ಅಡಿಕೆ, ಕರಾವಳಿ ಹಾಗೂ ಮಲೆನಾಡಿನ ಜನರ ಜೀವನಾಧಾರ. ಅನೇಕ ರೈತರ ಬದುಕು ಅಡಿಕೆ ಮೇಲೆಯೇ ಅವಲಂಬಿತವಾಗಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆಗೆ ಬೆಲೆಯೇನೋ ಇದೆ. ಆದರೆ ಅಡಿಕೆಗೆ ವಿವಿಧ ರೋಗಗಳು ಉಲ್ಬಣಿಸುತ್ತಿರುವುದು ರೈತರನ್ನು ಕಂಗೆಡಿಸಿದೆ. ಕೃಷಿಕರಿಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.
ಹಳದಿ ರೋಗ, ಎಲೆ ಚುಕ್ಕೆ ರೋಗ, ಸಿಂಗಾರ ಒಣಗುವಿಕೆ, ಎಳೆ ಕಾಯಿಗಳು ಬೀಳುವುದು ಹೀಗೆ.. ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ರೋಗಗಳಿಂದ ಮುಕ್ತಿ ಹೇಗೆ ಅನ್ನೋದು ಈವರೆಗೆ ಯಕ್ಷ ಪ್ರಶ್ನೆಯಾಗಿದೆ. ಇರುವ ಒಂದಷ್ಟು ಮದ್ದುಗಳನ್ನೇ ಸಿಂಪಡಿಸಿ ರೈತರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅಡಿಕೆಗೆ ಮಳೆಗಾಲ ಹಾಗೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಅಂಡೋಡಕ ರೋಗವೂ ಕಾಯಿ ಉಳಿಸಿಕೊಳ್ಳಲು ಪರದಾಡುವಂತೆ ಮಾಡುತ್ತವೆ.
ಅಡಿಕೆಯಲ್ಲಿ ಅಂಡೋಡಕ ಕಾರಣಗಳು ಮತ್ತು ನಿರ್ವಹಣೆ:
1. ಇದೊಂದು ಶಾರೀರಿಕ ವ್ಯವಸ್ಥೆಯಾಗಿದ್ದು ಪೋಷಕಾಂಶಗಳ ಕೊರತೆ ಮತ್ತು ಅಹಿತಕರ ವಾತಾವರಣದಿಂದಾಗಿ ಅಡಿಕೆ ಸೀಳುವ ಸಮಸ್ಯೆ ಎದುರಾಗುತ್ತದೆ.
2. ಇದರ ಪ್ರಮುಖ ಲಕ್ಷಣಗಳೆಂದರೆ ಕಾಯಿಗಳು ಮಾಗುವ ಮುನ್ನವೇ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳ ತೊಟ್ಟು ಎರಡು ಹೋಳಾಗಿ ಸೀಳುತ್ತದೆ. ಅಂತಹ ಕಾಯಿಗಳು ಗೊಂಚಲಿನಿಂದ ಕೆಳಗೆ ಬೀಳುತ್ತದೆ. ಎಳೆಯ ಅಡಿಕೆ ಮರಗಳಲ್ಲಿ ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು.
3.ಬೋರಾನ್ ಮತ್ತು ಪೊಟ್ಯಾಷಿಯಂ ಪೋಷಕಾಂಶದ ಕೊರತೆ ಕಾಯಿ ಸೀಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ನಿರ್ವಹಣೆ
1. ತೋಟದಲ್ಲಿ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಬೇಕು.
2. ರೋಗದ ಪ್ರಾರಂಭದ ಹಂತದಲ್ಲಿಯೇ ಶೇಕಡ 0.2% ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸಬೇಕು.
3. ಬೋರಾನ್ ಮತ್ತು ಪೊಟ್ಯಾಶಿಯಂ ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂತೋಷ್ ನಿಲುಗುಳಿ, ತೋಟಗಾರಿಕಾ ಸಲಹೆಗಾರರು, ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ್. 9916359007