ಬದುಕಿನಲ್ಲಿ ಅತ್ಯಂತ ಅಪರೂಪದ ಸಂಪತ್ತು ಸಮಯ. ಹಣ, ಸ್ಥಾನಮಾನ, ಆಸ್ತಿ–ಪಾಸ್ತಿ ಕಳೆದುಕೊಂಡರೂ ಮರಳಿ ಪಡೆಯಬಹುದು. ಆದರೆ ಒಂದು ಕ್ಷಣ ಕಾಲವೂ ಮರಳಿ ಸಿಗುವುದಿಲ್ಲ. ಆದ್ದರಿಂದಲೇ ಕಾಲಪ್ರಜ್ಞೆ (Time Awareness) ಮತ್ತು ಕಾಲನಿಯಂತ್ರಣ (Time Management) ಮಾನವನ ಬದುಕಿನಲ್ಲಿ ಮೌಲ್ಯಮಯವಾದ ದಾರ್ಶನಿಕ–ಪ್ರಾಯೋಗಿಕ ಪಾಠಗಳನ್ನು ಕಲಿಸುತ್ತದೆ.“ಕಾಲಃ ಸರ್ವಭೂತಾನಾಂ ಭವತ್ಯಾದಿ ನಿದಾನಮೇ” – ಕಾಲವೇ ಸರ್ವಭೂತಗಳ ಆದಿ–ಕಾರಣ.
ಕಾಲಪ್ರಜ್ಞೆ ಎಂದರೆ ಸಮಯದ ಹರಿವಿನ ಅರಿವು, ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು, ಮತ್ತು ಪ್ರತಿಯೊಂದು ಕ್ಷಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಜಾಗೃತ ಮನೋಭಾವ.ದಿನಚರ್ಯೆಯ ಪ್ರತಿಯೊಂದು ಅಂಶದಲ್ಲಿ ಸಮಯವನ್ನು ಗಮನಿಸುವುದು.ಸಮಯ ವ್ಯರ್ಥಗೊಳಿಸುವ ಚಟುವಟಿಕೆಗಳನ್ನು ಗುರುತಿಸುವುದು.ಪ್ರತಿಯೊಂದು ಕೆಲಸಕ್ಕೆ ಸೂಕ್ತ ಕಾಲನಿಯೋಜನೆ ಮಾಡುವುದು.
ಉದಾಹರಣೆ: ವಿದ್ಯಾರ್ಥಿ ಪರೀಕ್ಷೆಯ ಮುನ್ನ ದಿನಪೂರ್ತಿ ಮೊಬೈಲ್‌ನಲ್ಲಿ ಕಾಲಹರಣ ಮಾಡಿದರೆ ಫಲಶ್ರುತಿ ನಕಾರಾತ್ಮಕ. ಆದರೆ ಸಮಯವನ್ನು ಪಾಠಗಳಿಗೆ ಹಂಚಿಕೊಂಡರೆ ಯಶಸ್ಸು ಅವನ ಕೈ ಸೇರಬಹುದು.
ಭಾರತೀಯ ದರ್ಶನಗಳಲ್ಲಿ ಕಾಲಕ್ಕೆ ವಿಶೇಷ ಸ್ಥಾನವಿದೆ : ಉಪನಿಷತ್ತುಗಳು: “ಕಾಲೋ ಹಿ ದುರತಿಕ್ರಮಃ” ಎಂದಿದೆ . ಕಾಲವನ್ನು ಮೀರಲಾಗದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು “ಕಾಲೋಸ್ಮಿ ಲೋಕಕ್ಷಯಕೃತ್” ಎಂದು ಘೋಷಿಸಿದ್ದಾನೆ. ಕಾಲವೇ ಸೃಷ್ಟಿ–ಸ್ಥಿತಿ–ಲಯಗಳ ಚಕ್ರದ ನಿಯಂತ್ರಕ ಎಂಬುದಾಗಿ ಹೇಳಿದ್ದಾನೆ. ಕವಿ ಭಾರವಿ “ಕಾಲಃ ಕ್ರೀಡತಿ ಗಚ್ಛತ್ಯಯುಃ” ಎಂಬುದಾಗಿ ಹೇಳುತ್ತಾನೆ ಕಾಲ ವೆಂಬುದು ಆಟವಾಡುತ್ತಾ ಜೀವವನ್ನು ಕಿತ್ತುಕೊಂಡು ಹೋಗುತ್ತದೆ.ಈ ದೃಷ್ಟಿಯಿಂದ ಕಾಲಪ್ರಜ್ಞೆ ಎಂದರೆ ಜೀವನವನ್ನು ಉದ್ದೇಶಪೂರ್ಣವಾಗಿ ಸಾಗಿಸುವ ಜ್ಞಾನ.
ಕಾಲನಿಯಂತ್ರಣ ಎಂದರೆ ಸಮಯವನ್ನು ಆದ್ಯತೆ , ನಿಯಮ, ಹಾಗೂ ಶಿಸ್ತುಗಳ ಮೂಲಕ ರೂಪಿಸುವುದು. ಇದಕ್ಕಾಗಿ ಕೆಳಗಿನ ಹಂತಗಳು ಮುಖ್ಯ:
- ಆದ್ಯತಾ ಪಟ್ಟಿ (Priority List) – ತುರ್ತು ಮತ್ತು ಮುಖ್ಯ ಕೆಲಸಗಳನ್ನು ಮೊದಲು ಗುರುತಿಸಿ. ವಿಭಾಗಿಸುವುದು- ತುರ್ತು/ಮುಖ್ಯ, ತುರ್ತು/ಅಮುಖ್ಯ, ಮುಖ್ಯ/ಅತುರ್ತು, ಅಮುಖ್ಯ/ಅತುರ್ತು ವಿಭಾಗ.
- ಯೋಜನೆ (Planning) – ದಿನ, ವಾರ, ತಿಂಗಳ ಮಟ್ಟದಲ್ಲಿ ಕೆಲಸವನ್ನು ಹಂಚಿಕೊಳ್ಳುವುದು.
- ಶಿಸ್ತು (Discipline) – ನಿಗದಿಪಡಿಸಿದ ವೇಳೆಗೆ ತೊಡಗಿಸಿಕೊಳ್ಳುವುದು, ಸಮಯ ಮಿತಿಯೊಳಗೆ ಕಾರ್ಯ ಪೂರ್ಣಗೊಳಿಸುವ ಅಭ್ಯಾಸ.
- ವಿಮರ್ಶೆ (Review) – ಸಮಯವನ್ನು ಎಲ್ಲಿ ವ್ಯರ್ಥ ಮಾಡಿದೆವು, ಎಲ್ಲಿ ಯಶಸ್ವಿಯಾಗಿ ಬಳಸಿದೆವು ಎಂಬ ಪರಿಶೀಲನೆ.
ಕಾಲಪ್ರಜ್ಞೆಯ ಸಾಮಾಜಿಕ–ವೈಯಕ್ತಿಕ ಪ್ರಯೋಜನಗಳು :
- ವೈಯಕ್ತಿಕ ಬೆಳವಣಿಗೆ: ಓದು, ಕೆಲಸ, ವ್ಯಾಯಾಮಕ್ಕೆ ನಿಯಮಿತ ಸಮಯ ನೀಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
- ಸಂಬಂಧಗಳಲ್ಲಿ ಸೌಹಾರ್ದ: ಸಮಯಕ್ಕೆ ಬರುವ ಅಭ್ಯಾಸ ವಿಶ್ವಾಸವನ್ನು ಬೆಳೆಸುತ್ತದೆ.
- ಆರೋಗ್ಯ: ನಿಯಮಿತ ದಿನಚರಿ, ನಿದ್ರೆ–ಆಹಾರದಲ್ಲಿ ಕಾಲಪ್ರಜ್ಞೆ ಪಾಲಿಸಿದರೆ ದೇಹ–ಮನಸ್ಸು ಸಮತೋಲನದಲ್ಲಿರುತ್ತದೆ.
- ಸಂಸ್ಥೆಗಳ ಯಶಸ್ಸು: ಉದ್ಯಮ, ಕಚೇರಿ, ಶಿಕ್ಷಣ ಕ್ಷೇತ್ರ – ಎಲ್ಲೆಡೆ ಸಮಯಪಾಲನೆಯೇ ಪ್ರಗತಿಯ ಮೂಲ.
ಕಾಲಪ್ರಜ್ಞೆಯ ಕೊರತೆಯಯಿಂದಾಗಿ ಕೆಲಸಗಳಲ್ಲಿ ವಿಳಂಬ, ಅಸಮಾಧಾನ.,ಒತ್ತಡ, ಆತಂಕ, ದೈಹಿಕ–ಮಾನಸಿಕ ಹಿಂಸೆ.,ಮತ್ತು ಇತರರ ವಿಶ್ವಾಸ ಕಳೆದುಕೊಳ್ಳುವುದು.ಪರಿಣಾಮವಾಗಿ ಗುರಿಯಿಲ್ಲದ ಜೀವನವಾಗುತ್ತದೆ .
ಕಾಲಪ್ರಜ್ಞೆ ಬೆಳೆಸುವ ಪ್ರಾಯೋಗಿಕ ವಿಧಾನಗಳು :
- ದಿನಚರ್ಯೆ ಬರೆಯುವುದು – ದಿನದ ಆರಂಭದಲ್ಲೇ ಕೆಲಸಗಳ ಪಟ್ಟಿ ಮಾಡುವುದು.
- 2.‘ಟು-ಡೂ ಲಿಸ್ಟ್’ ಮತ್ತು ಅಲಾರಂ ಬಳಸುವುದು.
- ಸಾಮಾಜಿಕ ಮಾಧ್ಯಮ ನಿಯಂತ್ರಣ – ನಿಗದಿತ ಸಮಯ ಮಾತ್ರ ಬಳಸುವುದು.
- ‘ಒಂದು ಕೆಲಸ – ಒಂದು ಸಮಯ’ ಎಂಬ ನಿಯಮವನ್ನು ರೂಪಿಸಿಕೊಳ್ಳುವುದು.
- ಮೈಂಡ್‌ಫುಲ್‌ನೆಸ್ ಅಭ್ಯಾಸ – ಪ್ರಸ್ತುತ ಕ್ಷಣದಲ್ಲಿ ಗಮನ ಹರಿಸುವುದು.
ಕಾಲಪ್ರಜ್ಞೆ ಎಂದರೆ ಕೇವಲ ಸಮಯಪಾಲನೆ ಅಲ್ಲ; ಅದು ಜೀವನಪಾಲನೆ. ಬದುಕು ಒಂದು ಕ್ಷಣದ ಹರಿವು. ಆ ಹರಿವನ್ನು ಸಾರ್ಥಕಗೊಳಿಸಲು ಕಾಲಪ್ರಜ್ಞೆ ಮಾರ್ಗದರ್ಶಕ. ಕಾಲದೊಂದಿಗೆ ಬದುಕುವವನೇ ಕಾಲವನ್ನು ಮೀರಿ ಬದುಕುತ್ತಾನೆ.


