ಇದು ನಿರಾಶಾವಾದವಲ್ಲ ಅಥವಾ ವೈರಾಗ್ಯವೂ ಅಲ್ಲ… | ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ…………
ಆ ಕಟ್ಟಡದ ಅವಶೇಷಗಳ ಒಳಗೆ ಸಿಲುಕಿ ಸಾವಿನ ವಿರುದ್ಧ ಗೆದ್ದು ಬಂದಿರುವ ಮತ್ತು ತಮ್ಮ ಕಣ್ಣ ಮುಂದೆಯೇ ತಮ್ಮ ಆತ್ಮೀಯರು, ಸಹವರ್ತಿಗಳು, ಪರಿಚಿತರು ನರಳುತ್ತಾ ಉಸಿರು ಚೆಲ್ಲುವುದನ್ನು ನೋಡಿದ ಅನುಭವಗಳನ್ನು ಹಂಚಿಕೊಳ್ಳುವುದನ್ನು ನೋಡಿದಾಗ…….
ನಮ್ಮ ಬದುಕು ಕೂಡ ಎಂದೋ ಒಂದು ದಿನ ಕುಸಿಯಬಹುದಾದ ಬದುಕಿನ ಕಟ್ಟಡದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ.
ಅದು ಅನಿರೀಕ್ಷಿತವೋ, ಆಕಸ್ಮಿಕವೋ, ಅಪಘಾತವೋ,ಅನಾರೋಗ್ಯವೋ ಅಥವಾ ವಯಸ್ಸಿನ ಸಹಜ ಕಾರಣವೋ ಏನೋ ಒಂದು ಕಾರಣವಿರುತ್ತದೆ.
ಇಂತಹ ಸನ್ನಿವೇಶದಲ್ಲಿ ಬದುಕುತ್ತಿರುವ ನಾವು ನೆಮ್ಮದಿಯ ಜೀವನ ಸಾಗಿಸುವುದು ಹೇಗೆ ?
ಹುಟ್ಟಿನಿಂದ ಸಾಯುವವರೆಗಿನ ಜೀವನದ ಕಾಲದಲ್ಲಿ ಅವಕಾಶಗಳು, ಆಯ್ಕೆಗಳು, ಅನಿವಾರ್ಯಗಳು, ಕೊರತೆಗಳು,ಅದೃಷ್ಟ ದುರಾದೃಷ್ಟಗಳು, ಸಾಧನೆಗಳು, ವಿಫಲತೆಗಳು ಸೇರಿ ಅನೇಕ ಅಂಶಗಳು ಸೇರಿಕೊಂಡಿರುತ್ತವೆ. ಅದು ಎಲ್ಲರ ಬದುಕಿನ ಅವಿಭಾಜ್ಯ ಅಂಗಗಳು.
ಆದರೆ ವಾಸ್ತವದಲ್ಲಿ ನಾವು ಬದುಕುತ್ತಿರುವ ರೀತಿ ಹೇಗಿದೆ ?
ಅನೇಕ ಸರ್ಕಾರಿ ಅಧಿಕಾರಿಗಳು ಸರಳ ಬದುಕಿಗೆ ಸಾಕಾಗುವಷ್ಟು ಸಂಬಳ ಪಡೆದರೂ ಲಜ್ಜೆಗೆಟ್ಟು ಲಂಚದ ಹಣಕ್ಕೆ ಕೈ ಚಾಚುತ್ತಾರೆ.
ರಾಜಕಾರಣಿಗಳು ತಾವು ಈ ಭೂಮಿಯಲ್ಲಿ ಶಾಶ್ವತ ಎನ್ನುವಷ್ಟು ಅಧಿಕಾರಕ್ಕಾಗಿ ತಹತಹಿಸಿ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಾರೆ.
ಆಸ್ತಿಗಾಗಿ ಕುಟುಂಬದಲ್ಲಿ ಅಕ್ಕ ತಂಗಿ, ಅಣ್ಣ ತಮ್ಮ, ಗಂಡ ಹೆಂಡತಿ, ತಂದೆ ಮಕ್ಕಳು ಸೇರಿ ಬಹಳಷ್ಟು ಜನ ಹೊಡೆದಾಡಿ ಪ್ರಾಣ ಕಳೆದುಕೊಳ್ಳುತ್ತಾರೆ……
ಎಷ್ಟೋ ಮಧ್ಯಮ ವರ್ಗದ ಜನ ತಮ್ಮ ಇಡೀ ಬದುಕನ್ನು ಒಂದು ಸ್ವಂತ ಮನೆ, ಕಾರು, ಮಕ್ಕಳ ಮದುವೆಗಾಗಿಯೇ ಆಯಸ್ಸು ಕಳೆದುಬಿಡುತ್ತಾರೆ……
ನಮ್ಮ ದೇಶದ ಮಟ್ಟಿಗೆ ಒಟ್ಟು ಜನಸಂಖ್ಯೆ 138 ಕೋಟಿ ಇದ್ದರೆ, ನ್ಯಾಯಾಲಯದಲ್ಲಿ ಅಧಿಕೃತವಾಗಿ ದಾಖಲಾಗಿರುವ ಎಲ್ಲಾ ರೀತಿಯ ವ್ಯಾಜ್ಯಗಳನ್ನು ಲೆಕ್ಕ ಹಾಕಿದರೆ ಕೋಟಿಗಳ ಲೆಕ್ಕದಲ್ಲಿ ಬಾಕಿ ಇದೆ. ಇನ್ನು ಅನಧಿಕೃತ ಎಷ್ಟೋ……
ಕೇವಲ ಬಡವರು ಮತ್ತು ಮಧ್ಯಮ ವರ್ಗದವರು ಮಾತ್ರವಲ್ಲ ಶ್ರೀಮಂತ ವರ್ಗ ಕೂಡ ಬೇರೆ ರೂಪದ ಸಮಸ್ಯೆಗಳಲ್ಲಿ ಸಿಲುಕಿ ನರಳುತ್ತಿರುವುದನ್ನು ಕಾಣಬಹುದು. ಆ ಒತ್ತಡದಿಂದ ಆತ್ಮಹತ್ಯೆ ಅಪಘಾತ ಅನಾರೋಗ್ಯ ಬಹಳಷ್ಟು ಜನರ ಬದುಕಿನ ಗುಣಮಟ್ಟವನ್ನು ಕುಸಿಯುವಂತೆ ಮಾಡಿದೆ……
ಈ ಹಿನ್ನೆಲೆಯಲ್ಲಿ ಕಟ್ಟಡ ಕುಸಿತದ ದುರಂತ ನಮ್ಮಲ್ಲಿ ನಮ್ಮ ಬದುಕಿನ ರೀತಿಯ ಬಗ್ಗೆ ಪುನರ್ ವಿಮರ್ಶೆ ಮಾಡಿಕೊಳ್ಳಲು ಒಂದು ಅವಕಾಶ ಎಂದು ಭಾವಿಸಬಾರದೆ !!!!
ನಮ್ಮ ಬಾಲ್ಯ ಮತ್ತು ಯೌವ್ವನದಲ್ಲಿ ಮೂಡುವ ಆಸೆ ಆಕಾಂಕ್ಷೆಗಳು ಸಾಧನೆ ನೆಮ್ಮದಿ ಸಂತೋಷಗಳ ಸುತ್ತ ಸುತ್ತುವಂತೆ ಬದುಕಿನ ಶೈಲಿ ರೂಪಿಸಿಕೊಳ್ಳಬೇಕಿದೆ. ಸಮಾಜದ ಹಿಂದಿನ ಅನುಭವಗಳ ಆಧಾರದಲ್ಲಿ ಪ್ರಾಮಾಣಿಕತೆ, ಸರಳ ಜೀವನ, ಕಠಿಣ ದೈಹಿಕ ಶ್ರಮ, ಪ್ರಕೃತಿಯೊಂದಿಗೆ ಹೆಚ್ಚಿನ ಒಡನಾಟ, ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುವುದು ಮುಂತಾದ ಕ್ರಮಗಳ ಮೂಲಕ ಬದುಕನ್ನು ಹೆಚ್ಚು ನೆಮ್ಮದಿ ಸಂತೋಷದಿಂದ ನಡೆಸಬಹುದು. ಇಲ್ಲದಿದ್ದರೆ ವೇಗದ ಬದುಕಿನಲ್ಲಿ ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳದಿದ್ದರೆ ಎಂದಿನಂತೆ ಅತೃಪ್ತಿ ಅಸಹನೆ ದುಃಖ ಭಾವೋದ್ವೇಗಗಳಲ್ಲೇ ಜೀವನ ಬಹುಬೇಗ ಮುಪ್ಪಿನತ್ತ ಸಾಗುತ್ತದೆ……
ಇರುವಷ್ಟು ಕಾಲ ಗುಣಮಟ್ಟದ ಜೀವನ ರೂಪಿಸಿಕೊಳ್ಳಲು ನಿರ್ಧರಿಸಬೇಕಿದೆ……
ಮೊದಲೇ ಹೇಳಿದಂತೆ ಇದು ವೈರಾಗ್ಯವಲ್ಲ. ಬದುಕಿನಲ್ಲಿ ಮತ್ತಷ್ಟು ಉತ್ಸಾಹ ಮತ್ತು ಚೈತನ್ಯ ತುಂಬುವ ಅಭಿಪ್ರಾಯ ಎಂದು ಸಕಾರಾತ್ಮವಾಗಿ ಇದನ್ನು ಪರಿಗಣಿಸಿ……
ಏಕೆಂದರೆ……... ಬದುಕೊಂದು ಯುದ್ದ ಭೂಮಿ…………… ಗೆಲ್ಲಬಹುದು – ಸೋಲಬಹುದು – ಅನಿರೀಕ್ಷಿತವಾಗಿ ಸಾಯಬಹುದು……….. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ……...
ಯುದ್ದದಲ್ಲಿ ಬಾಂಬು ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು.
ಯುದ್ದದಂತೆ ಬದುಕಿನಲ್ಲೂ ಈ ಸಾಧ್ಯತೆ ಇರುತ್ತದೆ. ಏನು ಬೇಕಾದರೂ ಆಗಬಹುದು. ನಮ್ಮೊಂದಿಗೆ ಹಲವಾರು ಜನರಿರುತ್ತಾರೆ, ಸಂಬಂಧಗಳು ಇರುತ್ತವೆ. ಕೆಲವೊಮ್ಮೆ ಮುಂದೆ ಮತ್ತೆ ಕೆಲವರು ಜೊತೆಯೂ ಆಗಬಹುದು ಅಥವಾ ಸಂದರ್ಭದ ಒತ್ತಡದಿಂದ ಎಲ್ಲರೂ ಬೇರೆಯಾಗಿ ನಾವು ಒಂಟಿಯೂ ಆಗಬಹುದು……..
ಯುದ್ದದಲ್ಲಿರುವ ಯಶಸ್ಸುಗಳು, ಸಂಭ್ರಮಗಳು, ತ್ಯಾಗಗಳು, ತೃಪ್ತಿಗಳು ಬದುಕಿನಲ್ಲೂ ಸಂಭವಿಸುತ್ತದೆ. ಹಾಗೆಯೇ ಸೋಲು, ಹತಾಶೆ, ಒಂಟಿತನ, ಅನಿರೀಕ್ಷಿತ, ಕುತಂತ್ರಗಳೂ ಸಹ ಯುದ್ಧ ಮತ್ತು ಬದುಕಿನ ಭಾಗಗಳೇ ಆಗಿದೆ…….
ಯುದ್ಧದ ಗೆಲುವು ನಮ್ಮನ್ನು ವಿಜೃಂಬಿಸಿದರೆ ಸೋಲು ನರಕಯಾತನೆಯೂ ಆಗಿ ಬದುಕು ಅಲ್ಲಿಗೆ ಮುಕ್ತಾಯವೂ ಆಗಬಹುದು. ಹಾಗೆ ಜೀವನದ ಯಶಸ್ಸು ನಮ್ಮನ್ನು ಅತ್ಯುತ್ತಮ ಸ್ಥಾನಕ್ಕೆ ಕೊಂಡೊಯ್ದುರೆ ಸೋಲು ಸಾವಾಗಿಯೂ ಪರಿವರ್ತನೆಯಾಗಬಹುದು……………
ಯುದ್ಧದ ತೀವ್ರ ಭಾವನೆಗಳು ಆತಂಕಗಳು ಆಯಾಯ ಸಂದರ್ಭದ ನಮ್ಮ ನಿರ್ಧಾರಗಳು ನಮ್ಮ ಮುಂದಿನ ಗತಿಯನ್ನು ನಿರ್ಧರಿಸುವಂತೆ ಜೀವನದಲ್ಲಿಯೂ ಕಠಿಣ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ………..
ರಣಭೂಮಿಯ ಪ್ರತಿ ಹೆಜ್ಜೆಯನ್ನು ಅತ್ಯಂತ ಜಾಗರೂಕತೆಯಿಂದ, ವಿವೇಚನೆಯಿಂದ, ಸೂಕ್ಷ್ಮ ಮುಂದಾಲೋಚನೆಯಿಂದ, ನಿರೀಕ್ಷಿತ ಪರಿಣಾಮ ಊಹಿಸಿಯೇ ಇಡಬೇಕು, ಕೆಲವರ ಮಾರ್ಗದರ್ಶನ ಪಡೆಯಬೇಕು. ಮತ್ತು ಅದರ ಫಲಿತಾಂಶವನ್ನು ಎದುರಿಸಬೇಕು. ಹಾಗೆಯೇ ಬದುಕಿನಲ್ಲಿಯೂ ಬಾಲ್ಯದಿಂದ ಮುಪ್ಪಿನವರಗೆ ಆಯಾ ಕಾಲಘಟ್ಟದಲ್ಲಿ ನಾವು ಯೋಚಿಸಿ ನಿರ್ಧರಿಸಬೇಕು ಮತ್ತು ಫಲಿತಾಂಶಗಳನ್ನು ನಮ್ಮೆಲ್ಲ ಶ್ರಮದ ನಂತರವೂ ಬಂದಂತೆ ಸ್ವೀಕರಿಸಬೇಕು. ಕೊರಗುತ್ತಾ ಕುಳಿತರೆ ಸಾವು ಖಚಿತ………..
ಯುದ್ದದಲ್ಲಿ ಕೆಲವೊಮ್ಮೆ ಸೋಲಿನ ಅಂಚಿಗೆ ಬರಬಹುದು. ನಮ್ಮ ಯೋಜನೆಗಳು ತಲೆಕೆಳಗಾಗಬಹುದು, ನಮ್ಮವರಿಂದ ನಿರೀಕ್ಷಿತ ಬೆಂಬಲ ಸಿಗದಿರಬಹುದು. ಆಗಲೂ ನಿರಾಶರಾಗದೆ ಕೊನೆಯವರೆಗೂ ಹೋರಾಡಬೇಕು. ಬದುಕಿನಲ್ಲೂ ಕೂಡ ಇದು ಅಷ್ಟೇ ಸಹಜ……..
ನಮ್ಮ ಕಣ್ಣ ಮುಂದೆಯೇ ಅನೇಕ ಸಾವುನೋವುಗಳು ಸಂಭವಿಸಿದರೂ ನಾವು ಆ ಕ್ಷಣದ ನಮ್ಮ ಕರ್ತವ್ಯ ಮುಗಿಸಿ ಮುನ್ನಡೆಯವುದು ಯುದ್ಧದ ಅನಿವಾರ್ಯತೆ. ಹಾಗೆಯೇ ಬದುಕಿನಲ್ಲಿಯೂ ಸಹ. ಇದರಲ್ಲಿ ಅಂತಹ ವ್ಯತ್ಯಾಸವಿಲ್ಲ…………….
ಅದೃಷ್ಟ ಮತ್ತು ದುರಾದೃಷ್ಟವೆಂಬ ಖಚಿತವಲ್ಲದ, ವಿವರಿಸಲಾಗದ, ಪರಿಣಾಮದವರೆಗೂ ತಿಳಿಯದ ಒಂದು ಆಟ ಮಾತ್ರ ಯುದ್ಧ ಮತ್ತು ಬದುಕಿನಲ್ಲಿ ಇದ್ದೇ ಇರುತ್ತದೆ……..
ನಿಮ್ಮೆಲ್ಲಾ ಶ್ರಮ, ಒಳ್ಳೆಯತನ, ಚಾಕಚಕ್ಯತೆ ಎಲ್ಲವೂ ಇದ್ದು ವಿವರಿಸಲಾಗದ ಕಾರಣಕ್ಕೆ ನಿಮಗೆ ಯುದ್ದದಲ್ಲಿ ಸೋಲಾಗಬಹುದು. ಹಾಗೆಯೇ ಜೀವನದಲ್ಲಿಯೂ ಅನಿರೀಕ್ಷಿತವಾಗಿ ಯಶಸ್ಸು ಸಿಗಬಹುದು ಅಥವಾ ಸೋಲೂ ಆಗಬಹುದು……………
ದುಷ್ಟರು ಜನಪ್ರಿಯರಾಗಬಹುದು, ಉಡಾಫೆಯವರು ಅಧಿಕಾರಕ್ಕೇರಬಹುದು ಮತ್ತು ಪ್ರಾಮಾಣಿಕರು ದಕ್ಷರು ಹೇಳ ಹೆಸರಿಲ್ಲದಂತಾಗಬಹುದು………….
ಈ ಎಲ್ಲಾ ಸಾಧ್ಯತೆಗಳ ವಿಸ್ಮಯ ಪ್ರಪಂಚ ಯುದ್ಧ ಮತ್ತು ಬದುಕು………
ಹಾಗಾದರೆ ಇದರ ಪಾಠವೇನು ?
ಏನೂ ಇಲ್ಲ….. ಸೃಷ್ಟಿಯ ಸಹಜತೆಯನ್ನು ಒಪ್ಪಿಕೊಂಡು ನಮ್ಮ ಮೆದುಳಿನ ಗ್ರಹಿಕೆಯ ಪ್ರತಿಕ್ರಿಯೆಗಳನ್ನು ಅನುಸರಿಸುತ್ತಾ ಜೀವವಿರುವವರೆಗೂ ನಮ್ಮ ನಿಯಂತ್ರಣವಿಲ್ಲದ ವಿಷಯಗಳಲ್ಲಿ ಅದನ್ನು ಬಂದಂತೆ ಸ್ವೀಕರಿಸಿ, ನಿಯಂತ್ರಣ ಇರುವ ಕಡೆ ಮತ್ತದೇ ಮೆದುಳ ಅರಿವಿನಿಂದ ಅದನ್ನು ನಮಗೆ ಸಾಧ್ಯವಿರುವಂತೆ ಅನುಕೂಲಕರವಾಗಿ ಪರಿವರ್ತಿಸಿ ಬದುಕುವುದು.
ಮಾಡುವುದನ್ನು ಯೋಚಿಸಿ ಮಾಡಿ. ಪರಿಣಾಮ ಸ್ವೀಕರಿಸಿ. ಪಶ್ಚಾತ್ತಾಪಕ್ಕೆ ಹೆಚ್ಚಿನ ಅವಕಾಶ ಕೊಡಬೇಡಿ…….
# ವಿವೇಕಾನಂದ. ಎಚ್.ಕೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…