ಈ ವರ್ಷ (2025) ಜನವರಿ 8 ರಂದು ತಿರುಪತಿಯ ಬಾಲಾಜಿ ಮಂದಿರದಲ್ಲಿ ವೈಕುಂಠ ದರ್ಶನದ ಟಿಕೇಟಿಗಾಗಿ ನಿಂತಿದ್ದ ಸರದಿಯಲ್ಲಿ ಹಿಂದೆ ನಿಂತಿದ್ದವರು ಅದೇ ಸರದಿಯಲ್ಲಿದ್ದ ಮುಂದಿನವರನ್ನು ತುಳಿದು ನಡೆದರು. ಪರಿಣಾಮವಾಗಿ ಆರು ಸಾವುಗಳು ಸಂಭವಿಸಿ ಅನೇಕರು ಗಾಯಾಳುಗಳಾದರು. ಸತ್ತವರು ಮಸಣಕ್ಕೆ ಹೋದರು, ಗಾಯಾಳುಗಳು ಆಸ್ಪತ್ರೆಗೆ ಹೋದರು. ಟಿಕೇಟು ಪಡೆದವರು ದೇವಸ್ಥಾನದೊಳಕ್ಕೆ ಹೋದರು. ಆದರೆ ವೈಕುಂಠಕ್ಕೆ ಯಾರು ಹೋದರು?………ಮುಂದೆ ಓದಿ……..
ತಿರುಪತಿಯ ವಿಷ್ಣುನಿವಾಸಂ ದೇವಳದ ಬಳಿಯಲ್ಲಿ ಈ ಘಟನೆ ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ದ್ವಾರದ ದರ್ಶನಕ್ಕಾಗಿ ಇಲ್ಲಿ ಏಳು ಟಿಕೇಟ್ ಕೌಂಟರ್‍ಗಳನ್ನು ಏರ್ಪಡಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಕ್ಯೂಗಳಲ್ಲಿ ನಿಂತವರ ತಾಳ್ಮೆ ಕೆಟ್ಟಿತ್ತು. ಅಸೌಖ್ಯಕ್ಕೊಳಗಾದ ಒಬ್ಬ ಭಕ್ತರನ್ನು ಚಿಕಿತ್ಸೆಗಾಗಿ ಕಳಿಸಲು ಒಂದು ಗೇಟನ್ನು ಒಮ್ಮೆ ಸಡಿಲಿಸಲಾಯಿತು. ಅದನ್ನೇ ಗೇಟನ್ನು ತೆರೆಯಲಾಯಿತೆಂದು ತಿಳಿದ ಭಕ್ತರು ಸರತಿಯ ಸಾಲಿನಲ್ಲಿ ತಳ್ಳಾಟ ನಡೆಸಿದರು. ಹೇಗೂ ಕ್ಯೂನಲ್ಲಿ ನಿಂತ ಬಳಿಕ ತಮ್ಮ ಸರದಿ ಬಂದೇ ಬರುತ್ತದೆ ಎಂತ ತಿಳಿಯಲಾಗದವರು ಹಿಂದಿನಿಂದ ತಳ್ಳಿದರು. ತಮ್ಮ ಎದುರಿನಲ್ಲಿರುವವರೂ ಭಕ್ತರು ಮತ್ತು ಮನುಷ್ಯರು ಎಂದು ತಿಳಿಯದೆ ಉಂಟುಮಾಡಿದ ಒತ್ತಡವು ಮುಂದಿನವರನ್ನು ಏರಿ ಹೋಗುವ ಮಟ್ಟಕ್ಕೆ ತಲುಪಿತು. ಇನ್ನೊಬ್ಬರನ್ನು ತುಳಿದಾದರೂ ವೈಕುಂಠಕ್ಕೆ ಹೋಗಬೇಕೆಂಬ ಚಿಂತನೆಯು ಭಕ್ತಿಯ ಚೌಕಟ್ಟಿನಲ್ಲಿ ಬರುತ್ತದೆಯೇ? ಇಷ್ಟಾಗಿಯೂ ಟಿಕೇಟನ್ನು ಗಳಿಸಿದರೂ ತಲುಪುವುದು ದೇವರ ಪೂಜೆ ನಡೆಸುವ ಗರ್ಭಗುಡಿಯ ದ್ವಾರಕ್ಕಷ್ಟೇ ಹೊರತು ವೈಕುಂಠಕ್ಕಂತೂ ಅಲ್ಲ. ಇಷ್ಟನ್ನೂ ತಿಳಿಯದವರು ಅದೆಂತಹ ಭಕ್ತರು? ಇನ್ನೊಬ್ಬರನ್ನು ತುಳಿದು ಮುಂದೆ ಸಾಗಿದರೆ ವಿಷ್ಣು ದೇವರಾದರೂ ವೈಕುಂಠದೊಳಗೆ ಬಿಟ್ಟಾರೇ? ಅಷ್ಟಾದರೂ ವೈಚಾರಿಕ ಚಿಂತನೆ ಇಲ್ಲದಿರುವವರ ಮುಕ್ತಿಯ ಕಲ್ಪನೆಗೆ ಏನರ್ಥ!
ಇದಕ್ಕಿಂತಲೂ ಹೆಚ್ಚಿನ ಅವೈಚಾರಿಕತೆ ಎಂದರೆ ಹಣ ಪಡೆದು ವೈಕುಂಠವನ್ನು ತೋರಿಸುತ್ತೇವೆ ಎನ್ನುವ ದೇವಸ್ಥಾನದ ಆಡಳಿತ ಮಂಡಳಿಯದ್ದು. ದೇವರ ಅಲಂಕಾರದ ವೈಭವವು ತಮ್ಮ ಕಣ್ತಣಿಸಿ ಸ್ವರ್ಗವನ್ನು ಕಂಡ ಭಾವವನ್ನು ನೀಡುತ್ತದೆ ಎನ್ನುವ ಭಕ್ತರ ಮುಗ್ಧತೆಯನ್ನು ದೇವಸ್ಥಾನದ ಆಡಳಿತ ಮಂಡಳಿಯು ನಗದೀಕರಿಸುತ್ತದಾದರೆ ಅದು ದೇವಾಲಯವೇ? ಅಲ್ಲಿ ನಡೆಯುವ ಪೂಜೆ ಎಂಬುದು ವ್ಯಾಪಾರವಲ್ಲವೆ? ಹಾಗಾಗಿ ತಿರುಪತಿಯಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ದೇವಾಲಯವೂ ಅಲ್ಲಿನ ವ್ಯವಸ್ಥಾಪಕರ ಧನದಾಸೆ ಕಾರಣವಲ್ಲವೆ? ವಿಚಿತ್ರವೆಂದರೆ ಸಂಜೆ ನಡೆದ ಕಾಲ್ತುಳಿತದಲ್ಲಿ ಮೃತರಾದವರ ಶರೀರಗಳನ್ನು ಪೋಸ್ಟ್ ಮಾರ್ಟಂಗೆ ಕಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿದ ಬಳಿಕ ದೇವಾಲಯವನ್ನು ಸ್ವಚ್ಛಗೊಳಿಸಲಾಯಿತು. ನಂತರ ವೈಕುಂಠ ದರ್ಶನದ ಪೂಜೆ ನಡೆಯಿತು! ಕೆಲವೇ ಕ್ಷಣಗಳ ಮೊದಲು ನಡೆದ ದುಃಖದಾಯಕ ಘಟನೆಯನ್ನು ಮರೆತು ಆರತಿ, ಮಂಗಲವಾದ್ಯ ಮತ್ತು ಪ್ರಸಾದದ ರುಚಿಯಲ್ಲಿ ಭಕ್ತರು ಮುಳುಗಿದ್ದು ವಿಪರ್ಯಾಸ!
ಈ ವರ್ಷ (ಜನವರಿ 29, 2025) ಇನ್ನೊಂದು ಘನಘೋರ ಕಾಲ್ತುಳಿತ ಸಂಭವಿಸಿದ್ದು ಪ್ರಖ್ಯಾತವಾದ ಕುಂಭ ಮೇಳದಲ್ಲಿ. ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ 144 ವರ್ಷಗಳಿಗೊಮ್ಮ ಸಂಭವಿಸುವ ಕುಂಭಮೇಳದಲ್ಲಿ ಕೋಟ್ಯಾಂತರ ಭಕ್ತರು ಭಾಗವಹಿಸುತ್ತಾರೆ. ತಿಂಗಳುಗಟ್ಟಲೆ ನಡೆಯುವ ಈ ಕುಂಭಮೇಳದಲ್ಲಿ ತ್ರಿವೇಣೀ ಸಂಗಮದಲ್ಲಿ ಸ್ನಾನ ಮಾಡುವ ಪುಣ್ಯವೇ ಜೀವನದ ಪರಮ ಲಕ್ಷ್ಯವೆಂಬಂತೆ ಜನರ ಪ್ರವಾಹ ಅಲ್ಲಿಗೆ ಹರಿದಿದೆ. ವಿಶ್ವಾದ್ಯಂತದಿಂದ ಭಕ್ತರು ಬರುತ್ತಾರೆ. ಇಲ್ಲಿನ ಜನಸಂದಣಿಯ ಒತ್ತಡಕ್ಕೆ ಹೊಂದಿಕೊಳ್ಳಲೇ ಬೇಕಾಗುತ್ತದೆ. ಆದರೆ ಕೆಲವರಲ್ಲಿ ಉಂಟಾಗುವ ಅವಸರವು ಸ್ನಾನಕ್ಕಾಗಿ ಧಾವಿಸುವ ಸ್ಪರ್ಧೆಗೆ ಕಾರಣವಾಗುತ್ತದೆ. ನೆಟ್ಟಗಿದ್ದ ಗೇಟನ್ನು ಸ್ವಲ್ಪ ಓರೆ ಮಾಡಿ ನಡೆದ ಕಾಲ್ತುಳಿತಕ್ಕೆ ಮೂವತ್ತು ಮಂದಿ ಬಲಿಯಾದರು. 60 ಮಂದಿ ಗಾಯಾಳುಗಳಾಗಿ ಚಿಕಿತ್ಸೆಗಾಗಿ ಕಳಿಸಲ್ಪಟ್ಟರು. ಸತ್ತವರ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿ ಅವರವರ ಊರುಗಳಿಗೆ ಕಳಿಸಲಾಯಿತು. ತ್ರಿವೇಣಿ ಸಂಗಮದಲ್ಲಿ ಮುಳುಗು ಹಾಕುವವರಿಗಾಗಲೀ, ಅಲ್ಲಿ ಡೇರೆ ಹಾಕಿ ಕುಳಿತ ಸಾಧುಗಳಿಗಾಗಲೀ ಇದ್ಯಾವುದೂ ಗಮನಕ್ಕೇ ಬರಲಿಲ್ಲ! ವ್ಯವಸ್ಥಾಪಕರೆಲ್ಲರೂ ಹೊಸತಾಗಿ ಬಂದು ತುಂಬುತ್ತಿರುವ ಭಕ್ತರ ನಿರ್ವಹಣೆಯಲ್ಲಿ ಮುಳುಗಿದರು! ತೀರ್ಥಸ್ನಾನವು ಅಮಾಯಕರ ಜೀವ ಬಲಿಗೆ ಕಾರಣವಾಗುವಷ್ಟು ಭಕ್ತರು ಮರಳುಗೊಳ್ಳುವುದೇಕೆ?
ಕುಂಭಮೇಳಕ್ಕೆ ಸಂಬಂಧಿಸಿಯೇ ಇನ್ನೊಂದು ಕಾಲ್ತುಳಿತವು ದಿಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಇದೇ 2025 ರ ಫೆಬ್ರವರಿ 16ರಂದು ಸಂಭವಿಸಿತು. ಪ್ರಯಾಗ್‍ರಾಜ್‍ಗೆ ಹೋಗುವುದಕ್ಕಾಗಿ ದಿಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಅಪಾರ ಜನ ಸಂದಣಿಯು ತಮ್ಮ ರೈಲು 14ನೇ ಪ್ಲಾಟ್ ಫಾರಂ ನಲ್ಲಿ ಬರುತ್ತದೆಂದು ಕಾಯುತ್ತಿದ್ದಾಗ ಅದು 12ನೇ ಪ್ಲಾಟ್‍ಫಾರಂಗೆ ಬಂತೆಂಬ ಗುಲ್ಲು ಹಬ್ಬಿ ತಮ್ಮ ಬೋಗಿಯನ್ನು ಹಿಡಿಯಲು ಒಮ್ಮಿಂದೊಮ್ಮೆಲೇ ಎಲ್ಲರೂ ಧಾವಿಸಿದಾಗ ಈ ಕಾಲ್ತುಳಿತ ಸಂಭವಿಸಿದೆ. ಪ್ರಾಣ ಕಳಕೊಂಡವರಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಸಂಖ್ಯೆಯೇ ಹೆಚ್ಚು ಇದೆ. ಅವರನ್ನು ಕಳೆದುಕೊಂಡ ಬಂಧುಗಳ ರೋದನಕ್ಕೆ ಕೊನೆಯಿಲ್ಲ. ಜನರ ಒತ್ತಡವನ್ನು ತಾಳ್ಮೆಯಿಂದ ನಿಭಾಯಿಸುವುದು ಬಿಟ್ಟು ಇನ್ನೊಬ್ಬರನ್ನು ತುಳಿದಾದರೂ ತಮ್ಮ ಗಮ್ಯ ಸ್ಥಾನಕ್ಕೆ ತಲುಪುವ ಮನಸ್ಸಾದರೂ ಭಕ್ತಜನರಿಗೆ ಹೇಗೆ ಬರುತ್ತದೆ? ಪ್ರತ್ಯಕ್ಷ ದರ್ಶಿಗಳ ಪ್ರಕಾರ ಜನರು ತಳ್ಳಾಡುತ್ತಾ ಸಾಗಿದಾಗ ಕೆಲವರು ಮೆಟ್ಟಿಲುಗಳ ಮೇಲೆ ಹಾಗೂ ಎಸ್ಕಲೇಟರ್ ಗಳ ಮೇಲೆ ಬಿದ್ದರು. ಬಿದ್ದವರನ್ನು ಎತ್ತುವಷ್ಟು ತಾಳ್ಮೆಯೂ ಇಲ್ಲದೆ ಸಾಗಿದ ಪ್ರಯಾಣಿಕ ಭಕ್ತರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲವೆಂದು ನಿಯಂತ್ರಕರ ಹೊಣೆಯಲ್ಲಿದ್ದ ಸೈನಿಕರು ಹೇಳಿದ್ದಾರೆ.
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ ತಿಳಿಯುವುದಿಲ್ಲ. ನೆಟ್ಟಗೆ ನಿಲ್ಲಲೂ ಆಧಾರವೂ ಸಿಗುವುದಿಲ್ಲ. ಬಿದ್ದಲ್ಲಿಂದ ಏಳಲು ಕೈ ಚಾಚುವವರೂ ಸಿಗುವುದಿಲ್ಲ. ಏಕೆಂದರೆ ಎಲ್ಲರೂ ಮೆಟ್ಟಿಕೊಂಡು ಓಡುವುದರಲ್ಲೇ ಮಗ್ನರಾಗಿರುತ್ತಾರೆ. ಆದರೂ ಬಿದ್ದವನ ಜೀವ ಹೋಗುವ ತನಕವೂ ತುಳಿತ ಇರುತ್ತದಾದರೆ ಅದೆಷ್ಟು ಮಂದಿ ಮೆಟ್ಟಿರಬಹುದು! ಅರ್ಥಾತ್ ಮೆಟ್ಟುವವರ ಸಂಖ್ಯೆಯೂ ಅಪಾರವಾಗಿರುತ್ತದೆ. ಕಾಲಬುಡದಲ್ಲೇ ನರಳುವವರ ಕಡೆಗೆ ಲಕ್ಷ್ಯ ನೀಡಲು ಅವರಿಗೆ ಸಹನೆಯಿರುವುದಿಲ್ಲ. ಹಾಗಾಗಿ ತನಗಿಂತ ಎದುರಿನವರು ಸಾಗಿದ ದಾರಿಯಲ್ಲೇ ಹಿಂದಿನವರೂ ಸಾಗುತ್ತಾರೆ. ಹಾಗಾಗಿ ಬಿದ್ದವರು ಬಿದ್ದಿರುತ್ತಾರೆ, ಎದ್ದು ನಡೆಯುವವರು ನಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ಬಲಿಪಶುವಾದವರು ಯಾರು ಎಂಬುದರ ಗುರುತು ಸಿಗಬಹುದು. ಅಥವಾ ಸಿಗದಿರಲೂ ಬಹುದು. ಆದರೆ ಅಪರಾಧಿಯನ್ನು ಮಾತ್ರ ಗುರುತಿಸಲಾಗುವುದಿಲ್ಲ. ಬಿದ್ದವರ ಮೇಲೆ ನಡೆದ ಸಾವಿರಾರು ಮಂದಿಯಲ್ಲಿ ಯಾರ ಮೇಲೆಂದು ಸಾವಿನ ಕೇಸ್ ಹಾಕುವುದು!
ಪ್ರ್ರಯಾಗ್‍ರಾಜ್‍ನಲ್ಲಿ ನಡೆದ ಘಟನೆಯಲ್ಲಿ ಮುಹೂರ್ತದ ಸೆಳೆತ ಕಾರಣವಾಗಿತ್ತು. ಸಂಗಮದಲ್ಲಿ ಮುಳುಗಿ ಏಳುವ ಕ್ಷಣವನ್ನು ಪಾಲಿಸುವ ಒತ್ತಡ ಇತ್ತು. ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರಕರಣದಲ್ಲಿ ತಮ್ಮ ರೈಲು ಪ್ರಯಾಣವನ್ನು ತಪ್ಪಿಸಿಕೊಳ್ಳಬಾರದೆಂಬ ಒತ್ತಡ ಇತ್ತು. ಅದು ಅಗತ್ಯವಿಲ್ಲವಾದರೂ ರೈಲ್ವೆ ಸ್ಟೇಶನ್‍ನಲ್ಲಿ ಕೊಡುವ ಸೂಚನೆಗಳಲ್ಲಿ ವ್ಯತ್ಯಾಸವಾದಾಗ ಈ ನೂಕುನುಗ್ಗಲು ಸಂಭವಿಸುತ್ತದೆ. ಆದರೆ ತಿರುಪತಿಯಲ್ಲಿ ನಡೆದ ಘಟನೆಯಲ್ಲಿ ವೈಕುಂಠ ಏಕಾದಶಿಯಂದು ಮಹಾವಿಷ್ಣುವಿನ ಪೂಜೆ ನೋಡುವ ಒತ್ತಡ ಬಾಧಿಸಿತು. ಅಂದರೆ ಬದುಕಿನಲ್ಲಿ ತಪ್ಪು ಮಾಡಿದವನೂ, ವಂಚನೆ ಮಾಡಿದವನೂ, ಕೊಲೆ ಮಾಡಿ ತಪ್ಪಿಸಿಕೊಂಡವನೂ ಕೂಡಾ ಟಿಕೇಟು ಕೊಂಡುಕೊಂಡರೆ ವೈಕುಂಠ ದರ್ಶನಕ್ಕೆ ಅರ್ಹನಾಗುತ್ತಾನೆ. ಹೀಗೆ ಆರಾಧನೆಯನ್ನು ಮಾರಾಟಕ್ಕೆ ಹಾಕಿದರೆ ನಿಜವಾದ ಭಕ್ತಿಗೆ ಬೆಲೆ ಏನು? ತಿರುಪತಿಯ ತಿಮ್ಮಪ್ಪನ ದೇವಳದ ಆಡಳಿತದವರು ಈ ಸಲದ ಭಕ್ತರ ಸಾವಿನಲ್ಲಿ ತಮ್ಮ ಪಾಲೆಷ್ಟು ಎಂಬುದರ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯ.
ಚಂದ್ರಶೇಖರ ದಾಮ್ಲೆ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel