ಯಾವುದೇ ಕಾರ್ಯಕ್ರಮವಿರಲಿ(Function) ಯಾವುದೇ ವೇದಿಕೆ(Stage) ಇರಲಿ ಮಾತೆತ್ತಿದರೆ “ಸಮಾನತೆ”(Equality) ಎಂಬ ಪದವನ್ನು ಬಳಸುವುದು ಇತ್ತೀಚೆಗೆ ಸರ್ವೇಸಾಧಾರಣವಾಗಿದೆ. ಅಂದು ಬ್ರಿಟಿಷರಿಂದ(British) ಸ್ವಾತಂತ್ರ್ಯ(Freedom) ಸಿಕ್ಕರೆ ಸಾಕಾಗಿತ್ತು. ನಂತರ ಪ್ರಜಾಪ್ರಭುತ್ವ(Democracy) ಬಂತು. ರಾಜಪ್ರಭುತ್ವದಲ್ಲಿ ಭರತಖಂಡದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಧರ್ಮಗಳು ಉಚ್ಛ್ರಾಯಗೊಂಡಿದ್ದವು…. ಆದರೂ ನಾವು ಇಂದಿಗೂ ನಾವು ರಾಜ ಪ್ರಭುತ್ವವನ್ನು ಹಳಿಯುತ್ತೇವೆ. ಈ ಪ್ರಜಾಪ್ರಭುತ್ವ ಬಂದು ಏನನ್ನೂ ಸಾಧಿಸಲಾಗದಿದ್ದರೂ ಪ್ರಜಾಪ್ರಭುತ್ವವು ದೇಶದ ದೊಡ್ಡ ಮೌಲ್ಯ ಎಂಬಂತೆ ಮಾತನಾಡುತ್ತೇವೆ.
ಪ್ರಜಾಪ್ರಭುತ್ವ, ಸಂವಿಧಾನ, ಮತದಾನ ಯಾವುದೂ ಇಲ್ಲದ ಇನ್ನೂ ರಾಜಪ್ರಭುತ್ವವೇ ಇರುವ ದುಬೈನ ರಸ್ತೆಯಲ್ಲಿ ಹುಡುಕಿದರೂ ಒಂದು ಕಸದ ತುಂಡು ಸಿಗುವುದಿಲ್ಲ..ಅಲ್ಲಿ ಟ್ರಾಫಿಕ್ ಜಾಮ್, ಓವರ್ ಟೇಕಿಂಗ್, ಕಂಡಕಂಡಲ್ಲಿ ವಾಹನ ಪಾರ್ಕಿಂಗ್, ಸಿಕ್ಕಲ್ಲೆಲ್ಲಾ ಉಗಿಯುವುದು.. ಪ್ಲಾಸ್ಟಿಕ್ ಎಸೆಯುವುದು…
ಇದಾವ ಅನಾಗರಿಕ ವರ್ತನೆಗಳೂ ಅಲ್ಲಿ ಕಾಣಬರುವುದಿಲ್ಲ. ರಸ್ತೆಯಲ್ಲಿ ಯಾವುದೇ ಪೋಲಿಸ್ ಇರುವುದಿಲ್ಲ. ಅಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ನಿಯಮವನ್ನು ಜನರು ಚಾಚೂ ತಪ್ಪದೇ ಪಾಲಿಸುತ್ತಾರೆ.ಈ ನಾಗರಿಕ ಪ್ರಜ್ಞೆಯಿಂದ ಅಲ್ಲಿ ಟೂರಿಸಂ ದುಬೈ ದೇಶಕ್ಕೆ ಉತ್ತಮ ಆದಾಯ ತಂದುಕೊಡುತ್ತಿದೆ. ನಮ್ಮ ದೇಶದಲ್ಲಿ ನಾಗರಿಕ ಪ್ರಜ್ಞೆಯ ಕೊರತೆಯಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗಿ ಜನಜೀವನ ಕೊಳೆತು ನಾರುತ್ತಿದೆ. ಈ ದುರವಸ್ಥೆಗೆ ಬೇಜವಾಬ್ದಾರಿಯ ರಾಜಕಾರಣಿಗಳು ಹಾಗೂ ಬೇಜವಾಬ್ದಾರಿಯ ಜನರು ಇಬ್ಬರೂ ಕಾರಣ.
ಐದು ಸಾವಿರ ವರ್ಷದ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿ, ನಾಗರೀಕತೆ ಹೊಂದಿದ ಭಾರತ ಇಂದು ಜಗತ್ತಿಗೇ ಮಾದರಿಯಾಗಬೇಕಿತ್ತು. ಆದರೆ ಇಂದು ನಮ್ಮ ಸಂಸ್ಕೃತಿ-ಪರಂಪರೆಯನ್ನು ಕುರಿತು ಹೆಮ್ಮೆಪಡಬೇಕಾಗಿದ್ದ ನಾವೇ ಅವಹೇಳನಮಾಡಿ ಅಪಹಾಸ್ಯಕ್ಕೆ ಗುರಿಪಡಿಸುವ ದುಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ಭಾರತದ ಯಾವುದೇ ಮೂಲೆಯನ್ನು ನೋಡಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ಗಳ ತಿಪ್ಪೇಗುಂಡಿಯಾಗಿದೆ. ಹಾಗಾದರೆ ಇಷ್ಟು ವರ್ಷ ಪ್ರಜಾಪ್ರಭುತ್ವದಲ್ಲಿ ಓದಿ ದಂಟು ಕಡಿದ ಫಲಿತಾಂಶ ಏನೆಂದರೆ ಬೇಜವಾಬ್ದಾರಿ ಒಂದೇ. ಜಗತ್ತಿನ ಪ್ರಾಚೀನ ಜ್ಞಾನ ಭಂಡಾರಗಳಾದ ಭರತಖಂಡದ ವೇದ, ಉಪನಿಷತ್ತು, ರಾಮಾಯಣ ಮಹಾಭಾರತ ಗ್ರಂಥಗಳು ಉನ್ನತ ಸಂಸ್ಕೃತಿ- ಆದರ್ಶವನ್ನು ಸಾರುತ್ತಾ ಮನುಕುಲದ ಶ್ರೇಯಸ್ಸನ್ನೇ ಬಯಸುತ್ತವೆ. ಆದರೆ ಇದನ್ನು ಓದಿ ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲ ಜನರು ತಾವೂ ಅಪಾರ್ಥ ಕಲ್ಪಿಸಿ ಇನ್ನೊಬ್ಬರಿಗೂ ಅಪಪ್ರಚಾರ ಮಾಡುವ ಉಂಡ ದೇಶಕ್ಕೆ ದ್ರೋಹ ಬಗೆಯುವಷ್ಟು ಹೀನ ಮಟ್ಟಕ್ಕೆ ಇಳಿದಿರುವುದು ದೌರ್ಭಾಗ್ಯವಾಗಿದೆ.
ಸ್ವಾತಂತ್ರ್ಯಾನಂತರ ಕೆಳವರ್ಗದವರನ್ನು ಮುಂದೆ ತರಬೇಕೆಂಬ ವಿಶಿಷ್ಟ ಸರಕಾರೀ ಸೌಲಭ್ಯದ ಮೀಸಲಾತಿ ಎಂಬ ನೀತಿಯನ್ನು ಜಾರಿಗೆ ತರಲಾಯಿತು. ದೇಶವು ಜಾತ್ಯತೀತ ಎಂದಾದಮೇಲೆ ಜಾತಿ ಆಧಾರಿತ ಸೌಲಭ್ಯಗಳೇಕೆ?? ಮಾನವ ಧರ್ಮ ಎಂದಮೇಲೆ ಮಾನವೀಯತೆಯೇ ಇಲ್ಲದ ತಾರತಮ್ಯ, ಮುಂದುವರೆದವರೆಂದು ಹಣೇಪಟ್ಟಿ ಹೊತ್ತ ಕೆಲ ವರ್ಗದ ಮೇಲಿನ ಶೋಷಣೆ ಏಕೆ? ಅವರೂ ಮಾನವರಲ್ಲವೇ?? ಇದೆಲ್ಲಾ ಪ್ರಶ್ನೆಗಳಾಗಿಯೇ ಉಳಿಯುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳಾಗುತ್ತ ಬಂದರೂ ಇನ್ನೂ ಹಿಂದುಳಿದವರು ಮುಂದೆ ಬರಲಿಲ್ಲವೇ??? . ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮಾತೆತ್ತಿದರೆ “ನಮಗೆ ಆರ್ಥಿಕ.. ಶೈಕ್ಷಣಿಕ ..ಔದ್ಯೋಗಿಕ..ಸಾಮಾಜಿಕ ಸಮಾನತೆ”..ಬೇಕೆಂದು ಬೇಡುತ್ತಿದ್ದಾರೆ.
ಸಮಾನತೆ ಎನ್ನುವುದು ಯಾರಿಂದಲೋ ಕೇಳಿ ಪಡೆವ ವಸ್ತುವಲ್ಲ. ಅದನ್ನು ಪ್ರತಿಯೊಬ್ಬರೂ ತನ್ನ ಸ್ವಂತ ಪರಿಶ್ರಮ ಹಾಗೂ ಯೋಗ್ಯತೆಯಿಂದ ಸಂಪಾದಿಸಬೇಕು. ಕಷ್ಟಪಟ್ಟು ಓದಿದರೆ ಯಾರಿಗೂ ಶೈಕ್ಷಣಿಕ ಸಮಾನತೆ ಸಿಗುತ್ತದೆ…. ಪರಿಶ್ರಮದಿಂದ ಬೆವರು ಸುರಿಸಿ ದುಡಿದರೆ ಔದ್ಯೋಗಿಕ ಸಮಾನತೆ ಸಿಗುತ್ತದೆ…..
ಪ್ರಾಮಾಣಿಕತೆ, ಸತ್ಯ ಧರ್ಮ, ಸಂಸ್ಕಾರದಿಂದ ನಿಯತ್ತಾಗಿದ್ದರೆ ಸಾಮಾಜಿಕ ಗೌರವದ ಸಮಾನತೆ ತಂತಾನೇ ಬರುತ್ತದೆ. ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಕಳಕಳಿ, ಉತ್ತಮ ನಾಗರೀಕತೆ, ರಾಷ್ಟ್ರ ಭಕ್ತಿ ಇದ್ದರೆ ಸಮಾಜ ಹಾಗೂ ದೇಶ ಅಭಿವೃದ್ಧಿಯನ್ನು ಕಾಣುತ್ತದೆ. ರಾಷ್ಟ್ರದ ಒಳಿತಿಗಾಗಿ ವಿವೇಚನೆಯಿಂದ ಹೆಜ್ಜೆ ಇಡೋಣ ಅಲ್ಲವೇ???
( ಈ ಬರಹ ಸೋಶಿಯಲ್ ಮೀಡಿಯಾದಿಂದ ಬಳಸಿಕೊಂಡಿದೆ – ಬರಹಗಾರರ ಬಗ್ಗೆ ಮಾಹಿತಿ ಇಲ್ಲ )