ಊರಿನ ದನ(village cow), ಕಾಟುಪೆತ್ತ, ದೇಶೀ ಹಸು(Desi cow) ಇತ್ಯಾದಿ ಪದಗಳಿಂದ ಹೇಳ್ತಿದ್ದ ಮಲೆನಾಡಗಿಡ್ಡ(Malenadu Gidda) ದನಕರುಗಳು ಇಂದು ತಳಿಮಾನ್ಯತೆ ಪಡೆದಿದ್ದಲ್ಲದೆ ತಮ್ಮ ಮೂಲನಿವಾಸದ ಕರಾವಳಿ-ಮಲೆನಾಡು(Coastal- Malenadu) ಜಿಲ್ಲೆಗಳಿಂದ ಹೊರಗೆ ಬಯಲು ಸೀಮೆಗಳಾದ ತುಮಕೂರು(Tumakur), ಮಂಡ್ಯ(Mandya), ಬೆಂಗಳೂರು(Bengaluru), ದಾವಣೆಗೆರೆ(Davangere), ಚಿತ್ರದುರ್ಗ(Chitradurga) ಇತ್ಯಾದಿ ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಗ್ತಿವೆ. ಅಂದರೆ ಆ ಊರುಗಳಿಂದ ಮಲೆನಾಡಗಿಡ್ಡ ಹಸು ಬೇಕು ಎಂಬ ಅಪೇಕ್ಷೆಗಳು ಬಹಳಷ್ಟು ಬರ್ತಿವೆ. ಅದರ ಅರ್ಥ ತನ್ನ ಮೂಲ ನೆಲೆಯಲ್ಲಿ ನೆಲೆ ಕಳಕೊಳ್ತಿದೆ ಎಂದು ಊಹಿಸಬೇಕೇ ಅಥವಾ ಕರಾವಳಿ- ಮಲೆನಾಡಿಗರಿಗೆ ಅದರ ಮೌಲ್ಯ ಇನ್ನೂ ಅರ್ಥವಾಗಿಲ್ಲ ಎನ್ನಬೇಕೇ ಗೊತ್ತಾಗ್ತಿಲ್ಲ.
ಕೆಲವೊಂದಷ್ಟು ಮಂದಿ ನಾನಾಕಾರಣಗಳಿಗೆ ಹಸು ಸಾಕಾಣಿಕೆ ನಿಲ್ಲಿಸಿದ್ದಾರೆ. ಈಗ ಸಾಕ್ತಾ ಇರುವವರಲ್ಲಿ ಕೆಲವರು ತೀರಾ ಎಚ್ಚರಿಕೆ ವಹಿಸದೆ ಮಿಶ್ರ ಸಂಕರಗಳು ಹುಟ್ಟಿ ಕೆಲವು ಗಿಡ್ಡವೋ ಮಿಶ್ರವೋ ಗೊತ್ತಾಗದೆ,ತಳಿಶುದ್ಧತೆಯಿಲ್ಲದೆ ಬೇಡಿಕೆ ಕಳಕೊಂಡು ಉಚಿತವಾಗಿ ನೀಡುವುದು ಇತ್ಯಾದಿ ನಡೀತಿದೆ. ಆದರೆ ಶುದ್ಧ ಮಲೆನಾಡಗಿಡ್ಡ ತಳಿಯ ಹಸು ಕರು ಹೋರಿಗಳಿಗೆ ಹೆಚ್ಚಿನ ಬೇಡಿಕೆ ಬಯಲುಸೀಮೆಗಳಿಂದ ಬರ್ತಾ ಇರುವುದು ನೋಡಿದ್ರೆ ಮುಂದೊಂದು ದಿನ ಕರಾವಳಿ ಮಲೆನಾಡಿಗರು ತಮಗೆ ಬೇಕಿದ್ದಲ್ಲಿ ಮಲೆನಾಡ ಗಿಡ್ಡಕ್ಕೆ ಲಕ್ಷ ಕೊಟ್ಟರೂ ಸಿಗುವುದು ಅನುಮಾನ ಎಂಬುದು ಈಗಾಗಲೇ 22 ಮಲೆನಾಡಗಿಡ್ಡದ ಕಪಿಲ ಹಸು ಕರುಗಳನ್ನು ಸಾಕುತ್ತಿರುವ ಪ್ರವೀಣ್ ಬೆಳ್ಳಾರೆ ಇವರ ಅಭಿಪ್ರಾಯ. ಇವರ ಸಂಪರ್ಕದಲ್ಲಿರುವ ಅನೇಕ ಬಯಲು ಸೀಮೆಯ ಮಂದಿ ಇವರ ಮೂಲಕ ಶುದ್ಧವಾದ ಮಲೆನಾಡಗಿಡ್ಡ ಹಸುಗಳನ್ನು ಉತ್ತಮ ಬೆಲೆಗೆ ಕೊಂಡುಕೊಂಡು ಸಾಕ್ತಿದ್ದಾರೆ. ಆದ್ರಿಂದ ಮಲೆನಾಡಗಿಡ್ಡಗಳ ಅಲಭ್ಯತೆಯ ಈ ಸಂದಿಗ್ಧ ಕಾಲದಲ್ಲಿ,ಅವುಗಳ ವಿಶೇಷತೆಗಳನ್ನು ಚೆನ್ನಾಗಿ ಅನುಭವದಿಂದ ಮನದಟ್ಟು ಮಾಡಿಕೊಂಡು ಬೇಡಿಕೆ ಇತ್ತವರಿಗೆ ಮನವರಿಕೆ ಮಾಡಿ,ಯೋಗ್ಯ ಬೆಲೆ ತಂದುಕೊಡ್ತಾ ಇರುವ ವಿಶೇಷ ವ್ಯಕ್ತಿ ಇವರು ಎಂಬುದಕ್ಕೆ ಉದಾಹರಣೆ 70 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಚಿತ್ರದುರ್ಗದಂತಹ ದೂರದೂರಿಗೆ ಮಲೆನಾಡಗಿಡ್ಡ ಹಸುಗಳನ್ನು ಮಾರಾಟ ಮಾಡಿರುವುದೇ ಆಗಿದೆ.
ಇವರು ಸ್ವತಃ ಮಲೆನಾಡಗಿಡ್ಡಗಳಲ್ಲಿ ಅಪರೂಪವಾಗಿ ಹುಟ್ಟುವ ಕಪಿಲ ಹಸುಗಳನ್ನು ಸಾಕಿ ಅವುಗಳ ಉತ್ಪನ್ನಗಳಾದ ಜೀವಾಮೃತ ,ಹಾಲು,ವಿಭೂತಿಗಳ ತಯಾರಿ ಹಾಗೂ ಹೆಚ್ಚಿನ ಸಂಖ್ಯೆಯಾದಾಗ ಯೋಗ್ಯ ಬೆಲೆಗೆ ಮಾರುವ ಮೂಲಕ ಜೀವನ ನಡೆಸ್ತಿದ್ದಾರೆ. ಪಿತ್ರಾರ್ಜಿತ ಭೂಮಿ ಇವರ ಪಾಲಿಗೆ ಕೇವಲ 25-30 ಸೆಂಟ್ಸ್ ಮಾತ್ರ.ಮೊದಲು ಮಾಡ್ತಿದ್ದ ಚಾಲಕ ವೃತ್ತಿಗೆ ಎಂದೋ ವಿದಾಯ ಹೇಳಿ ಮ.ಗಿ.ಕಪಿಲ ಸಾಕಾಣಿಕೆಗೆ ತಿರುಗಿದ ಇವರು ಇಂದು ಯುವಕರಿಗೆ ಮಾದರಿ ಎನ್ನುವಷ್ಟರ ಮಟ್ಟಿಗೆ ಯಶಸ್ಸಿನ ಮಾರ್ಗದಲ್ಲಿದ್ದಾರೆ. ಕೆಲವೊಮ್ಮೆ ಮಲೆನಾಡಗಿಡ್ಡಗಳಲ್ಲಿ ತೀವ್ರ ಹಾಯುವ ಒದೆಯುವ ಹಸುಗಳು ಇದ್ದು ಅದರ ಮಾಲೀಕರು ನಿಭಾಯಿಸಲಾಗದೆ ಇವರಿಗೆ ನೀಡಿದ್ದನ್ನು ಇವರು ಪಳಗಿಸಿ ಹಾಲು ಕರೆಯಲು ಅಭ್ಯಾಸ ಮಾಡಲು ಸಾಕಷ್ಟು ಪ್ರಾಯಾಸ ಪಟ್ಟಿರುವುದೂ ಇದೆ. ಅಂತಹ ಹಸುಗಳೂ ಪಳಗಿದ ನಂತರ ಇವರಿಂದ ನಿರೀಕ್ಷಿಸಲಾಗದ ಮೌಲ್ಯಕ್ಕೆ ಮಾರಾಟವಾಗಿದ್ದಿದೆ.
ರಾಷ್ಟ್ರೀಯ ಪಶು ಅನುವಂಶೀಯ ಮತ್ತು ತಳಿವಿಜ್ಞಾನ ಸಂಸ್ಥೆಯಿಂದ- ಭಾರತೀಯ ಜಾನುವಾರು 0800 ಮಲೆನಾಡುಗಿಡ್ಡ 03037 ಎಂದು ಮಾನ್ಯತೆ ಪಡೆದ ಮಲೆನಾಡಗಿಡ್ಡಗಳು ತಮ್ಮ ವಂಶವಾಹಿ ಭಿನ್ನತೆಗಳಿಂದ ಕೂಡಿದ್ದು ಮಾತ್ರವಲ್ಲದೆ ಉಳಿದ ಭಾರತೀಯ ಜಾನುವಾರುಗಳಿಂದ ವೈವಿಧ್ಯಮಯವೂ ವೈಶಿಷ್ಟ್ಯಪೂರ್ಣವೂ ಆಗಿದೆ. ಆ ಬಗ್ಗೆ ಪ್ರವೀಣ್ ರವರ ಅನುಭವದಲ್ಲಿ ಸಾಕಷ್ಟು ಮಾಹಿತಿಗಳು ಇವೆ.
ವರ್ಷಗಂಧಿ ಎಂಬ ವರ್ಷಕ್ಕೊಮ್ಮೆ ಕರುಹಾಕುವ ದಿನಕ್ಕೆ ಒಂದೂವರೆ ಲೀ ಹಾಲು ಸಾಮಾನ್ಯ 7 ತಿಂಗಳ ಕಾಲ ಕೊಡುವ ವಿಧ,
ಒಂದೂವರೆ ವರ್ಷಕ್ಕೊಮ್ಮೆ ಕರುಹಾಕುವ 11 ತಿಂಗಳು ಹಾಲು ಕೊಡುವ ವಿಧ ಎರಡುವರ್ಷಕ್ಕೊಮ್ಮೆ ಕರುಹಾಕುವ 14 ತಿಂಗಳು ಹಾಲುಕೊಡುವ ಹಸುಗಳು ದಿನಕ್ಕೆ ಮೂರು ಲೀ ಹಾಲು ಕೊಡ್ತವೆ. ತೀರಾ ಕುಬ್ಜ ತಳಿಯ ದಿನಕ್ಕೆ ಮುಕ್ಕಾಲು ಲೀ ಹಾಲು ಕೊಡುವಂತಹ ವಿಧ ಹೀಗೆ ಹಲವಾರು ವಿಧದ ಮಲೆನಾಡ ಗಿಡ್ಡಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇವರು ಹೊಂದಿರುವುದರಿಂದ ಇವರಿಂದ ಕೊಳ್ಳುವ ಗ್ರಾಹಕರು ಸರಿಯಾದ ಆಯ್ಕೆಯನ್ನು ಪಡೆಯತ್ತಿದ್ದಾರೆ.
ಮಲೆನಾಡ ಗಿಡ್ಡಗಳು ಬಣ್ಣದಿಂದಲೂ ಕೂಡ ಬಹಳ ವೈಶಿಷ್ಟ್ಯಪೂರ್ಣ. ಕೆಂಪು, ಕಪ್ಪು, ಬಿಳಿ, ಕಂದು, ಕಪಿಲ, ಬೂದು, ತಿಳಿಗೆಂಪು, ಮಿಶ್ರಬಣ್ಣ ಹೀಗೆ ಹಲವಾರು ಬಣ್ಣಗಳ ಕರುಗಳು ಜನಿಸುವುದು ಮಲೆನಾಡ ಗಿಡ್ಡಗಳ ಒಂದು ವಿಶೇಷತೆ. ಅಂದ್ರೆ ಉಳಿದ ದೇಶೀ ತಳಿಗಳಲ್ಲಿ ವಿವಿಧ ಬಣ್ಣ ಇಲ್ಲ ಎಂಬ ಅರ್ಥ ಅಲ್ಲ. ಆದರೆ ಅವುಗಳಲ್ಲಿ ಹೆಚ್ಚಾಗಿ ತಳಿಗೆ ಒಂದೇ ಬಣ್ಣ. ಉದಾಹರಣೆ ಖಿಲಾರಿ ಹೆಚ್ಚಾಗಿ ಬಿಳಿ ಬಣ್ಣ ,ಗಿರ್ ಹೆಚ್ಚಾಗಿ ಕೆಂಪುಬಣ್ಣ ಎಂಬುದು ಮನಸಿಗೆ ಬರುವಂತೆ ಮಲೆನಾಡಗಿಡ್ಡ ಅಂದಾಕ್ಷಣ ನಿರ್ದಿಷ್ಟ ಒಂದೇ ಬಣ್ಣದಿಂದ ಗುರುತಿಸಲಾಗದು. ಅಲ್ಲದೆ ಕೋಡುಗಳ ರಚನೆಯೂ ವೈವಿಧ್ಯಪೂರ್ಣ, ಗಾತ್ರದಲ್ಲೂ ಅತೀಕುಬ್ಜ, ಮಧ್ಯಮಗಾತ್ರ, ದೊಡ್ಡಗಾತ್ರ, ಗಂಗೆ ತೊಗಲು, ಭುಜ, ಬಾಲ, ಕಿವಿ ಇವುಗಳ ವ್ಯತ್ಯಾಸಗಳಿಂದ ಕೂಡಿರುವುದರಿಂದ ಒಂದು ಮಲೆನಾಡಗಿಡ್ಡದ ತಳಿಶುದ್ಧತೆಯನ್ನು ಬರಿಗಣ್ಣಿಗೆ ತಿಳಿಯಲು ಬಹಳ ಗಿಡ್ಡಗಳನ್ನು ನೋಡಿದ, ಸಾಕಿದ ಅನುಭವವೂ ಬೇಕು.
ಚೆನ್ನಾಗಿ ಅನುಭವ ಇದ್ದರೆ ಹಸುವನ್ನು ನೋಡಿ ವಯಸ್ಸು, ಹಾಲು, ‘ಸ್ವಭಾವಗಳನ್ನೂ ಕೂಡ ಹೀಗೆಯೇ ಎಂದು ಅಂದಾಜಿಸಬಹುದು. ಹಾಲಿನ ಪ್ರಮಾಣ ಅಂದಾಜಿಸಲೂ ಕೂಡ ಅನುಭವ ಬೇಕು. ಕೆಲವೊಮ್ಮೆ ಕರುವಿಗೆ ಸಾಕಾಗುವಷ್ಟೂ ಹಾಲಿಲ್ಲದ ಹಸುಗಳೂ ಇರ್ತವೆ. ಆದ್ದರಿಂದ ಸರಿಯಾಗಿ ತಳಿ ಸಂವರ್ಧನೆ ಮಾಡದ ಅನೇಕರು ಗುಣಮಟ್ಟವಿಲ್ಲದ ಮಲೆನಾಡಗಿಡ್ಡಗಳನ್ನು ಉಚಿತ ನೀಡ್ತೇವೆ ಅಂತ ಹಂಚುತ್ತಾ ಇರುವ ಮಂದಿಗಳ ಮಧ್ಯೆ ಅಪರೂಪವೆಂಬಂತೆ ವಿಶೇಷ ವ್ಯಕ್ತಿತ್ವ ಪ್ರವೀಣ್ ಬೆಳ್ಳಾರೆಯವರದು. ನಿರಂತರ ಹಸು ಸಾಕಾಣಿಕೆ ಮಾಡುತ್ತಾ ಆಯ್ದ ಗುಣಮಟ್ಟದ ಹಸು, ಕರು, ಯೋಗ್ಯ ಹೋರಿಕರುಗಳನ್ನೂ ಕೂಡ 25ರಿಂದ 75ಸಾವಿರಗಳ ತನಕ ಮಲೆನಾಡಗಿಡ್ಡ ಮಾರಾಟ ಮಾಡಿ ಮ.ಗಿಡ್ಡಗಳಿಗೊಂದು ಮೌಲ್ಯ ಹೆಚ್ಚಿಸಿದ ಪ್ರವೀಣ್ ಬೆಳ್ಳಾರೆ ಇವರಿಗೆ ಇದನ್ನೇ ಕಾಯಕವಾಗಿಸಿ ಅದೇ ಆದಾಯದಿಂದ ಇನ್ನಷ್ಟು ಮಲೆನಾಡಗಿಡ್ಡಗಳನ್ನು ಸಂವರ್ಧಿಸುತ್ತಾ ತನ್ನ ಜಾಗರೂಕತೆಯಿಂದ ಸರಳ ಸಂಸಾರ ಜೀವನ ನಡೆಸುವಾಸೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…