ತಂಬುಳಿ ತಂಬುಳಿ....(Tambli) ತಂಬುಳಿ ಇದ್ದರೆ ಅದೊಂದು ಸೂಪರ್ ಊಟ…! ಅದು ಅಮೃತಕ್ಕೆ ಸಮಾನ. ಯಾರನ್ನಾದರೂ ಊಟಕ್ಕೆ ಕರೆಯುವುದಾದ್ರೆ ಒಂದು ಅನ್ನ(Rice)- ತಂಬ್ಳಿ ಮಾಡಿದರೆ ಅಲ್ಲಿಗೆ ಮುಗೀತು… ಸೂಪರ್ ಊಟ ಅದು…. ಹಾಗಿದ್ದರೆ ತಕ್ಷಣದ ತಂಬುಳಿ ಯಾವುದು…? ಪರಿಣಾಮ ಏನು… ?
- ಜೀರಿಗೆ ಮೆಣಸಿನ ಕಾಳಿನ ತಂಬ್ಳಿ: ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬೇಕಿದ್ದರೆ ಚೂರು ಬೆಲ್ಲ ಹಾಕಿ.ಚಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ.ಜ್ವರ ಬಂದಾಗ ಒಳ್ಳೆಯದು.
- ಸಾಸಿವೆ ತಂಬ್ಳಿ : ಕಾಯಿತುರಿ ಜೊತೆ ಸಾಸಿವೆ, ಚೂರು ಒಣ ಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. ಅಜೀರ್ಣ ಆದಾಗ ಒಳ್ಳೆಯದು.
- ಓಂಕಾಳು ತಂಬ್ಳಿ: ಓಂಕಾಳು,ಚೂರು ಒಣಶುಂಠಿ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಹೊಟ್ಟೆ ಉಬ್ಬರ,ಆಮಶಂಕೆ ನಿವಾರಣೆಗೆ ಮನೆಮದ್ದು.
- ಓಂಕಾಳು ಜೀರಿಗೆ ತಂಬುಳಿ : ಓಂಕಾಳು ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ವಾಂತಿ ಇರುವಾಗ ಈ ತಂಬ್ಳಿ ಉಪಯುಕ್ತ.
- ಮೆಂತೆ ತಂಬ್ಳಿ :– ಮೆಂತೆ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಸ್ವಲ್ಪ ಬೆಲ್ಲ ಹಾಕಿ.ಅಥವಾ ಒಣಮೆಣಸಿನಕಾಯಿಮ, ಮೆಂತೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಜೀರ್ಣಶಕ್ತಿ ವೃದ್ಧಿಸುತ್ತದೆ.
- ಕೊತ್ತಂಬರಿ ತಂಬ್ಳಿ :- ಕೊತ್ತಂಬರಿ ಬೀಜ ಇಂಗು ಕರಿಬೇವು ಒಣಮೆಣಸಿನಕಾಯಿ ಹುರಿದು ಕಾಯಿತುರಿ ಜೊತೆ ರುಬ್ಬಿ ಹುಣಸೆ ಹಣ್ಣು ಉಪ್ಪು ಹಾಕಿ.ಅಥವಾ ಕೊತ್ತಂಬರಿ ಬೀಜ ಇಂಗು ಕರಿಬೇವು ಹಸಿಮೆಣಸಿನ ಕಾಯಿ ಹುರಿದು ಕಾಯಿತುರಿ ಜೊತೆ ರುಬ್ಬಿ ಉಪ್ಪು ಹಾಕಿ.ಈ ತಂಬ್ಳಿ ಅವಲಕ್ಕಿ ಜೊತೆ ತುಂಬಾ ರುಚಿ.ಅನ್ನದ ಜೊತೆಗೂ ರುಚಿ.
- ಕರಿಬೇವು ತಂಬ್ಳಿ :– ಕಾಯಿತುರಿ ಜೊತೆ ಕರಿಬೇವು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು..
- ಎಲವರಿಗೆ ತಂಬ್ಳಿ :- ಎಲವರಿಗೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪ ಹಾಕಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಸ್ವಲ್ಪ ಬೆಲ್ಲ ಹಾಕಿ ದ್ರೂ ರುಚಿ.ಚಳಿಗಾಲ, ಮಳೆಗಾಲ ದಲ್ಲಿ ಸ್ವಲ್ಪ ಬಿಸಿಮಾಡಿ.ಬಿ .ಪಿ.ಇದ್ದವರಿಗೆ ಒಳ್ಳೆಯದು.
- ವಿಟಾಮಿನ್ / ಚಕ್ರಮುನಿ ಸೊಪ್ಪುತಂಬ್ಳಿ :- ವಿಟಾಮಿನ್ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಚಳಿಗಾಲದಲ್ಲಿ ಮಳೆಗಾಲದಲ್ಲಿ ಬಿಸಿ ಮಾಡಿ ಉಣ್ಣಬಹುದು.
- ಬಿಲ್ವಪತ್ರೆ ಕುಡಿ ತಂಬ್ಳಿ :– ಕಾಯಿತುರಿ ಜೊತೆ ಬಿಲ್ವಪತ್ರೆ ಕುಡಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಿಪಿ, ಶುಗರ್ ಇದ್ದವರಿಗೂ ಒಳ್ಳೆಯದು.
- ನಿಂಬೆಕಾಯಿ ತಂಬ್ಳಿ :– ಕಾಯಿತುರಿ ಜೊತೆ ಕೊನೆಯ ಲ್ಲಿ ಲಿಂಬೆಹೋಳು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜೀರಿಗೆ ಒಗ್ಗರಣೆ ಹಾಕಿ. ಪಿತ್ತಕ್ಕೆ ಒಳ್ಳೆಯದು.
- ಒಂದೆಲಗದ ತಂಬ್ಳಿ :- ಕಾಯಿತುರಿ ಜೊತೆ ಸ್ವಚ್ಛ ಮಾಡಿದ ಒಂದೆಲಗದ ಗಡ್ಡೆ ಸಹಿತ ಎಲೆಗಳು ಜೀರಿಗೆ ಕಾಳುಮೆಣಸು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಸ್ವಲ್ಪ ಬೆಲ್ಲ ಹಾಕಿ. ಇದು ಬೇಸಿಗೆಯಲ್ಲಿ ತಂಪು ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಪರಿಣಾಮ ಬೀರುತ್ತದೆ.
- ಬಿಳೆಕುಸುಮಾಲೆಹೂವಿನ ತಂಬ್ಳಿ :- ಬಿಳೆಕುಸುಮಾಲೆ ಹೂ, ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಹೆಂಗಸರ ಮುಟ್ಟಿನ ತೊಂದರೆಗೆ ಒಳ್ಳೆಯದು.
- ಪಾಲಕ್ ಸೊಪ್ಪು ತಂಬ್ಳಿ :- ಪಾಲಕ್ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ದೇಹಕ್ಕೆ ತಂಪು.
- ಮೆಂತೆ ಸೊಪ್ಪಿನ ತಂಬ್ಳಿ:– ಮೆಂತೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಾಯಿರುಚಿ ಹೆಚ್ಚಿಸುತ್ತದೆ.
- ಸಬ್ಬಸಿಗೆ ಸೊಪ್ಪಿನ ತಂಬ್ಳಿ:- ಸಬ್ಬಸಿಗೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಬಸುರಿ ಹಾಗೂ ಬಾಣಂತಿ ಯರಿಗೆ ಎದೆಹಾಲು ಹೆಚ್ಚಿಸಲು ಪರಿಣಾಮ ಕಾರಿ.
- ಕಂಚಿಕಾಯಿ ,ಹೇರಳೆ ಕಾಯಿ ತಂಬ್ಳಿ :- ಕಾಯಿತುರಿ ಜೊತೆ ಉಪ್ಪಲ್ಲಿ ಹಾಕಿದ ಕಂಚಿಹೋಳು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು (ಉಪ್ಪು ಇರೋದ್ರಿಂದ ನೋಡಿ) ಹಾಕಿ. ಪಿತ್ತಕ್ಕೆ ಒಳ್ಳೆಯದು.
- ಲಿಂಬೆಸಟ್ಟಿನ ತಂಬ್ಳಿ:- ಕಾಯಿತುರಿ ಜೊತೆ ಲಿಂಬೆಸಟ್ಟು, ಜೀರಿಗೆ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ನೋಡಿ ಹಾಕಿ.ಪಿತ್ತಕ್ಕೆ ಒಳ್ಳೆಯದು.
- ನೆಲ್ಲಿ ಕಾಯಿ ತಂಬುಳಿ :- ಕಾಯಿತುರಿ ಜೊತೆ ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ನೆಲ್ಲಿ ಕಾಯಿ ಹಾಕಿ ಹುರಿದುಕೊಂಡು ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಪಿತ್ತಕ್ಕೆ ಒಳ್ಳೆಯದು. ಉಪ್ಪಲ್ಲಿ ಹಾಕಿದ ನೆಲ್ಲಿ ಕಾಯಿ ತಂಬುಳಿ ಮಾಡಬಹುದು. ನೀರಿನಲ್ಲಿ ನೆನೆಸಿ ನಂತರ ರುಬ್ಬಿ.
- ಮುರುಗಲು ಹಣ್ಣಿನ ತಂಬ್ಳಿ :- ಬೇಸಿಗೆಯಲ್ಲಿ ಧಾರಾಳ ಸಿಗುವ ಬಿಳೇ ಅಥವಾ ಕೆಂಪು ಮುರುಗಲು ಹಣ್ಣಿನ ಬೀಜ , ತೊಟ್ಟು ತೆಗೆದು ಕಾಯಿತುರಿ ಜೊತೆ ಜೀರಿಗೆ ಹಾಕಿ ರುಬ್ಬಿ , ಉಪ್ಪು, ಬೆಲ್ಲ ಹಾಕಿ.ಪಿತ್ತಶಮನಕಾರಿ.
- ಒಣಗಿಸಿ ದ ಮುರುಗಲು ಸಿಪ್ಪೆ ತಂಬ್ಳಿ:– ಒಣಗಿದ ಬಿಳೇ ಅಥವಾ ಕೆಂಪು ಮುರುಗಲು ಹಣ್ಣಿನ ಸಿಪ್ಪೆ ಯನ್ನು ನೀರಲ್ಲಿ ನೆನೆಸಿಡಿ.ಕಾಯಿತುರಿ ಜೊತೆಗೆ ನೆನೆಸಿದ ಮು.ಸಿಪ್ಪೆ ರುಬ್ಬಿ ಉಪ್ಪು ಬೆಲ್ಲ ಹಾಕಿ.ಜೀರಿಗೆ ಒಗ್ಗರಣೆ ಹಾಕಿ.ಪಿತ್ತಕ್ಕೆ ಒಳ್ಳೆಯದು.
- ಕೆಂಪು / ಬಿಳಿ ದಾಸವಾಳ ಹೂವಿನ ತಂಬ್ಳಿ:- ತೊಟ್ಟು, ಮಧ್ಯದ ಕುಸುಮ ತೆಗೆದ ದಾಸವಾಳ ಹೂವು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ದೇಹವನ್ನು ತಂಪಾಗಿ ಇಡುತ್ತದೆ.
- ಮಾಚಿಪತ್ರೆ ತಂಬ್ಳಿ:– ಮಾಚಿಪತ್ರೆ ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜಂತು ನಾಶಕ್ಕೆ ಕಾರಣವಾಗುತ್ತದೆ.
- ಸಾಂಬಾರ್ ಸೊಪ್ಪಿನ (ದೊಡ್ಡ ಪತ್ರೆ) ತಂಬ್ಳಿ:– ಸಾಂಬಾರ್ ಸೊಪ್ಪು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ನೆಗಡಿ, ಕಫವಾಗಿ ಕೆಮ್ಮು ಆದಾಗ ಒಳ್ಳೆಯದು.
- ಶುಂಠಿ ತಂಬ್ಳಿ:- ಕಾಯಿತುರಿ ಜೊತೆ ಶುಂಠಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜೀರ್ಣಕಾರಿ.
- ನೆಲನೆಲ್ಲಿ ತಂಬ್ಳಿ :- ನೆಲನೆಲ್ಲಿ ಸೊಪ್ಪಿನ ಜೊತೆ ಜೀರಿಗೆ ಹಾಕಿ ಹುರಿದು ತೆಂಗಿನ ತುರಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಾಮಾಲೆ ರೋಗಕ್ಕೆ ಮದ್ದು.
- ಕಾಕೆಸೊಪ್ಪಿನ ತಂಬ್ಳಿ :- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಕಾಕೆಸೊಪ್ಪು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಬಾಯಿಹುಣ್ಣು ಆದಾಗ ಉಪಯುಕ್ತ.
- ಹೊನಗೊನೆ ಸೊಪ್ಪಿನ ತಂಬ್ಳಿ :- ಹೊನಗೊನೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
- ದಾಳಿಂಬೆ ಕುಡಿ ತಂಬ್ಳಿ :- ದಾಳಿಂಬೆ ಕುಡಿ ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಪದೇ ಪದೇ ಮಲವಿಸರ್ಜನೆ ತೊಂದರೆಗೆ ಒಳಗಾಗಿರುವ ವರಿಗೆ ಒಳ್ಳೆಯದು.
- ಪೇರಲೆಕುಡಿ ತಂಬ್ಳಿ:- ಪೇರಲೆ ಕುಡಿ, ಜೀರಿಗೆ ಹುರಿದು ಕಾಯಿತುರಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಾಯಿಹುಣ್ಣು ಆದಾಗ ಒಳ್ಳೆಯದು.
ಸೂಚನೆ: ಈ ಮೇಲಿನ ತಂಬುಳಿ/ತಂಬ್ಳಿಗಳಲ್ಲಿ ತಿಳಿಸಿದ ಸೊಪ್ಪುಗಳ ಮಾಹಿತಿಯನ್ನು ನಿಮಗೆ ಗೊತ್ತಿರುವ ಮಲೆನಾಡು ಬಂಧು ಮಿತ್ರರಿಂದ ತಿಳಿದುಕೊಂಡು ತಂಬುಳಿ ಮಾಡಿರಿ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel