ವಿಭೂತಿಗಾಗಿ ಗುಹೆ ಪ್ರವೇಶ ಮಾಡುವ ವಿಶೇಷವಾದ ಆಚರಣೆ ಗಡಿನಾಡು ಜಿಲ್ಲೆ ಕಾಸರಗೋಡಿನ ಬಾಯಾರು ಬಳಿಯ ಪೊಸಡಿಗುಂಪೆಯಲ್ಲಿ ನಡೆಯುತ್ತದೆ. ವರ್ಷಕ್ಕೊಮ್ಮೆ ಮಾತ್ರಾ ಈ ಗುಹೆಯನ್ನು ಊರ ಮಂದಿ ಪ್ರವೇಶ ಮಾಡುತ್ತಾರೆ. ಬೆಳಕಿಲ್ಲದ ಅತೀ ಸಣ್ಣ ದಾರಿಯಲ್ಲಿ ತೆವಳುತ್ತಾ, ಏಳುತ್ತಾ ಸುಮಾರು 500 ಮೀಟರ್ ದೂರ ಸಾಗಿ ಅಲ್ಲಿ ಸಿಗುವ ವಿಭೂತಿ, ಮಣ್ಣನ್ನು ತರುತ್ತಾರೆ. ಈ ವಿಭೂತಿಯಲ್ಲಿ ವಿಶೇಷ ಔಷಧೀಯ ಗುಣ ಇದೆ ಎಂದು ನಂಬಿಕೆ ಇದೆ. ಅನೇಕ ವರ್ಷಗಳಿಂದ ಈ ಆಚರಣೆ ನಡೆಯುತ್ತಿದೆ.
ಬಾಯಾರು ಗ್ರಾಮದ ಪೊಸಡಿಗುಂಪೆಯ ತಪ್ಪಲಲ್ಲಿ ಒಂದು ಗುಹೆ ಇದೆ. ಅನೇಕ ವರ್ಷಗಳಿಂದ ಇಲ್ಲೊಂದು ಆಚರಣೆ ನಡೆಯುತ್ತಿದೆ. ಇಲ್ಲಿನ ಊರ ಮಂದಿ ಪ್ರತೀ ವರ್ಷ ತೀರ್ಥ ಅಮವಾಸ್ಯೆಯಂದು ಈ ಗುಹೆಗೆ ಪ್ರವೇಶ ಮಾಡುತ್ತಾರೆ. 10-12 ಮಂದಿಯ 2-3 ತಂಡ ಆ ದಿನ ಇಡೀ ತಂಡ ತಂಡವಾಗಿ ತೆರಳಿ ಗುಹೆಯ ಒಳಗೆ ಸಿಗುವ ವಿಭೂತಿ ಅಥವಾ ಮಣ್ಣನ್ನು ತರುತ್ತಾರೆ. ಆ ಬಳಿಕ ಅದನ್ನು ಒಣಗಿಸಿ ಭಸ್ಮ ಧಾರಣೆ ಅಥವಾ ಔಷಧೀಯವಾಗಿಯೂ ಬಳಕೆ ಮಾಡುತ್ತಾರೆ. ಅನೇಕ ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಐತಿಹಾಸಿಕವಾಗಿಯೂ ಪೊಸಡಿಗುಂಪೆಯ ಈ ಪ್ರದೇಶ ಮಹತ್ವ ಪಡೆದಿದೆ. ಗುಡ್ಡದ ತಪ್ಪಲಿಲ್ಲಿ ಈ ಗುಹೆ ಇದೆ. ವರ್ಷದಲ್ಲಿ ಒಮ್ಮೆ ಮಾತ್ರಾ ಈ ಗುಹೆಯ ಒಳಗೆ ಪ್ರವೇಶ ಮಾಡುತ್ತಾರೆ. ಉಳಿದ ದಿನಗಳಲ್ಲಿ ಈ ಗುಹೆಗೆ ಯಾರೂ ಪ್ರವೇಶ ಮಾಡುವುದಿಲ್ಲ, ಆ ದಿನಗಳಲ್ಲಿ ಕಾಳಿಂಗ ಸರ್ಪ ಅಥವಾ ನಾಗರ ಹಾವು ಇರುತ್ತದೆ ಎನ್ನುವ ನಂಬಿಕೆ ಇದೆ.
ಈ ಗುಹೆ ಪ್ರವೇಶಕ್ಕೆ ಮುನ್ನ ಇಲ್ಲೇ ಹರಿಯುವ ತೊರೆಯಲ್ಲಿ ತೀರ್ಥ ಸ್ನಾನ ಮಾಡಿದ ಬಳಿಕ ಧಾರ್ಮಿಮ ವಿಧಿ ವಿಧಾನಗಳ ನಂತರ ಗುಹೆ ಪ್ರವೇಶ ನಡೆಯುತ್ತದೆ. ಗುಹೆಯ ಒಳಗೆ ಪ್ರವೇಶ ಮಾಡಿ ಸುಮಾರು 500 ಮೀಟರ್ ದೂರ ತೆವಳುತ್ತಾ, ಇಳಿಯುತ್ತಾ, ಏರುತ್ತಾ ಸಾಗಿ ಅಲ್ಲಿ ಸಂಗ್ರಹ ನಡೆಯುತ್ತದೆ. ಈ ಹಿಂದೆ ತೆರಳಿದ ಮಂದಿಗೆ ವಿಭೂತಿ ತೆಗೆಯುವ ಪ್ರದೇಶದ ಬಗ್ಗೆ ಮಾಹಿತಿ ಇರುತ್ತದೆ. ಹೀಗಾಗಿ ಪ್ರತೀ ವರ್ಷ ಕನಿಷ್ಟ ಒಂದಿಬ್ಬರು ಹೊಸ ಯುವಕರೂ ವಿಭೂತಿ ಸಂಗ್ರಹಕ್ಕೆ ತೆರಳುತ್ತಾರೆ. ಸಂಪೂರ್ಣ ಕತ್ತಲೆಯಿಂದ ಆವೃತವಾಗಿರುವ ಗುಹಾ ಪ್ರವೇಶದ ಸಂದರ್ಭ ದೇವರ ಮೇಲಿನ ನಂಬಿಕೆ ಹಾಗೂ ಮುಂದೆ ಇರುವ ಹಿರಿಯರು ತೋರಿದ ದಾರಿಯೇ ದಾರಿದೀಪವಾಗುತ್ತದೆ ಇಲ್ಲಿ.
ಇಲ್ಲಿಂದ ಅನತಿ ದೂರದಲ್ಲಿ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿ ಕೊಪ್ಪರಿಗೆ ಏರಿದ ಬಳಿಕ ಅನೇಕ ಸಮಯಗಳವರೆಗೆ ಕೊಪ್ಪರಿಗೆ ಏರಿರುತ್ತದೆ, ಆ ದೇವರ ಪ್ರಸಾದದ ಒಲೆಯಿಂದಲೇ ಇಲ್ಲಿ ಪ್ರಸಾದವಾಗಿ ವಿಭೂತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಈ ಗುಹೆಯಲ್ಲೂ ವಿವಿಧ ದಾರಿಗಳು ಕಾಣುತ್ತವೆ ಎಂದು ಗುಹೆ ಪ್ರವೇಶ ಮಾಡಿದ ಮಂದಿ ಹೇಳುತ್ತಾರೆ.
ಇಲ್ಲಿ ಸಂಗ್ರಹ ಆಗುವ ವಿಭೂತಿಯ ಧಾರಣೆಯಿಂದ ಅಥವಾ ಪ್ರಸಾದ ತೆಗೆದುಕೊಳ್ಳುವುದರಿಂದ ಚರ್ಮ ವ್ಯಾಧಿಗಳು, ದೇಹದ ಇತರ ಕಾಯಿಲೆಗಳ ನಿವಾರಣೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಹಲವು ಮಂದಿಗೆ ಇದರ ಪ್ರತ್ಯಕ್ಷ ನಿದರ್ಶನವಾಗಿದೆ ಎನ್ನುತ್ತಾರೆ. ಹೀಗಾಗಿ ಈ ಬಗ್ಗೆ ಮಾಹಿತಿ ಇರುವ ದೂರದ ಊರಿನ ಮಂದಿ ಪ್ರತೀ ವರ್ಷ ಇಲ್ಲಿ ಸಂಗ್ರಹಿಸಿದ ವಿಭೂತಿಯನ್ನು ಕೇಳಿ ಪಡೆಯುತ್ತಾರೆ.
– ವಿಷ್ಣು ಪ್ರಸಾದ್, ಅವಳ ಮಠ, ಬಾಯಾರು
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…