ಒಂದು ಪುಟ್ಟ ಕೈತೋಟ, ಹಿತ್ತಿಲು, ಮನೆ ಮಾಡಿಕೊಂಡು ಹಸು ಸಾಕಬೇಕು ಅಂತ ಆಸೆ ಪಡುವವರು ಬಹಳ ಮಂದಿ ಇದ್ದಾರೆ. ಸಮಸ್ಯೆ ಏನೆಂದರೆ ಅವರ ಹೊಟ್ಟೆಪಾಡಿಗೆ ಯಾವ ವೃತ್ತಿ ಹಿಡಿದಿರ್ತಾರೋ ಅದು ಮನೆಯಲ್ಲೊಂದು ಹಸು ಕಟ್ಟಿ ಸಾಕಲು ಅನುಕೂಲವಾಗುವಂತೆ ಇಲ್ಲ.
ಉದಾಹರಣೆಗೆ ನಮ್ಮಲ್ಲೊಬ್ಬಳು ಕೆಲಸಕ್ಕೆ ಬರುವವಳು ಒಂದು ದಿವಸ ಅವಳ ಮಗನನ್ನು ಕರಕೊಂಡು ಬಂದಳು. ಅವಳ ಮಗನಿಗೆ ಒಂದು ಕರು ಸಾಕಬೇಕು ಅನಿಸಿತು. ಹಾಗೆ ಮಗನಿಗೊಂದು ಕರು ಬೇಕಂತೆ ಕೊಡ್ತೀರಾ ಅಂತ ಕೇಳಿದಳು. ಓಹೋ ಧಾರಾಳವಾಗಿ ಕೊಡೋಣ. ಹಣ ಕೊಡುವುದು ಬೇಡ ಚಂದದಿಂದ ಸಾಕಿ ಅಂತ ಹೇಳಿದೆ. ಹಾಗೆ ಕೇಳಿ ತುಂಬಾ ಸಮಯ ಕಳೆಯಿತು. ಕರು ಕೊಂಡೋಗಲಿಲ್ಲ. ಕೇಳಿದಾಗ ಹಟ್ಟಿ ಆಗಬೇಕು ಅಂತ ಹೇಳಿದಳು. ಕರು ದೊಡ್ಡದಾಗಿ ಹಸು ಆಯಿತು. ಆದರೂ ಆ ಹುಡುಗನ ಆಸೆ ಈಡೇರಲೇ ಇಲ್ಲ. ಅವರ ಸಮಸ್ಯೆ ಏನೆಂದರೆ ಗಂಡ ಹೆಂಡತಿ ಇಬ್ರೂ ದುಡಿಯಲು ಹೋಗ್ತಾರೆ. ಮಕ್ಕಳು ಶಾಲೆಗೆ ಹೋಗ್ತಾರೆ. ಮನೆಯಲ್ಲಿ ಯಾರೂ ಇಲ್ಲದ ಹೊತ್ತಲ್ಲಿ ದನಕ್ಕೆ ಹುಲ್ಲು ಹಾಕುವುದು, ನೀರುಕೊಡುವುದು ಇತ್ಯಾದಿಗೆ ಕಷ್ಟ. ಆದ್ರಿಂದ ದನ ಸಾಕುವುದು ಬೇಡ ಅಂತ ತೀರ್ಮಾನಿಸಿದ್ರು. ಇಂತಹ ಮಂದಿ ಅನೇಕರಿದ್ದಾರೆ ಅವ್ರಿಗೆ ಹಾಲಿನ ಅಗತ್ಯತೆ ಬಹಳ ಇಲ್ಲ. ಅಗತ್ಯ ಇದ್ದರೆ ಪ್ಯಾಕೆಟ್ ಸಿಗ್ತದೆ. ಅದು ಬಜೆಟಿಗೆ ಹೊರೆಯೂ ಆಗುವುದಿಲ್ಲ.
ಇನ್ನೊಂದು ಕಡೆ ಒಬ್ರು ಸಾಕಷ್ಟು ಅನುಕೂಲಸ್ಥರು. ಸ್ವತಃ ಹುಲ್ಲು ಮಾಡುವುದು, ನೀರು-ಹಿಂಡಿ ಕೊಡುವುದು ಹಟ್ಟಿಸ್ವಚ್ಛ ಮಾಡುವುದು ಅಂತ ಮಾಡ್ಲಿಕೆ ಸಾಧ್ಯ ಇಲ್ಲ. ಒಬ್ಬರಾದರೂ ಕೆಲಸಕ್ಕೆ ನಿತ್ಯ ತಪ್ಪಿಸದೇ ಬರ್ತಾ ಇದ್ರೆ ಹಸು ಸಾಕುವುದಕ್ಕೇನೂ ತೊಂದ್ರೆ ಇರಲಿಲ್ಲ. ಆದ್ರೆ ಕೆಲಸಕ್ಕೆ ಬಂದ್ರೆ ಬಂದ್ರು ಇಲ್ಲದಿದ್ದರೆ ಇಲ್ಲ. ಗ್ರಹಚಾರಕ್ಕೆ ಎಲ್ಲೋ ಅನಿವಾರ್ಯ ಹೊರಡಬೇಕು ಅದೇ ದಿವಸ ಕೆಲಸಕ್ಕೆ ಯಾರೂ ಇಲ್ಲ. ಕಟ್ಟಿಹಾಕಿರುವ ಹಸುಗಳನ್ನು ಬಿಡಲಿಕ್ಕೂ ಅಲ್ಲ. ಹೋಗುವುದನ್ನು ತಪ್ಪಿಸಲಿಕ್ಕೂ ಸಾಧ್ಯ ಇಲ್ಲ. ಇದೇ ಪರಿಸ್ಥಿತಿ ಹಲವಾರೂ ಬಾರಿ ಅನುಭವಿಸಿ ರಗಳೆಯೇ ಬೇಡ ಅಂತ ಹಸುಗಳನ್ನು ಮಾರಾಟ ಮಾಡಿ ಡೈರಿಯಿಂದ ಹಾಲು ತರಲಾರಂಭಿಸಿದರು. ಇಂತಹ ಮಂದಿಯ ಸಂಖ್ಯೆ ಅಧಿಕ. ಇವ್ರು ಮೊದಲು ಡೈರಿಗೆ ಹಾಲು ಕೊಂಡೋಗ್ತಿದ್ದರು.ಈಗ ಅಲ್ಲಿಂದ ತರ್ತಾರೆ.
ಇದೇ ತರ ಇನ್ನೊಬ್ರು ಹಲವಾರು ಮಲೆನಾಡ ಗಿಡ್ಡ ಕಟ್ಟಿಕೊಂಡು.ಕೆಲಸಕ್ಕೆ ಜನ ನೇಮಿಸಿ ಅವರಿಗೂ ಕೆಲವೊಂದು ಆರ್ಥಿಕವಾಗಿ ವೇತನದ ಹೊರತಾಗಿಯೂ ನೆರವು ಇತ್ಯಾದಿ ನೀಡಿ ವಿಶ್ವಾಸಾರ್ಹವಾಗಿ ನೋಡಿಕೊಂಡು ರಜೆ ಮಾಡುವಾಗಲೂ ಒಬ್ರು ತಪ್ಪದೆ ಬರುವಂತೆ ನೋಡಿಕೊಂಡು ಹಸು ಸಾಕ್ತಾರೆ.ಹಾಲು ಕರೆಯುವುದು ಹಿಂಡಿಕೊಡುವುದು ಇತ್ಯಾದಿ ಮನೆಯವರು ಮಾಡ್ತಾರೆ. ಹಸು ಕರು ಹಾಕುವಾಗ ಸ್ಥಳ ಬದಲಾಯಿಸಿ ಕಟ್ಟುವಾಗ, ಹೊರಗೆ ತಿರುಗಾಡಿಸುವುದಿದ್ದರೆ ಮನೆಯವರೇ ಮಾಡ್ತಾರೆ. ಆದ್ರೂ ಕೂಲಿಯವರು ಹೆಚ್ಚಿನ ಕೆಲಸಗಳಿಗೆ ಸಿಗುವ ಕಾರಣ ಮಾಡ್ತಾರೆ. ಈ ತರದವರು ಒಂದಷ್ಟು ಮಂದಿ ಸಿಗ್ತಾರೆ. ಮತ್ತೊಬ್ರು ಹಟ್ಟಿಗೆ ಹೋಗುವುದು ಅಪರೂಪ. ಅವರ ಜಾನುವಾರುಗಳಿಗೆ ಅವ್ರ ಪರಿಚಯ ಇಲ್ಲ. ಎಲ್ಲಾ ಕೆಲಸಗಳಿಗೂ ಕೂಲಿ ಮಂದಿ ಇದ್ದಾರೆ. ಖರ್ಚು ವೆಚ್ಚಕ್ಕೆ ಅನುಕೂಲತೆಯೂ ಇದೆ. ಇಂತಹವರ ಸಂಖ್ಯೆ ಕಡಿಮೆ.
ಇನ್ನೊಂದಷ್ಟು ಮಂದಿ ಇದ್ದಾರೆ ಒಂದೆರಡು ಜೆರ್ಸಿ ಎಚ್ಚೆಫ್ ಇಟ್ಕೊಂಡು ಅಲ್ಪಸ್ವಲ್ಪ ಕೃಷಿ ಮಾಡಿಕೊಂಡು ಬೆಳಗ್ಗೆ ಸಾಯಂಕಾಲ ಡೈರಿಗೆ ಹಾಲು ಪೂರೈಸುವುದು ಅವರ ಕಾಯಕ. ಅವ್ರಿಗೆ ದನ ಅಂತ ಕಣ್ಣಿಗೆ ಕಾಣುವುದು ಹಾಲೆಷ್ಟು ಕೊಡ್ತೆದೆ ಅನ್ನುವ ಪ್ರಶ್ನೆಗೆ ಹದಿನೈದು ಲೀ ಅನ್ನುವ ಉತ್ತರ ಸಿಕ್ಕಿದರೆ ಮಾತ್ರ. ಯಾಕೆಂದರೆ ಅವ್ರಿಗೆ ಮನೆಗೆ ಉತ್ತಮ ಹಾಲಿನ ಅವಶ್ಯಕತೆ ಇಲ್ಲ. ಇರುವ ಕೃಷಿಯನ್ನು ನಿಭಾಯಿಸುವಾಗ ಒಂದು ಉಪ ಆದಾಯ ಬೇಕು. ಹಸು ಮುದಿಯಾದರೆ,ಹೋರಿ ಕರು ಇದ್ರೆ ಅದನ್ನು ವರ್ಗಾಯಿಸುವಾಗಲೂ ಇನ್ನೊಂದು ಕೊಂಡುಕೊಳ್ಳುವುದಕ್ಕೆ ಅನುಕೂಲವಾಗುವ ಮೊತ್ತ ಸಿಗಬೇಕು ಅಷ್ಟೇ. ಇಂತಹ ಮಂದಿಯೇ ಈಗ ಕೆ.ಎಂ ಎಫ್ ನ ಹಾಲಿನ ಮೂಲಗಳು.
ಇನ್ನು ದೇಶೀ ಮಲೆನಾಡಗಿಡ್ಡ ಸಾಕಬೇಕು. ಅವುಗಳ ಹಾಲು ತುಪ್ಪಗಳಿಂದ ಮನೆಯ ಮಕ್ಕಳು ಬೆಳೆಯಬೇಕು. ಉತ್ತಮ ಜೀವಾಣುಯುಕ್ತ ಗೊಬ್ಬರದಿಂದ ಭೂಮಿ ಫಲವತ್ತಾಗಿ ಉಳಿಯಬೇಕು. ಜೊತೆಗೆ ತಾವು ಸಾಕುವ ಹಸುಕರುಗಳು ಹೆಚ್ಚಾದಾಗ ಉತ್ತಮ ಗೋಪಾಲಕರಿಗೇ ಸೇರಬೇಕು. ತಮಗೆ ಅನುಗ್ರಹಿಸಿದ ಗೋವುಗಳ ಸಂತತಿ ಕಟುಕರ ಕೈಪಾಲಾಗಬಾರದು. ಒಂದಷ್ಟು ಅನುಕೂಲ ಇದ್ದರೆ ಎಲ್ಲವನ್ನೂ ನಾನೇ ಸಾಕಿಯೇನು. ಗವ್ಯೋತ್ಪನ್ನಗಳಿಗೆ ಬೇಡಿಕೆ ಇದ್ರೆ ಅದನ್ನು ಮಾಡಿಯಾದರೂ ಹಸುಗಳ ಹೊಟ್ಟೆ ತುಂಬಿಸಿಯೇನು ಅಂತ ಕನಸು ಕಾಣ್ತಾ ಮಲೆನಾಡ ಗಿಡ್ಡ ಮಾತ್ರ ಸಾಕುವ ಮಂದಿ ಬಹುಷಃ ಬೆರಳೆಣಿಕೆಯಷ್ಟು. ಹಲವಾರು ಇಟ್ಟುಕೊಂಡು ಒಂದೆರಡು ಮಗಿ ಸಾಕುವವರ ವರ್ಗ ಬೇರೆ.
ಇನ್ನು ಮೊದಲು ಹಸು ಸಾಕುತ್ತಿದ್ದು ಇನ್ನು ಮುಂದೆ ಹಸು ಎಂಬ ಒಂದು ವಿಷಯವೇ ತಮಗೆ ಬೇಡ. ಹಾಲು ತುಪ್ಪ ಬೇಕಿದ್ರೆ ನಂದಿನಿ ಡೈರಿ ಸಾಕು ಅಂತ ತೀರ್ಮಾನಿಸಿಗ ವರ್ಗವೂ ಇದೆ. ಹೀಗೆ “ಲೋಕೋ ಭಿನ್ನ ರುಚಿಃ ” ಎಂಬಂತೆ ನಾನಾ ತರದ ಜನ ಇದ್ದಾರೆ. ಆದಾಯ ಕಡಿಮೆ ವೆಚ್ಚ ಹೆಚ್ಚು ಎಂಬ ಯಾವುದೇ ಕೆಲಸಗಳು ತಂತಾನೇ ತೆರೆಮರೆಗೆ ಸರಿಯುವುದು ಇಂದಿನ ಕಾರ್ಪೊರೇಟ್ ಯುಗದಲ್ಲಿ ಮಾಮೂಲು. ಆದ್ದರಿಂದ ಸಂಪತ್ತಿಗೆ ಕೊರತೆಯಿಲ್ಲದ ಸಮಾಜದ ಮಂದಿಯನ್ನು ಕೈಜೋಡಿಸುವಂತೆ ಮನವರಿಕೆ ಮಾಡಿ ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಎಲ್ಲ ಗೋಪ್ರೇಮಿಗಳ ಕರ್ತವ್ಯವಾಗಿದೆ. ಯಾಕೆಂದರೆ ಧರ್ಮವು ವೃಷಭರೂಪದಲ್ಲಿದೆ. ಧರ್ಮದಿಂದಲೇ ಅರ್ಥ-ಕಾಮಗಳ ಸಂಪಾದನೆ ಮತ್ತು ಬಳಕೆ ಆಗಬೇಕು. ಆಗ ಮನುಷ್ಯನ ಬದುಕಿಗೆ ನೆಮ್ಮದಿ ಇರಲು ಸಾಧ್ಯ. ಈ ಪ್ರಜ್ಞೆ ಇರುವ ಮಂದಿಯೂ ಕಡಿಮೆ. ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು. ಧರ್ಮ ಉಳಿದರೆ ಭಾರತೀಯರ ಅಸ್ತಿತ್ವದ ಸ್ಥಿರತೆ. ಆದ್ದರಿಂದ ಬನ್ನಿ ಕೈ ಜೋಡಿಸಿ. ಜಾಗೃತಿ ಮೂಡಿಸೋಣ..
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…