ರಾಮಾಯಣವು ‘ರಾಮ’ನ ಕತೆ. ಅಂದರೆ ರಾಮನ ಆಯನ. ಇಲ್ಲಿರುವ ಪಾತ್ರಗಳು ಒಬ್ಬೊಬ್ಬನೊಳಗೆ ಒಂದೊಂದು ಬಗೆಯಲ್ಲಿ ನುಸುಳಿಕೊಂಡಿರುತ್ತವೆ. ಬಹುತೇಕ ಋಣಾತ್ಮಕ ವಿಚಾರಗಳು ರಿಂಗಣಿಸುತ್ತಾ ಇರುತ್ತವೆ. ಬದುಕೇ ಹಾಗಲ್ವಾ. ಧನಾತ್ಮಕ ವಿಚಾರಗಳಿಗೆ ಋಣಾತ್ಮಕವು ತಡೆಬೇಲಿಯೊಡ್ಡುತ್ತಾ ಇರುತ್ತದೆ. ಇದನ್ನು ಅನುಭವದ ಸುಭಗತನದಿಂದ ದಾಟಬೇಕು. …..ಮುಂದೆ ಓದಿ….
ರಾಮಾಯಣ ಪಾತ್ರಗಳ ಸ್ವಭಾವಗಳನ್ನು ನಮಗೆ ಬೇಕಾದಂತೆ ಪರಸ್ಪರ ಆರೋಪಿಸಿಕೊಂಡು, ಆವಾಹಿಸಿಕೊಂಡು ಮಾತನಾಡುತ್ತೇವೆ. ಉದಾಃ ವಾಲಿ, ರಾವಣ, ಮಂಥರೆ, ಶೂರ್ಪನಖಿ, ಕುಂಭಕರ್ಣ.. ರಾವಣ ಸ್ವಭಾವ ಇದ್ದವರಿಗೆ ರಾಮನಾಗುವುದು ಕಷ್ಟ! ಅವರೊಳಗಿನ ರಾವಣ ಭಾವವನ್ನು ಕೆದಕಲು ರಾಮನೇ ಬರಬೇಡ್ವಾ? ಅಂದರೆ ತಾನು ರಾಮನಾದಾಗ ರಾವಣ ದೂರವಾಗುತ್ತಾನೆ. ಆದರೆ ಏನು ಮಾಡೋಣ, ರಾವಣನಿಗೆ ಸಾವಿಲ್ಲದಂತೆ ಬದುಕನ್ನು ‘ಟ್ಯೂನ್’ ಮಾಡಿಕೊಂಡಿದ್ದೇವೆ. ಮನದೊಳಗೆ ಖಾಯಂ ಸ್ಥಾನ ನೀಡಿದ್ದೇವೆ.
ಎಷ್ಟು ಮಂದಿಗೆ ಲಕ್ಷ್ಮಣನಾಗುವ ಮನವಿದೆ? ಎಷ್ಟು ಮಂದಿ ಭರತ, ಶತ್ರುಘ್ನನಾಗುತ್ತಾರೆ? ಹಾಗಾಗುವುದು ಬೇಡ, ಆ ಪಾತ್ರಗಳ ಭಾವಗಳನ್ನು ಅರಿತವರೆಷ್ಟು? ಲಕ್ಷ್ಮಣ ಅಂದರೆ ರಾಮನ ನೆರಳು, ಭರತ ಅಂದರೆ ರಾಮನ ಆಜ್ಞೆಯನ್ನು ಪಾಲಿಸುವ ತಮ್ಮ.. ಇವಿಷ್ಟೇ ಪಾತ್ರಗಳ ಲಕ್ಷಣಗಳು ಅಲ್ಲ. ಅದರಾಚೆಗಿನ ಹೊಳಹು ಕಾಣಲು ರಾಮಾಯಣ ಓದಬೇಕು.
ನಿತ್ಯದ ಮಾತುಕತೆಗಳಲ್ಲಿ ‘ರಾಮಾಯಣ’ದ ಉಲ್ಲೇಖ ಬರುತ್ತದೆ. ನಮ್ಮ ಇತಿ-ಮಿತಿಗಳಂತೆ ಮಾತು ತೆರೆದುಕೊಳ್ಳುತ್ತದೆ. ವೇದಿಕೆಯಲ್ಲಿ ಪ್ರಖರ ಭಾಷಣಗಾರರೊಬ್ಬರ ಮಾತು ವಿಷಯಾಂತರವಾಗಿ ಬಿಡುತ್ತದೆ ಎಂದಿಟ್ಟುಕೊಳ್ಳೋಣ. ವಿಚಾರಗಳು ಪುನಃ ಹಳಿಗೆ ತರಲು ಒದ್ದಾಡುತ್ತಿರುತ್ತಾರೆ. ಕೇಳುವ ಕಿವಿಗಳಿಗೆ ತ್ರಾಸವಾಗಿ, ‘ಇವರದು ಎಂತಹ ರಾಮಾಯಣ ಮಾರಾಯ್ರೆ’ ಎಂದು ಮುಖ ಸಿಂಡರಿಸಿಕೊಳ್ಳುತ್ತಾರೆ. ಸಾವಿರಗಟ್ಟಲೆ ಶ್ಲೋಕಗಳಲ್ಲಿ ಲಂಬಿತವಾಗಿರುವ ರಾಮನ ಕತೆ ‘ರಾಮಾಯಣ’ದಂತೆ ಭಾಷಣವೂ ದೀರ್ಘವಾಗಿದೆ ಎಂದರ್ಥವಷ್ಟೇ.
ಶೂನ್ಯವೇಳೆಯಲ್ಲಿ ಮನೆಯ ಸದಸ್ಯರೆಲ್ಲಾ ಕುಳಿತಿದ್ದಾರೆ. ಹರಟೆ ಸಾಗುತ್ತಿರುತ್ತದೆ. ಅವರಲ್ಲೊಬ್ಬರು ವಿಷಯಕ್ಕೆ ಸಂಬಂಧಪಡದೆ ಕೊರೆತ ಆರಂಭಿಸಿದರೆ, ‘ಸಾಕು ನಿನ್ನ ರಾಮಾಯಣ’ ಎಂದು ಬಾಯಿ ಮುಚ್ಚಿಸುವುದಿಲ್ವಾ. ನೀವು ನೆಂಟರ ಮನೆಗೆ ಹೋಗಿದ್ದೀರಿ. ಅಲ್ಲಿ ನಿಮ್ಮ ಕ್ಷೇಮ ಸಮಾಚಾರಕ್ಕಿಂತ ಇನ್ನೊಬ್ಬರ ಮನೆಯ ಹಳಹಳಿಕೆಯೇ ಮಾತಿಗೆ ವಿಷಯವಾಗುತ್ತದೆ. ಅವರ ಒಡವೆ, ವಾಹನ, ವಿದ್ಯಾಭ್ಯಾಸ, ಮದುವೆ, ವರ್ತನೆಗಳು, ಅಂತಸ್ತುಗಳೆಲ್ಲ ಗಾಥೆಯಾಗುತ್ತವೆ. ನೆಂಟರ ಮನೆಯಿಂದ ಬಂದ ಬಳಿಕ, ‘ಸಾಕಪ್ಪಾ ಸಾಕು.. ಅವರ ರಾಮಾಯಣ ಕೇಳಿ ಸುಸ್ತಾದೆ,” ಎನ್ನುತ್ತೇವೆ. ಕಿವಿಗಚ್ಚುವ ಮಂದಿ ಸಿಕ್ಕರಂತೂ, ಕಿವಿತುಂಬಿಸಿಕೊಂಡು ಮನೆಗೆ ಬರುತ್ತೇವೆ.
ಭೋಜನದ ಪಂಕ್ತಿಯಲ್ಲಿ ಪರಿಚಿತರೊಬ್ಬರು ಸಿಕ್ಕಿದರೆನ್ನಿ. ಅಡಿಕೆ ಸುದ್ದಿ, ಲಂಚಾವತಾರ, ಅಪಘಾತಗಳು, ರಾಜಕೀಯ ಮೇಲಾಟ, ವೈದ್ಯಕೀಯ ಗೊಂದಲ, ರಾಷ್ಟ್ರ ಸುದ್ದಿಗಳು ತನಗೆ ಬೇಕಾದಂತೆ ಪ್ರಸ್ತುತ ಆಗುತ್ತಿರುವಾಗ ಮಜ್ಜಿಗೆ ಬಂದಿರುತ್ತದೆ! ಪಕ್ಕದಲ್ಲಿ ಕುಳಿತವ ‘ಹೂಂ’ಗುಟ್ಟುತ್ತಾ ಉಣ್ಣುತ್ತಿರಬೇಕು. ಹುಸಿ ನಗು ಬೀರುತ್ತಾ ಬಲವಂತದಿಂದ ತಲೆಯಲ್ಲಾಡಿಸುತ್ತಿರಬೇಕು. ಪ್ರತಿ ಮಾತಿಗೂ ಅವಕಾಶವಿಲ್ಲದಂತೆ, ಪೂರ್ಣವಿರಾಮ ಇಲ್ಲದೆ ನಿರರ್ಗಳವಾದ ಮಾತುಗಳು ಅಸಹ್ಯ ಮೂಡಿಸುತ್ತದೆ. ಮನೆಗೆ ಬಂದು ಏನು ಹೇಳ್ತೀರಿ? “ಎಂತ ಕರ್ಮ, ಆ ಮನುಷ್ಯನ ರಾಮಾಯಣ ಮುಗಿಯುವಾಗ ಮಜ್ಜಿಗೆ ಬಂತು.” ಎನ್ನುವುದಿಲ್ವಾ. ಇವರು ತಾನೂ ಉಣ್ಣರು, ಇತರರನ್ನೂ ಉಣ್ಣಲು ಬಿಡರು.
ಕೆಲವೊಮ್ಮೆ ಆಸ್ತಿಯ ವಿಚಾರ, ವೈವಾಹಿಕ ಮಾತುಕತೆಗಳು ನಡೆಯುವಾಗ ‘ಅಯ್ಯೋ.. ಅವರ ಸಹವಾಸ ಬೇಡಪ್ಪಾ ಬೇಡ.. ಅಲ್ಲಿ ತುಂಬಾ ರಾಮಾಯಣವಿದೆ’ ಎನ್ನುತ್ತೇವೆ. ಅಂದರೆ ಅಲ್ಲಿ ‘ಗೊಂದಲವಿದೆ’, ‘ಇತ್ಯರ್ಥ ಮಾಡುವ ವಿಷಯ ಬೇಕಾದಷ್ಟಿದೆ’ ಎಂದರ್ಥ. ರಾಮಾಯಣದಲ್ಲಿ ಗೊಂದಲವಿದೆ ಎಂದು ಅರ್ಥವಿಸಬಾರದು.
ತಾಳಮದ್ದಳೆಯಲ್ಲಿ ಅರ್ಥದಾರಿಯೊಬ್ಬರು ಪಾತ್ರವನ್ನು ಪ್ರತಿನಿಧಿಸುತ್ತಾ ಬಹುದೀರ್ಘ ‘ಸ್ವಗತ’ವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎಷ್ಟೋ ಬಾರಿ ಸ್ವಗತವು ಪಾತ್ರ, ಕಥೆಯಿಂದ ಕಳಚಿಕೊಂಡಿರುತ್ತದೆ. ಪ್ರೇಕ್ಷಕರಿಗೆ ತಾಳ್ಮೆಯ ಪರೀಕ್ಷೆ! ತಾಳಮದ್ದಳೆ ಮುಗಿದ ಬಳಿಕ ‘ಹೇಗಾಯಿತು ಕೂಟ’ ಎಂದು ಆಪ್ತರನ್ನು ಮಾತಿಗೆ ಎಳೆಯುತ್ತೇವೆ. “ಆ ಸ್ವಗತದಲ್ಲಿ ಅಷ್ಟೆಲ್ಲಾ ರಾಮಾಯಣ ಬೇಕಿತ್ತಾ.” ಎಂದು ವಿಮರ್ಶಿಸುತ್ತಾರೆ. ಅಲ್ಲಿ ಮಹಾಭಾರತದ ಪ್ರಸಂಗವಾದರೂ, ಪ್ರೇಕ್ಷಕನಿಗದು ‘ರಾಮಾಯಣ’! ಸ್ವಗತವನ್ನು ಚುಟುಕಾಗಿ, ಪಾತ್ರಪೂರಕವಾಗಿ ಚಿತ್ರಿಸಿಲ್ಲ ಎನ್ನುವ ಭಾವ.
ವರ್ತಮಾನದ ಮನಸ್ಸುಗಳಲ್ಲಿ ಧರ್ಮ, ಸತ್ಯ, ನ್ಯಾಯ.. ಮೊದಲಾದ ಪದಗಳು ಬದುಕಿನೊಳಗೆ ಹಾದು ಹೋಗುವಾಗ ಅನೇಕ ಮಂದಿ ‘ನಾವೇನು ರಾಮಾಯಣ ಕಾಲದವರಾ’ ಅಂತ ಕಿಚಾಯಿಸುತ್ತಾರೆ. ಈ ಪದಗಳ ಅರ್ಥಗಳನ್ನು ಮನನಿಸದೆ ಆಡುವ ಮಾತು. ಇವೆಲ್ಲಾ ರಾಮಾಯಣ ಕಾಲಕ್ಕೆ ಮಾತ್ರ ಸೀಮಿತವೇ? ವರ್ತಮಾನದ ಬದುಕಿನಲ್ಲಿ ಅಗತ್ಯವಾಗಿ ಅನುಷ್ಠಾನಿಸಬೇಕಾದ ಪದಗಳು.
ಬಹುಶಃ ಹೇಳಿದ, ಕೇಳಿದ ವಿಚಾರಗಳನ್ನು ಪುನಃ ಪುನಃ ಪುನರಾವರ್ತಿಸುವ ಚಾಳಿಗೆ ಮಂಗಲ ಹಾಕಲು ‘ರಾಮಾಯಣ’ ಪದ ಬಳಕೆ ಬಂದಿರಬೇಕು. ಮೇಲ್ನೋಟಕ್ಕೆ ಋಣಾತ್ಮಕವಾಗಿ ಕಂಡರೂ ಅಲ್ಲಿ ಅನಾದರವಿಲ್ಲ. ಇಲ್ಲಿ ಅರ್ಥೈಸುವಿಕೆ ಇಲ್ಲದಿರಬಹುದು. ಒಂದು ಕಾವ್ಯವು ಜನಮನದೊಳಗೆ ಇಳಿದ ಪರಿಣಾಮವಿದು. ಆದರೆ ರಾಮಾಯಣದ ಸತ್ವ, ಹೂರಣಗಳನ್ನು ಸ್ವೀಕರಿಸಲು ಈ ಋಣಾತ್ಮಕತೆ ಅಡ್ಡಿಯಾಗುವುದಿಲ್ಲ.
ವಿದ್ವಾಂಸ ಡಾ. ಪಾವಗಡ ಪ್ರಕಾಶ್ ರಾವ್ ತಮ್ಮ ಬರಹವೊಂದರಲ್ಲಿ ರಾಮಾಯಣವನ್ನು ಮೂರು ವರ್ಗದ ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ವಿವರಿಸಿದ್ದಾರೆ. ಮೊದಲ ವರ್ಗ ಜನಸಾಮಾನ್ಯರು. ರಾಮನನ್ನು ದೇವರೆಂದು, ಆದರ್ಶ ವ್ಯಕ್ತಿಯೆಂದು ನಂಬುವ ಮಂದಿ. ಎರಡನೇ ವರ್ಗ ‘ರಸಾನುಭವಿಗಳು’. ವಾಲ್ಮೀಕಿ ಕವಿಯ ಕಾವ್ಯದ ರಸಾನುಭವದ ಅನುಭಾವಿಗಳು. ಕೊನೆಯ ವರ್ಗ ‘ರಾಮನನ್ನು ಪ್ರಶ್ನಿಸುವವರು’. ಒಂದರ್ಥದಲ್ಲಿ ನಾಸ್ತಿಕರು.
ಹಿಂದೊಮ್ಮೆ ಖ್ಯಾತ ಲೇಖಕರೊಬ್ಬರು ಉದಯವಾಣಿಯಲ್ಲಿ ರಾಮಾಯಣದ ಕುರಿತು ‘ವಾಲ್ಮೀಕಿ ತೂಕಡಿಸಿದಾಗ’ ಶೀರ್ಷಿಕೆಯ ಬರಹ ಬರೆದಿದ್ದರು. ಅದಕ್ಕೆ ಯಕ್ಷಗಾನ ಭೀಷ್ಮ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಪ್ರತಿಕ್ರಿಯೆ ಬರೆದುದು ನೆನಪಾಗುತ್ತದೆ, “ರಾಮಾಯಣ ಕಾಲಘಟ್ಟವನ್ನು ಸಮಕಾಲೀನಗೊಳಿಸಬೇಡಿ. ಯಾವುದೇ ಕಾವ್ಯವು ಆಯಾಯ ಕಾಲಘಟ್ಟದ ಬದುಕನ್ನು ಪ್ರತಿನಿಧಿಸುತ್ತದೆ ವಿನಾ ವರ್ತಮಾನವನ್ನು ಅಲ್ಲ.” ಮೊದಲು ರಾಮಾಯಣವನ್ನು ಓದೋಣ. ಮನನಿಸೋಣ. ನಂತರ ವಿಮರ್ಶಿಸೋಣ. ಓದದೆ ಮಾತು ಬೇಡ.
ರಾಮಾಯಣ : ಆದಿಕವಿ ವಾಲ್ಮೀಕಿಯಿಂದ ರಚಿತವಾದ ಕಾವ್ಯ – ರಾಮಾಯಣ. ಅಯೋಧ್ಯೆಯ ಶ್ರೀರಾಮನ ಜೀವನ ಗಾಥೆ. ಅದು ಪುರಾಣ, ಇತಿಹಾಸದ ಜ್ಞಾನ ಮತ್ತು ವಿವೇಕಗಳ ಗನಿ. ಒಂದು ಕುಟುಂಬದೊಳಗೆ ನಡೆಯುವ ವೈವಿಧ್ಯ ವಿದ್ಯಮಾನಗಳು ‘ಅದು ನಮ್ಮವೇ’ ಅನ್ನಿಸುವಷ್ಟು ಸಹಜವಾಗಿದೆ. ಕವಿ ತುಂಬಾ ಮಾರ್ಮಿಕವಾಗಿ ಮತ್ತು ರೋಚಕವಾಗಿ ಕಾವ್ಯದಲ್ಲಿ ಬಿಂಬಿಸಿದ್ದಾನೆ.
ಶ್ರೀರಾಮನ ಕುರಿತು ಬೇರೆ ಬೇರೆ ಕವಿಗಳು ರಾಮಾಯಣವನ್ನು ಬರೆದಿದ್ದಾರೆ. ಎಲ್ಲದಕ್ಕೂ ವಾಲ್ಮೀಕಿ ರಾಮಾಯಣವೇ ಆಧಾರ. ಉದಾ: ಆಧ್ಯಾತ್ಮ ರಾಮಾಯಣ, ಆನಂದ ರಾಮಾಯಣ, ವಾಸಿಷ್ಠ ರಾಮಾಯಣ, ಅದ್ಭುತ ರಾಮಾಯಣ.
ಶ್ರೀ ದೇರಾಜೆ ಸೀತಾರಾಮಯ್ಯನವರ ‘ಶ್ರೀರಾಮಚರಿತಾಮೃತಮ್’ ಕೃತಿಯಲ್ಲಿ ರಂಗನಾಥ ಶರ್ಮರು ಉಲ್ಲೇಖಿಸುತ್ತಾರೆ, “ಮಹಾಭಾರತದಲ್ಲೂ ರಾಮೋಪಾಖ್ಯಾನವಿದೆ. ಸ್ಕಂದ, ಪಾದ್ಮ, ಭಾಗವತ, ಕೂರ್ಮ ಮುಂತಾದ ಪುರಾಣಗಳಲ್ಲಿಯೂ ರಾಮ ಚರಿತೆಯಿದೆ. ಬೌದ್ಧಜಾತಕಗಳಲ್ಲಿಯೂ, ಜೈನ ಪುರಾಣಗಳಲ್ಲಿಯೂ ರಾಮಚರಿತೆಯಿದೆ. ಇಷ್ಟಿದ್ದರೂ ಆದಿಕಾವ್ಯವೆಂದೂ ಪ್ರಮಾಣಭೂತವಾದದ್ದೆಂದೂ ಶಿಷ್ಟರು ಅಂಗೀಕರಿಸಿದ್ದಾರೆ..”
ದೇರಾಜೆ ಸೀತಾರಾಮಯ್ಯನವರು ಒಂದೆಡೆ ಹೇಳುತ್ತಾರೆ, “ರಾಗಿ ಬೀಸುವಾಗ, ಮೊಸರು ಕಡೆಯುವಾಗ, ನೂಲು ತೆಗೆಯುವಾಗ, ಬಟ್ಟೆ ನೇಯುವಾಗ.. ಹೀಗೆ ನಾನಾ ಸಂದರ್ಭಗಳಲ್ಲಿ ಆಯಾ ಕೆಲಸ ಕಾರ್ಯಗಳ ಜತೆಯಾಗಿ ಹಾಡುವ ನೂರಾರು ಹಾಡು, ಲಾವಣಿಗಳಲ್ಲಿ ಶ್ರೀ ರಾಮನ ಕಥೆಯು ಹೇಳಲ್ಪಟ್ಟಿದೆ. ಬಹುಮಂದಿಯಿಂದ ಬಹು ರೀತಿಯ ಭಾವ ಪ್ರಚೋದನಾತ್ಮಕವಾಗಿ ಹೆಣೆಯಲ್ಪಟ್ಟಿರುವ ಬಹುಸಂಖ್ಯೆಯ ಶ್ರೀ ರಾಮ ಕಥಾನಕಗಳು ನಾನಾ ವೈವಿಧ್ಯಪೂರ್ಣವಾಗಿಯೆ ರಂಜಿಸುತ್ತಿರುವುದನ್ನು ಕಾಣಬಹುದು.”
“ರಾಮಾಯಣದಲ್ಲಿಯೇ ಹೇಳಿದ ಶ್ಲೋಕದ ಪ್ರಕಾರ 24,000 ಶ್ಲೋಕಗಳು. 500 ಸರ್ಗಗಳು. ಏಳು ಕಾಂಡಗಳು ಇವೆ. ವ್ಯಾಖ್ಯಾನಕಾರರಾದ ಗೋವಿಂದರಾಜರು ಒಟ್ಟು 647 ಸರ್ಗಗಳು, 24,253 ಶ್ಲೋಕಗಳಿವೆ ಎಂದಿದ್ದಾರೆ. ಕಾಲಾಂತರದಲ್ಲಿ 253 ಶ್ಲೋಕಗಳು ಸೇರಿದವೋ, ಇಲ್ಲ ಕವಿಯೇ ಅವುಗಳನ್ನು ಗಣನೆಗೆ ತೆಗೆದುಕೊಂಡಿಲ್ಲವೋ ಹೇಳುವುದು ಕಷ್ಟ. ಇದೇ ರೀತಿ ಉತ್ತರಕಾಂಡದ ಕುರಿತು ಬಹು ಚರ್ಚೆಗಳು ಇರುವುದು ಸಹಜವಾದರೂ ಲವಕುಶರೇ ರಾಮಾಯಣದ ಮೊದಲ ಪಾಠಕರಾಗಿ ಇರುವುದರಿಂದ ಉತ್ತರಕಾಂಡವಿಲ್ಲದೆ ರಾಮಾಯಣ ಕಲ್ಪಿಸಿಕೊಳ್ಳುವುದು ಅಸಾಧ್ಯ.” (ಡಾ.ಶ್ರೀಶಕುಮಾರ್ ಎಂ.ಕೆ. ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು / ಪುನರ್ವಸು ಕೃತಿಯಲ್ಲಿ)
ಮಹಾಕಾವ್ಯವು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪಾತ್ರಗಳ ಮೂಲಕ ಮತ್ತು ಸಂದರ್ಭ-ಸನ್ನಿವೇಶಗಳ ಮೂಲಕ ಅನಾವರಣಗೊಳಿಸುತ್ತದೆ. ಮಾನುಷ-ಅತಿಮನುಷ, ಮನುಷ್ಯ-ದೈವ, ಮಾನವ-ಪ್ರಕೃತಿ, ಮಾನವ-ದಾನವ ಮತ್ತು ಮಾನವ-ಮಾನವರೊಳಗಿನ ಪರಸ್ಪರ ಸಂಬಂಧಗಳನ್ನು ಗಮನಿಸಬಹುದು. ಈ ಸಂಬಂಧಗಳಲ್ಲಿ ಗಿಡ, ಮರ, ಪಕ್ಷಿ, ನದಿ, ಪರ್ವತಗಳು; ಸಸ್ಯರಾಶಿಗಳು, ಔಷಧೀಯ ಸಸ್ಯಗಳು ಮಿಳಿತಗೊಂಡಿವೆ.
ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಮನದ ಮಾತನ್ನೊಮ್ಮೆ ಆಲಿಸಿ. “ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತವನ್ನು ಕೇಳುತ್ತಾ ಇಂಡೋನೇಷ್ಯಾದಲ್ಲಿ ನನ್ನ ಬಾಲ್ಯವನ್ನು ಕಳೆದುದರಿಂದ ನನ್ನ ಮನದಲ್ಲಿ ಭಾರತಕ್ಕೆ ಯಾವಾಗಲೂ ವಿಶೇಷವಾದ ಸ್ಥಾನವಿದೆ.”
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel