ನಾರ್ಮನ್ ಬೊರ್ಲಾಗ್ : ಹಸಿರು ಕ್ರಾಂತಿಯ ಹರಿಕಾರ-ಬಡ ರೈತಾಪಿಯ ಕೊಲೆಗಾರ!, ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನ ಗ್ರಾಮೀಣ#Rural ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ ನಾರ್ಮನ್ ಬೊರ್ಲಾಗ್#Norman Borlaug ಎಂಬ ಕೃಷಿ ವಿಜ್ನಾನಿ 2009 ಸೆಪ್ಟೆಂಬರ್ 13ರಂದು ತನ್ನ 95 ನೇ ವಯಸ್ಸಿನಲ್ಲಿ ಮೃತರಾದರು. ನಾರ್ಮನ್ ಬೊರ್ಲಾಗ್ ಯಾರು ಎಂದು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.
‘ಹಸಿರು ಕ್ರಾಂತಿ’ಯ ಹರಿಕಾರ ಎಂದು ಬಣ್ಣಿಸಲಾಗುವ ಈ ವಿಜ್ಞಾನಿ ಯಾರ ಸ್ನೇಹಿತ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಪಡೆಯಬೇಕೆಂದರೆ ನಮ್ಮ ದೇಶದ ಅಭಿವೃದ್ಧಿ ಮಾದರಿಯ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಮತ್ತು ನಿಲುವುಗಳು ಬೇಕಾಗುತ್ತವೆ. ಏಕೆಂದರೆ ನಮ್ಮ ದೇಶದ ರೈತಾಪಿ ಇಂದು ತಲುಪಿರುವ ಸ್ಥಿತಿಗೆ ಈ ಮಹಾಶಯರು ಪರಿಚಯಿಸಿದ ಹಸಿರುಕ್ರಾಂತಿ ಮತ್ತು ಕೃಷಿ ಪದ್ಧತಿಯೇ ಕಾರಣ. ಹೀಗಾಗಿ ನಾರ್ಮನ್ ಬೊರ್ಲಾಗ್ ಭಾರತದ ರೈತಾಪಿಯ ಸ್ನೇಹಿತನೊ ಅಥವಾ ಶತ್ರುವೋ ಎಂಬ ತೀರ್ಮಾನವು ಭಾರತದ ರೈತಾಪಿಯ ಪರಿಸ್ಥಿತಿ ಮತ್ತು ಭಾರತದ ಆಹಾರ ಭದ್ರತೆ#Food securityಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಮ್ಮ ನಮ್ಮ ಅಭಿಪ್ರಾಯಗಳನ್ನೇ ಆಧರಿಸಿರುತ್ತದೆ.
ಭಾರತ ಸರ್ಕಾರದ ಪ್ರಕಾರ ಭಾರತದ ಆಹಾರ ಭದ್ರತೆ ಮೊದಲಿಗಿಂತ ಉತ್ತಮಗೊಂಡಿದೆ. ಭಾರತದ ರೈತಾಪಿ ಮೊದಲಿಗಿಂತ ಹೆಚ್ಚು ಸುಖವಾಗಿದ್ದಾರೆ. ಆದ್ದರಿಂದಲೇ ಭಾರತದ ಬಡವರ ಸಂಖ್ಯೆ ಹಸಿರು ಕ್ರಾಂತಿ ಪರಿಚಯಿಸುವ ಮೊದಲು ಶೇ.50 ರಿಂದ ಇದ್ದದ್ದು ಈಗ ಶೇ.27 ಕ್ಕೆ ಇಳಿದಿದೆ. ಗ್ರಾಮೀಣ ರೈತಾಪಿಯ ಕೊಳ್ಳುವ ಶಕ್ತಿ ಹೆಚ್ಚಿದೆ, ಇತ್ಯಾದಿ, ಇತ್ಯಾದಿ. ಇದಕ್ಕೆಲ್ಲಾ ಭಾರತದ ಕೃಷಿ ಪದ್ಧತಿಯಲ್ಲಿ ಸರ್ಕಾರ ನಾರ್ಮನ್ ಬೊರ್ಲಾಗ್ ಕಂಡುಹಿಡಿದ ಇಳುವರಿ ಪದ್ಧತಿಯನ್ನು ಜಾರಿಗೆ ತಂದಿದ್ದೇ ಕಾರಣ. ಆ ಪದ್ಧತಿಯಲ್ಲಿ ಹೆಚ್ಚು ಇಳುವರಿ ಕೊಡುವ HYV ಬೀಜಗಳನ್ನು, ಅದಕ್ಕೆ ತಕ್ಕಂತೆ ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೀಟನಾಶಕಗಳನ್ನು ಬಳಸುತ್ತಾ ಮೊದಲಿಗಿಂತ ಹತ್ತಾರುಪಟ್ಟು ಹೆಚ್ಚು ಇಳುವರಿಯನ್ನು ಹೆಚ್ಚಿಸಿಕೊಂಡಿದ್ದೇ ಕಾರಣ ಎಂಬ ವಾದವನ್ನು ಮಂಡಿಸಲಾಗುತ್ತದೆ. ಈ ವಾದವನ್ನು ಕೇವಲ ಭಾರತ ಸರ್ಕಾರ ಮಾತ್ರವಲ್ಲ, ಏಷಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಎಲ್ಲಾ ಬಡ ದೇಶಗಳ ಸರ್ಕಾರಗಳು ಮಂಡಿಸುತ್ತವೆ.
ಈ ವಾದದ ಒಟ್ಟು ಸಾರಾಂಶವೇನೆಂದರೆ ಆಹಾರ ಉತ್ಪಾದನೆಯ ಕುಸಿತದಿಂದ ಆಹಾರಕ್ಕೂ ಅಮೆರಿಕ ಮತ್ತಿತರ ದೇಶಗಳ ಸರ್ಕಾರವನ್ನೇ ಅವಲಂಬಿಸುವಂತಹ ದೈನೇಸಿ ಪರಿಸ್ಥಿತಿಯಲ್ಲಿದ್ದ ದೇಶಗಳನ್ನು ಆಹಾರ ಸ್ವಾವಲಂಬಿ ಮಾಡಿದ್ದೇ ನಾರ್ಮನ್ ಬೊರ್ಲಾಗ್‌ನ ಹಸಿರುಕ್ರಾಂತಿ. ಅದಕ್ಕೆ ಪೂರಕವಾಗಿ ಅವರು 1965 ರಲ್ಲಿ ಭಾರತ ಎದುರಿಸುತ್ತಿದ್ದ ಆಹಾರ ಬಿಕ್ಕಟ್ಟನ್ನು ಮತ್ತು 1950 ರಲ್ಲಿ ಮೆಕ್ಸಿಕೋ ಎದುರಿಸುತ್ತಿದ್ದ ಆಹಾರ ಬಿಕ್ಕಟ್ಟನ್ನು ಉದಾಹರಿಸಿ ಹಸಿರು ಕ್ರಾಂತಿಯ ನಂತರ ಭಾರತ ಮತ್ತು ಮೆಕ್ಸಿಕೋದಂತ ದೇಶಗಳು ಹೇಗೆ ಕೆಲವೇ ವರ್ಷಗಳಲ್ಲಿ ಆಹಾರ ಸ್ವಾವಲಂಬಿ ಯಾಗಿದ್ದು ಮಾತ್ರವಲ್ಲದೇ ಹೆಚ್ಚುವರಿ ಉತ್ಪಾದನೆ ಮಾಡಿ ವಿದೇಶಕ್ಕೂ ರಫ್ತು ಮಾಡುವಂತಾಯಿತು ಎಂದು ಅಂಕಿಅಂಶಗಳನ್ನು ಮಂಡಿಸುತ್ತಾರೆ.
ಈ ವಾದವು ಸುಳ್ಳಲ್ಲ. ಹಾಗೆಯೇ ಸತ್ಯವೂ ಅಲ್ಲ! : ಭಾರತದ ಗೊಡೋನುಗಳಲ್ಲಿ ಅಪಾರ ಆಹಾರ ಧಾನ್ಯ ಸಂಗ್ರಹಣೆ ಇರುವುದು ನಿಜ. ಈ ಪ್ರಮಾಣದ ಆಹಾರ ಉತ್ಪಾದನೆ ಸಾಧ್ಯವಾದದ್ದು ಹಸಿರುಕ್ರಾಂತಿಯಿಂದ ಎಂಬುದೂ ಸತ್ಯವೇ. ಆದರೆ ಈ ಅಪಾರ ಪ್ರಮಾಣದ ಆಹಾರ ಉತ್ಪಾದನೆಯಿಂದ ರೈತಾಪಿಯ ಬಾಳು ಮೊದಲಿಗಿಂತ ಹಸನು ಆಗಿದೆಯೇ ಎಂಬ ಪ್ರಶ್ನೆಗೆ ಸರ್ಕಾರವೂ ಉತ್ತರ ಕೊಡುವುದಿಲ್ಲ. ಬೊರ್ಲಾಗ ಕೂಡ ಸಾಯುವವರೆಗೆ ಉತ್ತರ ಕೊಡಲಿಲ್ಲ. ಭಾರತದ ಕೃಷಿಯ ಕಥೆ ಈ ದೇಶದ ಅಭಿವೃದ್ಧಿ ಮಾದರಿಯಂತೇ ಉಳ್ಳವರಿಗೆ ಅಮೃತವನ್ನೂ ಇಲ್ಲದವರಿಗೆ ಹಾಲಾಹಲವನ್ನೂ ಉಣಿಸುತ್ತಾ ಬರುತ್ತಿದೆ. ಉದಾಹರಣೆಗೆ ನಮ್ಮ ದೇಶದಲ್ಲಿ ಆಹಾರ ಸಮೃದ್ಧಿಯಿದೆ. ಆದರೆ ಭಾರತದ ಗ್ರಾಮೀಣ ಪ್ರದೇಶದ ತಲಾವಾರು ಆಹಾರ ಪ್ರಮಾಣದ ಬಳಕೆ ಮಾತ್ರ ಕಡಿಮೆಯಾಗುತ್ತಲೇ ಬರುತ್ತಿದೆ. ಹಸಿರುಕ್ರಾಂತಿ ಪರಿಚಯವಾಗುವ ಮುನ್ನ - ಅಂದರೆ 1970 ರಲ್ಲಿ - ಭಾರತದ ಗ್ರಾಮೀಣ ಪ್ರದೇಶದ ತಲಾವಾರು ಆಹಾರ ಬಳಕೆ ವಾರ್ಷಿಕ 175 ಕೆಜಿ ಇದ್ದದ್ದು ಈಗ 160 ಕೆಜಿಗೆ ಕುಸಿದಿದೆ. ಇದಾದದ್ದು ಆಹಾರದ ಉತ್ಪಾದನೆಯ ಕೊರತೆಯಿಂದಲ್ಲ. ಹೀಗಾಗಿ ಹಸಿರುಕ್ರಾಂತಿಯು ಏಕಕಾಲದಲ್ಲಿ ಆಹಾರ ಉತ್ಪಾದನೆಯನ್ನು ಜಾಸ್ತಿ ಮಾಡಿದ್ದು ನಿಜವಾದರೂ ಜನತೆಯ ಬಡತನವನ್ನೂ ಜಾಸ್ತಿ ಮಾಡಿದ್ದು ನಿಜ.
ಈ ಪ್ರಕ್ರಿಯೆ ಹಸಿರು ಕ್ರಾಂತಿಯ ತಂತ್ರಜ್ಞಾನದಲ್ಲೇ ಅಡಕವಾಗಿದೆ. ಅಧಿಕ ಇಳುವರಿ ಬೀಜವನ್ನು ಬಿತ್ತನೆ ಮಾಡಿದ ನಂತರ ಅದು ಅಧಿಕ ಇಳುವರಿ ಕೊಡಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಬೇಕು. ಇದಕ್ಕೆ ಕಾಸು ಖರ್ಚಿಲ್ಲದೆ ಕೊಟ್ಟಿಗೆಯಲ್ಲಿ ಸಿಗುತ್ತಿದ್ದ ಸಗಣಿ ಗೊಬ್ಬರ ಸಾಕಾಗುವುದಿಲ್ಲ. ಅಲ್ಲದೆ ಈ ಬೀಜಗಳು ಸಹಜವಾಗಿಯೇ ಹಲವಾರು ಹೊಸ ಬಗೆಯ ಕ್ರಿಮಿ ಮತ್ತು ಕೀಟಗಳನ್ನು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನೂ ಆಹ್ವಾನಿಸುತ್ತವಾದ್ದರಿಂದ ಕ್ರಿಮಿನಾಶಕ ಮತ್ತು ಕೀಟನಾಶಕಗಳನ್ನೂ ಕೊಳ್ಳಬೇಕು. ಅಲ್ಲದೇ ಸಾಂಪ್ರದಾಯಿಕ ಬೀಜಗಳಿಗಿಂತ ಈ ಹೈಬ್ರಿಡ್ ಬೀಜಗಳು ಹೆಚ್ಚು ನೀರನ್ನೂ ಕಬಳಿಸುತ್ತವೆ. ಹೀಗಾಗಿ ಇಳುವರಿ ಮೊದಲಿಗಿಂತ ಐದು ಪಟ್ಟು ಹೆಚ್ಚಾದರೂ ಒಂದು ಕ್ವಿಂಟಾಲ್ ಇಳುವರಿಗೆ ರೈತ ಹೂಡುತ್ತಿದ್ದ ಹೂಡಿಕೆಯೂ ಸಹ ಐದು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಸಾರಾಂಶದಲ್ಲಿ ರೈತನ ಆರ್ಥಿಕತೆಯಲ್ಲಿ ಏರಿಕೆಗಿಂತ ಇಳಿಕೆ ಮತ್ತು ಬರ್ಬಾದಿಯೇ ಹೆಚ್ಚಾಗುತ್ತದೆ.
ಹಸಿರುಕ್ರಾಂತಿಯ ಪ್ರಾರಂಭದ ದಿನಗಳಲ್ಲಿ ಸರ್ಕಾರವೇ ಸಬ್ಸಿಡಿ ದರದಲ್ಲಿ ಇವೆಲ್ಲವನ್ನೂ ಪೂರೈಸುತ್ತಿತ್ತು. ಆದರೆ ಉದಾರೀಕರಣದ ಪ್ರಕ್ರಿಯೆಯಲ್ಲಿ ಸರ್ಕಾರ ಎಲ್ಲಾ ಜನಕಲ್ಯಾಣ ಕಾರ್ಯಕ್ರಮಗಳಿಂದ ಹಿಂತೆಗೆಯುತ್ತಿದ್ದಂತೆ ರೈತಾಪಿ ಇನ್ನಷ್ಟು ಅನಾಥನಾಗಿ ಮಾರುಕಟ್ಟೆಯಲ್ಲಿ ಭಿಕ್ಷುಕನಾದ. ಅಲ್ಲದೆ ಹಸಿರುಕ್ರಾಂತಿಯನ್ನು ಭಾರತದಂತ ದೇಶಗಳಲ್ಲಿ ಅಳವಡಿಸಲು ಸರ್ಕಾರಗಳು ಕೊಡುತ್ತಿದ್ದ ಮತ್ತೊಂದು ಅತಿ ಮುಖ್ಯ ಕಾರಣ ಸ್ವಾವಲಂಬನೆ. ಆದರೆ ಹಸಿರುಕ್ರಾಂತಿ ಜಾರಿಯಾದ ನಾಲ್ಕು ದಶಕಗಳ ನಂತರ ಹಿಂತಿರುಗಿ ನೋಡಿದರೆ ಭಾರತ ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಿರಬಹುದು. ಆದರೆ ಕೃಷಿ ಪದ್ಧತಿಯ ವಿಷಯದಲ್ಲಿ ಸ್ವಾವಲಂಬಿಯಾಗಿದೆಯೇ? ಖಂಡಿತಾ ಇಲ್ಲ.
ಅದರಲ್ಲೂ ಜಾಗತೀಕರಣವೆಂಬ ಸಾಮ್ರಾಜ್ಯಶಾಹಿ ನೀತಿಗಳನ್ನು ಭಾರತವೂ ಒಳಗೊಂಡಂತೆ ಪ್ರಪಂಚದ ಎಲ್ಲಾ ಬಡದೇಶಗಳು ಜಾರಿಗೆ ತರಲು ಪ್ರಾರಂಭಿಸಿದ ಮೇಲೆ ಭಾರತದ ರೈತಾಪಿ ಬೀಜ, ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳ ವಿಷಯದಲ್ಲೂ ಅಮೆರಿಕದಂತಹ ದೇಶಗಳನ್ನು ಸಂಪೂರ್ಣವಾಗಿ ಅವಲಂಬಿಸಬೇಕಾಗಿದೆ. ಹೀಗಾಗಿ ಹಸಿರುಕ್ರಾಂತಿ ನಮ್ಮ ಪರಾವಲಂಬನೆಯನ್ನೇನೂ ತಪ್ಪಿಸಲಿಲ್ಲ. ಆದರೆ ಹಸಿರುಕ್ರಾಂತಿಯ ಸಂಪೂರ್ಣ ಲಾಭ ಅನುಭವಿಸಿದ್ದು ಮಾತ್ರ ಅಮೆರಿಕದ ಮಾನ್ಸಾಂಟೋ, ಡು-ಪಾಂಟ್, ಫೋರ್ಡ್, ರಾಕ್‌ಫೆಲ್ಲರ್, ಸಿಬಾ-ಗೈಗಿ, ಕಾರ್ಗಿಲ್‌ನಂತಹ ಗೊಬ್ಬರ, ಬೀಜ, ಮತ್ತು ಕ್ರಿಮಿನಾಶಕ ಕಂಪನಿಗಳು.
ಮುಂದುವರೆಯುವುದು..
ಬರಹಗಾರರು – ಶಿವಸುಂದರ್, 9448659774
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…