಂತ್ರಜ್ಞಾನಗಳಲ್ಲಿನ ಪ್ರಗತಿ ಹೆಚ್ಚಾಗಿದೆ. ಕೃಷಿಯನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ. ಈಗಾಗಲೇ ಭಾರತದಲ್ಲೂ ಅದರಲ್ಲೂ ಹಳ್ಳಿಗಳಲ್ಲಿ ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆಯ ಭಾಗವು ಕೃಷಿಕರ ಕೈಗೆ ತಲಪಿದೆ. ಮುಂದೆ ಸಾಕಷ್ಟು ಅವಕಾಶಗಳು ಇಲ್ಲೂ ಇದೆ. AI ತಂತ್ರಜ್ಞಾನಗಳು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ನಿರೀಕ್ಷೆಗಳು ಇದೆ.ಬಹುಮುಖ್ಯವಾಗಿ ಹವಾಮಾನ ಮಾಹಿತಿ ಹಾಗೂ ಆರಂಭಿಕ ಹಂತದಲ್ಲಿ ಬೆಳೆಗಳಲ್ಲಿನ ರೋಗ ಪತ್ತೆ ಹಚ್ಚುವಿಕೆ, ನೀರಾವರಿಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯವಿದೆ.ಇದರ ಜೊತೆಗೆ ರೊಬೊಟಿಕ್ , ಡ್ರೋನ್ ಆಧಾರಿತ ಕೃಷಿ ವ್ಯವಸ್ಥೆ ವೇಗವನ್ನು ಪಡೆಯುತ್ತಿದೆ.
ಸ್ಮಾರ್ಟ್ ಕೃಷಿಯಲ್ಲಿ ಹೊಸಹೊಸ ತಂತ್ರಜ್ಞಾನಗಳು ಬರುತ್ತಿವೆ. ಆದರೆ ಇಲ್ಲಿ ಇಂಟರ್ನೆಟ್ ಕೂಡಾ ಅಷ್ಟೇ ಅಗತ್ಯ ಇದೆ. ಭಾರತದಂತಹ ಹಳ್ಳಿಗಳಲ್ಲಿ ಇಂದಿಗೂ ಸಾಕಷ್ಟು ನೆಟ್ವರ್ಕ್ ಸಮಸ್ಯೆ ಇರುವುದು ಈ ತಂತ್ರಜ್ಞಾನ ವೇಗ ಪಡೆಯದೇ ಇರಲು ಇಲ್ಲಿ ಕೊರತೆಯಾಗಬಹುದು. ಆದರೆ ಈ ಸವಾಲುಗಳನ್ನು ದಾಟಿ ಸ್ಮಾರ್ಟ್ ಕೃಷಿಯು ಮುಂದಿನ ದಿನಗಳಲ್ಲಿ ಕ್ರಾಂತಿಯನ್ನು ಮಾಡುವ ಸಾಧ್ಯತೆ ಇದೆ.
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಮಹಾರಾಷ್ಟ್ರದ ಅಹಲ್ಯಾನಗರದಿಂದ ಅಮೆರಿಕದ ನ್ಯೂಯಾರ್ಕ್ಗೆ 14 ಟನ್ಗಳಷ್ಟು ಭಾರತೀಯ ದಾಳಿಂಬೆಯನ್ನು ರಫ್ತು ಮಾಡಲಾಗಿದೆ.…