ಕೆಲವು ದಶಕಗಳ ಹಿಂದೆ ಅಸ್ಸಾಂ(Assam) ರಾಜ್ಯಕ್ಕೆ ಒಂದು ಕಂಪನಿ ಬಂದು ,ಅಲ್ಲಿನ ರೈತರಿಗೆ(Farmer) ಅಲ್ಲಿ ಸಿಗುವ ವಿಶಿಷ್ಠವಾದ ಜಾತಿಗೆ ಸೇರಿದ ಕಪ್ಪೆಗಳನ್ನು(Frog) ಹಿಡಿದು ಕೊಟ್ಟರೆ ಒಂದಷ್ಟು ಹಣ(Money) ಕೊಡುತ್ತೇವೆ ಎಂದು ಹೇಳಿತ್ತು. ಅಲ್ಲಿನ ರೈತರಿಗೆ ತಮ್ಮ ಭತ್ತದ ಗದ್ದೆಗಳಲ್ಲಿ(Paddy Field) ಯಥೇಚ್ಛವಾಗಿ ಸಿಗುತ್ತಿದ್ದ ಆ ಕಪ್ಪೆಗಳನ್ನು ಅನಾಯಾಸವಾಗಿ ಹಿಡಿದು ಆ ಕಂಪನಿಗೆ ಕೊಟ್ಟು ಹಣ ಮಾಡಿಕೊಳ್ಳುತ್ತಿದ್ದರು.
ದಿನ ಕಳೆದಂತೆ ರೈತರ ಕಪ್ಪೆ ಬೇಟೆ ಕಾರಣದಿಂದ ಕಪ್ಪೆಗಳ ಸಂತತಿ ಕಡಿಮೆ ಆಗುತ್ತಾ ಬಂತು. ಆಗ ಆ ಕಂಪನಿಯು ರೈತರು ತಂದು ಕೊಡುವ ಕಪ್ಪೆಗಳಿಗೆ ಹೆಚ್ಚುವರಿ ಹಣ ಕೊಡಲು ಶುರು ಮಾಡಿದ್ದರು. ಆಗ ರೈತರು, ಇದ್ದ- ಬದ್ದ ಕಪ್ಪೆಗಳನ್ನು ಹಿಡಿದು ಆ ಕಂಪನಿಗೆ ಕೊಟ್ಟರು. ಇದರ ನಡುವೆ ಈ ರೈತರ ಭತ್ತದ ಗದ್ದೆಗಳಿಗೆ ಯಾವತ್ತೂ ಕಾಣಿಸಿಕೊಳ್ಳದ ಕೀಟ ಭಾಧೆ ಶುರುವಾಯಿತು. ಇದರಿಂದ ರೈತರು ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿರುವಾಗ ಕಪ್ಪೆಗಳನ್ನು ಖರೀದಿಸಿದ ಕಂಪನಿ(company), ಆ ಪ್ರದೇಶದಲ್ಲಿ ಒಂದು ಆ ಭತ್ತಕ್ಕೆ ಭಾಧೆ ಕೊಡುತ್ತಿದ್ದ ಕೀಟದ ಕೀಟನಾಶಕ(pesticides) ತಯಾರಕ ಘಟಕವನ್ನು ಸ್ಥಾಪಿಸಿತು …….! ಅಂದರೆ, ಈ ಕಂಪನಿಯು ತನ್ನ ಅಸಲಿ ಮುಖ ತೋರಿಸಿತ್ತು . ಇದು ಕಪ್ಪೆ ಖರೀದಿಸುವ ಆಗಿರಲಿಲ್ಲ. ಇದು ಮೂಲತಃ ಕೀಟನಾಶಕ ಕಂಪನಿ ಆಗಿತ್ತು ……!
ಅಂದರೆ ಅಲ್ಲಿ ಆಗಿದಿಷ್ಟು, ಆ ರೈತರ ಭತ್ತದ ಗದ್ದೆಗಳಿಗೆ ಈ ಕೀಟದ ಭಾಧೆ ಮೊದಲಿಂದಲೂ ಇತ್ತು . ಆದರೆ ಅವುಗಳನ್ನು ಆ ವಿಶಿಷ್ಟ ಜಾತಿಗೆ ಸೇರಿದ ಕಪ್ಪೆಗಳು ತಿನ್ನುತ್ತಾ ಅವುಗಳನ್ನು ನಿಯಂತ್ರಿಸುತ್ತಿದ್ದವು. ಅದನ್ನು ಮನಗಂಡ ಆ ಕೀಟನಾಶಕ ಕಂಪನಿ, ಮೊದಲು ಆ ಕಪ್ಪೆಗಳ ನಾಶಕ್ಕೆ ಅಲ್ಲಿನ ರೈತರಿಗೆ ಅರಿವಿಗೆ ಬರದಂತೆ, ಅವರಿಗೆ ಆಮಿಷ ಒಡ್ಡಿ ಪರೋಕ್ಷವಾಗಿ ನಾಶ ಮಾಡಿಸಿದ್ದರು. ಆನಂತರ ಅಲ್ಲಿನ ಭತ್ತದ ಗದ್ದೆಗಳಲ್ಲಿ ಕೀಟಗಳು ನಿಯಂತ್ರಣ ಇಲ್ಲದೆ ಹೆಚ್ಚಾಗಿ ಭತ್ತದ ಫಸಲನ್ನು ಹಾಳು ಮಾಡಿದ್ದವು. ಈ ಸಮಸ್ಯೆ ಶುರುವಾದ ನಂತರ ಕೀಟನಾಶಕ ಔಷಧಿಯ ಕಂಪನಿ ತನ್ನ ಕೀಟನಾಶಕ ಔಷಧಿ ಘಟಕವನ್ನು ಆ ಪ್ರದೇಶದಲ್ಲಿ ಪ್ರಾರಂಭ ಮಾಡಿ ದುಡ್ಡು ಮಾಡಿ ಕೊಳ್ಳಲು ಶುರು ಮಾಡಿತು ……! ಅಲ್ಲಿಗೆ ರೈತರು ಸ್ವಯಂಕೃತ ಅಪರಾಧದಿಂದ ಖರ್ಚಿಲ್ಲದ ಸ್ವಾಭಾವಿಕ ಮತ್ತು ಪರಿಸರ ಸ್ನೇಹಿಯಾಗಿ ಕೀಟಗಳನ್ನು ನಿಂಯತ್ರಿಸುತ್ತಿದ್ದ ಕಪ್ಪೆಗಳನ್ನು ನಾಶ ಮಾಡಿ, ತಮ್ಮನ್ನು ವಿನಾಶಕ್ಕೆ ದೂಡುವ ಕೀಟನಾಶಕಗಳಿಗೆ ಮೊರೆ ಹೋಗುವ ಅನಿವಾರ್ಯತೆ ತಂದುಕೊಂಡರು…….!
ಇದು ಅಸ್ಸಾಂ ರೈತರ ಪರಿಸ್ಥಿತಿ ಒಂದೇ ಅಲ್ಲ . ಇದು ಇಂದು ಇಡೀ ದೇಶದ ರೈತರ ಪರಿಸ್ಥಿತಿ. ಹಿಂದೆ ಭತ್ತದ ಗದ್ದೆಗಳಿಗೆ ಯಾವುದೇ ರೀತಿಯ ಔಷಧಿ ಹೊಡೆಯುತ್ತಿರಲಿಲ್ಲ. ಆದರೆ ಇಂದು ಕೀಟ ನಿಯಂತ್ರಣಕ್ಕಾಗಿ ಭತ್ತದ ಮಡಿಗಳಿಂದ ತೆನೆ ಆಗುವರೆಗೂ ಕೀಟನಾಶಕಗಳನ್ನು ಐದಾರು ಬಾರಿ ಹೊಡೆಯಬೇಕಾದ ಪರಿಸ್ಥಿತಿ ಬಂದಿದೆ. ಅದರಲ್ಲೂ ಭತ್ತಕ್ಕೆ ಒಬ್ಬ ರೈತ ಕೀಟನಾಶಕ ಔಷಧಿ ಹೊಡೆದರೆ ನಿಯಂತ್ರಣಕ್ಕೆ ಬರುವುದಿಲ್ಲ. ಅಂದರೆ ಆ ಭತ್ತದ ಬಯಲಿನ ಎಲ್ಲಾ ರೈತರು ಹೊಡೆದರೆ ಮಾತ್ರ ಆ ಕೀಟಗಳು ನಿಯಂತ್ರಣಕ್ಕೆ ಬರುತ್ತವೆ. ಇಲ್ಲದಿದ್ದರೆ , ಬೆಳೆ ಹಾಳಾಗುವುದು ಖಚಿತ….! ಹಿಂದೆ ನಾನು ಕಂಡಂತೆ ಭತ್ತದ ಗದ್ದೆಗಳಲ್ಲಿ ಏಡಿಗಳು, ಕಪ್ಪೆಗಳು ಯಥೇಚ್ಛವಾಗಿ ಇರುತ್ತಿದ್ದವು. ಭತ್ತದ ಗದ್ದೆಯ ಕಳೆ ಕೀಳಲು ಬರುತ್ತಿದ್ದ ಹೆಣ್ಣಾಳುಗಳು ಏಡಿ ಹಿಡಿದುಕೊಂಡು ಹೋಗಿ ಮನೆಯಲ್ಲಿ ರುಚಿಯಾದ ಅಡುಗೆ ಮಾಡುತ್ತಿದ್ದರು. ಆದರೆ ಇಂದು ಇಡೀ ಭತ್ತದ ಬಯಲಿನಲ್ಲಿ ಕಪ್ಪೆ, ಏಡಿಗಳು ಹುಡುಕಿದರೂ ಸಿಗುವುದಿಲ್ಲ ……! ಅಂದರೆ ನಮ್ಮಲ್ಲಿ ಬಂದ ಕೀಟನಾಶಕ ಕಂಪನಿಗಳು, ಇವುಗಳ ನಾಶಕ್ಕೆ ತಮ್ಮ ಕೀಟನಾಶಕ ಔಷಧಿಗಳಲ್ಲೇ ರಹಸ್ಯ ವಿಷ ಸೇರಿಸಿದ್ದವು ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಇದರ ಜತೆಗೆ, ಯಾವುದೇ ತರಕಾರಿ ಬೆಳೆ ಬೆಳೆಯ ಬೇಕಾದರೂ ಹಿಂದೆ ಅಷ್ಟಾಗಿ ಕೀಟನಾಶಕಗಳನ್ನು ಬಳಸದ ರೈತ, ಇಂದು ಕೀಟನಾಶಕಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಹೊಡೆಯಬೇಕಾದ ಪರಿಸ್ಥಿತಿ ಇದೆ .
ಅದರ ಜತೆಗೆ, ಹಲವು ರೋಗಗಳು ತರಕಾರಿ ಕಾಣಿಸಿಕೊಳ್ಳುತ್ತಿವೆ. ಅದಕ್ಕೂ ವಾರಕ್ಕೊಮ್ಮೆ ಔಷಧಿ ಹೊಡೆಯಬೇಕು. ಇವುಗಳ ಬೆಲೆಯನ್ನು ಕೇಳಿದರೆ ಹೆದರಿಕೆ ಆಗುತ್ತದೆ. ಅಂದರೆ ಒಂದು ಬಾರಿ ಔಷಧಿ ಹೊಡೆಯಬೇಕಾದರೆ ಎಕರೆಗೆ ವಾರಕ್ಕೆ ಕನಿಷ್ಠ 2-3 ಸಾವಿರ ಬೇಕಾಗುತ್ತದೆ. ಇಲ್ಲದಿದ್ದರೆ ಒಂದೇ ವಾರದಲ್ಲಿ ಫಸಲು ಕೀಟ, ರೋಗ ಕಾಣಿಸಿಕೊಂಡು ನಾಶವಾಗುತ್ತದೆ . ಅಂದರೆ ಇಲ್ಲೂ ಕೂಡಾ ಕೀಟನಾಶಕಗಳ ಕಂಪನಿಗಳು ಸ್ವಾಭಾವಿಕ ಕೀಟನಾಶಕಗಳನ್ನು ನಾಶ ಮಾಡಲು ಹಿಡನ್ ಅಜೆಂಡಾ ಮಾಡಿಕೊಂಡಿವೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಯಾಕೆಂದರೆ, ಹಿಂದೆ ಬಯಲು ಪ್ರದೇಶದಲ್ಲಿ ನಮ್ಮಲ್ಲಿದ್ದ ಅಥವಾ ಅಂಗಡಿಯಿಂದ ತಂದ ತರಕಾರಿ ಬಿತ್ತನೆ ಬೀಜಗಳನ್ನು ಬಯಲು ಪ್ರದೇಶದಲ್ಲಿ ಮಡಿ ಮಾಡಿ ನಾಟಿ ಮಾಡುತ್ತಿದ್ದವು. ಆದರೆ ಇಂದು, ಬಯಲು ಪ್ರದೇಶದಲ್ಲಿ ಬಿತ್ತನೆ ಮಾಡಿದರೆ ಅವುಗಳಿಗೆ ಕೀಟ, ರೋಗಗಳು ಕಾಣಿಸಿಕೊಂಡು ಗಿಡಗಳು ಹುಟ್ಟುವುದೇ ಇಲ್ಲ …..! ಅಂದರೆ ನಾವು ಸಸಿಗಳಿಗಾಗಿ ಅವುಗಳನ್ನು ಪಾಲಿ ಹೌಸ್ ನಲ್ಲಿ ಬೆಳೆದು ಮಾರುವ ಮಾರಾಟಗಾರರಿಂದ ಒಂದು ಗಿಡಕ್ಕೆ 70 ಪೈಸೆಯಿಂದ ಶುರುವಾಗಿ 25 ರೂಪಾಯಿ ವರೆಗೆ ಕೊಟ್ಟು ಅವರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಅಂದರೆ ಹಿಂದೆ ಇಲ್ಲದ ಕೀಟಗಳು ಅಥವಾ ರೋಗಗಳು ಇಂದು ಯಥೇಚ್ಛವಾಗಿ ಕಾಣಿಸಿಕೊಳ್ಳಲು ಕಾರಣವೇನು ಅಂತ ಯಾರಾದರೂ ಯೋಚನೆ ಮಾಡಿದ್ದಾರಾ…..!? ಹಾಗಾದರೆ ರೈತರು ಔಷಧಿ ಕಂಪನಿಗಳ ವಿಷವರ್ತುಲಕ್ಕೆ ಸಿಲುಕಿಕೊಂಡಿದ್ದಾರೆಯೇ……!? ಇವುಗಳನ್ನು ಯೋಚಿಸುವುದಿಲ್ಲವೇಕೆ…..!? ಇಂತಹ ನಮ್ಮ ನಿರ್ಲಕ್ಷ್ಯ ಭಾವನೆ ಪರಿಣಾಮವಾಗಿ ರೈತರು ಬೆಳೆ ಹೂಡಿಕೆ ಮತ್ತು ಶ್ರಮದ ವೆಚ್ಚ ಹೆಚ್ಚಾಗಿ ಕೃಷಿಯಲ್ಲಿ ನಷ್ಟ ಅನುಭವಿಸಲು ಕಾರಣವಾಗುತ್ತಿದೆ.
(ಪೇಸ್‌ಬುಕ್ ಬರಹ – ವಾಸ್ತವ ಸಂಗತಿ- ಮೂಲಬರಹಗಾರರ ಬಗ್ಗೆ ಮಾಹಿತಿ ಇಲ್ಲ )
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…