ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಮೌನ ಅದನ್ನು ಎತ್ತುತ್ತದೆ..!

June 21, 2026
3:51 PM
ಮಾತು ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದರೆ, ಮೌನ ಅದರ ಪರಿಪಕ್ವತೆಯ ಸಂಕೇತವಾಗಿದೆ. ಕೃತಜ್ಞತೆ, ಸಂಯಮ ಮತ್ತು ಆತ್ಮಾವಲೋಕನವೇ ಉತ್ತಮ ವ್ಯಕ್ತಿತ್ವದ ಅಡಿಪಾಯ ಎಂದು ಕುಮಾರಸುಬ್ರಹ್ಮಣ್ಯ ಮುಳಿಯಾಲ ಅಭಿಪ್ರಾಯಪಟ್ಟಿದ್ದಾರೆ.

ಮಾನವನ ವ್ಯಕ್ತಿತ್ವವನ್ನು ಅಳೆಯುವ ಅತ್ಯಂತ ಸೂಕ್ಷ್ಮವಾದ ಮಾನದಂಡ ಅವನ ಮಾತು. ಮಾತು ಮನುಷ್ಯನ ಹೃದಯದ ಹಾದಿ ಹಿಡಿದು ಹೊರಬರುವ ಒಂದು ನಿಶ್ಶಬ್ದ ಪ್ರತಿಧ್ವನಿ. ಅದು ಕೇವಲ ಶಬ್ದವಲ್ಲ, ಅದು ವ್ಯಕ್ತಿತ್ವದ ನೆರಳು.ನಾವು ಏನು ಮಾತನಾಡುತ್ತೇವೆ ಎಂಬುದಕ್ಕಿಂತ, ಯಾವ ಸಂದರ್ಭದಲ್ಲಿ ಹೇಗೆ ಮಾತನಾಡುತ್ತೇವೆ ಎಂಬುದೇ ನಮ್ಮ ಒಳಗಿನ ಮೌಲ್ಯಗಳನ್ನು ಹೊರಗೆ ತರುತ್ತದೆ.

ಜೀವನದಲ್ಲಿ ಸಹೋದ್ಯೋಗಿಗಳು ಬರುತ್ತಾರೆ, ಹೋಗುತ್ತಾರೆ. ಕೆಲವರು ನಮ್ಮೊಂದಿಗೆ ಸದಾ ಉತ್ತಮ ಸಂಬಂಧದಲ್ಲಿರಬಹುದು, ಕೆಲ ಸಂದರ್ಭಗಳಲ್ಲಿ ಆಡಳಿತಾತ್ಮಕ ನಿರ್ಧಾರಗಳು ನಮ್ಮ ಸಂಬಂಧಗಳಿಗೆ ಅಂತರ ತರುತ್ತವೆ. ಆದರೆ ಆ ಸಂದರ್ಭದಲ್ಲಿಯೇ ನಮ್ಮ ವ್ಯಕ್ತಿತ್ವದ ನಿಜವಾದ ಪರೀಕ್ಷೆ ನಡೆಯುತ್ತದೆ. ದೂರವಾದ ಮೇಲೆಅವರ ನೆರಳಿನ ಮೇಲೆ ಕಲ್ಲು ಎಸೆಯುವುದು,ನಮ್ಮ ಬೆಳಕನ್ನು ಕಡಿಮೆ ಮಾಡುವುದು.

ಹಿಂದಿನಿಂದ ಮಾತನಾಡುವುದು – ಬೆಳವಣಿಗೆಗೆ ಅಡ್ಡಿ : ಯಾರಾದರೂ ವ್ಯಕ್ತಿ ನಮ್ಮ ಜೀವನದಲ್ಲಿ ಒಂದಿಷ್ಟು ಕಾಲ ಇದ್ದಿದ್ದರೆ, ಅವರ ಜೊತೆ ನಾವು ಕೆಲಸ ಮಾಡಿಕೊಂಡಿದ್ದರೆ, ಆ ಸಂಬಂಧಕ್ಕೆ ಒಂದು ಮೌಲ್ಯ ಇರುತ್ತದೆ. ಸಹೋದ್ಯೋಗಿ ಎಂಬುದು ಕೇವಲ ಒಂದು ಪದವಿಯಲ್ಲ ,ಒಂದು ಕಾಲಘಟ್ಟದ  ಸಂಗತಿ, ಒಂದು ಅನುಭವದ ಭಾಗ.ಆ ಸಂಬಂಧ ಮುಗಿದರೂ, ಅದರ ಗೌರವ ಉಳಿಯಬೇಕು.ಆ ಸಂಬಂಧ ಮುಗಿದ ನಂತರ ಅವರ ಬಗ್ಗೆ ಲಘುವಾಗಿ ಮಾತನಾಡುವುದು, ನಮ್ಮ ವ್ಯಕ್ತಿತ್ವವನ್ನು ಎತ್ತುವುದಿಲ್ಲ; ಅದು ನಮ್ಮ ಒಳಗಿನ ಅಸಹನೆ ಮತ್ತು ಅಸ್ಥಿರತೆಯನ್ನು ಮಾತ್ರ ತೋರಿಸುತ್ತದೆ.ಹಿಂದಿನಿಂದ ಮಾತಾಡುವ ನಾಲಿಗೆಕ್ಷಣಿಕ ತೃಪ್ತಿಯನ್ನು ಕೊಡಬಹುದು,ಆದರೆ ಅದು ಒಳಗಿನ ಶಾಂತಿಯನ್ನು ಕದಿಯುತ್ತದೆ.ಮೌನದಿಂದ ಮೂಡುವ ಗೌರವಮಾತಿನಿಂದ ಸಿಗುವುದಿಲ್ಲ.

ಹಿಂದಿನಿಂದ ಮಾತನಾಡುವುದು ಒಂದು ಕ್ಷಣಿಕ ತೃಪ್ತಿಯನ್ನು ಕೊಡಬಹುದು. ಆದರೆ ಅದು ದೀರ್ಘಕಾಲದಲ್ಲಿ ನಮ್ಮ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ. ಜನರು ನಮ್ಮ ಮಾತುಗಳನ್ನು ಕೇಳಬಹುದು, ಆದರೆ ನಮ್ಮ ಮೇಲಿನ ನಂಬಿಕೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ.

ಮಾತು – ಒಡೆದ ಮುತ್ತು, ಒಡೆದ ಕನ್ನಡಿ : ಒಮ್ಮೆ ಬಾಯಿಂದ ಹೊರಬಂದ ಮಾತು, ಒಡೆದ ಮುತ್ತಿನಂತಿದೆ. ಅದನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ. ಹಾಗೆಯೇ ಒಡೆದ ಕನ್ನಡಿ ಹೇಗೆ ಮೂಲ ಸ್ಥಿತಿಗೆ ಮರಳುವುದಿಲ್ಲವೋ, ಮಾತುಗಳಿಂದ ಒಡೆದ ಸಂಬಂಧಗಳು ಕೂಡ ಪೂರ್ಣವಾಗಿ ಮರುಸ್ಥಾಪನೆಯಾಗುವುದಿಲ್ಲ.ಆದ್ದರಿಂದ ಮಾತನಾಡುವ ಮುನ್ನ ಒಂದು ಕ್ಷಣ ಯೋಚಿಸುವುದು – ಅದೇ ವ್ಯಕ್ತಿತ್ವದ ಪಕ್ವತೆ.

ಪ್ರಾಮಾಣಿಕತೆ ಮತ್ತು ಕೃತಜ್ಞತೆ : ಒಂದು ಸಂಸ್ಥೆ ಅಥವಾ ವ್ಯಕ್ತಿಯ ಬಗ್ಗೆ ನಮಗೆ ಏನೇ ಅನುಭವ ಇದ್ದರೂ, ನಾವು ಅಲ್ಲಿ ಕೆಲಸ ಮಾಡಿ ಪ್ರತಿಫಲ ಪಡೆದಿದ್ದೇವೆ ಎಂಬ ಸತ್ಯವನ್ನು ಮರೆಯಬಾರದು. ಕೃತಜ್ಞತೆ ಎನ್ನುವುದು ವ್ಯಕ್ತಿತ್ವದ ಅಡಿಪಾಯ.ಕೆಟ್ಟ ಅನುಭವಗಳಿದ್ದರೂ, ಅದರಿಂದ ನಾವು ಏನು ಕಲಿತೇವೆ ಎಂಬುದನ್ನು ಗಮನಿಸುವುದು ಉತ್ತಮ. ಏಕೆಂದರೆ ಪ್ರತಿಯೊಂದು ಅನುಭವವೂ ನಮ್ಮನ್ನು ಇನ್ನಷ್ಟು ಪಕ್ವರನ್ನಾಗಿ ಮಾಡುತ್ತದೆ.

ಅನುಭವ , ಅರಿವು ಮತ್ತು ಅಭಿವೃದ್ಧಿ :  ಜೀವನದಲ್ಲಿ ಕೆಲ ಸಂದರ್ಭಗಳು ನಮ್ಮನ್ನು ನೋಯಿಸಬಹುದು. ಆದರೆ ಆ ನೋವು ನಮಗೆ ಒಂದು ಪಾಠ ಕಲಿಸಿದರೆ, ಅದು ನಷ್ಟವಲ್ಲ ಅದು ಬೆಳವಣಿಗೆಯ ಆರಂಭ. ಯಾರಾದರೂ ನಮ್ಮ ಬಗ್ಗೆ ಅಥವಾ ನಮ್ಮೊಂದಿಗೆ ಸಂಬಂಧಪಟ್ಟ ಸಂದರ್ಭಗಳಲ್ಲಿ ತಪ್ಪಾಗಿ ವರ್ತಿಸಿದರೆ, ಅದನ್ನು ವಿರೋಧಾತ್ಮಕವಾಗಿ ನೋಡುವ ಬದಲು,“ಇದರಿಂದ ನಾನು ಏನು ಕಲಿತೆ?” ಎಂಬ ಪ್ರಶ್ನೆಯನ್ನು ಕೇಳಿದಾಗ ವ್ಯಕ್ತಿತ್ವ ವಿಕಸನ ಆರಂಭವಾಗುತ್ತದೆ.

ಅಂತರಂಗದ ಶಾಂತಿ  ,ನಿಜವಾದ ಜಯ : ಮತ್ತೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದರಿಂದ ಕ್ಷಣಿಕ ಜಯ ಸಿಗಬಹುದು. ಆದರೆ ಮೌನ, ಸಮತೋಲನ ಮತ್ತು ಸದ್ಭಾವನೆ  ಇವು ದೀರ್ಘಕಾಲದ ಶಾಂತಿಯನ್ನು ಕೊಡುತ್ತವೆ.ಯಾರಾದರೂ ನಮ್ಮನ್ನು ನೋಯಿಸಿದರೆ,ಅವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮೊಳಗೆ ನೋಡಿಕೊಳ್ಳುವುದು ಉತ್ತಮ.ಅಲ್ಲಿ ನಮಗೆ ಸಿಗುವುದು ಶಾಂತಿ,  ಅರಿವು ಮತ್ತು  ಬೆಳವಣಿಗೆ.ಯಾರನ್ನಾದರೂ ಕ್ಷಮಿಸುವುದು ಅವರಿಗಾಗಿ ಅಲ್ಲ, ನಮ್ಮ ಒಳಗಿನ ಶಾಂತಿಗಾಗಿ.

ವ್ಯಕ್ತಿತ್ವವೆಂದರೆ ದೊಡ್ಡ ಸಾಧನೆಗಳಲ್ಲ; ಅದು ಸಣ್ಣ ಸಣ್ಣ ಸಂದರ್ಭಗಳಲ್ಲಿ ನಾವು ತೋರಿಸುವ ನಡವಳಿಕೆಯಲ್ಲಿ ಮೂಡುತ್ತದೆ. ಮಾತಿನ ಜಾಗ್ರತೆ, ಕೃತಜ್ಞತೆ, ಮತ್ತು ಮೌನದ ಶಕ್ತಿ  ಇವು ವ್ಯಕ್ತಿತ್ವವನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮಾತು ಹೇಳುವ ಮುನ್ನ ಒಂದು ಕ್ಷಣ ನಿಲ್ಲುವವನು, ಮೌನವನ್ನು ಅರಿಯುವವನು, ಕೃತಜ್ಞತೆಯಿಂದ  ಬದುಕುವವನೇ  ನಿಜವಾದ ಶ್ರೇಷ್ಠ ವ್ಯಕ್ತಿ.

ಯಾಕೆಂದರೆ… ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಆದರೆ ಮೌನ ಅದನ್ನು ಎತ್ತುತ್ತದೆ.

This opinion piece highlights how speech reflects a person’s character, while silence often demonstrates maturity and wisdom. It emphasizes gratitude, self-reflection, restraint in criticism, and the importance of maintaining dignity even after relationships or professional associations end.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!
August 20, 2026
9:46 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಭವಿಷ್ಯ ಈ ತೀರ್ಪಿನಲ್ಲಿದೆಯೇ..? ಗುಟ್ಕಾ ಬೇರೆ, ಅಡಿಕೆ ಬೇರೆ ? ಸುಪ್ರೀಂ ಕೋರ್ಟ್ ಮುಂದೆ ಇರುವ ದೊಡ್ಡ ಪ್ರಶ್ನೆಗಳು..
August 20, 2026
3:57 PM
by: ದ ರೂರಲ್ ಮಿರರ್.ಕಾಂ
ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ
August 20, 2026
3:06 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ
August 20, 2026
1:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror