ದಸರಾ ಹಬ್ಬದ ಶುಭಾಶಯಗಳೊಂದಿಗೆ……, ಒಂದು ಸಣ್ಣ ಸಂಕಲ್ಪ ಮಾಡೋಣ………. ” ಒಳ್ಳೆಯವರಾಗೋಣ “….
ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ……..
ಆತ್ಮೀಯರೆ,
ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ ಭಾಷೆಯವರೇ ಆಗಿರಿ, ಯಾವ ಸಂದರ್ಭ, ಸನ್ನಿವೇಶ, ಪ್ರದೇಶದಲ್ಲೇ ವಾಸವಾಗಿರಿ, ಯಾವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥರದಲ್ಲೇ ಇರಿ, ಇನ್ನು ಮುಂದೆ ನಿಮ್ಮ ಈಗಿನ ಕೆಟ್ಟತನದಲ್ಲಿ ಕನಿಷ್ಠ ಶೇಕಡಾ 10% ರಷ್ಟು ಕಡಿಮೆ ಮಾಡಿಕೊಳ್ಳಿ. ಅದು ನಿಮ್ಮ ವೈಯಕ್ತಿಕ ನಡವಳಿಕೆಯೇ ಇರಲಿ, ವ್ಯವಹಾರವೇ ಇರಲಿ, ಸಂಬಂಧಗಳಲ್ಲೇ ಇರಲಿ, ಮಾನವೀಯ ಮೌಲ್ಯಗಳಲ್ಲೇ ಇರಲಿ ಕನಿಷ್ಠ ಕನಿಷ್ಠ 10% ಪರ್ಸೆಂಟ್ ಈಗಿನ ಸ್ಥಿತಿಗಿಂತ ಉತ್ತಮ ಪಡಿಸಿಕೊಳ್ಳಿ.
ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ಯಾವುದೇ ಸಂಶೋಧನೆ ಮಾಡಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಈ ಸಮಾಜದ ನಡವಳಿಕೆಯ ಬಗ್ಗೆ ತಿಳಿದೇ ಇರುತ್ತದೆ.
ಇಂದಿನಿಂದ ಮುಂದಿನ ವರ್ಷದ ಇದೇ ದಿನದೊಳಗಾಗಿ ಈ ಶೇಕಡಾ10% ಬದಲಾವಣೆ ನಮ್ಮಲ್ಲಿ ಬರಲೇಬೇಕು. ಅದನ್ನು ನಮ್ಮ ಆತ್ಮಸಾಕ್ಷಿಗೆ ಒಪ್ಪಿಸಬೇಕು. ನಮ್ಮ ಚಿಂತನಾ ಕ್ರಮವನ್ನು ವಿಶಾಲ ಮತ್ತು ಹೆಚ್ಚು ನಾಗರಿಕ ಗೊಳಿಸಿಕೊಳ್ಳಬೇಕು. ಸಮಗ್ರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅದು ಈ ದೇಶಕ್ಕೆ, ನಮ್ಮ ಪ್ರೀತಿ ಪಾತ್ರರಿಗೆ, ನಮ್ಮ ಸಂಸ್ಕೃತಿಗೆ, ಈ ಸೃಷ್ಟಿಗೆ ನಾವು ಕೊಡಬಹುದಾದ ಒಂದು ಕಾಣಿಕೆ.
ಉದಾಹರಣೆ, ನೀವು ಸರ್ಕಾರಿ ಅಧಿಕಾರಿಯಾಗಿದ್ದು ಇಲ್ಲಿಯವರೆಗೂ ಲಂಚ ಪಡೆಯುವವರಾಗಿದ್ದರೆ ಕನಿಷ್ಠ ಅದರಲ್ಲಿ 10% ಕಡಿಮೆ ಮಾಡಿಕೊಳ್ಳಿ. ತುಂಬಾ ಲಾಭದ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಅತಿ ಎನಿಸಿದರೆ 10% ಬಿಡಿ. ವೈದ್ಯ, ಶಿಕ್ಷಕ, ಪೋಲೀಸ್, ವಕೀಲ, ರಾಜಕಾರಣಿ, ಕಂಟ್ರಾಕ್ಟರ್ ಸೇರಿ ಯಾವುದೇ ವೃತ್ತಿಯಲ್ಲಿ ಇರಿ ಅಲ್ಲಿನ ನಿಮ್ಮ ಮೋಸದ ಪ್ರಮಾಣದಲ್ಲಿ ಕನಿಷ್ಠ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಿ. ಮೋಸ ವಂಚನೆ ಸುಳ್ಳು ಅಸೂಯೆ, ಬೇರೆಯವರ ಬಗ್ಗೆ ಚಾಡಿ, ಕಳ್ಳತನ, ಅತ್ಯಂತ ಕೆಟ್ಟ ಬೈಗುಳ, ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವುದು ಮುಂತಾದ ವಿಷಯಗಳಲ್ಲಿ ಕನಿಷ್ಠ 10% ಕಡಿಮೆ ಮಾಡಿಕೊಳ್ಳಿ.
ಗೆಳೆಯರೇ, ಇದಕ್ಕಾಗಿ ನೀವು ಯಾವುದೇ ವಿಶೇಷ ಶ್ರಮ, ಹಣ, ಸಮಯ ಯಾವುದೂ ಮೀಸಲಿಡಬೇಕಾಗಿಲ್ಲ. ಇದನ್ನು ಓದಿದ ತಕ್ಷಣ ಕೇವಲ 5 ನಿಮಿಷ ಮೌನಕ್ಕೆ ಜಾರಿ ನಿಮಗೆ ಒಪ್ಪಿತ ಎನಿಸಿದರೆ ನಿಮ್ಮ ಅತಿ ಹೆಚ್ಚು ಕೆಟ್ಟತನ ಅನಿಸುವುದರಲ್ಲಿ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಈ ಸಮಾಜ ಬದಲಾಗಬೇಕು, ನಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಸಮಾಜ ಬಳುವಳಿಯಾಗಿ ನೀಡಬೇಕು ಎಂಬ ಮನೋಭಾವ ನಿಮ್ಮದಾಗಿದ್ದರೆ ದಯವಿಟ್ಟು ದೇಶದ ಮತ್ತು ನಮ್ಮ ಸ್ವಂತ ಹಿತಾಸಕ್ತಿಯಿಂದ ಸ್ವಯಂ ಸ್ಪೂರ್ತಿ ಪಡೆದು ಇದನ್ನು ಪಾಲಿಸೋಣ. ಮುಂದಿನ ದಸರಾ ನಂತರ ಮತ್ತೆ ಇನ್ನೂ ಹೆಚ್ಚಿನ ಬದಲಾವಣೆಗೆ ಪ್ರಯತ್ನಿಸೋಣ.
ಇಲ್ಲಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಪಡೆದುಕೊಳ್ಳುವುದೇ ಹೆಚ್ಚು. ಒಂದು ಒಳ್ಳೆಯ ಅನುಭವ ನಮ್ಮದಾಗುತ್ತದೆ.
ಒಂದು ವೇಳೆ ನಿಮ್ಮಲ್ಲಿ ಯಾವುದೇ ಕೆಟ್ಟ ಗುಣ ಇಲ್ಲ ಎಂದು ಭಾವಿಸುವುದಾದರೆ ನಿಮಗೆ ಅಭಿನಂದನೆಗಳು ಮತ್ತು ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಆದರೆ, ಇಂದಿನ ಸಮಾಜ ನೋಡಿದರೆ ಬಹುತೇಕ ಕೆಟ್ಟ ನಡವಳಿಕೆಯ ಜನರೇ ಹೆಚ್ಚಾಗಿ ಕಾಣುತ್ತಾರೆ. ಆದ್ದರಿಂದ ನಮ್ಮ ನಮ್ಮ ವಿಲ್ ಪವರ್ ಉಪಯೋಗಿಸಿ ಈ ಮಾನಸಿಕ ನಿಯಂತ್ರಣ ಸಾಧಿಸೋಣ.
ಕರ್ನಾಟಕದ ಮಟ್ಟಿಗೆ ಇದೊಂದು ಚಳವಳಿಯ ರೂಪ ನೀಡಲು ಪ್ರಯತ್ನಿಸೋಣ. ಒಮ್ಮೆ ವ್ಯಕ್ತಿ ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸಲು ಪ್ರಾರಂಭಿಸಿದರೆ ನಮ್ಮ ಇಂದಿನ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಕಡಿಮೆಯಾಗಿ ಜನರ ನೆಮ್ಮದಿಯ ಮಟ್ಟ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆಗಳು ಸೇರಿ ಅನೇಕ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ.
ವ್ಯಕ್ತಿ ಒಳ್ಳೆಯವನಾಗದೇ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಯಾವುದೇ ಕಾನೂನು, ಯಾವುದೇ ಶಿಕ್ಷೆಯ ಭಯ ಜನರನ್ನು ಬದಲಾಯಿಸಲಾರದು. ರೈತರ, ಕಾರ್ಮಿಕರ, ಮಹಿಳೆಯರ, ಜಾತಿ ವ್ಯವಸ್ಥೆಯ, ಭ್ರಷ್ಟಾಚಾರದ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಬಲ್ಲ ಈ “ ಒಳ್ಳೆಯವರಾಗೋಣ ” ಬದಲಾಗುವ ಚಳವಳಿಗೆ ನಿಮ್ಮನ್ನು ಸ್ವಾಗತಿಸುತ್ತಾ, ನಿಮ್ಮ ಸಹಕಾರ ನಿರೀಕ್ಷಿಸುತ್ತಾ….,
ಕೊರೋನಾ ಎಂಬ ವೈರಸ್ ಮನುಷ್ಯನ ಬದುಕಿನ ಕ್ಷಣಿಕತೆಯನ್ನು ಮನವರಿಕೆ ಮಾಡಿಕೊಟ್ಟಿರುವ ಈ ಸಂದರ್ಭದಲ್ಲಿ ಇದಕ್ಕೆ ಅತ್ಯುತ್ತಮ ಅವಕಾಶ ಒದಗಿಬಂದಿದೆ. ಚಿಂತನೆಗೆ ಅವಕಾಶ ಸಿಕ್ಕಿದೆ. ನಮ್ಮ ವೇಗಕ್ಕೆ ಕಡಿವಾಣ ಬಿದ್ದಿದೆ. ಇದಕ್ಕೆ ಆ… ಓ…. ಎಂಬ ಪ್ರಚಾರದ ಅವಶ್ಯಕತೆ ಇಲ್ಲ. ನಿಂತ ನೆಲೆಯಲ್ಲೇ ಒಂದು ಪ್ರತಿಜ್ಞಾ ನಿರ್ಧಾರ ಕೈಗೊಂಡು ಸಾಮೂಹಿಕವಾಗಿ ಇದನ್ನು ಪಾಲಿಸೋಣ.
ಇಂದಿನಿಂದ, ” ಒಳ್ಳೆಯವರಾಗೋಣ “……… ಒಳ್ಳೆಯತನಕ್ಕಾಗಿ ಪ್ರಯತ್ನಿಸೋಣ…….