ಬದುಕಿನ ಏರಿಳಿತಗಳನ್ನು ನಳನು ದಿಟ್ಟತೆಯಿಂದ ಎದುರಿಸಿ ಗೆದ್ದಿದ್ದಾನೆ. ಜೂಜಾಟ ಆಡಬಾರದೆಂಬ ಅರಿವಿದ್ದರೂ ಆಡಿದ್ದಾನೆ. ಪರಿಣಾಮಗಳ ಅರಿವಿದ್ದೂ ನೆಲವನ್ನು ಕಳೆದುಕೊಂಡಿದ್ದಾನೆ. ಎಲ್ಲಾ ಜ್ಞಾನಗಳಿದ್ದೂ ವಿಸ್ಕೃತಿ ಹೊಂದಿದ. ನಾವಾದರೋ, ನಿತ್ಯ ವಿಸ್ಮೃತಿಯಲ್ಲೇ ಈಜಾಡುವವರು! ವಿಸ್ಮೃತಿಗೆ ಒಂದು ಗುಣವಿದೆ, ಅದು ದಡವನ್ನು ತೋರಿಸುವುದಿಲ್ಲ! ಬದುಕಿನಲ್ಲಿ ಎಚ್ಚರ, ಸ್ಮೃತಿ, ಗತಿಗಳು ಸದಾ ಜಾಗೃತಾವಾಗಿರಬೇಕೆಂಬ ಸಂದೇಶವನ್ನು ‘ನಳ ಚರಿತ್ರೆ’ ಸಾರುತ್ತದೆ.
ಇದು ನಳನ ಬದುಕಿನ ಗಾಥೆಗಿಂತಲೂ, ‘ನಳನ ಕೈರುಚಿ’ ಅಂದರೆ ನಳಪಾಕವು ಅನ್ಯಾನ್ಯ ಸಂದರ್ಭಗಳಲ್ಲಿ ಉಲ್ಲೇಖವಾಗುತ್ತದೆ. ಅಯೋಧ್ಯೆಯ ಅರಸ ಋತುಪರ್ಣ ಬೇಟೆಗೆ ಹೋಗಿ ಬಸವಳಿದಾಗ, ಬಿಸಿಯಾದ ಶುಚಿರುಚಿಯ ಆಹಾರವನ್ನು ಒದಗಿಸಿದ ನಳನ (ಬಾಹುಕ) ಕೈರುಚಿಯಿಂದಾಗಿ, ಅರಮನೆಯಲ್ಲಿ ರಾಜನ ಅಡುಗೆಗಾಗಿ ಆತ ಸೂಪಜ್ಞನಾಗುತ್ತಾನೆ. ಇದು ಕತೆ.
ನಾಲ್ಕು ಮಂದಿ ಹೊಗಳುವಂತಹ ಪಾಕತಜ್ಞರನ್ನು ‘ಒಳ್ಳೆಯ ನಳಪಾಕ ಮಾರಾಯ್ರೆ.. ನೋಡಿ.. ಕೈಯ ಪರಿಮಳ ಇನ್ನೂ ಹೋಗಿಲ್ಲ’ ಎಂದು ಹೊಗಳುತ್ತೇವೆ. “ಅವರು ಎಲ್ಲಿಯವರು.. ನಮ್ಮಲ್ಲಿಗೂ ಬಂದಾರಾ” ಎಂದು ಅವರ ವಿಳಾಸ, ಸಂಪರ್ಕ ಸಂಖ್ಯೆಯನ್ನು ಪಡೆಯಲು ಉತ್ಸುಕರಾಗುತ್ತೇವೆ. ಉತ್ತಮ ಸ್ವಾದದ ಭೋಜನವನ್ನು ಸಿದ್ಧಪಡಿಸಿದ ಪಾಕತಜ್ಞರನ್ನು ನಾವು ಎಂದಾದರೂ ಗೌರವಿಸಿದ್ದಿದಿಯೇ? ಬೇಡ, ಊಟ ಮಾಡಿ ಮರಳುವಾಗ ಒಂದೆರಡು ಒಳ್ಳೆಯ ಮಾತನ್ನು ಆಡಿದ್ದೇವೆಯೇ? ರುಚಿಯಾದ ಪಾಕ ಸಿದ್ಧವಾಗಬೇಕಾದರೆ ಯಾವ ಖಾದ್ಯಗಳಿಗೆ ಎಷ್ಟೆಷ್ಟು ಪ್ರಮಾಣದ ಒಳಸುರಿಗಳು ಬೇಕೆನ್ನುವ ಅನುಭವವು ಒಂದೆರಡು ವರುಷದಲ್ಲಿ ಬರುವಂತಹುದಲ್ಲ. ಅದೊಂದು ತಪಸ್ಸು. ಅಡುಗೆ ಮಾಡುವುದು ಒಂದು ಯಜ್ಞಕ್ಕೆ ಸಮಾನ. ‘ನಳಪಾಕ’ ಅಷ್ಟು ಬೇಗ ಕೈವಶವಾಗದು.
ರುಚಿಯಾದ ಅಡುಗೆ ಮಾಡುವುದು ಮತ್ತು ಅದನ್ನು ಉಣ್ಣುವ ಬಗೆಗೆ ಶಾಸ್ತ್ರವಿದೆ. ಅಡುಗೆ ಎಷ್ಟು ರುಚಿಯಾದರೂ ಉಣ್ಣುವ ರೀತಿ ಗೊತ್ತಿಲ್ಲದಿದ್ದರೂ ರುಚಿಯೂ ಕೈಕೊಡುತ್ತದೆ! ಮೂಲಿಕಾ ತಜ್ಞ ದಿ. ವೆಂಕಟ್ರಾಮ ದೈತೋಟರು ಹೇಳುತ್ತಿದ್ದರು, “ಆಹಾರ ಯೋಗ್ಯ ದ್ರವ್ಯಗಳನ್ನು ಶುದ್ಧಿಗೊಳಿಸಿ, ಷಡ್ರಸಗಳಿಗೆ ತಕ್ಕಂತೆ ಹೊಂದಿಸಿ, ಆಪ್ಯಾಯಮಾನವಾಗುವ ರುಚಿಗಳುಂಟಾಗುವಂತೆ ಅವಶ್ಯ ಪರಿಕರಗಳೊಂದಿಗೆ ವಿವಿಧ ಪಾಕೇತನಗಳನ್ನು ಸಿದ್ಧಪಡುಸುವ ‘ಕುಶಲತೆ’ಗೆ ‘ಅಡುಗೆ’ ಎಂದು ಹೆಸರು. ಹೊರತು ‘ಬೇಯಿಸಿ ಹಾಕುವ’ ಕೆಲಸವಲ್ಲ. ಇಂದೊಂದು ಊಟ ಮಾಡಿದವರಿಗೆ ತೃಪ್ತಿ, ಸಂತಸ, ಆರೋಗ್ಯ ನೀಡುವ ‘ಪಾಕ’ಗಳನ್ನು ಸಿದ್ಧಗೊಳಿಸುವ ವಿಧಾನ. ಸುಲಭದಲ್ಲಿ ಸಿಗುವ ಸಾಮಾನ್ಯ ಆಹಾರ ದ್ರವ್ಯಗಳಿಂದಲೇ, ಕೇವಲ ಒಂದೆರಡು ಪಾಕಗಳಿಂದಲೇ ಗೃಹಿಣಿಯರು ಊಟವನ್ನು ಷಡ್ರಸೋಪೇತವಾಗುವಂತೆ ಯೋಜಿಸಬಲ್ಲರು. ಸಾಮಾನ್ಯ ಊಟವನ್ನೇ ‘ಮೃಷ್ಟಾನ್ನ ಭೋಜನ’ವಾಗಿಸಲ್ಲರು. ಪ್ರಸನ್ನ ಮನಸ್ಸಿನಿಂದ ‘ನಳಪಾಕ’ವನ್ನೂ ಸಿದ್ಧಿಸಬಲ್ಲರು.”
ಈಗ ‘ರೆಡಿ ಟು ಈಟ್’ (ತಿನ್ನಲು ಸಿದ್ಧ) ಯುಗ. ಸಿದ್ಧ ಆಹಾರಗಳು ಅಡುಗೆ ಮನೆಯ ತಂಪುಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತಿರುತ್ತದೆ! ಅದರಿಂದ ದಿಢೀರ್ ಅಡುಗೆ ಸಿದ್ಧ. ಬಾಯಿ ಚಪ್ಪರಿಸುವಂತಹ ರುಚಿ! ಇದೇನು ಮಾಯೆಯೋ! ಸಿದ್ಧ ಆಹಾರಗಳು ಇಷ್ಟು ರುಚಿ ಉಂಟಲ್ವಾ, ಇದನ್ನೇ ಮನೆಯಲ್ಲಿ ಮಾಡಿದರೆ ಯಾಕೆ ರುಚಿಯಿಲ್ಲ? ಅನೇಕ ಅಮ್ಮಂದಿರ ಚೋದ್ಯ. ಇವರಿಗೆಲ್ಲಿ ಅರ್ಥವಾಗಬೇಕು, ಆ ಸಿದ್ಧ ಆಹಾರದಲ್ಲಿ ‘ಪೆಟ್ರೋಲಿಯಂ ಒಳಸುರಿಗಳು, ರುಚಿವರ್ಧಕಗಳು’ ಸೇರಿವೆಯೆಂದು! ಇಂದು ‘ಅಜಿನಮೊಟೋ’(ರುಚಿವರ್ಧಕ)ಗಳು ಆಹಾರವನ್ನು ಸೇರಿ ನಮ್ಮನ್ನು ಭ್ರಮೆಗೆ ಒಳಪಡಿಸುತ್ತವೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ರುಚಿವರ್ಧಕಗಳ ಕರಾಮತ್ತು ಸುದ್ದಿಯಾಗುತ್ತಿದೆ. ಇದು ನಳಪಾಕವಲ್ಲ.
ಹಿರಿಯರಿಂದ ಕಲಿತ ಆಹಾರ ತಯಾರಿ ಕ್ರಮಗಳು ಅಮ್ಮನಿಂದ ಮಗಳಿಗೆ, ಅತ್ತೆಯಿಂದ ಸೊಸೆಗೆ ದಾಟುತ್ತಾ ಬಂದಿರುತ್ತದೆ. ಆ ಕೈರುಚಿಯು ಪಾರಂಪರಿಕ. ಕೆಲವು ಅಮ್ಮಂದಿರು ಹತ್ತು ನಿಮಿಷದಲ್ಲಿ ತಯಾರಿಸಿ ಬಡಿಸುವ ತಂಬುಳಿ, ಸಾರುಗಳು ಉಂಡ ಬಳಿಕವೂ ಸ್ವಾದವನ್ನು ಬಿಟ್ಟುಕೊಡುವುದಿಲ್ಲ.
ದೊಡ್ಡ ಸಮಾರಂಭಗಳಲ್ಲಿ ‘ನಳಪಾಕ’ ಎನ್ನುವ ಫಲಕದ ಕೆಳಗೆ ಮಳಿಗೆಗಳನ್ನು ತೆರೆದು ಆಹಾರ ಒದಗಿಸುತ್ತಾರೆ. ಇಲ್ಲಿ ಶಬ್ದಾರ್ಥಕ್ಕಿಂತಲೂ ‘ರುಚಿಗೆ’ ಪರ್ಯಾಯ ಪದವಾಗಿ ‘ನಳಪಾಕ’. ಅಂದರೆ ಶುಚಿ-ರುಚಿಯಾದ ಆಹಾರಕ್ಕೆ ನಮ್ಮಲ್ಲಿಗೆ ಬನ್ನಿ ಎನ್ನುವ ಆಹ್ವಾನ.
ಅಂದು ನಳಪಾಕ ಪ್ರಸಿದ್ಧ. ಇಂದು? ನಳಪಾಕ ಎನ್ನುತ್ತಾ ಪರೋಕ್ಷವಾಗಿ ‘ವಿಷ’ವನ್ನು ತಿನ್ನುತ್ತಿದ್ದೇವೆ. ಸಾವಯವ ಪದಾರ್ಥಗಳು ಅಡುಗೆ ಮನೆಗೆ ಎಷ್ಟು ಪ್ರಮಾಣದಲ್ಲಿ ನುಗ್ಗುತ್ತಿವೆ? ಸಾವಯವ ಎನ್ನುವುದು ಒಂದು ಕೃಷಿ ವಿಧಾನ ಆಗಿರದೆ ಅದು ಬದುಕಿನ ಅಂಗ. ಉತ್ಪನ್ನವನ್ನು ಬೆಳೆದ ರೈತನ ಪರಿಚಯ ಯಾರಿಗಿದೆ? ಆ ಉತ್ಪನ್ನವನ್ನು ಬೆಳೆಯುವಲ್ಲಿ ಆತನ ಶ್ರಮ ಎಷ್ಟು? ಆತನ ಕುಟುಂಬ ಹೇಗೆ ತೊಡಗಿಕೊಳ್ಳುತ್ತದೆ. ಸಾವಯವದಲ್ಲಿ ಬೆಳೆಯುವುದೆಂದರೆ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಂತೆ. ಇಂತಹ ಸವಾಲುಗಳನ್ನು ಆ ರೈತ ಹೇಗೆ ಪರಿಹರಿಸಿಕೊಂಡ… ಮೊದಲಾದ ಕನಿಷ್ಠ ಪ್ರಶ್ನೆಗಳು ಗ್ರಾಹಕನೊಳಗೆ ಎಂದಾದರೂ ಮೂಡಿವೆಯೇ?
ಈಗ ಕೀಟನಾಶಕ, ರಸಗೊಬ್ಬರಗಳ ಮೇಲಾಟದ ಕೃಷಿ ಪದ್ಧತಿಗಳು ಮೇಲ್ಮೆ ಸಾಧಿಸುವ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಸಾವಯವ ಕೃಷಿ ಅಂದರೆ ತಪಸ್ಸು. ಅದೊಂದು ಧ್ಯಾನ. ಗ್ರಾಹಕನಿಗೆ ಈ ಧ್ಯಾನ ಕಾಣಿಸದು, ಅರ್ಥವಾಗದು. ಅದರೊಳಗಿನ ಮಾತುಗಳು ಕೇಳಿಸಲಾರವು. ಅದು ಕೇಳಿಸಬೇಕಾದರೆ ಕೃಷಿಕನೊಂದಿಗೆ ಸಂಪರ್ಕ ಬೇಕು. ಆತನ ಬದುಕನ್ನು ಅರ್ಥಮಾಡಿಕೊಳ್ಳಬೇಕು. ಕೀಟನಾಶಕಗಳ ಹೊರತಾದ ವಿಚಾರಗಳತ್ತ ಯೋಚಿಸಬೇಕು. ಆಗಷ್ಟೇ ಪುರಾಣದ ನಳ ಮಹಾರಾಜನಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ. ಆತನಿಂದ ‘ಬಳುವಳಿ’ಯಾಗಿ ಬಂದ ‘ನಳಪಾಕ’ವು ನಿಜಾರ್ಥದ ಸ್ವಾದವಾಗುತ್ತದೆ.
ಪಾಣಾಜೆಯ ದಿ.ಜಯಲಕ್ಷ್ಮೀ ದೈತೋಟರು ಆಗಾಗ್ಗೆ ಹೇಳುತ್ತಿದ್ದ ಮಾತು ನೆನಪಾಗುತ್ತದೆ – “ನಾವು ಪ್ರಕೃತಿಯೊಂದಿಗೆ ಬದುಕಬೇಕು. ಪ್ರಕೃತಿಯನ್ನು ಬಿಟ್ಟಾಗ ಅದು ನಮ್ಮ ಕೈಬಿಡುತ್ತದೆ. ರೋಗ ಅಟ್ಟಿಸಿಕೊಂಡು ಬರುತ್ತದೆ. ಹಿಂದೆಲ್ಲಾ ತಂಬುಳಿ-ಕಷಾಯಗಳು ಬದುಕಿನಂಗ. ಈಗ ಅದಕ್ಕೂ ಕ್ಲಾಸ್ ಬೇಕಾಗಿದೆ. ಹಿರಿಯರಿಂದ ಕಿರಿಯರಿಗೆ ಪಾರಂಪರಿಕ ಜ್ಞಾನ ಹರಿದು ಬಾರದೇ ಇರುವುದೂ ಒಂದು ಕಾರಣ.”
ಮರೆಯದ ವ್ಯಕ್ತಿತ್ವ – ನಳ ಮಹಾರಾಜ : ನಿಷಧ ದೇಶಾಧಿಪ ‘ನಳ’ (ನಲ) ಚಕ್ರವರ್ತಿ. ಸಕಲಗುಣ ಸಂಪನ್ನ. ಅಶ್ವಪರೀಕ್ಷೆಯಲ್ಲಿ ನಿಷ್ಣಾತ. ವೇದಾಧ್ಯಯನದಲ್ಲಿ ಪೂರ್ಣತೆ. ಪಗಡೆಯಾಟದಲ್ಲಿ ನಿಸ್ಸೀಮ! ವಿದರ್ಭದ ‘ಭೀಮ’ (ಭೀಮಕ) ಮಹಾರಾಜನ ಮಗಳು ದಮಯಂತಿ. ಹಂಸಗಳ ದೌತ್ಯದಿಂದಾಗಿ ನಳ-ದಮಯಂತಿಯರಲ್ಲಿ ಪ್ರೇಮಾಂಕುರ. ದೇವತೆಗಳೂ ದಮಯಂತಿಯ ಸೌಂದರ್ಯಕ್ಕೆ ಮಾರುಹೋಗಿದ್ದರು. ಸ್ವಯಂವರ ಏರ್ಪಟ್ಟಿತು. ನಾಲ್ವರ ದೇವತೆಗಳು ವಿವಾಹ ಮಂಟಪದಲ್ಲಿ ನಳನಂತೆಯೇ ಪ್ರತ್ಯಕ್ಷರಾದರು. ಇನ್ನೇನು, ಮಾಲಿಕೆ ವಿನಿಮಯದ ಮುಹೂರ್ತ. ದಯಮಂತಿ ಗೊಂದಲಕ್ಕೆ ಒಳಗಾದಳು. ಐವರಲ್ಲಿ ನಳನು ಯಾರು? ಇಷ್ಟ ದೈವವನ್ನು ಪ್ರಾರ್ಥಿಸಿದಳು. ನಳನ ಮೇಲಿನ ಅವಳ ಪ್ರೇಮಕ್ಕೆ ದೇವತೆಗಳು ಮೆಚ್ಚಿ, ನಿಜವೇಷದಿಂದ ಪ್ರತ್ಯಕ್ಷರಾದರು. ಬಳಿಕ ನಳನೊಂದಿಗೆ ದಮಯಂತಿಯ ವಿವಾಹ ಜರುಗಿತು.
ಸಂತೋಷದಿಂದ ದೇವತೆಗಳಲ್ಲಿ ಮುಖ್ಯವಾಗಿ ಯಮಧರ್ಮನು “ನೀನು ಪಾಕಶಾಸ್ತ್ರದಲ್ಲಿ ಪ್ರವೀಣನಾಗು”, ಅಗ್ನಿ ಮತ್ತು ವರುಣರು “ನೀನು ಗ್ರಹಿಸಿದಾಗ ಪ್ರತ್ಯಕ್ಷನಾಗುತ್ತೇವೆ”, ವರವನ್ನು ಕರುಣಿಸಿದರು. ಎಲ್ಲರೂ ತಂತಮ್ಮ ಲೋಕಕ್ಕೆ ಮದುಮಕ್ಕಳ ಗುಣಗಾನವನ್ನು ಮಾಡುತ್ತಾ ತೆರಳುತ್ತಿದ್ದರು. ಇದನ್ನಾಲಿಸಿದ ‘ಕಲಿ’ಯು (ಕೆಲವೆಡೆ ‘ಶನಿ’ ಎಂದಿದೆ) ದೇವತೆಗಳಿಗೆ ಅನ್ಯಾಯವಾಯಿತೆಂದು ಊಹಿಸಿದ. ‘ಆ ದಂಪತಿಗಳೊಳಗೆ ಅಷ್ಟು ಅನ್ಯೋನ್ಯತೆಯೇ.. ನೋಡೋಣ’ ಎನ್ನುತ್ತಾ ಸಮಯ ಕಾಯುತ್ತಿದ್ದನು.
ಒಂದು ದಿನ ನಳನಿಗೆ ಅರಿವಿಲ್ಲದೆ ಅನುಷ್ಠಾನ ತಪ್ಪಿದ. ಇದುವೇ ಸಕಾಲವೆಂದು ಕಲಿಯು ಅವನೊಳಗೆ ಪ್ರವೇಶ ಮಾಡಿದ. ನಳದ ಸೋದರ ಪುಷ್ಕರನನ್ನು ಜೂಜಾಡುವಂತೆ ಪ್ರೇರೇಪಿಸಿದ. ಅಣ್ಣ ಮತ್ತು ತಮ್ಮ ವಿನೋದಕ್ಕೆಂದು ಜೂಜಾಡಿದರೂ ಕೊನೆಗೆ ಒತ್ತೆಯನ್ನಿಟ್ಟು ಆಡಿದರು. ನಳನು ಎಲ್ಲವನ್ನೂ ಕಳೆದುಕೊಂಡು ಪತ್ನಿ ದಯಮಂತಿಯೊಂದಿಗೆ ಕಾಡನ್ನು ಸೇರುತ್ತಾನೆ. ನಳನ ಇಬ್ಬರು ಮಕ್ಕಳನ್ನು ಮೊದಲೇ ದಮಯಂತಿಯು ತಂದೆಮನೆಗೆ ಸೇರಿಸಿದ್ದಳು.
‘ನನ್ನಂತೆ ಇವಳು ಯಾಕೆ ಕಷ್ಟಪಡಬೇಕು. ಯಾರಾದರೂ ತಂದೆಯ ಮನೆಗೆ ಸೇರಿಸಬಹುದು.” ಎಂದೆಣಿಸಿ ತನ್ನ ತೊಡೆಯ ಮೇಲೆ ತಲೆಯನ್ನಿರಿಸಿ ನಿದ್ರಿಸಿದ ದಮಯಂತಿಯನ್ನು ಕಾಡಲ್ಲಿ ಬಿಟ್ಟು ನಳನು ಎತ್ತಲೋ ತೆರಳಿದ. ಎಚ್ಚರಗೊಂಡ ದಮಯಂತಿ ನಾಲ್ದೆಸೆಯಲ್ಲೂ ಹುಡುಕಾಡಿ ಹೈರಾಣಾದಳು. ದುಃಖತಪ್ತಳಾಗಿ ಸಾಗುತ್ತಿರುವಾಗ ಒಂದಷ್ಟು ಮಂದಿ ವ್ಯಾಪಾರಿಗಳು ಕಂಡುಬಂದರು. ಅವರೊಂದಿಗೆ ಚೇದಿ ದೇಶವನ್ನು ಸೇರಿದಳು. ಅಲ್ಲಿನ ಅರಸಿ ದಮಯಂತಿಯ ತಾಯಿಯ ತಂಗಿ. ಕಲಿಯ ಪ್ರಭಾವದಿಂದ ದಮಯಂತಿಯ ಗುರುತು ಅವರಿಗೂ ಸಿಗಲಿಲ್ಲ.
ಇತ್ತ ನಳನು ಕಾಡಿನಲ್ಲಿ ಮುಂದುವರಿಯುತ್ತಿದ್ದಾಗ ಕಾಲ್ಗಿಚ್ಚು ಆವರಿಸುತ್ತದೆ. ಮರದ ಮೇಲಿಂದ ‘ರಕ್ಷಿಸು’ ಆರ್ತನಾದ ಕೇಳಿತು. ಅಜಗರವೊಂದನ್ನು (ಕಾರ್ಕೋಟಕ) ಮರದಿಂದ ಇಳಿಸಿದ್ದಷ್ಟೇ, ಅದು ನಳನನ್ನು ಕಡಿಯಿತು. ರಾಜನ ದೇಹ ವಿರೂಪವಾಯಿತು. “ಈ ರೂಪವೇ ನಿನ್ನ ಮಾನವನ್ನು ಕಾಪಾಡುತ್ತದೆ. ಭವಿಷ್ಯದಲ್ಲಿ ಒಳಿತಾಗುತ್ತದೆ.” ಎಂದಿತು. ನಳನು ‘ಬಾಹುಕ’ ನಾಮದಿಂದ ಅಯೋಧ್ಯೆಯನ್ನಾಳುತ್ತಿದ್ದ ಋತುಪರ್ಣನಲ್ಲಿ ಕುದುರೆಗಳ ಮೇಲ್ವಿಚಾರಕನಾಗಿ ಸೇರಿದ.
ಚೇದಿಯಲ್ಲಿದ್ದ ದಮಯಂತಿಯು ತವರು ಮನೆ ಸೇರಿದಳು. ನಳನನ್ನು ಹುಡುಕುವುದಕ್ಕೆ ಪರಿಚಾರಕರು ನಾಲ್ದೆಸೆ ಸಂಚರಿಸಿ, ಅಯೋಧ್ಯೆಯ ‘ಊಟದ ರುಚಿ’ಯನ್ನು ದಮಯಂತಿಗೆ ಅರುಹಿದರು. ಅಡುಗೆಯನ್ನು ಬಾಹುಕನೇ ಮಾಡಿದ್ದೆಂದೂ ತಿಳಿಸುತ್ತಾರೆ. ದಮಯಂತಿಗೆ ಸಂಶಯ ಬಂದು “ದಮಯಂತಿಗೆ ಪುನರ್ ಸ್ವಯಂವರ ಎಂದು ಘೋಷಿಸಿ. ಸ್ವಯಂವರ ನಾಳೆ ಎಂದಾದರೆ ಇಂದು ಸಂಜೆಯೊಳಗೆ ಅಯೋಧ್ಯೆಗೆ ಓಲೆ ತಲಪಿಸುವಂತೆ ವ್ಯವಸ್ಥೆ ಮಾಡಿ” ಎಂದಳು. ಬಾಹುಕನ ರೂಪದಲ್ಲಿ ನಳನು ಹಾದಾದರೆ ಅಶ್ವಹೃದಯದ ಬಲದಿಂದ ಬಂದೇ ಬರುತ್ತಾನೆ ಎನ್ನುವ ವಿಶ್ವಾಸ.
ಅಯೋಧ್ಯೆಗೆ ಓಲೆ ತಲಪಿತು. ಬಾಹುಕನು ಕುದುರೆಯನ್ನು ಚಪ್ಪರಿಸುತ್ತಾ ರಥವನ್ನು ಓಡಿಸುತ್ತಿದ್ದಾಗ ಋತುಪರ್ಣನ ಕೈಯಲ್ಲಿರುವ ಕರವಸ್ತ್ರ ಬೀಳುತ್ತದೆ. ‘ಅದಿನ್ನು ಸಿಗದು. ಯೋಜನಾಂತರ ಹಿಂದೆ ಉಳಿಯಿತು.” ಎಂದ ಬಾಹುಕನ ಮಾತನ್ನು ಕೇಳಿ ಸಂಶಯವುಂಟಾಗುತ್ತದೆ ಪರಿಪರಿಯಿಂದ ವಿಚಾರಿಸಿದಾಗ ‘ನಳ’ನೆಂದು ತಿಳಿಯುತ್ತದೆ. ಅಷ್ಟು ಹೊತ್ತಿಗೆ ಅವನ ದೇಹವನ್ನು ಸೇರಿದ ಕಲಿಯೂ ತೊಲಗಿದ. ಸಕಾಲಕ್ಕೆ ವಿದರ್ಭವನ್ನು ಸೇರಿದರು. ಅಂದು ರಾತ್ರಿ ಅಗ್ನಿ, ನೀರಿಲ್ಲದೆ ಅಡುಗೆ ಮಾಡಿ ಮಲಗಿದ್ದ ಬಾಹುಕನನ್ನು ಸೇವಕರು ಗಮನಿಸಿದರು. ದಯಮಂತಿಗೆ ವರದಿ ಒಪ್ಪಿಸಿದರು. ಬಾಹುಕ-ದಮಯಂತಿಯರು ಪರಸ್ಪರ ಮಾತಿನಲ್ಲಿ ಒಂದಾದರೂ, ಮತ್ತೆ ಬದುಕಿನಲ್ಲೂ ಒಂದಾದರು.
ಕೃಷಿ-ಗ್ರಾಮೀಣ ಹಾಗೂ ಪರಿಸರದ ಆದ್ಯತೆಯನ್ನು ಹೊಂದಿರುವ “ದ ರೂರಲ್ ಮಿರರ್.ಕಾಂ” ವ್ಯಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿರಿ…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel