ದೀಪ್ ದೀಪೋಳಿಗೆ… ಅವರ ಮನೆ ಹೋಳಿಗೆ ಇವರ ಮನೆ ಹೋಳಿಗೆ…. ಅಂತ ಜೋರಾಗಿ ಕೂಗುತ್ತಾ ಸಂಜೆ ಆರೂವರೆ ಹೊತ್ತಿಗೆ ದೀಪಾವಳಿಯ(Diwali) ಹಬ್ಬದ ದಿನ ಮಲೆನಾಡಿನ(Malenadu) ಮನೆ ಮನೆಯಲ್ಲೂ ದೈವ ದೇವರು(God) ಕೃಷಿ ಭೂಮಿ(Agricultural field) ನಿಸರ್ಗಕ್ಕೆ ದೀಪ ಹಚ್ಚಿ ಕೃತಜ್ಞತೆ ಅರ್ಪಿಸುವ ವಿಶೇಷ ಆಚರಣೆ ಮಾಡುವ ಸಮಯ.. ದೀಪಾವಳಿ ಗೋಪೂಜೆ(Gopooje)ಪಟಾಕಿ ಯ ಸಂಭ್ರಮ ದ ಜೊತೆಗೆ ಮಲೆನಾಡಿನಲ್ಲಿ ದೀಪದ ಕೋಲು ಹಚ್ಚುವ ಸಂಭ್ರಮ…..
ನನ್ನ ಬಾಲ್ಯದಲ್ಲಿ ನಮ್ಮ ಮನೆಯ ನೌಕರ ಹಬ್ಬಕ್ಕೆ ಮೊದಲು ಪುಂಡಿ ಮರದ ಕೋಲನ್ನ ನಮ್ಮನೆಗೆ ತಂದು ಕೊಡುತ್ತಿದ್ದ.
ಹಾಲುಬಿಳುಪಿನ ಟೊಳ್ಳಾದ ಮೂರು ಅಡಿಯ ಈ ಕೋಲು ನೋಡಲೇ ಸುಂದರ…!! ಈ ಕೋಲಿಗೆ ಶುದ್ದ ಹತ್ತಿ ಬಟ್ಟೆಯ ಟೇಪ್ ಗೆ ಎಣ್ಣೆ ಹಚ್ಚಿ ಅದನ್ನು ಕೋಲಿನ ತುದಿಗೆ ಸಿಕ್ಕಿಸಿ ಆ ಟೇಪ್ ತುದಿಗೆ ಬೆಂಕಿ ಹಚ್ಚುವ ಆಚರಣೆ ಮಲೆನಾಡಿನಲ್ಲಿ ಇದೆ. ಮನೆ, ತುಳಸಿ ಕಟ್ಟೆ, ಕೊಟ್ಟಿಗೆ , ಗೊಬ್ಬರದ ಗುಂಡಿ, ಬಾವಿ, ತೋಟ, ಗದ್ದೆ , ಕಾಡಿನ ಬ್ರಹ್ಮ,ಚೌಡಿ, ನಾಗ , ಊರ ದೇವಸ್ಥಾನಗಳಿಗೆ ಹೀಗೆ ಎಲ್ಲರಿಗೂ ಈ ಕೋಲು ದೀಪ ಹಚ್ಚಿ ವರ್ಷಕ್ಕೊಮ್ಮೆ ಕೃತಜ್ಞತೆ ಸಲ್ಲಿಸುವ ಭಯ ಭಕ್ತಿಯ ಆಚರಣೆ ಇತ್ತು. ಸಂಜೆ ಹೊತ್ತಿಗೆ ಆಗಷ್ಟೇ ಹಾಲುತುಂಬಿದ ಬತ್ತದ ಗದ್ದೆ ಯಲ್ಲಿ ಹಚ್ಚುವ ಈ ಕೋಲ ದೀಪ ಬರೀ ಪೂಜನೀಯ ಮಾತ್ರ ವಲ್ಲದೇ ಸಂಜೆ ಹೊತ್ತಿಗೆ ಬರುವ ರಸ ಹೀರುವ ಉಪದ್ರವಿ ಕೀಟಗಳು, ದುಂಬಿಗಳು ಈ ದೀಪ ಜ್ವಾಲೆಗೆ ಆಹುತಿ ಯಾಗಿ ದೀಪ ರೈತರಿಗೆ ಉಪಕಾರಿಯೂ ಆಗುತ್ತದೆ ಎಂಬ ನಂಬುಗೆಯಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ದೀಪದ ಮಹತ್ವದ ಅರಿವಿಲ್ಲದೇ ಯಾಂತ್ರಿಕ ಆಚರಣೆಯಾಗುತ್ತಿದೆ. ವಿಶೇಷವಾಗಿ ಈ ಕೋಲು ದೀಪಕ್ಕೆ ಪುಂಡಿ ಕೋಲು ಬಳಸುತ್ತಿಲ್ಲ. ಹೆಚ್ಚಿನವರು ಅಡಿಕೆ ದಬ್ಬೆ, ವಾಟೆ ಸಿಗಳಿನ ಕೋಲು ಬಳಸುತ್ತಾರೆ. ಅತಿ ಸೋಮಾರಿತನವೋ , ಮಾಡುವವರು ಮಟ್ಟುವವರು ಇಲ್ಲದ ಕಾರಣವೋ , ಪುಂಡಿ ಕೋಲು ಲಭ್ಯವಿಲ್ಲದೇ ಇರುವ ಕಾರಣವೋ ಗೊತ್ತಿಲ್ಲ ಕೆಲವರು ಸಲೀಸಾಗಿ ಸಿಗುವ ನೀಲಗಿರಿ ಪೆಲ್ಲೆಟಾ ಕಡ್ಡಿಗೆ ಕೈಗೆ ಸಿಕ್ಕ ಪಾಲಿಸ್ಟರ್ ಬಟ್ಟೆ ಸುತ್ತಿ ದೀಪ ಹಚ್ಚುವ ಶಾಸ್ತ್ರ ಮಾಡಿ ಮುಗಿಸುತ್ತಿದ್ದಾರೆ.
ಹಿಂದೆ ಈ ದೀಪ ಹಚ್ಚುವ ಸಂಧರ್ಭದಲ್ಲಾದರೂ ಊರ ದೇವಸ್ಥಾನ, ನಾಗರ ಬನ , ಕೆರೆ ಯ ಸಮೀಪಕ್ಕೆ ವರ್ಷಕ್ಕೊಮ್ಮೆ ಹೋಗುತ್ತಿದ್ದರು. ಈಗ ಬಹಳಷ್ಟು ಜನ ಮನೆಯಂಗಳದಲ್ಲೇ ತೋಟ ಗದ್ದೆ ಊರ ದೇವರು ಬನ ಗಳ ದೇವರನ್ನು ಕರೆದು ಕೋಲು ದೀಪ ಹಚ್ಚಿ “ದೀಪೋಳಿಗೆ” ಎಂದು ಶಾಸ್ತ್ರ ಮುಗಿಸಿಬಿಡುತ್ತಾರೆ.
ಮಲೆನಾಡಿನ ದೇವಸ್ಥಾನದ ಹೊರ ಆವರಣದಲ್ಲಿ ನೀಲಗಿರಿ ಪೆಲ್ಲೆಟಾ ಜಿಗ್ಗಿನ ಕಡ್ಡಿಯ ತುದಿಯಲ್ಲಿ ಅರ್ಧ ಸುಟ್ಟ ಪಾಲಿಸ್ಟರ್ ಬತ್ತಿ ಬದಲಾದ ಮಲೆನಾಡಿನ ಕಥೆ ಮತ್ತು ಭವಿಷ್ಯದ ಅಂಧಕಾರವನ್ನು ವಿಶ್ಲೇಷಣೆ ಮಾಡುತ್ತಿರುವಂತೆ ತೋರುತ್ತದೆ ದೀಪೋಳಿಗೆ….