ಭಾರತೀಯ ದಾರ್ಶನಿಕ ಸಂಸ್ಕೃತಿಯಲ್ಲಿ “ಸತ್ಯ” ಎಂಬ ತತ್ವವು ಅನನ್ಯ ಮಹತ್ವವನ್ನು ಪಡೆದಿದೆ. ಅದು ಕೇವಲ ಒಂದು ನೈತಿಕ ಮೌಲ್ಯವಲ್ಲ; ಅದು ಜೀವಜಗತ್ತಿನ ಆಧಾರ. ವೇದದಿಂದ ಉಪನಿಷತ್ತಿನವರೆಗೆ, ರಾಮಾಯಣ–ಮಹಾಭಾರತಗಳಿಂದ ಜನಪದವರೆಗೆ ಎಲ್ಲ ಸಾಹಿತ್ಯಗಳೂ ಸತ್ಯವನ್ನು ಜೀವನಧರ್ಮವೆಂದು ಸಾರಿವೆ. “ಸತ್ಯಮೇವ ಜಯತೆ” ಎಂಬ ನುಡಿಗಟ್ಟು ಭಾರತೀಯ ಸಂವಿಧಾನದ ಮುದ್ರೆಯಲ್ಲಿಯೇ ಅಚ್ಚಳಿಯದೆ ಉಳಿದಿರುವುದು ಅದರ ಪ್ರಾಮುಖ್ಯತೆಯ ಸಾಕ್ಷಿ.
‘ಸತ್ಯ’ ಎಂಬ ಪದವು ಸತ್ + ಯತ್ ಸಂಧಿಯಿಂದ ಬಂದಿದೆ. ‘ಸತ್’ ಎಂದರೆ ನಿತ್ಯ, ಶಾಶ್ವತ, ಪರಮಾತ್ಮ ಸ್ವರೂಪ; ‘ಯತ್’ ಎಂದರೆ ಸ್ಥಿತಿಯನ್ನು ಸೂಚಿಸುವ ಪ್ರತ್ಯಯ. ಹೀಗಾಗಿ ಸತ್ಯವೆಂದರೆ – ಅಳಿಯದ, ಶಾಶ್ವತ, ಯಥಾರ್ಥವಾದದ್ದು.
ತೈತ್ತಿರೀಯ ಉಪನಿಷತ್ ಹೇಳುತ್ತದೆ:
“ಸತ್ಯಂ ಜ್ಞಾನಮನಂತಂ ಬ್ರಹ್ಮ”ಸತ್ಯವೇ ಪರಬ್ರಹ್ಮ, ಅದು ಜ್ಞಾನ ಮತ್ತು ಅನಂತತೆಯ ಸ್ವರೂಪ ಎಂದು ಸ್ಪಷ್ಟವಾಗಿ ಹೇಳಿದೆ.ಶಾಸ್ತ್ರಾಧಾರದಲ್ಲಿ ಸತ್ಯವನ್ನು ಸತ್ಯವು ಧರ್ಮದ ಕೇಂದ್ರಬಿಂದು ಎಂಬುದಾಗಿ ಹೇಳಿದೆ.
ಮನುಸ್ಮೃತಿಯಲ್ಲಿ ಹೇಳುವಂತೆ, “ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾನ್ನ ಬ್ರೂಯಾತ್ ಸತ್ಯಮಪ್ರಿಯಮ್ ।”
“ಸತ್ಯವನ್ನು ಹೇಳಬೇಕು, ಆದರೆ ಅದು ಕಟುವಾಗಿ ಅಥವಾ ನೋವುಂಟುಮಾಡುವ ರೀತಿಯಲ್ಲಿ ಇರಬಾರದು. ಮತ್ತೊಂದು ಕಡೆ, ಸತ್ಯವಲ್ಲದ ಸುಳ್ಳನ್ನು ಹೇಳುವುದೂ ಬೇಡ. ಸತ್ಯವೂ ಆಗಿ, ಪ್ರಿಯವೂ ಆಗಿರುವ ಮಾತೇ ಶ್ರೇಯಸ್ಕರ.”
ಕನ್ನಡ ಸಾಹಿತ್ಯದಲ್ಲಿ ಸತ್ಯದ ಪ್ರತಿಫಲನ ಕಾಣಬಹುದು .ಕನ್ನಡದ ಪ್ರಾಚೀನ–ಆಧುನಿಕ ಕಾವ್ಯಗಳು ಸತ್ಯವನ್ನು ನೈತಿಕ–ಆಧ್ಯಾತ್ಮಿಕ ಮೌಲ್ಯವಾಗಿ ಪ್ರತಿಪಾದಿಸಿವೆ.ಸಂತ ಬಸವಣ್ಣನು ವಚನದಲ್ಲಿ “ಸತ್ಯವೇ ಶಿವ, ಶಿವವೇ ಸತ್ಯ” ಎಂಬುದಾಗಿ ಹೇಳಿ ಸತ್ಯವನ್ನು ಶಿವನ ತತ್ವಕ್ಕೆ ಸಮೀಕರಿಸಿದನು.ಕುವೆಂಪು (ರಾಮಾಯಣ ದರ್ಶನ) ಅವರು ರಾಮನ ವ್ಯಕ್ತಿತ್ವವನ್ನು ಸತ್ಯನಿಷ್ಠೆಯ ಆಧಾರದ ಮೇಲೆ ಕಟ್ಟಿಕೊಡುತ್ತಾರೆ . ರಾಮನು ರಾಜ್ಯವನ್ನು ಕಳೆದುಕೊಂಡರೂ ಸತ್ಯವಚನವನ್ನು ಉಲ್ಲಂಘಿಸಲಿಲ್ಲ.
ಸತ್ಯವನ್ನು ಅನುಷ್ಠಾನ ಮಾಡಿದ ಮಹನೀಯರ ಉದಾಹರಣೆಗಳು ನಮಗೆ ಸಿಗುತ್ತದೆ.ಹರಿಶ್ಚಂದ್ರ ತನ್ನ ಕುಟುಂಬವನ್ನೇ ಕಳೆದುಕೊಂಡರೂ ಸತ್ಯವನ್ನು ಬಿಟ್ಟುಕೊಡಲಿಲ್ಲ.ಗಾಂಧೀಜಿಯವರು “ಸತ್ಯಾಗ್ರಹ” ಎಂಬ ಅಸ್ತ್ರದ ಮೂಲಕ ಇಡೀ ವಿಶ್ವವನ್ನೇ ಕಂಗೆಡಿಸಿದರು.ರಾಮ ತಂದೆಯ ವಾಗ್ದಾನವನ್ನು ಉಳಿಸಲು ಅರಣ್ಯವಾಸಕ್ಕೆ ಹೋದದ್ದವು ಮಾತ್ರವಲ್ಲದೆ ತನ್ನ ನಡೆಯಿಂದ ಪುರುಷೋತ್ತಮನಾದನು.ಇವರೆಲ್ಲರ ಜೀವನವು ಸತ್ಯದಿಂದಲೇ ಸಮಾಜದಲ್ಲಿ ವಿಶ್ವಾಸ ಮತ್ತು ಶ್ರೇಯಸ್ಸು ಹರಡುತ್ತದೆ ಎಂಬುದಕ್ಕೆ ಸಾಕ್ಷಿ.
ಸಾಮಾನ್ಯವಾಗಿ ನೋಡುವುದಾದರೆ ಸತ್ಯದಿಂದ ಆದಾಯ–ವ್ಯಾಪ್ತಿಯ ವಿಸ್ತರಣೆಸತ್ಯವಂತಿಕೆ ಆರ್ಥಿಕ–ಸಾಮಾಜಿಕ ಬದುಕಿನಲ್ಲಿ ಹೀಗೆ ಫಲ ಕೊಡುತ್ತದೆ:ವ್ಯಾಪಾರದಲ್ಲಿ: ಸತ್ಯವಾದಿ ವ್ಯಾಪಾರಿ ಗ್ರಾಹಕರ ವಿಶ್ವಾಸವನ್ನು ಪಡೆದು ದೀರ್ಘಕಾಲಿಕ ವೃದ್ಧಿ ಕಾಣುತ್ತಾನೆ.ಸಂಬಂಧಗಳಲ್ಲಿ: ನಿಜವಾದ ಮಾತು ಸ್ನೇಹ ಮತ್ತು ಕುಟುಂಬ ಬಾಂಧವ್ಯವನ್ನು ಗಾಢಗೊಳಿಸುತ್ತದೆ.ಸಮಾಜದಲ್ಲಿ: ಸತ್ಯವಂತನಿಗೆ ಅಪಾರ ಗೌರವ, ಪ್ರತಿಷ್ಠೆ ದೊರೆಯುತ್ತದೆ.ಆಧ್ಯಾತ್ಮಿಕತೆಯಲ್ಲಿ: ಸತ್ಯವನ್ನು ಪಾಲಿಸಿದವನು ಬ್ರಹ್ಮಜ್ಞಾನಕ್ಕೆ ಅರ್ಹನಾಗುತ್ತಾನೆ.
ಇದನ್ನು ಚಾಣಕ್ಯ ನೀತಿ: ಯಲ್ಲಿ “ಸತ್ಯಂ ಹಿ ಶ್ರೇಯಸೀ ವಾಚಃ” -ಸತ್ಯವಾಣಿಯೇ ಶ್ರೇಯಸ್ಸಿಗೆ ದಾರಿ ಎಂಬುದಾಗಿ ಹೇಳಿದ್ದಾರೆ.ನಮ್ಮ ನಿತ್ಯ ಜೀವನದಲ್ಲಿ ಸತ್ಯವಿಲ್ಲದೆ ಬದುಕು ಅಸ್ಥಿರ.ಕೆಲಸದಲ್ಲಿ ಪಾರದರ್ಶಕತೆ,ವಹಿವಾಟಿನಲ್ಲಿ ನಂಬಿಕೆ,ಸಂಬಂಧಗಳಲ್ಲಿ ವಿಶ್ವಾಸ,ಇವೆಲ್ಲವೂ ಸತ್ಯದ ಬೆನ್ನೇರಿದಾಗ ಮಾತ್ರ ದೀರ್ಘಕಾಲ ಜೀವಿಸುತ್ತವೆ.
ಸತ್ಯವು ನೈತಿಕತೆಯ ತಳಹದಿಯಲ್ಲದೆ, ಆಧ್ಯಾತ್ಮಿಕ ತತ್ತ್ವದ ಚಿತ್ತಾರ. ಅದು ಮಾತಿನ ಅಲಂಕಾರವಲ್ಲ; ಬದುಕಿನ ಆಧಾರ. ಸತ್ಯವನ್ನು ಪಾಲಿಸಿದವರು ಸಮಾಜದಲ್ಲಿ ದೀರ್ಘಕಾಲ ನಿಂತಿದ್ದಾರೆ; ಸುಳ್ಳು ತಾತ್ಕಾಲಿಕವಾಗಿ ಗೆದ್ದಂತೆ ಕಂಡರೂ ಅಂತಿಮ ಜಯವನ್ನು ಸತ್ಯವೇ ಸಾಧಿಸುತ್ತದೆ. ನಾವು ” ಸತ್ಯ” ವನ್ನು ಚಿಕಿತ್ಸಿಕ ದೃಷ್ಟಿಯಿಂದ ನೋಡಬೇಕು .
ಶಾಸ್ತ್ರ–ಸಾಹಿತ್ಯಗಳಲ್ಲಿ ನಾವು ಕೇಳುವ ಸತ್ಯದ ಮಹತ್ವವು ಆದರ್ಶದ ದೃಷ್ಟಿ.ಆದರೆ ದಿನನಿತ್ಯದ ಜೀವನದಲ್ಲಿ ಜನರು ಲಾಭ–ನಷ್ಟ, ಹಿತ–ಅಹಿತಗಳ ಆಧಾರದ ಮೇಲೆ ನಡೆದುಕೊಳ್ಳುತ್ತಾರೆ.ಹೀಗಾಗಿ “ಸತ್ಯ ಪಾಲನೆ ಕೇವಲ ಉಪದೇಶ” ಎಂದು ಕೆಲವರು ಭಾವಿಸುತ್ತಾರೆ. ಆದರೆ ತತ್ತ್ವದ ದೃಷ್ಟಿಯಿಂದ ನೋಡಿದರೆ, ಸತ್ಯವು ಬದುಕಿಗೆ ಕೇವಲ ಆದರ್ಶವಲ್ಲ; ಬದುಕಿನ ಸ್ಥಿರತೆಯ ಮೂಲ.
ಉಪನಿಷತ್ತು ಹೇಳುತ್ತದೆ, “ಸತ್ಯಮೇವ ಜಯತೆ, ನಾನೃತಂ” ಸತ್ಯವಷ್ಟೇ ದೀರ್ಘಕಾಲದಲ್ಲಿ ಜಯಿಸುತ್ತದೆ.ಸುಳ್ಳು ಕೆಲಕಾಲ ಲಾಭ ತರುತ್ತದೆ, ಆದರೆ ಅದು ನಾಶವನ್ನು ತರದೇ ಬಿಟ್ಟುಕೊಳ್ಳುವುದಿಲ್ಲ.ಅಸತ್ಯವು ಕೃತಕವಾಗಿ ಏರಿದ ಗುಳ್ಳೆಯಂತೆ ,ಸ್ವಲ್ಪ ಹೊತ್ತಿಗೆ ಹೊಳೆಯುತ್ತದೆ, ಆದರೆ ಒಡೆಯುತ್ತದೆ.
ಹೀಗಾಗಿ ತಾತ್ವಿಕವಾಗಿ, ದೀರ್ಘಕಾಲಿಕ ಯಶಸ್ಸಿಗೆ ಸತ್ಯವೇ ಆಧಾರ.
ಒಮ್ಮೆಯಾದರೂ ಅಸತ್ಯ ಹಿಡಿದರೆ ನಂಬಿಕೆ ಒಡೆದುಹೋಗುತ್ತದೆ; ಆದರೆ ನಿತ್ಯವೂ ಸತ್ಯ ಅನುಸರಿಸಿದರೆ ನಿಧಾನವಾಗಿ ಗೌರವದ ಶ್ರೇಣಿ ಏರುತ್ತದೆ.ಸತ್ಯವು ಪ್ರಾರಂಭದಲ್ಲಿ ಕಠಿಣವೆನಿಸಿದರೂ, ಅದು ದೀರ್ಘಕಾಲದ ಶ್ರೇಯಸ್ಸಿಗೆ ಕಾರಣ.ಅಸತ್ಯವು ತಕ್ಷಣದ ಲಾಭ ನೀಡಿದರೂ, ಅದು ನಾಶದ ದಾರಿ.
ಈ ಕಾರಣದಿಂದಲೇ ಅಸತ್ಯವು ತಾತ್ಕಾಲಿಕವಾಗಿ ಆಕರ್ಷಕ, ಸತ್ಯವು ದೀರ್ಘಕಾಲಿಕವಾಗಿ ಜಯಶೀಲ. ಶಾಸ್ತ್ರ–ಸಾಹಿತ್ಯಗಳು ಒಟ್ಟಾರೆ ಸಾರುವುದು ಒಂದೇ “ಸತ್ಯಮೇವ ಜಯತೆ.”
“ಸತ್ಯಮೇವ ಜಯತೆ” ಎಂಬ ನುಡಿಗಟ್ಟು ಕೇವಲ ರಾಷ್ಟ್ರಚಿಹ್ನೆಯಲ್ಲ; ಅದು ಪ್ರತಿಯೊಬ್ಬರ ಜೀವನ ಚಿಹ್ನೆಯಾಗಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


