ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

February 20, 2026
7:20 AM
ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ  18 ವರ್ಷ ವಯಸ್ಸಿನವರು) ಬೆಳ್ಳಂಬೆಳಗ್ಗೆ ಒಟ್ಟಾಗಿ ಸುಮಾರು ಮೂರು ಗಂಟೆಗೆ ಮನೆಯಲ್ಲಿದ್ದ ಅಪ್ಪನ ಕಾರಿನ ಕೀಯನ್ನು ಹೇಳದೆ ಕೇಳದೆ ತೆಗೆದುಕೊಂಡು ಖುಷಿಯನ್ನು ದೋಚಲು ಹೊರಟಿದ್ದಾರೆ. ಮುಂಜಾವಿನ ಖಾಲಿ ರಸ್ತೆಯಲ್ಲಿ ಕಾರ್ ಡ್ರೈವ್‍ನ ಖುಷಿಯೇ ಬೇರೆ. ಹಾಸ್ಯ ಚಟಾಕಿಗಳು, ಉತ್ತರ ಕುಮಾರನ ದರ್ಪ, ಅಪ್ಪಂದಿರ ಶ್ರೀಮಂತಿಕೆಯ ಬಗ್ಗೆ ಸೊಕ್ಕಿನ ಮಾತುಗಳು ಹೀಗೆ ಮಾತಾಡುತ್ತಲೇ ವಾಹನದ ವೇಗ ಏರಿತ್ತು. ಮೂವತ್ತು ಕಿಲೋಮೀಟರ್ ದಾಟಿದ್ದೇ ಗೊತ್ತಿಲ್ಲ. ರಸ್ತೆಯಲ್ಲಿದ್ದ ವಾಹನಗಳೂ ಕಣ್ಣಿಗೆ ಬೀಳಲಿಲ್ಲ. ಮುಂದಿನಿಂದ ಸಾಗುತ್ತಿದ್ದ ಒಂದು ಬೈಕಿಗೆ ತಾಗಿ ಸವಾರ ಬಿದ್ದಿದ್ದೇ ಗೊತ್ತಿಲ್ಲ. ಅಷ್ಟರಲ್ಲೇ ವೇಗವನ್ನು ನಿಯಂತ್ರಣಕ್ಕೆ ತರಲಾಗದೆ ಎದುರಿದ್ದ ಕೇಂಟರ್‍ಗೆ ಅಪ್ಪಳಿಸಿ ಅದರ ಅಡಿಯಲ್ಲಿ ಕಾರು ಮತ್ತು ಆರು ಯುವಕರೂ ಅಪ್ಪಚ್ಚಿಯಾದರು.  ಏಕ ಕಾಲದಲ್ಲಿ ಎಲ್ಲರ ಪ್ರಾಣ ಹರಣವಾಯಿತು. ಅವರ ಮನೆಗಳಲ್ಲಿ ಮುಂಜಾವಿನ ಮೊದಲ ಕರೆ ಮಕ್ಕಳ ಸಾವಿನ ಸುದ್ದಿಯಾಗಿತ್ತು. ಯಾರ ವಾಹನ ಅಪ್ರಾಪ್ತರಿಂದ ಚಲಾಯಿಸಲಾಗಿತ್ತೋ ಆ ವ್ಯಕ್ತಿಯ ಮೇಲೆ ಖಟ್ಲೆ ದಾಖಲಾಗುವುದಕ್ಕೆ ಕಾರಣವಾಯಿತು.
ಇದೊಂದು ಆಕಸ್ಮಿಕ ಪಯಣವಾಗಿರಲು ಸಾಧ್ಯವಿಲ್ಲ. ಕಾರಿನಲ್ಲಿದ್ದವರಲ್ಲಿ ಯಾರಾದರೂ ಒಂದಿಬ್ಬರದ್ದು ಅನಿರೀಕ್ಷಿತವಾಗಿರಲೂಬಹುದು. ಅವರ ವಿಧಿ ಗೆಳೆಯರೊಂದಿಗೆ ಸಾಯುವುದೇ ಆಗಿತ್ತೆಂದು ಹೇಳಬಹುದು. ಆದರೆ ಆರು ಮಂದಿಯಲ್ಲಿ ನಾಲ್ಕೈದು ಮಂದಿಯಾದರೂ ಈ ಮುಂಜಾವಿನ ಜಾಲಿ ರೈಡ್‍ನ ಪ್ಲಾನ್ ಮಾಡಿರಬೇಕು. ಅವರೆಲ್ಲರಿಗೂ ತಮಗೆ ಡ್ರೈವಿಂಗ್ ಲೈಸನ್ಸ್ ಇಲ್ಲವೆಂದು ಗೊತ್ತಿದ್ದಿರಬೇಕು. ಹಾಗಾಗಿ ಹೆತ್ತವರು ಏಳುವ ಮೊದಲೇ ಹಿಂದಿರುಗುವ ಪ್ಲಾನ್ ಹಾಕಿರಬೇಕು. ಅದಕ್ಕಾಗಿಯೇ ಬೆಳಗ್ಗಿನ ಮೂರು ಗಂಟೆಗೇ ಎದ್ದು ಜಾಲಿ ರೈಡ್ ನ ಸಾಹಸಕ್ಕೆ ಇಳಿದಿರಬೇಕು. ಆದರೆ ಖುಷಿಯೆಂಬುದು ಅವರ ಪಾಲಿಗೆ ಕನಸಾಯಿತು, ಪರಿಣಾಮ ಎಣಿಸಿದ್ದಕ್ಕಿಂತ ವಿಪರೀತವಾಯಿತು. ಏನು ಸಂಭವಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲೇ ಶ್ವಾಸ ಸ್ತಬ್ಧವಾಗಿರಬೇಕು. ತಾವು ಅಮೂಲ್ಯವಾದ ಜೀವನ ಕಳೆದುಕೊಳ್ಳುತ್ತೇವೆಂದು ತಿಳಿಯುವ ಮೊದಲೇ ಪ್ರಾಣಪಕ್ಷಿ ಹಾರಿರಬೇಕು. ವಿಧಿಯ ವಿಕಟ ಅಟ್ಟಹಾಸವೆಂದು ಶರಾ ಬರೆದು ಮರೆತು ಬಿಡಬಹುದಾದ ವಿಷಯವಲ್ಲ ಇದು. ಆಧುನಿಕ ವಿಜ್ಞಾನದ ಕೊಡುಗೆಯಾದ ವಾಹನಗಳ ತಾಂತ್ರಿಕತೆ ಮತ್ತು ಉತ್ತಮ ರಸ್ತೆಗಳಿರುವುದು ನಮ್ಮ ಜೀವ ಕಳೆದುಕೊಳ್ಳುವುದಕ್ಕಲ್ಲ. ಈ ಆರೂ ಮಂದಿಯ ಆಯುಷ್ಯ ಏಕ ಕಾಲದಲ್ಲಿ ಒಂದೇ ಸ್ಥಳದಲ್ಲಿ ಮುಗಿದಿತ್ತು ಎಂದರೆ ಅದು ನಮ್ಮ ವೈಚಾರಿಕತೆಯನ್ನು ಅಣಕಿಸಿದಂತಾದೀತು. ಹಾಗಾಗಿ ಈ ದುರಂತವನ್ನು ಬದುಕಿರುವ ಎಳೆಯರಿಗೆ ಒಂದು ಪಾಠವಾಗಿ ವಿಮರ್ಶಿಸುವ ಅಗತ್ಯವಿದೆ.
ಸಾಮಾನ್ಯವಾಗಿ ಚುರುಕಿನ ಮಕ್ಕಳು ವಾಹನಗಳಲ್ಲಿ ಸಾಗುವಾಗ ಡ್ರೈವರ್ ಹೇಗೆ ಚಲಾಯಿಸುತ್ತಾನೆ ಎಂಬುದನ್ನು ಗಮನಿಸುತ್ತಾರೆ. ಇನ್ನು ತಮ್ಮ ತಂದೆ ತಾಯಿಯೊಂದಿಗೆ ಸಾಗುವಾಗ ಈ ಗಮನಿಸುವಿಕೆಯಿಂದ ಡ್ರೈವಿಂಗ್‍ನ ನೈಪುಣ್ಯತೆಯ ಸೂಕ್ಷ್ಮಗಳನ್ನು ಗಂಡು ಮಕ್ಕಳು ನೋಡಿಯೇ ಕಲಿಯುತ್ತಾರೆ. ಈ ಸ್ವಯಂ ಕಲಿಕೆಯನ್ನು ಪ್ರಯೋಗಿಸಿ ನೋಡುವ ಉತ್ಸಾಹ ಅವರಲ್ಲಿ ಮೂಡುತ್ತದೆ. ಇಂತಹ ಸಂದರ್ಭದಲ್ಲಿ ಸರಿಯಾದ ಪ್ರಾಯ ಮತ್ತು ಬೆಳವಣಿಗೆ ಆಗುವ ತನಕ ವಾಹನವನ್ನು ಕೊಡುವುದಿಲ್ಲವೆಂಬ ದಿಟ್ಟ ನಿರ್ಧಾರವನ್ನು ಹೆತ್ತವರು ಪ್ರಕಟಿಸಬೇಕು. ಇಲ್ಲದೇ ಹೋದರೆ ಮಕ್ಕಳು ಎಳವೆಯಲ್ಲೇ ತಮ್ಮ ಕೌಶಲದ ಪ್ರದರ್ಶನಕ್ಕೆ ಅವಕಾಶವನ್ನು ಕೇಳುತ್ತಾರೆ. ತಮ್ಮ ಮಗ ಜಾಣನೆಂಬ ಅರಿವಿದ್ದರೂ ಹೆತ್ತವರು ಮಗನ ವಿನಂತಿಗಳನ್ನು ಮನ್ನಿಸಬಾರದು. ಇದು ವಾಹನ ಚಾಲನೆಗಾದರೂ ಸರಿಯೇ, ಮರ ಹತ್ತುವುದಕ್ಕಾದರೂ ಸರಿಯೇ, ಈಜಾಡುವುದಕ್ಕಾದರೂ ಸರಿಯೇ. ಸರಿಯಾದ ಹಂತಕ್ಕೆ ದೈಹಿಕ ಬೆಳವಣಿಗೆ ಆಗದ ಹೊರತು ಇಂತಹ ರಿಸ್ಕ್ ಗಳಿಗೆ ಅವಕಾಶವೇ ಇಲ್ಲವೆಂದು ಹೆತ್ತವರು ತಾಕೀತು ಮಾಡಲೇಬೇಕು. ಹಾಗಾಗಿ ಕಾರಿನ ಕೀಲಿಗಳನ್ನು ತಮ್ಮ ಪರ್ಸ್‍ನಷ್ಟೇ ಜೋಪಾನವಾಗಿ ತಮ್ಮಲ್ಲೇ ಇಟ್ಟುಕೊಳ್ಳಬೇಕು.
ಪ್ರಸ್ತುತ ಪ್ರಕರಣದಲ್ಲಿ ಬಲಿಯಾದ ಮಕ್ಕಳ ಹೆತ್ತವರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆಂದು ಹೇಳಲು ನಮಗೇನೂ ಗೊತ್ತಿಲ್ಲ. ಆದರೆ ಒಬ್ಬ ಹುಡುಗನ ಕೈಗೆ ಕಾರಿನ ಕೀಲಿ ಸಿಗುವಷ್ಟು ಮುಕ್ತತೆ ಇತ್ತು ಎಂಬುದು ಊಹಿಸಬಹುದಾದ ಸಂಗತಿ. ಇಂತಹ ಅವಕಾಶವನ್ನು ಗೆಳೆಯರಿಗೆ ತೋರ್ಪಡಿಸಲು ಆತ ತನ್ನ ಗೆಳೆಯರ ಮುಂದೆ ಮುಂಜಾನೆಯ ಆಕರ್ಷಕ ಪಯಣದ ಪ್ರಾಜೆಕ್ಟನ್ನು ಇಟ್ಟಿರಬಹುದು. ಅದಲ್ಲದಿದ್ದರೆ ಅವರೆಲ್ಲ ಒಂದಾಗುವುದು ಹೇಗೆ? ಖರ್ಚಿಲ್ಲದ ಗಮ್ಮತ್ತಿಗೆ ಸುಲಭದಲ್ಲಿ ಆಕರ್ಷಿತರಾದವರು ಮಾತ್ರ ಸೇರಿರಬಹುದು. ಆದರೆ ಈ ರಿಸ್ಕ್‍ನ ಬಗ್ಗೆ ಭಯವಿದ್ದವರು ಈ ಗುಂಪಿನಲ್ಲಿ ಸೇರದೆಯೂ ಇರಬಹುದು. ಅಂತೂ ಬೆಳಗಾಗುತ್ತಲೇ ಸಾವಿನ ಮಾಹಿತಿ ತಿಳಿದು ಕಂಗೆಟ್ಟ ಆರು ಮನೆಗಳ ಹೆತ್ತವರು ತಮಗೆ ಮಕ್ಕಳು ಇಂತಹ ಯೋಜನೆ ಹಾಕಿದ ಯಾವ ಸುಳಿವೂ ಇರಲಿಲ್ಲವೆಂದು ಹೇಳಿದ್ದಾರೆ. ಇಂತಹ ಒಂದು ತಂಡ ಕಟ್ಟಿದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ. ಹಾಗಾಗಿ ಮಕ್ಕಳು ತಮ್ಮ ದುಸ್ಸಾಹಸದ ಯೋಜನೆಯನ್ನು ಗುಟ್ಟಾಗಿಯೇ ಇಟ್ಟಿದ್ದರೆಂದಾಯಿತು. ಹೌದು, ಹದಿಹರೆಯದ ಮಕ್ಕಳು ಹೆತ್ತವರಿಗೆ ತಿಳಿಯದಂತೆ ಸ್ನೇಹಿತರ ಬಗ್ಗೆ ಗುಟ್ಟುಗಳನ್ನು ಕಾಪಾಡುತ್ತಾರೆ. ಹೀಗೆ ಗುಟ್ಟು ಕಾಪಾಡುವ ಹೆಣ್ಮಕ್ಕಳು ಲವ್ ಜಿಹಾದಿಗೆ ಬಲಿಯಾಗುವ ಪ್ರಕರಣಗಳು ನಡೆಯುತ್ತವೆ. ಹಾಗಾಗಿ ಮಕ್ಕಳು ಯುವಕರಾದಾಗ ಹೆತ್ತವರು ಹೆಚ್ಚು ವಿಶ್ವಾಸ ಗಳಿಸುವ ಮಾತುಕತೆಗಳನ್ನು ಮನೆಯಲ್ಲಿ ನಡೆಸಬೇಕು.
ಸ್ವತಃ ಅಪಘಾತಕ್ಕೆ ಈಡಾಗುವ ಮೊದಲು ಇವರ ಕಾರು ಒಂದು ಬೈಕಿಗೆ ಡಿಕ್ಕಿ ಹೊಡೆದು ನಿರರ್ಥಕವಾಗಿ ಒಬ್ಬ ಅಮಾಯಕ ಸವಾರನನ್ನು ಕೊಂದಿತ್ತು. ಅವರ ಈ ತಪ್ಪಿಗೆ ಶಿಕ್ಷೆ ನೀಡಲು ಅವರೇ ಇಲ್ಲವಲ್ಲ! ಅಂತೂ ಈ ವರ್ಷದ ಶಿವರಾತ್ರಿ (15-02-26) ಗೆ ಎರಡು ದಿನ ಮೊದಲು ನಡೆದ ಈ ಪ್ರಕರಣದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕಾದವರು ಸತ್ತರು, ಬದುಕಿಗೆ ವಿರಾಮ ಹೇಳಬೇಕಾದವರು ಅಸಹಾಯಕರಾದರು. ಪುತ್ರ ಶೋಕ ನಿರಂತರ ಎಂಬ ನೋವಿಗೆ ಅವರು ಇನ್ನು ಪಾಡು ಪಡಬೇಕಾಗಿದೆ.
“ಮಾನವ ಜನ್ಮ ದೊಡ್ಡದು” ಎಂಬ ದಾಸರ ವಾಣಿಯನ್ನು ಹಿರಿಯರು ಮಕ್ಕಳಿಗೆ  ತಿಳಿಸಬೇಕಾಗಿದೆ. ಈ ಸಂಭಾಷಣೆ ನಡೆಸಲೂ ಸಮಯವಿಲ್ಲದಂತಹ ವೇಳಾಪಟ್ಟಿಗಳನ್ನು ಬದಲಾಯಿಸಬೇಕು. ಮಕ್ಕಳಿಗೆ ಬುದ್ಧಿವಾದ ಹೇಳುವ ಹಿರಿತನಕ್ಕೆ ಹೆತ್ತವರು ಅರ್ಹತೆಯನ್ನು ಉಳಿಸಿಕೊಳ್ಳಬೇಕು. “ನೀನು ಚೆನ್ನಾಗಿ ಓದಬೇಕು” ಎಂಬ ಬುದ್ಧಿವಾದವನ್ನು ಅಪ್ಪ ಹೇಳಿದ್ದಕ್ಕೇ ಪ್ರತೀಕಾರವಾಗಿ ಮಗ ಜೀವ ಕಳಕೊಂಡ ಪ್ರಕರಣ ಇದೇ ಶಿವರಾತ್ರಿಗೆ ಮೊದಲಿನ ದಿನ  ನಡೆದಿದೆ. ಇನ್ನೊಂದು ಪ್ರಕರಣದಲ್ಲಿ ಮಗಳು ಟಿ.ವಿ. ನೋಡುತ್ತ ಊಟ ಮಾಡುತ್ತಿದ್ದಾಗ ಬಟ್ಟಲು ಕೆಳೆಗೆ ಬಿದ್ದಾಗ “ನೀನು ಟಿ.ವಿ. ನೋಡುವುದನ್ನು ಕಡಿಮೆ ಮಾಡು” ಎಂದು ಬುದ್ಧಿ ಹೇಳಿದ ಅಮ್ಮನಿಗೆ ಬುದ್ಧಿ ಕಲಿಸಲು ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ ಎಂಬಂತಹ ಚಿಂತೆ ಉಂಟು ಮಾಡುವ ಘಟನೆಗಳು ಇವು.
ಇಂದಿನ ವಿದ್ಯಮಾನಗಳ ವಿಶ್ಲೇಷಣೆಗಳ ಪ್ರಕಾರ ಇವರೆಲ್ಲ ‘ಝೆನ್ ಜೀ’ ತಲೆಮಾರಿಗೆ ಸೇರಿದವರು. ಆದರೆ ಇವರಿಗೆ ಜೀವ ಮತ್ತು ಜೀವನದ ಬಗ್ಗೆ ಏನೂ ಗೊತ್ತಿಲ್ಲವೆಂಬುದು ಸ್ಪಷ್ಟ. ಹುಟ್ಟಿದ್ದಕ್ಕಾಗಿ ಸಾಯುವವರು ಮತ್ತು ಸಾವಿನ ತನಕ ಬದುಕುವವರು ಎಂಬ ಸಂಕುಚಿತ ಬುದ್ಧಿ ಇರುವವರು. ಈ ಮನೋಧರ್ಮವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಹಿರಿಯರಿಗೆ ಇದೆ. ಮಕ್ಕಳಿಗೆ ತಮ್ಮ ತಲೆಮಾರಿನ ಹೊಣೆಗಾರಿಕೆ ಇರುವುದನ್ನು ತಿಳಿಸಬೇಕಾಗಿದೆ. ಇದರ ಅರಿವು ಇರುವ ಅದೆಷ್ಟೋ ಮಕ್ಕಳಿದ್ದಾರೆ. ಉದಾಹರಣೆಗೆ, ಮುಂಜಾವಿನ ಈ ‘ವೇಗಧೂರ್ತರು’ ಢಿಕ್ಕಿ ಹೊಡೆದ ಬೈಕ್ ಸವಾರ 24 ವರ್ಷದ ಯುವಕ ಗಗನ್ ಅಂತಹ ಹೊಣೆಗಾರನಾಗಿದ್ದ. ಆತ ತನ್ನ ವೃದ್ಧಾಪ್ಯದಲ್ಲಿದ್ದ ತಂದೆಗೂ, ಕಣ್ಣು ಕಾಣದೆ ಕುರುಡಾಗಿದ್ದ ತಾಯಿಗೂ ಹಾಗೂ ಒಡಹುಟ್ಟಿದ ತಂಗಿಗೂ ಆಸರೆಯಾಗಿದ್ದ. ಈ ಅಪಘಾತದಲ್ಲಿ ಆತ ಸಾವಿಗೀಡಾಗಿದ್ದರಿಂದಾಗಿ ಆತನ ತಂದೆ, ತಾಯಿ, ತಂಗಿ ಇವರೆಲ್ಲರ ಜೀವನಾಧಾರ ಕಳೆದು ಹೋಗಿತ್ತು. ಈತ ತನ್ನ ಕಷ್ಟಕರ ಜೀವನವನ್ನು ಕಳೆದು ಮುಂದೆ ಬಂದವನು. ಆದರೆ ಆತನ ಸುದೀರ್ಘ ಸಫಲ ಬದುಕಿನ ಕನಸು ಅಗ್ನಿಗಾಹುತಿಯಾಗಿತ್ತು. ಅವನ ಸಾವಿಗೆ ಕಾರಣರಾದ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಯಲ್ಲಿ ಕೌಟುಂಬಿಕ ಮೌಲ್ಯಗಳು ಹಾಗೂ ತಮ್ಮನ್ನು ಬೆಳೆಸಿದವರ ಬಗೆಗೆ ಹೊಂದಿರುವ  ಹೊಣೆಗಾರಿಕೆಗಳನ್ನು ಬಾಲ್ಯದಿಂದಲೇ ಕಲಿಸಬೇಕಿತ್ತು. ಮಕ್ಕಳು ಬೆಳೆಯುತ್ತಿದ್ದಂತೆ ವಹಿಸಿಕೊಳ್ಳಬೇಕಾದ ಹೊಣೆಗಾರಿಕೆಯ ಕುರಿತಾದ ಮಾತುಗಳು ಮನೆಯಲ್ಲಿ ಪಾಠವಾಗಿ ಸಿಕ್ಕಿದಾಗ ತನ್ನ ಜೀವನದಷ್ಟೇ ಬೇರೆಯವರ ಜೀವವೂ ಅಮೂಲ್ಯವಾದುದು ಎಂದು ತಿಳಿಯುತ್ತದೆ. ಆದುದರಿಂದ ಯಾರದೇ ಆದರೂ ಜೀವಾಪಹರಣದ ಹಕ್ಕು ನಮಗಿಲ್ಲವೆಂಬ ಎಚ್ಚರವೂ ಮೂಡುತ್ತದೆ. ಇದು ಜಾಗೃತ ಜೀವನದ ಅರಿವಿಗೆ ಪೀಠಿಕೆಯಾಗುತ್ತದೆ. ಇಂತಹ ಜಾಗೃತಿಯೇ ಆತಂಕರಹಿತ ಸಮಾಜಕ್ಕೆ ಅಗತ್ಯವಾಗಿದೆ. ಇದರಿಂದ ಕುಟುಂಬದೊಳಗೆ ದೌರ್ಜನ್ಯ, ಅವಿಶ್ವಾಸ, ಮೋಸಗಳಿಗೆ  ಅವಕಾಶವಿರುವುದಿಲ್ಲ. ತಂದೆ ತಾಯಿಗೆ ಏಕಮಾತ್ರ ಪುತ್ರಿಯಾಗಿದ್ದು ‘ನಿಮ್ಮನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡುತ್ತ ಬೆಳೆದ ಮಗಳು ಲವ್ ಜಿಹಾದಿಗೆ ಬಲಿಯಾಗಿ ಕಾಸರಗೋಡಿನಲ್ಲಿ ಮುಸ್ಲಿಂ ಗೆಳೆಯನೊಂದಿಗೆ ಕಾಅಣೆಯಾಗಿ ಹೆತ್ತವರನ್ನು ಕಂಗಾಲುಗೊಳಿಸಿದ ಪ್ರಕರಣ ಇತ್ತೀಚೆಗೆ ಘಟಿಸಿದೆ. ದೂರು ನೀಡಿದ ಹೆತ್ತವರಿಗೆ ಕೇರಳದ ಯಾವುದೋ ಪೊಲೀಸ್ ಸ್ಟೇಶನ್‍ನಲ್ಲಿ ಮಗಳನ್ನು ತೋರಿಸಿದರೂ ಆ ಮಗಳು ತಾಯಿಯನ್ನು ಅಪ್ಪಿಕೊಳ್ಳಲು ಮುಂದೆ ಬಂದಾಗ “ಮುಟ್ಟಲು ಅನುಮತಿ ಇಲ್ಲ” ಎಂದು ಪೊಲೀಸರು ತಡೆದರಂತೆ. ಇನ್ನು ಆ ಹುಡುಗಿ ಮುಸ್ಲಿಮರ ನಿರ್ಬಂಧಗಳ ಜಾಲದಿಂದ ಮುಕ್ತಿ ಪಡೆಯುವುದು ಕಷ್ಟವೇ.   ಇಂತಹ ದುರವಸ್ಥೆಗೆ ಒಳಗಾಗದಂತಹ ಜಾಗೃತಿ ಪ್ರತಿ ಮನೆಗಳಲ್ಲೂ ಮೂಡಬೇಕಾಗಿದೆ. ಆಗ ಒದಗುವ ಕೌಟುಂಬಿಕ ಭದ್ರತೆಯು ಸಾಮಾಜಿಕ ಸ್ವಾಸ್ಥ್ಯದ ಔಷಧವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ
……………..
The tragic accident in Bengaluru, where six teenagers died while driving without a license, highlights the dangers of reckless driving and lack of parental supervision. The incident underscores the need for parents to guide children responsibly and teach life values, as freedom without responsibility can lead to irreversible consequences.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ
February 20, 2026
7:46 AM
by: ದ ರೂರಲ್ ಮಿರರ್.ಕಾಂ
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ
February 20, 2026
7:13 AM
by: ಮಿರರ್‌ ಡೆಸ್ಕ್
ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ
February 20, 2026
7:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror