ಒಂದು ಪ್ರಸಿದ್ಧ ಉಕ್ತಿ ಹೀಗಿದೆ:
ದೈವಾಧೀನಂ ಜಗತ್ ಸರ್ವಂ| ಮಂತ್ರಾಧೀನಂತು ದೈವತಂ||
ತನ್ಮಂತ್ರ ಬ್ರಾಹ್ಮಣಾಧೀನಂ| ಬ್ರಾಹ್ಮಣೋ ಮಮ ದೇವತಾ||
ಈ ಜಗತ್ತು ದೇವರ ಅಧೀನ; ಆ ದೇವರು ಮಂತ್ರದ ಅಧೀನ; ಮಂತ್ರಗಳು ಬ್ರಾಹ್ಮಣರ ಅಧೀನ; ಹಾಗಾಗಿ ಬ್ರಾಹ್ಮಣರೇ ದೇವರು ಎಂಬುದು ಈ ಉಕ್ತಿಯ ಅರ್ಥ. ನನ್ನ ದೃಷ್ಠಿಯಲ್ಲಿ ಈ ಶ್ಲೋಕವೇ ಸರಿಯಿಲ್ಲ. ಇದೇ ಬ್ರಾಹ್ಮಣರನ್ನು ಇನ್ನುಳಿದವರು ಹೆಚ್ಚು ದ್ವೇಷಿಸುವ ಹಾಗೆ ಮಾಡಿದ್ದು. ಮಂತ್ರ ದ್ರಷ್ಟಾರರೇ ಬೇರೆ ಇರುವಾಗ ಬ್ರಾಹ್ಮಣರು ಅದನ್ನು ತಮ್ಮ ಅಧೀನ ಮಾಡಿಕೊಳ್ಳುವುದು ಹೇಗೆ? ಅಂದರೆ ಬ್ರಾಹ್ಮಣರು ಜ್ಞಾನವನ್ನು ತಮ್ಮ ಬಂಡವಾಳ ಮಾಡಿಕೊಂಡದ್ದಕ್ಕೆ ಇದೊಂದು ಉದಾಹರಣೆ.
ಪ್ರಸ್ತುತ ಪ್ರಪಂಚದಲ್ಲಿ ತಾಂತ್ರಿಕತೆಯನ್ನು ಬಂಡವಾಳ ಮಾಡಿಕೊಂಡು ಜನ ಸಾಮಾನ್ಯರನ್ನು ಶೋಷಿಸುವ ಕೆಲಸ ನಡೆಯುತ್ತಿದೆ. ಅದಕ್ಕೆ ಮಂತ್ರಿಗಳು, ಅವರ ಸಚಿವಾಲಯ, ಇಲಾಖೆಯ ಅಧಿಕಾರಿಗಳು ಎಲ್ಲರೂ ಕೈ ಜೋಡಿಸುತ್ತಾರೆ. ತಾಂತ್ರಿಕತೆಯ ಮೇಲೆ ತಮ್ಮ ಹಕ್ಕು ಸ್ಥಾಪಿಸುತ್ತಾರೆ. ಮಂತ್ರಗಳನ್ನು ಬೇರೆಯವರು ಉಪಯೋಗಿಸದಂತೆ ಹಿಂದೆ ಬ್ರಾಹ್ಮಣರು ಮಾಡಿದಂತೆ ಈಗ ತಾಂತ್ರಿಕತೆಯನ್ನು ತಿಳಿದವರು ಮಾಡುತ್ತಿದ್ದಾರೆ. ಅದನ್ನು ಉಪಯೋಗಿಸದಂತೆ ಸರಕಾರವು ಶಾಸನಗಳನ್ನು ಮಾಡುತ್ತಿದೆ. ಹಾಗಾಗಿ ಜನಸಾಮಾನ್ಯರಿಗೆ ಅನಿವಾರ್ಯವಾಗಿ ತಾಂತ್ರಿಕತೆಯ ಜುಟ್ಟನ್ನು ಹಿಡಿದವರು ಹೇಳಿದ ಬೆಲೆಯನ್ನು ಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಬಂದಿದೆ. ಹೇಗೆ ಜನರು ಮಂತ್ರಗಳನ್ನು ಬೇಡ ಅನ್ನುವಂತಿಲ್ಲವೋ ಹಾಗೆಯೇ ತಾಂತ್ರಿಕತೆಯನ್ನು ಬೇಡ ಅನ್ನುವಂತಿಲ್ಲ. ಅದು ನಮ್ಮ ಉಪಯೋಗಕ್ಕೆ ಬೇಕು. ದುಬಾರಿ ಬೆಲೆ ಕೊಟ್ಟು ಖರೀದಿಸಲೇ ಬೇಕು. ಅಂತಹ ಮೂರು ಸ್ವಾನುಭವಗಳನ್ನು ಇಲ್ಲಿ ವಿಶ್ಲೇಷಿಸಿದ್ದೇನೆ.
ಕಂಪೆನಿ ನಿರ್ದೇಶಕರಿಗೆ ಡಿಜಿಟಲ್ ಸಿಗ್ನೇಚರ್, ಖಾಸಗಿ ಶಾಲೆಗಳಿಗೆ ಅಗ್ನಿ ಸುರಕ್ಷೆ ಮತ್ತು ಶಾಲಾ ಬಸ್ಸುಗಳಿಗೆ ಪೇನಿಕ್ (Panic) ಬಟನ್ ಎಂಬ ಮೂರು ಕಾನೂನುಗಳನ್ನು ಸುಪ್ರೀಂ ಕೋರ್ಟ್ ವಿಧಿಸಿರುವುದು ಸುರಕ್ಷಿತತೆಗಾಗಿ. ಇವನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಆದರೆ ಅಧಿಕಾರಿಗಳು ಲಂಚ ಭಕ್ಷಣೆಗಾಗಿ ಆಯ್ದ ಕ್ಷೇತ್ರಗಳಲ್ಲಿಯಷ್ಟೇ ಅನ್ವಯಿಸುತ್ತಿದ್ದಾರೆ. ಇದು ಸುಪ್ರೀಂ ಕೋರ್ಟ್‍ಗೂ ಸಮಾಜಕ್ಕೂ ಮಾಡುವ ಅಪಮಾನ. ದುರಾದೃಷ್ಟವೆಂದರೆ ಸಮಾಜದಲ್ಲಿ ಸುರಕ್ಷೆಯನ್ನು ಸಾಧಿಸಬೇಕಾದ ಅಧಿಕಾರಿಗಳು ಇವನ್ನು ಲಂಚ ಪಡೆಯುವುದಕ್ಕೊಂದು ಮಾರ್ಗವಾಗಿ ಬಳಸುತ್ತಾರೆ. ಅದಕ್ಕೆ ತಕ್ಕಂತೆ ಅವರ ಹಿಂದೆ ಜೊಲ್ಲು ಸುರಿಸಿಕೊಂಡು ಏಜೆಂಟ್‍ಗಳು ಈ ಸೌಲಭ್ಯಗಳನ್ನು ಒದಗಿಸುವ ನೆಪದಲ್ಲಿ ಲಾಭ ಮಾಡುತ್ತಾರೆ. ಜನರಿಂದ ಹಣಸುಲಿದು ಸರಕಾರಿ ಅಧಿಕಾರಿಗಳಿಗೆ ಸಲ್ಲಿಸಬೇಕಾದ ಲಂಚವನ್ನು ಕೊಟ್ಟು ಅವರ ಸ್ನೇಹ ಗಳಿಸುತ್ತಾರೆ. ಏಜೆಂಟರಲ್ಲಿ ದುಬಾರಿ ಶುಲ್ಕದ ಬಗ್ಗೆ ವಿವರಣೆ ಕೇಳಿದರೆ ಅವರು ಅಧಿಕಾರಿಗಳನ್ನು ತೋರಿಸುತ್ತಾರೆ. ಅಧಿಕಾರಿಗಳಲ್ಲಿ ಕೇಳಿದರೆ ಅವರು ಸುಪ್ರೀಂ ಕೋರ್ಟನ್ನು ಉಲ್ಲೇಖಿಸುತ್ತಾರೆ. ಮಂತ್ರಿ ಶಾಸಕರುಗಳಲ್ಲಿ ಕೇಳಿದರೆ ಅಧಿಕಾರಿಗಳನ್ನು ಬೈದು ಸಜ್ಜನಿಕೆ ಮತ್ತು ಸಂತಾಪಗಳನ್ನು ಸೂಚಿಸುತ್ತಾರೆ. ಒಟ್ಟಾರೆ ಮಧ್ಯಮವರ್ಗದ ಪ್ರಜೆ ಹೈರಾಣಾಗುವ ಪರಿಸ್ಥಿತಿ ಇಂದಿನ ಪ್ರಜಾಪ್ರಭುತ್ವದಲ್ಲಿದೆ.
ನಾನು ಎದುರಿಸಿದ ಮೂರು ಸಮಸ್ಯೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಿ ಚರ್ಚಿಸುತ್ತೇನೆ. ಇಂತಹದ್ದು ಇನ್ನೆಷ್ಟಿದೆ ಎಂಬುದನ್ನು ನೊಂದವರಿಂದಲೇ ತಿಳಿಯಬೇಕಷ್ಟೇ. ನಾನು ಒಂದು ಶಾಲೆಯನ್ನು ನಡೆಸುತ್ತಿರುವವನಾದುದರಿಂದ ಎದುರಿಸಿದ ಈ ಮೂರು ಸಮಸ್ಯೆಗಳು ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಶಾಲೆಯ ಆಡಳಿತ ಇರುವುದಲ್ಲವಾಗಿದ್ದರೆ ನನಗೂ ತಿಳಿಯುತ್ತಿರಲಿಲ್ಲ.
ಮೊದಲನೆಯದಾಗಿ ಡಿಜಿಟಲ್ ಸಿಗ್ನೇಚರ್ ಎಂಬ ತಾಂತ್ರಿಕತೆಯನ್ನು ಯಾವುದೇ ಕಡತದ ವಿಶ್ವಾಸಾರ್ಹತೆಗಾಗಿ ಬಳಸಲಾಗುತ್ತದೆ. ಅಮೇರಿಕಾದಲ್ಲಿ ಬಳಕೆಯಾದ ಇದನ್ನು ಭಾರತದಲ್ಲಿ ಆಡಿಟಂಗ್ ಹಾಗೂ ಪ್ರೊವಿಡೆಂಟ್ ಫಂಡ್‍ಗಳ ಕಡತಗಳಿಗಾಗಿ ಬಳಕೆಗೆ ತರಲಾಯಿತು. ಭಾರತದಲ್ಲಿ Electronic signature ಸಾಕಾಗಬಹುದಾದರೂ ಅಧಿಕಾರಿಗಳು ಡಿಜಿಟಲ್ ಸಿಗ್ನೇಚರ್ರೇ ಆಗಬೇಕೆಂದರು. ಅದನ್ನು ತಯಾರಿಸುವ ತಾಂತ್ರಿಕತೆಗಾಗಿ ಎಷ್ಟು ಖರ್ಚಾಗುತ್ತದೆ ಎಂಬುದು ಯಾರಿಗೂ ಸ್ಪಷ್ಟವಿಲ್ಲ. ಏಕೆಂದರೆ ಅವನ್ನು ತಯಾರಿಸುವ ಕಂಪೆನಿಗಳು ಉಪಾಯಾಂತರದಿಂದ ಕಾರ್ಪೋರೇಟ್ ಸಚಿವಾಲಯದಲ್ಲಿ ಮಾನ್ಯತೆಯನ್ನು ಪಡೆಯುತ್ತಾರೆ. ಅವುಗಳಲ್ಲಿ ರೂಪಿಸಿದ್ದು ಮಾತ್ರ ಅಥೆಂಟಿಕ್ ಡಿಜಿಟಲ್ ಸಿಗ್ನೇಚರ್ ಎಂಬ ಹಕ್ಕು ಸ್ವಾಮ್ಯ ಗಳಿಸುತ್ತಾರೆ. ಹಾಗಾಗಿ ಒಬ್ಬಾತ ತಾಂತ್ರಿಕ ಪರಿಣತಿ ಇದ್ದು ಡಿಜಿಟಲ್ ಸಿಗ್ನೇಚರ್ ತಯಾರಿಸಿಕೊಳ್ಳ ಬಲ್ಲವನಾದರೆ ಅದಕ್ಕೆ ಮಾನ್ಯತೆ ಇಲ್ಲ. ಮಾನ್ಯತೆ ಇರುವ ಕಂಪೆನಿಯಿಂದಲೇ ಅದನ್ನು ಖರೀದಿಸಬೇಕು. ಅದಕ್ಕೆ 1500 ರೂಪಾಯಿಂದ 3500 ರೂಪಾಯಿವರೆಗೆ ದರವಿಧಿಸುತ್ತಾರೆ. ಹಾಗಾಗಿ ನಿಜವಾಗಿ ಅದಕ್ಕೆ ತಗಲುವ ಖರ್ಚು ಎಷ್ಟು ಮತ್ತು ಕಂಪೆನಿಯ ಲಾಭದ ಪ್ರಮಾಣ ಎಷ್ಟು ಎಂದು ತಿಳಿಯುವುದಿಲ್ಲ. ಮನಬಂದಂತೆ ಏಜೆಂಟರುಗಳು ಚಾರ್ಜ್ ವಿಧಿಸುತ್ತಿರುವುದರಿಂದ ಈ ನಿಯಮವು ಕಡತಗಳ ಸುರಕ್ಷೆಗಾಗಿ ಎಂತಾದರೂ ವಾಸ್ತವವಾಗಿ ಗಿರಾಕಿಗಳ ಸುಲಿಗೆಗಾಗಿ ಎಂಬುದು ಸ್ಪಷ್ಟ. ಹಾಗಾಗಿ ನನ್ನ ಸದ್ಯದ ಆಕ್ಷೇಪವೆಂದರೆ ನಾವೇ ತಾಂತ್ರಿಕ ಪರಿಣತಿಯಿಂದ ಡಿಜಿಟಲ್ ಸಿಗ್ನೇಚರ್ ಮಾಡಿಕೊಳ್ಳಲು ಸಾಧ್ಯವಿದ್ದರೆ ಅದಕ್ಕೆ ಅವಕಾಶ ನೀಡಬೇಕು. ಅದರ ಬದಲು ಸರಕಾರದಿಂದ ಮಾನ್ಯತೆ ಪಡೆದ ಕಂಪೆನಿಗಳಿಗೇ ಶರಣಾಗಬೇಕೆಂದು ಹೇಳುವುದು ನಾಗರಿಕರ ಹಕ್ಕನ್ನು ಕಸಿದಂತಾಗುತ್ತದೆ.
ಇನ್ನು ಶಾಲೆಗಳಲ್ಲಿ ಅಗ್ನಿ ಸುರಕ್ಷೆಯ ವ್ಯವಸ್ಥೆಯನ್ನು ಅಳವಡಿಸುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‍ನ ಒಂದು ಆರ್ಡರ್ ಇದೆ. ಅದು 1992 ರಲ್ಲಿ ತಮಿಳು ನಾಡಿನಲ್ಲಿ ಒಂದು ಶಾಲೆಯಲ್ಲಿ ನಡೆದ ಅಗ್ನಿದುರಂತ ಸಂಭವಿಸಿತ್ತು. ಅದರ ಬಗ್ಗೆ ಒಬ್ಬರು ಹಾಕಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ 2009 ರಲ್ಲಿ (ಅಂದರೆ ಸುಮಾರು 17 ವರ್ಷಗಳ ನಂತರ) ತೀರ್ಪು ನೀಡಿ ಎಲ್ಲಾ ಶಾಲೆಗಳಲ್ಲಿ ಅಗ್ನಿ ಸುರಕ್ಷೆಯ ವ್ಯವಸ್ಥೆ ಇರಬೇಕೆಂದು ವಿಧಿಸಿತು. ಈ ತೀರ್ಪನ್ನು 2018ರಲ್ಲಿ ಪರಿಗಣನೆಗೆ ತೆಗೆದುಕೊಂಡ ಕರ್ನಾಟಕ ಶಿಕ್ಷಣ ಇಲಾಖೆಯು ಅದನ್ನು ಕೇವಲ ಖಾಸಗಿ ಶಾಲೆಗಳ ಮೇಲೆ ವಿಧಿಸಿತು. ಅದರ ಪ್ರಕಾರ ಪ್ರತಿಯೊಂದು ಖಾಸಗಿ ಶಾಲೆಯೂ 10,000 ಲೀಟರ್ ಟಾಂಕಿಯನ್ನು ಎತ್ತರದಲ್ಲಿ ಹೊಂದಿದ್ದು ಅದರಿಂದ ಪೈಪ್‍ಗಳಲ್ಲಿ ಕಟ್ಟಡದ ಸುತ್ತಲೂ ನೀರನ್ನು ಹರಿಸಿ ಬೆಂಕಿ ಬಿದ್ದಾಗ ನಂದಿಸಲು ಸಿದ್ಧತೆ ಮಾಡಿಡಬೇಕು. ಈ ಸಿದ್ಧತೆಯನ್ನು ನಿರ್ದಿಷ್ಟ ಕಂಪೆನಿಯವರಿಂದ ಮಾಡಿಸಿರಬೇಕು. ಅದಕ್ಕೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ರೂಪಾಯಿ ವೆಚ್ಚವಾಗುತ್ತದೆ. ಅಲ್ಲದೆ ಶಾಲಾ ಶಿಕ್ಷಕರು ಅಗ್ನಿ ಶಾಮಕದಳದವರಿಂದ ಶುಲ್ಕ ನೀಡಿ ಬೆಂಕಿ ನಂದಿಸುವ ತರಬೇತಿ ಪಡೆಯಬೇಕು. ವಾಸ್ತವದಲ್ಲಿ 1992 ರಿಂದ ಈವರೆಗೆ ಯಾವ ಶಾಲೆಯಲ್ಲೂ ಬೆಂಕಿ ಅವಘಡ ಆದ ವರ್ತಮಾನವಿಲ್ಲ. ಇನ್ನು ಈ ನಿಯಮವನ್ನು ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಿ ಸರಕಾರಿ ಶಾಲೆಗಳನ್ನು ಸುರಕ್ಷತೆಗೆ ಒಳಪಡಿಸಿಲ್ಲವೇಕೆ? ಈ ಪ್ರಶ್ನೆಗೆ ಶಿಕ್ಷಣ ಇಲಾಖೆಯಲ್ಲಿ ತಾರ್ಕಿಕ ಉತ್ತರವಿಲ್ಲ.
ಇತ್ತೀಚೆಗೆ ಜಾರಿಯಾದ ನಿಯಮವೆಂದರೆ ಖಾಸಗಿ ಶಾಲಾ ಬಸ್‍ಗಳಲ್ಲಿ ಪೆನಿಕ್ ಬಟನ್ ಹಾಕಿಸಬೇಕೆಂಬುದು ಅದು ಒಂದು ಬಸ್ಸಿಗೆ ಒಂದರಂತೆ ಸಾಕಾಗುವುದಿಲ್ಲ. ಎಂಟು-ಹತ್ತು ಬಟನ್‍ಗಳನ್ನಾದರೂ ಹಾಕಿಸಬೇಕು. ಅಷ್ಟಕ್ಕೆ ಬಿಲ್ ಸಹಿತ ಮತ್ತು ಬಿಲ್ ವಿರಹಿತ ಗುಪ್ತ ವೆಚ್ಚಗಳೆಲ್ಲ ಸೇರಿ ಸುಮಾರು 17,000 ತಗಲುತ್ತದೆಂದು ಒಬ್ಬ ಏಜೆಂಟರು ಹೇಳಿದರು. ಇದೊಂದು ನಿರರ್ಥಕ ವೆಚ್ಚ. ಏಕೆಂದರೆ ಪೆನಿಕ್ ಬಟನ್ ಒತ್ತುವ ಸಂದರ್ಭವೇ ಬರುವುದಿಲ್ಲ. ಒತ್ತಿದರೂ ಅದರ ರಿಂಗ್ ಬೆಂಗಳೂರಿನ ಪೊಲೀಸ್ ಕಚೇರಿಗೆ ಹೋಗುತ್ತದೆ. ಅವರು ಬಸ್ಸಿನವರನ್ನೇ “ಏನಾಯಿತೆಂದು” ವಿಚಾರಿಸುತ್ತಾರೆ. ಏನಾದರೂ ಆಗಿದ್ದರೂ ಆಗಿಲ್ಲವೆಂದು ಬಸ್ಸಿನವರು ಹೇಳಿದರೆ ವಿಚಾರಣೆ ಮುಗಿಯಿತು. ಹೀಗೆ ಎಲ್ಲಾ ಬಸ್‍ಗಳ ಪೆನಿಕ್ ಬಟನ್ ಆಗಾಗ ಒತ್ತಲ್ಪಟ್ಟರೆ ಪೊಲೀಸ್ ಇಲಾಖೆ ಏನು ಮಾಡಲು ಸಾಧ್ಯ? ಕೊನೆಗೆ ಇದು ಅಗಸನನ್ನು ಮೊಸಳೆ ಎಳೆದ ಕಥೆಯೇ ಆಗುತ್ತದೆ. ಹೀಗಾಗಿ ಇದು ಕೆಲವೇ ಕಂಪೆನಿಗಳ ಲಾಭಕ್ಕೆ ಮತ್ತು ಪರವಾನಿಗೆ ನೀಡುವವರ ಲಂಚಕ್ಕೆ ಮುಗಿಯುವ ಹಣ. ಶಾಲೆಗಳವರು ಇದನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವ ಮೂಲಕ ವಸೂಲಿಗೆ ತೊಡಗುತ್ತಾರೆ. ಅಂತೂ ಸುಪ್ರೀಂ ಕೋರ್ಟ್‍ನ ಆದೇಶದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬರೆ. ಆದರೆ ಸರಕಾರಿ ಬಸ್ಸ್‍ಗಳಲ್ಲಿ ಪೆನಿಕ್ ಬಟನ್ ಹಾಕದೆ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಸಿ ಸಾಗಿಸುತ್ತಿದ್ದರೂ ಅಲ್ಲಿ ಅನುಚಿತವಾದದ್ದೇನಾದರೂ ನಡೆಯುತ್ತಿದ್ದರೂ ಅದನ್ನು ಕೇಳುವವರಿಲ್ಲ. ಇದು ಪ್ರಜಾಪ್ರಭುತ್ವದ ವಿಡಂಬನಾತ್ಮಾಕ ಆಡಳಿತಕ್ಕೊಂದು ಉದಾಹರಣೆ.
ಕೋರ್ಟ್‍ನ ಆಯ್ದ ಆದೇಶಗಳನ್ನು ಹೇರುವಲ್ಲಿ ಸರಕಾರ ಮತ್ತು ಅಧಿಕಾರ ಶಾಹಿಯು ತೋರುವ ಆಸಕ್ತಿ ಮತ್ತು ಆತುರವು ಇನ್ನಿತರ ಕಾರ್ಯ ಯೋಜನೆಗಳ ನಿರ್ವಹಣೆಯಲ್ಲಿಯೂ ಇರುತ್ತಿದ್ದರೆ ಎಷ್ಟು ಚೆನ್ನಾಗುತ್ತಿತ್ತು! ಆದರೆ ಆ ಯೋಗ ಭಾರತದ ಪ್ರಜಾಪ್ರಭುತ್ವಕ್ಕೆ ಇಲ್ಲ. ಒಂದಲ್ಲ ಒಂದು ವಿಧದಲ್ಲಿ ನಾಗರಿಕರ ಶೋಷಣೆಗೆ ನಿಂತಿರುವ ಅಧಿಕಾರಿ ವರ್ಗದ ಕೈಯಲ್ಲಿ ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ಅರ್ಥಹೀನವಾಗುತ್ತದೆ.
ಈ ಕಾನೂನುಗಳನ್ನು ಒಮ್ಮೆ ಬಳಸಿಕೊಂಡವರು ಅವುಗಳನ್ನು ಮತ್ತೆ ಮತ್ತೆ ನವೀಕರಿಸುತ್ತಿರಬೇಕು. ಉದಾಹರಣೆಗೆ ಹೊಸ ಬಸ್ಸುಗಳಿಗೆ 15 ವರ್ಷಗಳ ಆಯುಸ್ಸು ಇದೆ. ಆಮೇಲೆ ಫಿಟ್ ನೆಸ್ಸ್ ಸರ್ಟಿಫಿಕೇಟ್ ಮಾಡಿಸಬೇಕು. ಆದರೆ ಹೊಸ ಶಾಲಾ ಬಸ್ಸುಗಳನ್ನು ಕೂಡಾ ಎರಡು ವರ್ಷಕ್ಕೊಮ್ಮೆ fitness ತಪಾಸಣೆಗೆ ಒಳಪಡಿಸಬೇಕು. ಮತ್ತು ಅರ್ಹತಾ ಸರ್ಟಿಫಿಕೇಟ್ ಪಡೆಯಬೇಕು. ಆಗ ಮತ್ತೊಮ್ಮೆ ಪೆನಿಕ್ ಬಟನ್, G.P.S. ಎಲ್ಲಾ ನವೀಕರಿಸಬೇಕು. ಅದು ಸಹಜವಾಗಿ ಆಗುವುದಿಲ್ಲ. ಮೊದಲಿಗಿಂತಲೂ ಹೆಚ್ಚು ವೆಚ್ಚಗಳಿಗೆ ತಯಾರಾಗಿರಬೇಕು.
ಅಗ್ನಿಶಾಮಕದ ಕಥೆಯೂ ಅದೇ. ಅದರ ನವೀಕರಣವೂ ಆಗುತ್ತಿರಬೇಕು. ಪರಿಶೀಲನಾ ಶುಲ್ಕ ನೀಡಿ ಸರ್ಟಿಫಿಕೇಟ್‍ಗಳ ನವೀಕರಣ ಆಗಬೇಕು. ಹೊಸ ಶಿಕ್ಷಕರ ಬಾಬ್ತು ಶುಲ್ಕ ನೀಡಿ ತರಬೇತಿ ಪಡೆಯಬೇಕು. ಶಾಲೆಗಳಿಗೆ ಇವೆಲ್ಲವೂ ಖರ್ಚಿನ ಹೊರೆಯನ್ನು ಏರಿಸುವ ಸಂಗತಿಗಳು. ಇನ್ನು ಡಿಜಿಟಲ್ ಸಿಗ್ನೇಚರ್‍ಗೂ ನವೀಕರಣ ಆಗುತ್ತಿರಬೇಕು. ಅದರ ಶುಲ್ಕಗಳು ಕಂಪೆನಿಗಳಿಗೆ ಲಾಭ ಒದಗಿಸುವುದಕ್ಕಾಗಿಯೇ ಇವೆ. ಅಲ್ಲದೆ ಒಬ್ಬಾತ ಗತಿಸಿದ ಬಳಿಕ ಡಿಜಿಟಲ್ ಸಿಗ್ನೇಚರ್‍ಗೆ ಏನೂ ಮಾನ್ಯತೆ ಇರುವುದಿಲ್ಲ.
ತನ್ನ ಆದೇಶಗಳು ನ್ಯಾಯ ಬದ್ಧವಾದ ರೀತಿಯಲ್ಲಿ ಜಾರಿಯಾಗುತ್ತವೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ನೋಡುವುದಿಲ್ಲ. ಅನ್ಯಾಯವಾಗುತ್ತದೆಂದು ಪಬ್ಲಿಕ್ ಇಂಟರೆಸ್ಟ್ ಲಿಟರೇಶನ್ ಹಾಕಿದರೂ ಅದು ಅನೇಕ ವರ್ಷಗಳ ಕಾಲ ವಿಚಾರಣೆಗೆ ಬರುವುದಿಲ್ಲ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel