ಅಂದಾಜು ಇಪ್ಪತ್ತರಿಂದ ಇಪ್ಪತ್ತೈದು ವರುಷ ಆಯುಸ್ಸಿನಲ್ಲಿ ಒಬ್ಬ ಮನುಷ್ಯ ದುಡಿಯಲು ಪ್ರಾರಂಭಿಸುತ್ತಾನೆ . ಅರವತ್ತು ವರುಷಕ್ಕೆ ಅವನಿಗೆ ವರಿಷ್ಠ ನಾಗರಿಕ(Senior Citizens) ಅನ್ನುತ್ತದೆ ಕಾಯದೆ ಮತ್ತು ಸಮಾಜ(Society). ಅಂದರೆ ಆತ ವರಿಷ್ಠ ನಾಗರಿಕ ಆಗುವ ಘಟ್ಟ ತಲುಪುವಾಗ ಮೂವತ್ತೈದರಿಂದ ನಲವತ್ತು ವರುಷ ದುಡಿದಿರುತ್ತಾನೆ. ಆ ದುಡಿಮೆಯನ್ನು(Work) ವಿಧವಿಧವಾಗಿ ಖರ್ಚು ಮಾಡಿರುತ್ತಾನೆ. ಆ ಖರ್ಚುಗಳ ಮೇಲೆ ತೆರಿಗೆ(Tax) ಕೊಟ್ಟಿರುತ್ತಾನೆ. ಆದಾಯ ತೆರಿಗೆ, ಉದ್ಯೋಗ ತೆರಿಗೆ, ಜಿಎಸ್‌ಟಿ, ಮನರಂಜನಾ ತೆರಿಗೆ, ವ್ಯಾಟ್, ಎಕ್ಸೈಸ್, ರಸ್ತೆ ತೆರಿಗೆ, ವಾಹನ ತೆರಿಗೆ, ಆಕ್ಟ್ರಾಯ್, ಹೆದ್ದಾರಿ ಟೋಲ್ ಹೀಗೆ ವಿಧವಿಧವಾದ ತೆರಿಗೆಗಳು. ಬೀಡಿ ಸೇದುವ ಕಾರ್ಮಿಕ ಕೂಡ ಅದರ ಮೇಲೆ ತೆರಿಗೆ ಕೊಟ್ಟಿರುತ್ತಾನೆ. ವಿಮಾನದಲ್ಲಿ ಹಾರಾಡುವ ಉದ್ಯೋಗಪತಿ ಕೂಡ ನೇರವಾಗಿ, ಪರೋಕ್ಷವಾಗಿ ತೆರಿಗೆ ಕೊಟ್ಟೇ ಇರುತ್ತಾನೆ .
ಇಂತಿಪ್ಪ ಈ ತೆರಿಗೆ ಪಾವತಿದಾರ ಜೀವನದ ಅರವತ್ತು ಸಂವತ್ಸರ ದಾಟಿದಾಗ ವರಿಷ್ಠ ನಾಗರಿಕ ಅನಿಸಿಕೊಳ್ಳುತ್ತಾನೆ. ಸಹಜವಾಗಿಯೇ ಆತನ ದುಡಿಯುವ ಶಕ್ತಿ, ತಥಾ ಉತ್ಪನ್ನ ಕಡಿಮೆಯಾಗುತ್ತವೆ. ನೌಕರಿ ಮಾಡುವವರಾದರೆ ನಿವೃತ್ತಿ. ದುಡಿಯುವ ದಿನಗಳಲ್ಲಿ ಎಲ್ಲ ತರಹದ ತೆರಿಗೆ ಪಾವತಿಸಿ ಚೂರು ಪಾರು ಉಳಿಸಿದ್ದರೆ, ಪಿಂಚಣಿ ಬರುವ ನೌಕರಿ ಇದ್ದರೆ ಪಿಂಚಣಿಯಿಂದ ಜೀವನದ ಉಳಿದ ಸಂಧ್ಯಾಕಾಲ ನೂಕಬೇಕು. ಈ ದಿನಗಳಲ್ಲಿ ಆತನಿಗೆ ಕೊಂಚ ಸಹಾಯವಾಗುವುದು ಠೇವಣಿಗಳ ಮೇಲೆ ದೊರೆಯುವ ಅರ್ಧ ಪ್ರತಿಶತ ಬಡ್ಡಿ, ಆದಾಯ ತೆರಿಗೆಯಲ್ಲಿ ದೊರೆಯುವ ವರುಷಕ್ಕೆ ಐವತ್ತು ಸಾವಿರ ಕಡಿತದ ರಿಯಾಯಿತಿ ಮತ್ತು ಪ್ರವಾಸ ಮಾಡುವಾಗ ದೊರೆಯುವ ರಿಯಾಯಿತಿ. ಉಳಿದಂತೆ ಬಾಕೀ ತೆರಿಗೆಗಳಾದ ಆದಾಯ ತೆರಿಗೆ, ಜಿಎಸ್‌ಟಿ, ಟೋಲ್ ಇತ್ಯಾದಿಗಳನ್ನು ಆತ ಕಟ್ಟಲೇಬೇಕು. ಈಗ ಕೇಂದ್ರ ಸರಕಾರ ಈ ರಿಯಾಯಿತಿಗಳಲ್ಲಿ ಒಂದಾದ ರೈಲು ಪ್ರಯಾಣದ ರಿಯಾಯಿತಿ ಸೌಲಭ್ಯವನ್ನು ಕೊನೆಗೊಳಿಸಿದೆ. ಕರೋನ ಕಾಲದಲ್ಲಿ ರದ್ದುಗೊಳಿಸಿದ್ದನ್ನು ಇನ್ನೂ ತನಕ ತಿರುಗಿ ಕೊಟ್ಟಿಲ್ಲ. ಕೊಡುವ ಲಕ್ಷಣಗಳೂ ಇಲ್ಲ.
ದುಬಾರಿ ದುನಿಯಾದಲ್ಲಿ ಇದ್ದ ಕೆಲವೇ ಕೆಲವು ಚಿಕ್ಕ ಪುಟ್ಟ ಸೌಲಭ್ಯಗಳಲ್ಲಿ ಒಂದರಿಂದ ವಂಚಿತನಾಗಿದ್ದಾರೆ ವರಿಷ್ಠ ನಾಗರಿಕರು. ಇನ್ನುಳಿದ ಚೂರುಪಾರು ಸೌಲಭ್ಯಗಳ ಕಡಿತಗಳು ಶೀಘ್ರದಲ್ಲೇ ಬರಬಹುದು. ವರಿಷ್ಠ ನಾಗರಿಕರು ಅದಕ್ಕೆ ಈಗಿನಿಂದಲೇ ಮಾನಸಿಕ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಮುಗಿಸುವ ಮುನ್ನ. ಈ ಚೂರುಪಾರು ಸೌಲಭ್ಯಗಳು ದಶಕಗಳ ಕಾಲ ತೆರಿಗೆ ಪಾವತಿಸಿದಾತನಿಗೆ ಸಮಾಜ, ಸರಕಾರ ಕೊಡುವ ಗೌರವ ಹೊರತಾಗಿ ಭಿಕ್ಷೆ ಇರಲಿಕ್ಕಿಲ್ಲ ಅಂತ ಅನಿಸಿದರೆ ತಪ್ಪಾ. ಕಡಿತಗಳಿಂದ ಕಡಿಮೆ ಆಗುವುದು ಗೌರವ ಹೊರತು ಭಿಕ್ಷೆಯಲ್ಲ ಅಂತ ಅನಿಸುತ್ತಿರುವದು ನನಗೊಬ್ಬನಿಗೇನಾ ? ನೆನಪಿರಲಿ, ಖರ್ಚುಗಳನ್ನು ಕಡಿಮೆ ಮಾಡಲು ಬೇರಾವ ಕ್ರಮಗಳನ್ನೂ ಸರಕಾರ ಕೈಗೊಂಡಿಲ್ಲ. ಈ ಉಳಿಪೆಟ್ಟು ( ಕೊಡಲಿ ಪೆಟ್ಟು ಅನ್ನುವದು ಬೇಡ ) ವರಿಷ್ಠ ನಾಗರಿಕರಿಗಷ್ಟೇ. ಉಳಿದಂತೆ ಮಂತ್ರಿಗಳ ಕಾರು, ಟೆಲಿಫೋನ್ ಖರ್ಚು ವೆಚ್ಚ, ಸಂಬಳ, ಇತರ ಸೌಕರ್ಯ, ಅವರುಗಳ ಬೆಂಗಾವಲಿನ ವಾಹನಗಳು ಎಲ್ಲ ಮೊದಲಿನಂತೇ ಇವೆ. ದೇಶಕ್ಕಾಗಿ ಕಿಂಚಿತ್ ತ್ಯಾಗ ಮಾಡುವ ಭಾಗ್ಯ ಕಲ್ಪಿಸಿದ ಸರಕಾರಕ್ಕೆ ಎಲ್ಲ ವರಿಷ್ಠ ನಾಗರಿಕರು ಕೃತಜ್ಞತೆ ಸಲ್ಲಿಸೋಣ. ಹಿರಿಯ ನಾಗರಿಕರ ದಿನದ ಶುಭಾಶಯಗಳು .