ವೈಕುಂಠ ದ್ವಾರ ದರ್ಶನಕ್ಕಾಗಿ ಮುಗಿಬಿದ್ದು ಸರತಿಯ ಸಾಲನ್ನು ಮುರಿದು ಏರಿದ ಭಕ್ತರು ಉಂಟು ಮಾಡಿದ ಕಾಲ್ತುಳಿತದಿಂದಾಗಿ ಈ ವರ್ಷ (2025) ಜನವರಿ 8 ರಂದು ತಿರುಪತಿಯಲ್ಲಿ ಆರು ಭಕ್ತರು ಜೀವ ಕಳೆದುಕೊಂಡರು, ಇನ್ನು ಅನೇಕರು ಗಾಯಾಳುಗಳಾದರು. ವಿಶ್ವ ಟ್ರೋಫಿ ಗೆದ್ದ ಕ್ರಿಕೆಟ್ ಆಟಗಾರರನ್ನು ನೋಡಲು ಮುಗಿಬಿದ್ದ ಜನರ ಒತ್ತಡದಿಂದಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ವರ್ಷ ಜೂನ್ 4 ರಂದು ನಡೆದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಅಮಾಯಕರು ಜೀವ ಕಳೆದುಕೊಂಡರು. ಇನ್ನು ಅನೇಕರು ಗಾಯಾಳುಗಳಾಗಿ ಚಿಕಿತ್ಸೆಗೆ ಒಳಗಾದರು. ಇದೇ ಶನಿವಾರ (27-09-2025) ರಾತ್ರೆ ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ನಾಯಕನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳ ಒತ್ತಡದಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ನಲುವತ್ತಕ್ಕಿಂತಲೂ ಹೆಚ್ಚು ಮಂದಿ ನಾಗರಿಕರು ಜೀವ ಕಳೆದುಕೊಂಡರು. ಸಹಜವಾಗಿಯೇ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಗಾಯಾಳುಗಳಾಗಿ ಆಸ್ಪತ್ರೆ ಸೇರಿದರು. ಇದು ರೈಲು ಅಪಘಾತದ, ಬಾಂಬ್‍ನ ಭಯದ ಅಥವಾ ನೈಸರ್ಗಿಕ ವಿಪತ್ತಿನಿಂದಾಗಿ ಜನಸಮೂಹದ ಮೇಲೆ ಬಿದ್ದ ಒತ್ತಡವಲ್ಲ. ಬದಲಾಗಿ ತಾವೇ ಆರಾಧಿಸುವ ಮಾನವ ದೇವರನ್ನು ಕಣ್ತುಂಬಿಕೊಳ್ಳುವ ಸೆಳೆತಕ್ಕೊಳಗಾಗಿ ಜನರೇ ಜೀವ ಕಳೆದುಕೊಂಡ ಪ್ರಕರಣಗಳು. ಕಣ್ಣಾರೆ ಕಾಣಬೇಕೆಂಬ ಕ್ಷುಲ್ಲಕ ಕಾರಣವೊಂದು ಎಂತಹ ದುರಂತಗಳಿಗೆ ಕಾರಣವಾಗುತ್ತದೆಂಬುದಕ್ಕೆ ಈ ಮೇಲಿನ ಮೂರು ಘಟನೆಗಳು ಉದಾಹರಣೆಗಳಾಗುತ್ತವೆ. ವಾಸ್ತವವಾಗಿ ಕಳೆದ ವರ್ಷ ಮತ್ತು ಈ ವರ್ಷ ನಮ್ಮ ದೇಶದ ಬೇರೆ ಬೇರೆ ಕಡೆಗಳಲ್ಲಿ ಕಾಲ್ತುಳಿತಗಳು ಸಂಭವಿಸಿವೆ.
ತಮಿಳುನಾಡಿನಲ್ಲಿ ಸಮಾಜಸೇವೆ ಮಾಡಿ ರಾಜಕಾರಣಿಗಳಾದವರನ್ನು ಹಿಂದಿಕ್ಕಿ ಸಿನೆಮಾ ನಟರಾಗಿ ಪ್ರಸಿದ್ಧಿ ಪಡೆದವರು ರಾಜಕೀಯಕ್ಕೆ ಇಳಿದಿರುವ ಪರಂಪರೆ ಕರುಣಾನಿಧಿ, ಎಂ.ಜಿ.ಆರ್, ಜಯಲಲಿತಾ, ರಜನೀಕಾಂತ್, ಕಮಲಹಾಸನ್ ಮುಂತಾದವರಿಂದ ಮುಂದುವರಿದಿದೆ. ಇವರು ಚುನಾವಣೆಗಳಲ್ಲಿ ವಿಫಲರಾದಾಗಲೂ ರಾಜಕೀಯವಾಗಿ ಸೋಲುವುದಿಲ್ಲ. ಏಕೆಂದರೆ ಸಿನೆಮಾ ತಾರೆಗಳಾಗಿ ಇವರು ಗಳಿಸಿದ ಹಣವೇ ಇವರ ಆರ್ಥಿಕ ಮೂಲವಾಗಿರುತ್ತದೆ. ಸಿನೆಮಾದ ಪಾತ್ರಗಳಲ್ಲಿ ಅವರು ಉಂಟುಮಾಡುವ ಪ್ರಭಾವವು ಅವರ ವೈಯಕ್ತಿಕ ಪ್ರಭಾವಳಿಯಾಗಿ ಪ್ರಸಿದ್ಧಿಗೆ ನೆರವಾಗುತ್ತದೆ. ರಾಜಕಾರಣಕ್ಕಿಳಿದ ಸಿನೆಮಾ ನಟರ ಈ ಸರಣಿಗೆ ಸೇರಿರುವ ಹೊಸ ಮುಖವೆಂದರೆ ‘ತಮಿಳಿಗ ವೆಟ್ಟಿ ಕಳಗಂ’ (ಟಿ.ಎ.ಕೆ) ಪಕ್ಷವನ್ನು ಸ್ಥಾಪಿಸಿರುವ ವಿಜಯ್.
ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಪಕ್ಷವು ಅಭಿವೃದ್ಧಿಗಿಂತ ಹೆಚ್ಚಾಗಿ ಸ್ವಾರ್ಥ ಸಾಧನೆಯಲ್ಲಿ ಮುಳುಗಿದಾಗ ನಿಸ್ವಾರ್ಥ ಸೇವೆಯ ಟಾನಿಕ್ ಹಿಡಿದುಕೊಂಡು ಹೊಸ ಸಿನೆಮಾನಟರು ಪ್ರಚಾರದ ವೇದಿಕೆಗಳನ್ನು ಏರುತ್ತಾರೆ. ಅವರನ್ನು ಕಣ್ಣಾರೆ ಕಂಡು ಸಂತೋಷಪಡಲು ಜನ ಬಯಸುತ್ತಾರೆ. ಈ ಬಯಕೆಯನ್ನು ಉದ್ದೀಪನಗೊಳಿಸಿಕೊಂಡು ತಮ್ಮ ಮತಗಳಾಗಿ ಪರಿವರ್ತಿಸಲು ಹೊಸ ನಾಯಕರು ಬಯಸುತ್ತಾರೆ. ಖರ್ಚು ಮಾಡಲು ಅವರಲ್ಲಿ ಹಣವಿರುತ್ತದೆ. ಹೀಗೆ ಖರ್ಚು ಮಾಡಿದ ಹಣವನ್ನು ಅಧಿಕಾರಕ್ಕೇರಿದ ಕೂಡಲೇ ಮತ್ತೆ ಪಡೆಯಲು ಅವರಲ್ಲಿ ಮಾರ್ಗಗಳಿರುತ್ತವೆ. ಇದ್ಯಾವುದೂ ಅಮಾಯಕ ಮತದಾರರಿಗೆ ತಿಳಿಯುವುದಿಲ್ಲ. ಅವರು ವಶೀಕರಣಕ್ಕೆ ಒಳಗಾದವರಂತೆ ರಾಜಕೀಯ ರ್ಯಾಲಿಗಳ ಭಾಗವಾಗಿ ಬಿಡುತ್ತಾರೆ. ಅಲ್ಲಿಂದ ಬದುಕಿ ಬಂದರೆ ಭಾಗ್ಯವೆಂದು ತಿಳಿಯುತ್ತಾರೆ. ಅಲ್ಲಿ ಬಲಿಯಾದರೆ ಅದು ಅವರದ್ದೇ ಗೋಳು ಆಗಿ ಬಿಡುತ್ತದೆ. ಅಂತಹ ಪ್ರಕರಣ ಇದೇ ಸೆಪ್ಟಂಬರ್ 27 ರಂದು ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ಜರಗಿತು. ಟಿ.ಎ.ಕೆ. ಪಕ್ಷವು ಏರ್ಪಡಿಸಿದ 10,000 ಜನರ ನಿರೀಕ್ಷೆಯ ರ್ಯಾಲಿಗೆ ಸುಮಾರು 30,000 ಜನ ಬಂದು ನಿಲ್ಲುವುದಕ್ಕೇನೇ ಸ್ಥಳವಿಲ್ಲದೆ ಕಾಲ್ತುಳಿತ ಸಂಭವಿಸಿ ಮೃತಮಟ್ಟವರ ಸಂಖ್ಯೆ 40 ದಾಟಿದ್ದು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡವರಲ್ಲಿ ಮೃತರಾಗುವ ಸಂಭವನೀಯತೆ ಇನ್ನೂ ಇದೆ. ಆರಂಭದ ಲೆಕ್ಕಾಚಾರ ಪ್ರಕಾರ ಮೃತರಲ್ಲಿ 13 ಪುರುಷರು, 17 ಮಹಿಳೆಯರು ಮತ್ತು 10 ಮಕ್ಕಳು ಇದ್ದರು. ವಿಜಯ್‍ರನ್ನು ಕಾಣುವ ಸಂಭ್ರಮಕ್ಕಾಗಿ ಬಂದವರು ಶೋಕಸಾಗರದಲ್ಲಿ ಮುಳುಗಿದ್ದು ವಿಪರ್ಯಾಸ. ಈ ನವರಾತ್ರಿಯ ನಡುವಿನ ಶನಿವಾರದ ಸಂಜೆಯು ಕರೂರಿನಲ್ಲಿ ಕರಾಳ ರಾತ್ರೆಯೆನ್ನಿಸಿ ಬಿಟ್ಟಿತು.
ಸಾವಿರಾರು ಜನರನ್ನು ಒಂದೆಡೆ ಸೇರಿಸಲು ಹಮ್ಮಿಕೊಂಡ ರ್ಯಾಲಿಗಳು ಸಮಯಕ್ಕೆ ಸರಿಯಾಗಿ ಆರಂಭವಾಗುವುದಿಲ್ಲವೆಂಬುದು ಗೊತ್ತಿದ್ದದ್ದೇ. ಮಧ್ಯಾಹ್ನ 12 ಗಂಟೆಗೆ ನಡೆಸಲು ಉದ್ದೇಶಿಸಿದ ಈ ಕಾರ್ಯಕ್ರಮವು ವಿಜಯ್ ಬರುವುದು ತಡವಾಗಿ ಆರು ಗಂಟೆಗಳಷ್ಟು ಕಾಲ ಮುಂದೆ ಹೋದಾಗ ಬಂದ ಜನರು ಮನೆಗೆ ಮರಳದಿದ್ದುದು ವಿಶೇಷವೇ. ಹಸಿವು ಬಾಯಾರಿಕೆಯಿಂದ ಬಳಲುತ್ತಿದ್ದರೂ ಅವರು ಕಾದು ಕುಳಿತಿದ್ದಾರೆಂದರೆ ಅವರನ್ನು ಹಿಡಿದಿಟ್ಟ ಆಕರ್ಷಣೆ ಯಾವುದು ಎಂಬುದು ಒಂದು ಪ್ರಶ್ನೆಯೇ. ಅಷ್ಟೇ ಅಲ್ಲದೆ, ಸಮಯ ಕಳೆದಂತೆ ಜನ ಮತ್ತೆ ಬಂದು ಸೇರಿ 10,000 ಇರಬೇಕಾದ್ದು 30,000 ಕ್ಕೇರಿದ್ದರು. ತಮಿಳುನಾಡಿನಲ್ಲಿ ಯಾವುದೇ ಪಕ್ಷ ರ್ಯಾಲಿ ನಡೆಸಿದರೂ ಹೀಗೆ ಸಾವಿರಾರು ಜನ ಸೇರುವುದನ್ನು ಕಂಡಾಗ ಅಲ್ಲಿಯ ಸಿನೆಮಾ ನಟರು ಅದೆಂತಹ ಆಕರ್ಷಣೆ ಹುಟ್ಟಿಸಿರುತ್ತಾರೆ ಎಂಬುದು ಅಚ್ಚರಿಯಾಗುತ್ತದೆ. ಆ ದಿನ ಸಮಯ ಕಳೆಯುತ್ತ ರಾತ್ರಿಯಾಗುತ್ತಿದ್ದಂತೆ ಕಾಯುತ್ತಿರುವ ಜನರಲ್ಲಿ ಆತಂಕ, ಅಸಹನೆಗಳು ಹೆಚ್ಚುತ್ತಿದ್ದುದು ಸಹಜ. ಸಾಮಾನ್ಯವಾಗಿ ಯಾವುದೇ ಕಾಲ್ತುಳಿತದ ಪ್ರಕರಣಗಳಲ್ಲಿ ಇದು ಸಂಭವಿಸಿದೆ. ಇದೆಲ್ಲ ಗೊತ್ತಿದ್ದೂ ತಾವು ಅಂತಹ ಜನಸಂದಣಿಯ ಭಾಗವಾಗಿ ಸಂಕಷ್ಟಕ್ಕೆ ಈಡಾಗಲು ಜನರು ಯಾಕೆ ಬಯಸುತ್ತಾರೆಂಬುದು ವಿಶ್ಲೇಷಿಸಬೇಕಾದ ವಿಷಯ.
ಇಂದಿನ ಟಿ.ವಿ. ಚ್ಯಾನೆಲ್‍ಗಳ ಪ್ರಸಾರ ವ್ಯಾಪ್ತಿಯು ಆಗಾಧವಾಗಿ ವಿಸ್ತಾರವಾಗಿರುವಾಗ ಅಭಿಮಾನಿಗಳು ರ್ಯಾಲಿಗೆ ಹೋಗದೆ ಮನೆಯಲ್ಲೇ ಕುಳಿತು ವಿಜಯ್ ಭಾಷಣವನ್ನು ಕೇಳಬಹುದಾಗಿತ್ತು. ಅಲ್ಲಿಂದಲೇ ಆತನನ್ನು ನೋಡಬಹುದಾಗಿತ್ತು. ಬಹಳ ಹಿಂದೆಯೇ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಹಂಚಿದ ಕಲರ್ ಟಿ.ವಿ.ಗಳು ಉಳಿದಿವೆಯೇ ಗೊತ್ತಿಲ್ಲ. ಆದರೆ ಈಗ ಸಾಧಾರಣವಾಗಿ ಮನೆ ಮನೆಯಲ್ಲಿ ಹಾಗೂ ನೆರೆಹೊರೆಯಲ್ಲಿ ಟಿ.ವಿ. ಗಳು ವ್ಯಾಪಿಸಿವೆ. ತಮಿಳಿನಲ್ಲಿಯಂತೂ ರಾಜಕಾರಣಿಗಳ ಚ್ಯಾನಲ್‍ಗಳೇ ಇವೆ. ಅವರ ಕಾರ್ಯಕ್ರಮಗಳೇ ರಾಶಿರಾಶಿಯಾಗಿ ಬರುತ್ತಿವೆ. ಹಾಗಾಗಿ ಯಾವುದು ಮನೆಯಲ್ಲಿದ್ದೇ ಸಾಧ್ಯವಿತ್ತೋ ಅದರಲ್ಲಿ ತೃಪ್ತಿ ಕಾಣದಂತಹ ಮಾನಸಿಕ ಸ್ಥಿತಿ ಎಂಥದದು?
“ದೇವರ ದರ್ಶನ” ಎಂಬ ಪರಿಕಲ್ಪನೆ ನಮ್ಮ ಸಂಸ್ಕೃತಿಯಲ್ಲಿದೆ. ‘ಸಾಕಾರ ಆರಾಧನಾ ಕ್ರಮದ’ ಮೂರ್ತಿಪೂಜೆಯು ದೇವರ ದರ್ಶನದ ಪರಿಕಲ್ಪನೆಯನ್ನು ಬಲಗೊಳಿಸುತ್ತದೆ. ಹಾಗಾಗಿಯೇ ಪ್ರಸಿದ್ಧ ದೇವಾಲಯಗಳಲ್ಲಿ ದೀರ್ಘವಾದ ಸರತಿಯ ಸಾಲುಗಳಲ್ಲಿ ನಿಂತು ಗಂಟೆಗಟ್ಟಲೆ ಸಾಗಿ ಕ್ಷಣ ಮಾತ್ರದಲ್ಲಿ ಮೂರ್ತಿಯನ್ನು ಕಂಡು ಬಂದರೂ ಭಕ್ತರು ದೇವರನ್ನು ಕಂಡ ಸಾರ್ಥಕತೆಯನ್ನು ವ್ಯಕ್ತಪಡಿಸುತ್ತಾರೆ. ನಮ್ಮ ಪುರಾಣಗಳಲ್ಲಿ ದೇವರು ಪ್ರತ್ಯಕ್ಷರಾಗುವುದು, ಅದೃಶ್ಯರಾಗುವುದು, ಮಾಯಾವಿದ್ಯೆ, ಶಾಪ, ಪ್ರತಿಶಾಪ, ಬಹುದೇವತಾರಾಧನೆ, ದೇವತೆಗಳಲ್ಲಿ ಸಂಘರ್ಷ, ದೇವ-ದೇವಿಯರ ನಡುವಿನ ಜಿದ್ದಾಜಿದ್ದಿ ಮುಂತಾದುವುಗಳು ದೇವಲೋಕವನ್ನು ಮಾನವಲೋಕದ ಪ್ರತಿರೂಪವಾಗಿ ಚಿತ್ರಿಸಿರುವ ವರ್ಣನೆಗಳನ್ನು ಸಾಕಷ್ಟು ಕೇಳಿರುತ್ತೇವೆ. ಹಾಗಾಗಿ ನಮ್ಮ ಸಿನೆಮಾ ನಟರು ಹಾಗೂ ಕ್ರಿಕೆಟ್ ಕಲಿಗಳನ್ನು ದೇವರುಗಳಂತೆ ದೃಶ್ಯಮಾಧ್ಯಮಗಳಲ್ಲಿ ಹೊಗಳುವುದು ಜನರಲ್ಲಿ ಆರಾಧ್ಯ ಭಾವವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಇಂತಹ ಆರಾಧ್ಯ ವ್ಯಕ್ತಿಗಳು ತಮ್ಮೂರಿಗೆ ಬಂದಾಗ ಜನಸಾಮಾನ್ಯರು ಅವರನ್ನು ಕಣ್ಣಾರೆ ಕಾಣಲು ಬಯಸುತ್ತಾರೆ. ಆದರೆ ಚಿತ್ರ ಪರದೆಯ ಮೇಲೆ ಅವರ ಪಾತ್ರನಿರ್ವಹಣೆಗೂ ನಿಜಜೀವನದ ವ್ಯವಹಾರ ಮತ್ತು ಮೌಲ್ಯಗಳಿಗೂ ವ್ಯತ್ಯಾಸವಿದೆಯೆಂಬುದನ್ನು ಜನರು ತಿಳಿದುಕೊಳ್ಳಬೇಕು. ಅವರೂ ತಮ್ಮ ಸ್ವಾರ್ಥಕ್ಕಾಗಿ ಆಮಿಷಗಳನ್ನು ಒಡ್ಡುತ್ತಿದ್ದಾರೆಂಬ ವಾಸ್ತವವನ್ನು ಜನರು ತಿಳಿದುಕೊಳ್ಳುವುದು ಅಗತ್ಯ. ಮಂತ್ರದಂಡದಿಂದ ಹಣ್ಣನ್ನು ಉದುರಿಸಲು ಯಾರಿಗೂ ಸಾಧ್ಯವಿಲ್ಲ. ಎಲ್ಲವನ್ನು ಕಾನೂನಿನ ಪ್ರಕಾರ ನಿರ್ವಹಿಸಬೇಕು. ಅಂತಹ ನಿರ್ಬಂಧಗಳ ನಡುವೆ ನೀಡಿದ ಭರವಸೆಗಳನ್ನು ಈಡೇರಿಸಲು ಯಾವ ದೇವರಿಗೂ ಸಾಧ್ಯವಿಲ್ಲ. ಈ ವಾಸ್ತವವನ್ನು ತಿಳಿದುಕೊಳ್ಳುವಷ್ಟು ನಮ್ಮ ಜನರು ಜಾಣರಾಗುವ ತನಕ ಕಾಲ್ತುಳಿತಗಳಿಗೆ ಬಲಿಯಾಗುವ ವಾರ್ತೆಗಳು ಬರುತ್ತಲೇ ಇರುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


