ಮದ್ಯಾನದ ಉರಿ ಬಿಸಿಲು…, ದ್ವಾಸೆ ಕಾವಲಿಯಂತಹ ರಸ್ತೆಯ ಮೇಲೆ ಬೈಕೋ ಕಾರಿನಲ್ಲಿ ಮಲೆನಾಡಿನ ಊಟದ ಮನೆಯೆಂಬ “ಪಾರ್ಟಿ” ಗೆ ಹೋಗಲೇಬೇಕಾದ ಅನಿವಾರ್ಯ…
ಊಟದ ಮನೆಯ ಚೌಲ್ಟ್ರಿಗೆ ತಲುಪಿ ಮತ್ತೆ ಆ ಚೌಲ್ಟ್ರಿ ಯ ಆ ಬಿರು ಬಿಸಿಲಿಗೆ ಕಾದ ಹೋಳಿಗೆ ಕಾವಲಿಯಂತೆ ಕಾದ ಕಬ್ಬಿಣದ ಶೀಟ್ , ಸಿಮೆಂಟ್ ಶೀಟ್ ನ ಕೆಳಗೆ ಹೋಳಿಗೆಯಂತೆ ಬೆಂದು . ನಂತರ ಊಟದ ಹಾಲಿನಲ್ಲಿ ಊಟಕ್ಕಿಂತ ನೀರೇ ಹೆಚ್ಚು ಕುಡಿದು ಬೆವರಿ ಎಷ್ಟು ಹೊತ್ತಿಗೆ ಕೈ ತೊಳಿತೀವೋ ಅಂತ ಕಾತರಿಸಿ ಊಟ ಮುಗಿಸಿ ಹೊರಬಂದು ಯಾವುದೋ ಮರದ ಕೆಳಗೆ ಒಂದೈದು ನಿಮಿಷಗಳ ಕಾಲ ನಿಂತು ಸುಧಾರಣೆ ಮಾಡಿದರೆ ಅದೇನೋ ನಿರಾಳ ತಂಪು ತಂಪು ಕೂಲ್ ಕೂಲ್… ಮರದ ತಂಪಿಗೆ ಸರಿಸಮನಾದ ಯಾವುದೇ ಕೂಲರ್ ಈ ಜಗತ್ತಿನಲ್ಲಿ ಇಲ್ಲ ಎನಿಸುತ್ತದೆ…. ನಮ್ಮ ತೀರ್ಥಹಳ್ಳಿ ಸಾಗರ ಹೊಸನಗರ ಕೊಪ್ಪ ಶೃಂಗೇರಿ ಕಳಸ ಮುಂತಾದ ಅಪ್ಪಟ ಮಲೆನಾಡು ಈ ಬೇಸಿಗೆಯಲ್ಲಿ ಬರ ನಾಡಿ ಬದಲಾವಣೆ ಆಗಿದೆಯಲ್ಲ ಯಾಕಾಗಿ…?
ಈ ಸರ್ತಿ ಏನಾಗಿದೆ ಎಂದರೆ ಕಳೆದ ಮಳೆಗಾಲದ ಕೊರತೆಯ effect ಬಹಳವಾಗಿ ಪ್ರಕೃತಿ ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಮಳೆಗಾಲದಲ್ಲಿ ಬರೀ ಮಳೆ ಬರದೇ ಭಾರೀ ಗಾಳಿ ಗುಡುಗು ಸಿಡಿಲುಗಳು ಭೂಮಿಗೆ ಅಪ್ಪಳಿಸಲೇ ಬೇಕು. ಹೀಗೆ ಬೀಸುವ ಭಾರಿ ಗಾಳಿ ಮತ್ತು ಸಿಡಲಬ್ಬರಕ್ಕೆ ಭೂಮಿಯ ಒಳಗಿನ ಜಲದ ಸಂಗ್ರಹ ಹೊರಗೆ ಚಿಮ್ಮುತ್ತದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಮಲೆನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನ ಹತ್ತು ಕಿಲೋಮೀಟರ್ ಆಚೆ ಮಲೆನಾಡಿನ ನೈಸರ್ಗಿಕ ಸೊಗಡಿನ ಅನುಭೂತಿ ಕಳೆದು ಕೊಂಡಿದೆ.ಜುಲೈ ಆಗಷ್ಟ್ ನ ಸಂಜೆ ಹೊತ್ತಿಗೆ ಮನೆಯಂದಾಚೆ ಹೋದರೆ ನೈಋತ್ಯ ದಿಂದ ಅಡರುತ್ತಿದ್ದ ಉಡುರು ಗಾಳಿ ಮಾಯವಾಗಿದೆ …!!!
ಹಿಂದಿನ ಕಾಲದಲ್ಲಿ ಸುರಿಯುತ್ತಿದ್ದ ಮಳೆಗಾಲದ ರಾತ್ರಿಯಲ್ಲಿ….. ಹೊರಗೆ ಸುರಿಯುವ ಮಳೆ …ಆ ಮಳೆ ಹಂಚಿನ ಮೇಲೆ ಬೀಳುವ ಸದ್ದು.. ಆ ಹಂಚಿನಿಂದ ಒದಗೆಯ ಮೂಲಕ ಸೂರಿನ ತುದಿಯಲ್ಲಿ ಬಿಳುವ ಕಿರು ಜಲಪಾತ ದುಮ್ಮಿಕ್ಕುವ ಸದ್ದು.. ಕಪ್ಪೆಗಳ ಜೀರುಂಡೆಗಳ ಸಂಭ್ರಮ.. ಈ ನಡುವೆ ಎರಡೆರಡು ಕಂಬಳಿ ಹೊದ್ದು ಮಲಗುವ ಮಳೆಗಾಲದ ಸಂಭ್ರಮ ಅಮೋಘ… ಆ ಸುಖ ಅನುಭವಿಸಿದವರು ಒಮ್ಮೆ ಆ ಕಾಲಕ್ಕೆ ಹೋಗಿ ಮೆಲಕು ಹಾಕಿ ಎಂದು ಕೋರುತ್ತಿದ್ದೇನೆ…..
ಮಲೆನಾಡಿನ ಮಳೆಗಾಲದಲ್ಲಿ ಆಗಸದಿಂದ ಮಳೆಯ ಜೊತೆಯಲ್ಲಿಯೇ ಭೂಮಿಗೆ ಬೀಳುವ ಸಸ್ಯ ಕೀಟ ಜೀವ ಜಂತುಗಳು ಅಚ್ಚರಿ ಮೂಡಿಸುತ್ತದೆ..!! ಆ ಜೀವ ಸಂಕುಲಗಳು ಮಳೆ ಬರುವ ತನಕ ಅವೆಲ್ಲಿರುತ್ತವೋ ಗೊತ್ತಿಲ್ಲ…!!?? ಆದರೆ ಈ ಹತ್ತು ವರ್ಷಗಳ ಈಚಿನ ಮಳೆಗಾಲದಲ್ಲಿ ಈ ಸಂಬ್ರಮ ನಿಧಾನವಾಗಿ ಕಡಿಮೆ ಆಗುತ್ತಿದೆ…!!
ನನ್ನ ಚಿಕ್ಕ ಅನುಭವದಲ್ಲಿ ಕಳೆದ ವರ್ಷ ನಮ್ಮ ಮಲೆನಾಡಿಗೆ ಅತ್ಯಂತ ನೀರಸ ದಾಯಕ ಮಳೆ ಬಂದಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ನಮ್ಮ ಮನೆಯ ಎಮ್ಮೆ ತೀರಿಕೊಂಡಿತ್ತು. ಎಮ್ಮೆ ಹುಗಿಯಲು ಜೆಸಿಬಿಯಲ್ಲಿ ಹೊಂಡ ತೆಗೆದರೆ ಇಡೀ ಮಳೆಗಾಲದ ತೇವಾಂಶ ಭೂಮಿಯ ಮೇಲ್ಪದರದಿಂದ ಕೇವಲ ಮೂರು ಅಡಿ ಕೆಳಗೆ ಇಳಿದಿರಲಿಲ್ಲ. ..!! ಅಷ್ಟು ಕಡಿಮೆ ಪ್ರಮಾಣದ ಮಳೆ ಆಗಿದ್ದು ಮಲೆನಾಡಿಗೆ ದೊಡ್ಡ ಆಘಾತಕಾರಿ ವಿದ್ಯಮಾನ. ತತ್ಪರಿಣಾಮವಾಗಿ ಈ ಮೇ ತಿಂಗಳಲ್ಲಿ ಬಹುತೇಕ ಬಾಮ ಖಾಲಿ ಖಾಲಿ…
ಬಹುಶಃ ಬೋರ್ ವೆಲ್ ಒಂದು ಇಲ್ಲದಿದ್ದಲ್ಲಿ ಮಲೆನಾಡಿನ ಕಥೆ ಮುಗಿದೇ ಹೋಗುತ್ತಿತ್ತೇನೋ…? ಕೊನೆಯವರೆಗೂ ಮಂದವಾಗಿ ಹರಿಯುತ್ತಿದ್ದ ಮಲೆನಾಡಿನ ಹಳ್ಳ ಕೊಳ್ಳ ಈ ಸತಿ ಜನವರಿ ಗೇ ಹರಿವು ನಿಲ್ಲಿಸಿ ಮಲಗಿವೆ….!! ಮಲೆನಾಡಿನಲ್ಲಿ ಹರಿವ ಏಕೈಕ ನದಿ ತುಂಗೆ ಭದ್ರೆ ಮಾತ್ರ… ಅದನ್ನು ಸಾಲು ಸಾಲು ಮೋಟರ್ ಗಳು ಉಸಿರುಗಟ್ಟಿಸಲು ಹಗಲು ರಾತ್ರಿ ಪ್ರಯತ್ನ ಮಾಡುತ್ತಿವೆ…
ಮೊನ್ನೆ ಒಂದು ತಿಂಗಳ ಹಿಂದೆ ಬಂದ ಉತ್ತಮ ಮಳೆಗೆ ಈ ಮಲೆನಾಡು ಉಳಿದಿದೆ. ಅಕಸ್ಮಾತ್ತಾಗಿ ಮೊನ್ನೆ ಒಂದು ಮಳೆಯೇ ಬರದೇ ಜೂನಿಗೇ ಮುಂಗಾರು ಮಳೆ ಬರುವುದಾಗಿದ್ದಲ್ಲಿ ನಮ್ಮ ಮಲೆನಾಡು ಉರಿದೇ ಹೋಗುತ್ತಿತ್ತೇನೋ….!!??. ಧನ್ಯವಾದಗಳು ಮೊನ್ನಿನ ಮಳೆಗೆ…
ನನಗೆ ಈ ಹಗಲಿನ ಉರಿ ಬಿಸಿಲು ಮೂವತ್ತೆಂಟು ಡಿಗ್ರಿ ದಾಟುವ ಉಷ್ಣಾಂಶ ನೋಡಿದಾಗ ಪ್ರತಿ ಸತಿಯೂ ಅನ್ನಿಸುವುದೇನೆಂದರೆ “ಅಕಸ್ಮಾತ್ತಾಗಿ ಭೂಮಿಗೆ ರಾತ್ರಿ ಎಂಬುದಿರಲಿಲ್ಲವಾಗಿದ್ದಿದ್ದರೆ ಏನು ಗತಿ…!?”… ಭೂಮಿಗೆ ರಾತ್ರಿ ಯ ತಂಪಿನ ಕೃಪಾ ಕಟಾಕ್ಷ. ಚೈತನ್ಯ ನೀಡಿದೆ.
ಮಲೆನಾಡು ಕರಾವಳಿಯ ಅಡಿಕೆ ಕೃಷಿಕರು ನೀರು ಬಿಟ್ಟು ಅಡಿಕೆ ಕೃಷಿ ಮಾಡುವವರಿಗೆ ಈ ತಿಂಗಳಲ್ಲಿ ಮಳೆ ಬರಲಿ ಎಂಬ ಕಾತರ ಕೋರಿಕೆ ಅನನ್ಯ…. ಒಂದು ವಿಶೇಷ ಏನೆಂದರೆ ಇದೇ ಮಲೆನಾಡಿನ ಅಡಿಕೆ ಬೆಳೆಗಾರ ಆಗಷ್ಟ್ ಸೆಪ್ಟೆಂಬರ್ ನಲ್ಲಿ ಬರುವ ಭಾರಿ ಮಳೆಗೆ ಓ ವರುಣದೇವ ಸಾಕು ನಿಲ್ಲಿಸು ನಿನ್ನ ಪ್ರಕೋಪ…!! ಎಂದು ಮಳೆ ನಿಲ್ಲುವಂತೆ ಆಗ ಬೇಡುತ್ತಾನೆ. ಆಗ ಅಡಿಕೆ ಗೆ ಮಳೆ ಯಿಂದ ನೀರ್ಗೊಳೆ ಕಾಟ… ಮಳೆಗಾಲ ಈಗ ಬರುವುದೋ ಆಗ ನಿಲ್ಲುವುದೋ ನಿಸರ್ಗದ ಆಟ…
ಮನುಷ್ಯ ಮಳೆ ಬರಿಸಲಾರ… ಮಳೆ ಬರಿಸುವ ಶುಷ್ಕ ವಾತಾವರಣ ನಿರ್ಮಾಣ ಮಾಡುವ ಮೋಡ ತಡೆಯುವ ಮೋಡ ಸೆಳೆವ ಮಳೆ ಸುರಿಸುವ ಆ ಭಗವಂತ ಸೃಷ್ಟಿಸಿದ ನಿಸರ್ಗ ವ್ಯವಸ್ಥೆ ಯನ್ನು ಹಾಳುಗೆಡವಿದ್ದಾನೆ… ಬಹುಶಃ ಈ ಹತ್ತು ವರ್ಷಗಳ ಕಾಲದ ಮಳೆಗಾಲದ ವ್ಯತ್ಯಾಸ ಕ್ಕೆ ಮನುಷ್ಯ ನ ನಿಸರ್ಗ ವಿರೋಧಿ ಚಟುವಟಿಕೆಗಳ ನೇರ ಕಾರಣವಿದೆ…!!!
ಹಿರಿಯರು ಹೇಳುವ ಮಳೆಗಾಲದ ವೈವಿಧ್ಯತೆ ಈ ಇಪ್ಪತ್ತೈದು ವರ್ಷಗಳ ಹಿಂದಿನ ತನಕ ನಿಸರ್ಗ ಸಹಜ ಪ್ರಕ್ರಿಯೆ. ಈಗಿನ ಬರ ನೆರೆ ಅನಾವೃಷ್ಟಿ ಗಳು ಮನುಷ್ಯ ನಿಸರ್ಗದ ಮೇಲೆ ಮಾಡಿದ ದೌರ್ಜನ್ಯ ದ ಕಾರಣ… ಈ ಕಾಲದ ಮಳೆ ಬಿಸಿಲು ಛಳಿ ಯನ್ನು ಕರಾರುವಾಕ್ಕಾಗಿ ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ. ಕಳೆದ ಹತ್ತು ವರ್ಷಗಳಿಂದ ಹವಾಮಾನ ಇಲಾಖೆ ನೀಡುವ ಹವಾಮಾನ ಮುನ್ಸೂಚನೆ ಮುಂಗಾರು ಮಾನ್ಸೂನ್ ಮಾರುತಗಳ ಲೆಕ್ಕಾಚಾರ ವಿಫಲವಾಗುತ್ತಿದೆ. ಪ್ರತಿ ಸತಿಯೂ ಜೂನ್ ಒಂದಕ್ಕೆ ಲಕ್ಷದ್ವೀಪ, ಎರಡನೇ ತಾರೀಖು ಕೇರಳ ಮೂರು ಕರ್ನಾಟಕದ ಕರಾವಳಿಯ ನಾಲ್ಕನೇ ತಾರೀಖಿನಂದು ಮಲೆನಾಡಿಗೆ ಮುಂಗಾರು ಪ್ರವೇಶ ಎನ್ನುವ ಸೂಚನೆ ಪ್ರತಿ ಭಾರಿಯೂ ವಿಫಲವಾಗುತ್ತಿದೆ.
ಈಗಿನ ಬಾಹ್ಯಾಕಾಶ ತಂತ್ರಜ್ಞಾನ ದಿಂದ ಬಾಹ್ಯಾಕಾಶ ಚಿತ್ರ ದಲ್ಲಿ ನಮ್ಮ ಭಾಗದಲ್ಲಿ ದಟ್ಟವಾದ ಮೋಡ ಕಂಡರೂ ನಮ್ಮ ಭಾಗದಲ್ಲಿ ಆ ಮೋಡ ಮಳೆ ಸುರಿಸದು…!!! ಇದೆಲ್ಲಾ ನಿಸರ್ಗ ದ ಮೇಲೆ ಮನುಷ್ಯ ಮಾಡಿದ ದಾಳಿಯ ದುಷ್ಪರಿಣಾಮ…!!
ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಮಳೆಗಾಲದ ಸಿದ್ದತೆ ಅತ್ಯಪೂರ್ವವಾಗಿತ್ತು. ನೀವು ಮಲೆನಾಡಿನ ಹೆಬ್ಬಾಗಿಲು ಆಗುಂಬೆ ನಾಲೂರು ಮೇಗರವಳ್ಳಿ ಮಾರ್ಗದಲ್ಲಿ ತೀರ್ಥಹಳ್ಳಿ ಬರುವ ಹೋಗುವ ರಾಗಿದ್ದಲ್ಲಿ ರಸ್ತೆಯ ಪಕ್ಕದ ಮನೆಗಳಿಗೆ ಅಡಿಕೆ ಸೋಗೆ ಮತ್ತು ಟಾರ್ಪಾಲಿನ ಹೊದಿಕೆಯಿಂದ ಮುಚ್ಚಿದ ಚಿತ್ರಣ ಕಾಣಿಸುತ್ತಿತ್ತು. ಈಗ ಸಂಬ್ರಮ ಮಳೆಯ ಕೊರತೆಯ ಜೊತೆಯಲ್ಲಿ ಕಾಣೆಯಾಗುತ್ತಿದೆ….ಆಕಾಶ ದಲ್ಲಿ ಕಪ್ಪು ಗಟ್ಟಿದ ಮೋಡ , ಬಿಸಿ ವಾತಾವರಣ , ಕಪ್ಪೆ ಯ ಒಟರುಗುಟ್ಟುವಿಕೆ, ಕಾಗೆ ಕೂಗುವುದು, ಮಳೆ ಹುಳ ಏಳುವುದು, ಕಟ್ಟಿರುವೆ ಓಡಾಡುವುದು.. ವಾಟ್ಸಾಪ್ ನ ಮಳೆ ಸೂಚನೆ ಯಾವುದೂ ಸತ್ಯ ವಾಗುತ್ತಿಲ್ಲ…
ಯಾರಾದರೂ ಮಲೆನಾಡಿಗೆ ಈ ಮೊದಲಿನ ಮಳೆಗಾಲ ತಂದು ಕೊಡುವಿರಾ……
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…