ಹಳ್ಳಿ ಬದುಕು ಶಾಪವಲ್ಲ… ಸಮಾಜದ ಮನಸ್ಥಿತಿ ಶಾಪ…!

January 28, 2026
7:09 AM
ನವವಿವಾಹಿತೆಯೊಬ್ಬಳು ಹಳ್ಳಿಯಲ್ಲಿ ಬದುಕಬೇಕಾಯಿತು ಎಂಬ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಮ್ಮ ಸಮಾಜದ ಚಿಂತನೆಗೆ ಕನ್ನಡಿ ಹಿಡಿದಂತಾಗಿದೆ. ಕೃಷಿ ಬದುಕು ಆತ್ಮಹತ್ಯೆಗೆ ಕಾರಣವಾಗುವಷ್ಟು ದುಃಖದಾಯಕವಲ್ಲ. ಆದರೆ, ಕೃಷಿಯನ್ನು ಹೀನವಾಗಿ ನೋಡುವ ಸಾಮಾಜಿಕ ಮನಸ್ಥಿತಿಯೇ ಇಂತಹ ದುರ್ಘಟನೆಗಳಿಗೆ ದಾರಿ ಮಾಡಿಕೊಡುತ್ತಿದೆ…

ಪ್ರೀತಿಸಿ ಮದುವೆಯಾಗಿ ಕೇವಲ ಎರಡು ತಿಂಗಳಷ್ಟೇ ಕಳೆದಿದ್ದ ನವವಿವಾಹಿತೆ ಆತ್ಮಹತ್ಯೆಗೆ ಶರಣಾದ ಬಗ್ಗೆ ಈಚೆಗೆ ಸುದ್ದಿಯೊಂದನ್ನು ನೋಡಿದೆ. ಈ ಆತ್ಮಹತ್ಯೆಯ ಕಾರಣ ನಿಜಕ್ಕೂ ವಿಷಾದ. “ತನ್ನಿಬ್ಬರು ಸಹೋದರಿಯರು ನಗರದಲ್ಲಿ ಆರಾಮವಾಗಿದ್ದಾರೆ, ನಾನು ಮಾತ್ರಾ ಹಳ್ಳಿಯಲ್ಲಿ ಬದುಕಬೇಕಾಗಿ ಬಂತಲ್ಲ” ಎನ್ನುವ ಕೊರಗು ಹಾಗೂ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್‌ ಕೇಸಿನಲ್ಲಿ ದಾಖಲಾಗಿದೆ. ಈ ನೆಲೆಯಲ್ಲಿ ಯೋಚಿಸುತ್ತಾ ಸಾಗಿದಾಗ ನಮ್ಮ ಮುಂದಿರುವ ಸವಾಲುಗಳಷ್ಟೇ ಅಲ್ಲ ಯೋಚಿಸಬೇಕಾದ ರೀತಿಯನ್ನೂ ಬದಲಾಯಿಸಿಕೊಳ್ಳಬೇಕೆಂದು ಅನಿಸಿತು.

Advertisement
Advertisement

ಗ್ರಾಮೀಣ ಬದುಕಿನಲ್ಲಿ, ಕೃಷಿಯಲ್ಲಿ ಬದುಕು ಸಾಗಿಸುವ ಅನೇಕರು ಇಂದು ಅನುಭವಿಸುವ ಕೃಷಿ ಸಮಸ್ಯೆಗಳಿಗಿಂತಲೂ ಗಂಭೀರವಾದ ಸಮಸ್ಯೆ ಇದು. ಇಂದು ಕೃಷಿ ಮಾಡುವ, ಹಳ್ಳಿಯ ಬದುಕು ಸಾಗಿಸುವ ಯುವಕರಿಗೆ ಮದುವೆಯಾಗುವುದು ಕಷ್ಟ. ನಗರದಲ್ಲಿ ಕನಿಷ್ಟ ವೇತನ ಇದ್ದರೂ ಸರಿ, “ಹಳ್ಳಿ, ಕೃಷಿ ಸಹವಾಸ ಆಗದು” ಎನ್ನುವ ಮಂದಿ ಹೆಚ್ಚು. ಪೋಷಕರದ್ದು ಇದರಲ್ಲಿ ದೊಡ್ಡ ಪಾತ್ರ. ತನ್ನ ಮಕ್ಕಳು ಮಾತ್ರವಲ್ಲ, ಇನ್ನೊಂದು ಮನೆಯವರ ತಲೆಯಲ್ಲೂ “ಹುಳ” ಬಿಡುವ ಅನೇಕರನ್ನು ಕಂಡಿದ್ದೇನೆ.

ಕೆಲವು ಸಮಯದ ಹಿಂದೆ ಒಬ್ಬರು ಸಿಕ್ಕಿದರು. ಕೃಷಿಯ ಬಗ್ಗೆ ಸಾಕಷ್ಟು ಮಾತನಾಡಿದರು. ಕೃಷಿ ಬದುಕೇ ಉತ್ತಮ ಎಂದರು. ಅವರಿಗೆ ಇಬ್ಬರು ಮಕ್ಕಳು. ಪುತ್ರ ಹಾಗೂ ಪುತ್ರಿ. ಪುತ್ರ ಓದಿದ್ದಾನೆ, ನಗರದಲ್ಲಿ ಉದ್ಯೋಗ ಮಾಡಿಕೊಂಡು ಹಳ್ಳಿ ಬದುಕು ಉತ್ತಮ ಎನ್ನುವ ಭಾವನೆ ಅವರದ್ದು. ಈ ಯೋಚನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾ, ಕೃಷಿ ಉಳಿಯಬೇಕಾದರೆ ಇದೇ ಮಾನಸಿಕತೆ ಬೇಕು ಎಂದು ಮಾತನಾಡಿದ್ದಾಯಿತು. ಮಗನಿಗೆ ಇನ್ನು ಮದುವೆಯ ಯೋಚನೆಯೂ ಇದೆ. ಸೊಸೆ ಕೃಷಿ ಚಟುವಟಿಕೆ ನೋಡಿಕೊಳ್ಳಬಹುದು, ಉದ್ಯೋಗಕ್ಕೆ ಹೋಗಬೇಕೆಂದನೇನೂ ಇಲ್ಲ. ಇಲ್ಲಿ ಸಾಕಷ್ಟಿದೆ ಆಸ್ತಿ ಇದೆ, ಆದಾಯ ಇದೆ ಎಂದೂ ಅಭಿಪ್ರಾಯ ಆಯ್ತು. ಅದಾದ ಬಳಿಕ ಅವರ ಮಗಳ ಬಗ್ಗೆ ಮಾತುಕತೆ ಬಂದಾಗ, ಅಳಿಯ ದೊಡ್ಡ ಕಂಪನಿಯಲ್ಲಿ, ಮಗಳು ಇನ್ನೊಂದು ದೊಡ್ಡ ಕಂಪನಿಯಲ್ಲಿ, ಈಚೆಗಷ್ಟೇ ವಿದೇಶಕ್ಕೆ ಹೋಗಿ ಬಂದರು. ಇಬ್ಬರೂ ಬ್ಯುಸಿ ಇರ್ತಾರೆ….. ಎಂದು ಸಾಕಷ್ಟು ಹೊಗಳಿಕೆ ಬಂತು….!. ಮಾತುಕತೆ ಮುಗಿದು ಮನೆಗೆ ಬರ್ತಾ ಇದ್ದೆ. ಹೌದಲ್ಲ… ಅವರ ಮಗಳು ದೊಡ್ಡ ಹುದ್ದೆಯಲ್ಲಿದ್ದಾರೆ, ವಿದೇಶಗಳಿಗೂ ಹೋಗಿ ಬರ್ತಾರೆ… ಉನ್ನತ ಸ್ಥಾನಮಾನ ಇದೆ… ಆದರೆ ಸೊಸೆ, ಕೃಷಿ ಚಟುವಟಿಕೆ ನೋಡಿಕೊಳ್ಳಬಹುದು, ಉದ್ಯೋಗಕ್ಕೆ ಹೋಗಬೇಕೆಂದೇನೂ ಇಲ್ಲ..!. ಅದೇ ಮಾನಸಿಕತೆ ಎಲ್ಲಾ ಹೆಣ್ಣು ಹೆತ್ತವರ ಮನದಲ್ಲೂ ಇಲ್ವೇ…? ಅಂತ ಯೋಚಿಸಿಕೊಂಡು ಬಂದೆ. ಎಷ್ಟು ವ್ಯತ್ಯಾಸ ಈಗಲೂ.. !. ಬದಲಾಗಬೇಕಾದ್ದು ಈ ಮಾನಸಿಕತೆ. ಕೃಷಿ ಉಳಿಯುತ್ತದೆ, ಯುವ ಕೃಷಿಕರೂ ಹೆಚ್ಚಾಗುತ್ತಾರೆ.. ಖುಷಿಯ ಬದುಕೂ ಇರುತ್ತದೆ.

ಈಚೆಗಷ್ಟೇ, ಸುಳ್ಯಪದವಿನ ಕೃಷಿಕ ಕತ್ರಿಬೈಲು ವೆಂಕಟೇಶ್ವರ ಶರ್ಮ ಅವರಲ್ಲಿಗೆ ಹೋಗಿದ್ದಾಗ ಅವರ ಮಗನಿಗೆ ಮದುವೆಯ ನಿಗದಿಯಾಗಿದ್ದು, ಆಮಂತ್ರಣ ಪತ್ರಿಕೆ ನೀಡಿದರು. ಅವರ ಮಗ ವೈದ್ಯ. ಪುತ್ತೂರಿನಲ್ಲಿ ಕ್ಲಿನಿಕ್‌ ಇರಿಸಿಕೊಂಡಿದ್ದಾರೆ. ಮದುವೆಯಾಗಿ ಬರುವ ಅವರ ಸೊಸೆ ಎಂಎಸ್ಸಿ ಓದಿದ್ದಾಳೆ. ಈಗಾಗಲೇ ಸೊಸೆ ಕೃಷಿಗೆ ಸಂಬಂಧಿಸಿ ಸಲಹಾ ಕ್ಲಿನಿಕ್‌ ತೆರೆಯಬೇಕೆಂದಾದರೆ ಎಂದು ಸಿದ್ಧತೆ ಮಾಡಿದ್ದಾರೆ, ಕೊಠಡಿ ಬಾಡಿಗೆಯನ್ನೂ ನೀಡುತ್ತಿದ್ದಾರಂತೆ. ಅವಳಿಗೆ ಅಗತ್ಯ ಎನಿಸಿದರೆ ನಂತರ ಕಚೇರಿ ತೆರೆಯುವುದು ಇಲ್ಲದೇ ಇದ್ದರೆ ನಂತರ ಕೊಠಡಿ ಬಿಡುವುದು ಎನ್ನುವ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದಾರೆ. ಕೃಷಿ ಉಳಿಯಬೇಕು, ಕೃಷಿ ಉಳಿಸಿಕೊಂಡು ಮಕ್ಕಳೂ ಉದ್ಯೋಗ ಮಾಡಿಕೊಳ್ಳಲಿ ಎನ್ನುವ ಮಾನಸಿಕ ಸಿದ್ಧತೆ.

ಈ ಸಿದ್ಧತೆ ಇಂದು ಅನೇಕ ಪೋಷಕರಲ್ಲೂ ಇರಬೇಕು. ಮದುವೆಯಾಗಿ ಹಳ್ಳಿಯ ಮನೆಗೆ ಬರುವ ಯಾವುದೇ ಹುಡುಗಿಯು ಮನೆಯೊಳಗೇ ವಾರ ಪೂರ್ತಿ ಇರಲು ಇಷ್ಟ ಪಡಲಾರರು. ಒಂಚೂರು ಸ್ವಾತಂತ್ರ್ಯವೂ ಬೇಕು, ಒಂಚೂರು ವಿಹಾರವೂ ಇರಬೇಕು. ಕೃಷಿ ಜವಾಬ್ದಾರಿ ಎನ್ನುವುದು ಒಮ್ಮೆಲೇಲಬಾರದು. ಓದಿನಿಂದ ನಂತರ ಒಮ್ಮೆಲೇ ತೋಟದ ನಿರ್ವಹಣೆ, ಕೃಷಿ ನಿರ್ವಹಣೆ ಕಷ್ಟವೂ ಇದೆ. ಹೀಗಿರುವ ಯೋಚನೆಗಳು ಬಂದರೆ ಯುವಕರೂ ಕೃಷಿಯಲ್ಲಿ ಉಳಿಯುತ್ತಾರೆ, ಕೃಷಿಯೂ ಉಳಿಯುತ್ತದೆ. ಕೃಷಿಕ ಯುವಕನಿಗೆ ಮದುವೆಯೂ ಆಗುತ್ತದೆ.

ತುಂಬಾ ಸಲ ಹೀಗಾಗುತ್ತದೆ. ಹುಡುಗಿಗಿಂತಲೂ ಹುಡುಗಿಯ ಮನೆಯವರಿಗೆ ನಗರದ ತುಡಿತ ಇರುತ್ತದೆ. ಇನ್ನೂ ಕೆಲವೊಮ್ಮೆ ಹುಡುಗಿಯ ಪೋಷಕರಿಗೂ ಇಲ್ಲದ್ದು ಸಮಾಜಕ್ಕೆ ಇರುತ್ತದೆ. ಅನೇಕ ಸಲ ಕೃಷಿಕನಿಗೆ ಮದುವೆಯಾದ ಹುಡುಗಿಯ ಬಳಿ ಕೇಳುವ ಪ್ರಶ್ನೆ ಹೀಗಿರುತ್ತದೆ,” ಹುಡುಗ ಏನು ಮಾಡುತ್ತಾನೆ” ಎನ್ನುವುದು ಮೊದಲ ಪ್ರಶ್ನೆ. ಈ ಪ್ರಶ್ನೆಗೆ ಕೃಷಿ ಎನ್ನುವ ಉತ್ತರ ಬಂದರೆ ಮರುಪ್ರಶ್ನೆ, “ಕೃಷಿಯಾ..? ಅದ್ಯಾಕೆ ಕೃಷಿ. ಕೃಷಿ ಈಗ ಕಷ್ಟ ಅಲ್ವಾ….”  ಹೀಗೇ ಹುಡುಗಿಗೆ ಇಲ್ಲದ ಪ್ರಶ್ನೆಗಳೆಲ್ಲವೂ ಸಮಾಜಕ್ಕೆ…!. ಇಂತಹ ಪ್ರಶ್ನೆಗಳು ನಿರಂತರವಾದರೆ ಕೃಷಿಯೇ ನಾಶವಾಗುತ್ತದೆ. ಇಂತಹ ಪ್ರಶ್ನೆಗಳು ಆಗಾಗ ಕೇಳಿದರೆ ಖಿನ್ನತೆಯೇ ಆರಂಭ..!. ಕೃಷಿಯೇ ಶಾಪ. ಇದು ಹುಡುಗನಿಗೂ ಸಂಕಟ..!. ಇದು ಈ ಸಮಾಜ ಕೃಷಿಗೆ ನೀಡುವ ಕೊಡುಗೆ. ಇಂದು ಕೃಷಿಯನ್ನು ಉದ್ಯೋಗ ಮಾಡುವ ಯುವಕರು , ಕೃಷಿಕನನ್ನೇ ಮದುವೆಯಾಗುವ ಹುಡುಗಿಯರಿಗೆ ವಿಶೇಷವಾಗಿ ಕೃಷಿ ಕುಟುಂಬವು ಕೆಲವೊಂದು ಸ್ವಾತಂತ್ರ್ಯಗಳನ್ನಷ್ಟೇ ಅಲ್ಲ, ಅಪ್ಡೇಟ್‌ ಆಗಬೇಕಾದ ಹಲವು ಸಂಗತಿಗಳು ಇವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕೃಷಿ ಬದುಕು, ಗ್ರಾಮೀಣ ಬದುಕು ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು , ಖಿನ್ನತೆಗೆ ಇಳಗಾಗುವಂತಹ ಸನ್ನಿವೇಶದಲ್ಲಿ ಇಂದಿಲ್ಲ.  ನಗರದ ಜಂಜಾಟ, ಒತ್ತಡ, ಕೃತಕ ಜೀವನಶೈಲಿ… ಇವೆಲ್ಲದರ ನಡುವೆ ಗ್ರಾಮೀಣ ಬದುಕು ಒಂದು ಶಾಂತಿಯ ಆಶ್ರಯ. ಹಳ್ಳಿಯ ಬೆಳಗಿನ ಹಸುರು ಹೊಲಗಳು, ಕೃಷಿಯ ಜೊತೆ ಬದುಕುವ ಸರಳತೆ, ಮಾನಸಿಕ ನೆಮ್ಮದಿಯನ್ನು ಕೊಡುವ ಶಕ್ತಿ ಹೊಂದಿದೆ.

ಕೃಷಿ ಬದುಕು ಕೇವಲ ಉದ್ಯೋಗವಲ್ಲ… ಅದು ಜೀವನದ ಸಂಸ್ಕೃತಿ. ಅಲ್ಲಿ ದುಡ್ಡಿಗಿಂತ ಮೌಲ್ಯ ಮುಖ್ಯ. ಅಲ್ಲಿದೆ ಸಂಬಂಧಗಳ ಗಾಢತೆ ಇರುತ್ತದೆ. ಅಲ್ಲಿದೆ ನಿಜವಾದ ಬದುಕಿನ ತಾಳ್ಮೆ. ಇಂದು ನಮ್ಮ ಯುವಜನತೆಗೆ ಬೇಕಾಗಿರುವುದು ಮತ್ತೆ ಮಣ್ಣಿನ ಬಳಿಗೆ ಮಾನಸಿಕ ಚೈತನ್ಯ. ಗ್ರಾಮೀಣ ಬದುಕು ಹಿಂದುಳಿದ ಜೀವನವಲ್ಲ. ಅದು ಮುಂದಿನ ಪೀಳಿಗೆಗೆ ಬೆಳಕಿನ ದಾರಿ ಇಷ್ಟು ತಿಳಿದುಕೊಂಡರೆ  ಇಲ್ಲಿ ಖಿನ್ನತೆಯೇ ಇಲ್ಲ..

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?
January 28, 2026
8:18 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ – ಮನೆಯಅಡುಗೆ ಮಾತು | ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ
January 24, 2026
6:26 AM
by: ದಿವ್ಯ ಮಹೇಶ್
ಆಧುನಿಕ ಸಮಾಜದಲ್ಲಿ ಸಾಂಸ್ಕೃತಿಕ ಸಂವೇದನೆಯ ಅಗತ್ಯ
January 23, 2026
9:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಣ್ಣಿನ ಆರೋಗ್ಯಕ್ಕೂ ಪ್ರಕೃತಿಯ ಸಮತೋಲನಕ್ಕೂ ಎಚ್ಚರಿಕೆಯ ಗಂಟೆ
January 19, 2026
7:41 AM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror