ಹೊಸ ಶಿಕ್ಷಣ ಈ ದೇಶಕ್ಕೆ ಹೊಸ ದಿಕ್ಕನ್ನು ನೀಡಬಲ್ಲದು. ಮಕ್ಕಳಿಗೆ ಕಲಿಕಾ ಸ್ವಾತಂತ್ರ್ಯವನ್ನು ನೀಡಬೇಕು. ವಿದ್ಯೆ ದಾನಕ್ಕಿರುವುದು, ಮಾರಾಟಕ್ಕಲ್ಲ ಎಂಬ ನಿಲುವು ನಮ್ಮದಾಗಬೇಕು. ಭಾರತೀಯ ಶಿಕ್ಷಣದೊಂದಿಗೆ, ಸಂಸ್ಕಾರಯುತ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶ ಎಂದು ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‍ಇ) ಇದರ ನೂತನ ಕಟ್ಟಡ ಹಾಗೂ ‘ವಿಜ್ಞಾನ ದೀಪಿಕಾ’ 3ಡಿ ವಿಜ್ಞಾನ ಉದ್ಯಾನವನ ಇವುಗಳನ್ನು ಲೋಕಾರ್ಪಣೆಗೊಳಿಸಿ ಬುಧವಾರ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ದೇಶೀಯ ಗುರುಕುಲ ಶಿಕ್ಷಣಕ್ಕೆ ಪ್ರಾಶಸ್ತ್ಯವಿತ್ತು. ಅದು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಹೊಂದಿತ್ತು. ಆದರೆ ಆಂಗ್ಲರು ಅವರ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಈ ವ್ಯವಸ್ಥೆಯನ್ನು ಬದಲಾಯಿಸಿದರು. ಇಂದಿಗೂ ಅದೇ ಪದ್ಧತಿ ಜಾರಿಯಲ್ಲಿದೆ. ವ್ಯಕ್ತಿ ಕೇಂದ್ರಿತವಾದ, ಸಂಕುಚಿತ, ಸ್ವಾರ್ಥಪರ ಯೋಚನೆಯನ್ನು ಬಿತ್ತುವ ಶಿಕ್ಷಣ ಪದ್ಧತಿ ಇದಾಗಿದೆ. ಸನಾತನವಾದ ಗುರುಕುಲ ಸಂಸ್ಕೃತಿಯಿಂದ ಭಾರತ ವಿಶ್ವಗುರುವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಆಶೀರ್ವಚನ ನೀಡಿದ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಪ್ರಾಚೀನ ಕಾಲದಲ್ಲಿ ಸೂರ್ಯೋದಯ ಭಾರತದಲ್ಲಿ ಆಗಿತ್ತು. ಬೆಳಕು ಜಗತ್ತಿಗೆ ಪಸರಿಸಿತ್ತು. `ಎಲ್ಲರಿಗೂ ಶಿಕ್ಷಣ ಎನ್ನುವ ಸಮಷ್ಠಿ ಶಿಕ್ಷಣದ ಪರಿಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟಿರುವುದು ಭಾರತದೇಶ ಎಂಬುದು ನೆನಪಿರಲಿ. ನಮ್ಮ ಧರ್ಮ-ಸಂಸ್ಕೃತಿಯನ್ನು ಆಧರಿಸಿದ ಶಿಕ್ಷಣವನ್ನು ನಾವು ಕೊಡಬೇಕು. ಶಿಕ್ಷಣವನ್ನೂ ದಂದೆಯಾಗಿಸಿಕೊಂಡವರ ನಡುವೆ ವಿವೇಕಾನಂದ ವಿದ್ಯಾಸಂಸ್ಥೆಗಳು ಪ್ರತ್ಯೇಕವಾಗಿ ನಿಲ್ಲುತ್ತವೆ. ರಾಷ್ಟ್ರಹಿತ, ರಾಷ್ಟ್ರ ಭಕ್ತಿಯನ್ನು ಶಿಕ್ಷಣದ ಮೂಲಕ ನೀಡುವ ಉದ್ದೇಶವನ್ನಿರಿಸಿಕೊಂಡ ವಿವೇಕಾನಂದ, ರಾಷ್ಟ್ರ ಚಿಂತನೆಯ ವಿದ್ಯಾಸಂಸ್ಥೆಯಾಗಿದೆ. ಎಲ್ಲಿ ಸೂರ್ಯ ಹುಟ್ಟುತ್ತಾನೋ ಅಲ್ಲಿ ಬೆಳಕು ಜಾಸ್ತಿ ಎಂದರು.
‘ಕಲ್ಪನಾ ಚಾವ್ಲಾ’ ವಿಜ್ಞಾನ ಪ್ರಯೋಗಾಲಯವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಬಯಲು ರಂಗಮಂದಿರವನ್ನು (ಆ್ಯಂಪಿಥಿಯೇಟರ್) ಉದ್ಘಾಟನೆ ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟಿಸಿದರು.
ಚಿಣ್ಣರ ಚಿಲುಮೆಯನ್ನು ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್, ಸಿ.ಬಿ.ಎಸ್.ಇ ಸ್ಕೂಲ್ ಆ್ಯಪನ್ನು ಮಂಗಳೂರಿನ ಕೆನರಾ ಬ್ಯಾಂಕ್ ಸರ್ಕಲ್ ಆಪೀಸ್‍ನ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಅನಾವರಣಗೊಳಿಸಿದರು. ಈ ಸಂದರ್ಭ ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಚಾರ್ಯ ಗೋಪಿನಾಥ್ ಶೆಟ್ಟಿ, ಸಿವಿಲ್ ಕನ್ಸ್ಟ್ರಕ್ಟರ್ ಗೋಪಾಲ್ ಮೂಲ್ಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಇವರನ್ನು ಗೌರವಿಸಲಾಯಿತು. ಅಂತರ್ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‍ಸಿ)ಯ ಮುಖ್ಯಶಿಕ್ಷಕಿ ಸಿಂಧು ಉಪಸ್ಥಿತರಿದ್ದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‍ಇ)ಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‍ಇ)ಯ ಆಡಳಿತ ಮಂಡಳಿ ಸಂಚಾಲಕ ಭರತ್ ಪೈ ಸ್ವಾಗತಿಸಿ, ಅಧ್ಯಕ್ಷೆ ವಸಂತಿ ಕೆದಿಲ ವಂದಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿಘ್ನೇಶ್ ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …