ಸರ್ಕಾರ ಕೆಲಸ ಸಿಗಬೇಕಾದ್ರೆ ಯೋಗ ಬೇಕು. ಅಂಥ ಯೋಗ ಈಗ ಬೆಳ್ಳಿಗೆ ಒಲಿದು ಬಂದಿದೆ. ಅದು ನಿವೃತ್ತಿ ತೆಗೆದುಕೊಳ್ಳುವ ವಯಸ್ಸಿನಲ್ಲಿ. ಯಾರು ಈ ಬೆಳ್ಳಿ..? ಇತ್ತೀಚೆಗೆ ತೆರೆಗೆ ಬಂದ ‘ದಿ ಎಲಿಫೆಂಟ್ ವಿಸ್ಪರರ್ಸ್’ಸಿನಿಮಾದ ಮೂಲಕ ಜಗತ್ತಿಗೆ ಪರಿಚಯವಾಗಿದ್ದ ಬೊಮ್ಮನ್ ಮತ್ತು ಬೆಳ್ಳಿಯ ಮುಖದಲ್ಲಿ ಮಂದಹಾಸ ಮೂಡಿಸಿದೆ ತಮಿಳುನಾಡು ಸರಕಾರ. ಆರ್ಥಿಕ ಸಂಕಷ್ಟದಿಂದ ಈ ದಂಪತಿ ಬಳಲುತ್ತಿದ್ದರು ಎನ್ನುವ ಮಾಹಿತಿ ಸಿಕ್ಕ ತಕ್ಷಣವೇ ಬೆಳ್ಳಿಗೆ ಸರಕಾರಿ ನೌಕರಿಯನ್ನು ನೀಡಿದೆ ಸರಕಾರ. ಮೊದಲ ಸರಕಾರಿ ಕಾವಡಿಯಾಗಿ ಬೆಳ್ಳಿ ಇದೀಗ ನೇಮಕಗೊಂಡಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ಮಾಡಿ ಅಭಿನಂದಿಸಿದ್ದರು.
ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು. ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ದೀಪಿಕಾ ಪಡುಕೋಣೆ ಅವರು ಭಾರತವನ್ನು ಪ್ರತಿನಿಧಿಸಿದ ಆಸ್ಕರ್ ಅಂಗಳದಲ್ಲಿ ನಿರೂಪಣೆ ಮಾಡಿದ್ದರು. ಆಸ್ಕರ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಪಡೆದರು.