ಜಾತಿ ಧರ್ಮದ ಅಮಲಿನಲ್ಲಿ ಗೌಣವಾಗುತ್ತಿರುವ ಅನ್ನದಾತ……….. , ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗುತ್ತಿರುವ ಆಕ್ರಮಣಕಾರಿ ನೀತಿಗಳು………, ಇಡೀ ವ್ಯವಸ್ಥೆಯನ್ನು ವಿರುದ್ಧ ದಿಕ್ಕಿನಲ್ಲಿ ಮುನ್ನಡೆಸುವ ದ್ವೇಷಮಯ ನೀತಿಗಳು ಎಲ್ಲಾ ಕಾಲಕ್ಕೂ ಸಮಾಜಕ್ಕೆ ಮಾರಕವೇ…… , ಬಹುಮತವೇ ಆಡಳಿತ ನಡೆಸುವ ಮಾನದಂಡವಾಗಬಾರದು. ಬಹುಮತ ಅಧಿಕಾರಕ್ಕೇರಲು ಒಂದು ಸಾಧನ ಮಾತ್ರ……
ಇತಿಹಾಸ, ಸಂಸ್ಕೃತಿ, ಸಂಪ್ರದಾಯ, ಬದಲಾಗುತ್ತಿರುವ ಸನ್ನಿವೇಶ, ವಾಸ್ತವ ಪ್ರಜ್ಞೆ ಮತ್ತು ದೇಶ – ಜನರ ಹಿತಾಸಕ್ತಿ ಆಡಳಿತಗಾರ ಬಹುಮುಖ್ಯ ಗುರಿಯಾಗಿರಬೇಕು.
ಹಠ, ಸರ್ವಾಧಿಕಾರಿ, ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮುಖ್ಯವಾಗದೆ ತಾಳ್ಮೆ ಕ್ಷಮಾಗುಣ ಎಲ್ಲರನ್ನೂ ಪ್ರೀತಿಸುವ ಮನೋಭಾವ ತಮ್ಮ ನೀತಿಯಾಗಬೇಕು.
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಹರಿದ ವಾಹನ ಮತ್ತು ತದನಂತರ ಅವರ ಮೇಲೆ ಮಾಡಿದ ಹಲ್ಲೆ ನಿಧಾನವಾಗಿ ಭುಗಿಲೇಳುತ್ತಿರುವ ಅಸಹನೆಯ ಸಂಕೇತವಾಗಿ ಗೋಚರಿಸುತ್ತಿದೆ.
ವಿರೋಧ ಪಕ್ಷಗಳಿಗಿಂತ ಹತ್ತು ಪಟ್ಟು ಹೆಚ್ಚು ಜವಾಬ್ದಾರಿ ಆಡಳಿತ ಮಾಡುವವರಿಗೆ ಇರಬೇಕು.
ದೇಶವೆಂಬುದು ಕುಟುಂಬದ ವಿಸೃತ ರೂಪ. ಅನೇಕ ಕುಟುಂಬಗಳೇ ಸಮಾಜ. ಸಮಾಜದ ಪ್ರತಿನಿಧಿಗಳೇ ಸರ್ಕಾರ. ಅದು ಎಲ್ಲರಿಗೂ ಸೇರಿದ್ದು. ಯಾವುದೋ ಒಂದು ಪಕ್ಷದ ಆಸ್ತಿಯಲ್ಲ.
ಕಾಂಗ್ರೆಸ್ ಬಿಜೆಪಿನ್ನು ದ್ವೇಷಿಸುವುದು, ಬಿಜೆಪಿ ಕಮ್ಯುನಿಸ್ಟರನ್ನು ದ್ವೇಷಿಸುವುದು ಹೀಗೆ ಒಬ್ಬರಿಗೊಬ್ಬರು ದ್ವೇಷಿಸಿದರೆ ಆಯಾ ಪಕ್ಷಗಳಿಗೆ ಲಾಭ ಆದರೆ ಅದೇ ಸಮಯದಲ್ಲಿ ಇಡೀ ದೇಶ ಈ ದ್ವೇಷದಿಂದ ಹಾಳುಗುತ್ತಿದೆ ಎನ್ನುವ ಯೋಚನೆ ಮತ್ತು ಜವಾಬ್ದಾರಿ ಈ ಪಕ್ಷಗಳಿಗೆ ಇರುವುದಿಲ್ಲ. ಅದರ ಪರಿಣಾಮವೇ ಈ ಹಿಂಸಾಚಾರಗಳು.
ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳಲೇ ಒದ್ದಾಡುತ್ತಿರುವಾಗ ಆಡಳಿತಗಾರರು ಅತ್ಯಂತ ವಿವೇಚನೆ ತಾಳ್ಮೆ ಪ್ರೀತಿಯಿಂದ ಆಡಳಿತ ಮಾಡಬೇಕಾದ ಸಂದರ್ಭದಲ್ಲಿ ಈ ರೀತಿಯ ಪ್ರಚೋದನಕಾರಿ ಕ್ರಿಯೆಗಳು ಇಡೀ ದೇಶದ ಜನರ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುವ ಸಾಧ್ಯತೆ ಇದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ,
ಚುನಾವಣಾ ರಾಜಕೀಯದಲ್ಲಿ,
ಪಕ್ಷಗಳ ಅಧಿಕಾರದ ದುರಾಸೆಯಲ್ಲಿ,
ಜಾತಿಗಳ ನೆರಳಿನಲ್ಲಿ,
ಧರ್ಮಗಳ ಅಮಲಿನಲ್ಲಿ,
ಅನ್ನದಾತರು ಗೌಣವಾಗುತ್ತಿರುವ ಸಂದರ್ಭದಲ್ಲಿ………
ಮೌನ ಮುರಿಯಬೇಕಾದದ್ದು ಎಲ್ಲರ ಕರ್ತವ್ಯ.
ಪೀಜಾ ಬರ್ಗರ್ ಗಳು ದುಬಾರಿಯಾಗುತ್ತಿವೆ,
ಲಿಪ್ ಸ್ಟಿಕ್ ಶೂಗಳು ಕೊಸರು ಮುಕ್ತವಾಗುತ್ತಿವೆ,
ಸೈಟು ಚಿನ್ನಗಳು ಭ್ರಷ್ಟತೆಯ ಕೂಪಗಳಾಗುತ್ತಿವೆ,
ಶಾಲೆ ಆಸ್ಪತ್ರೆಗಳು ದಂಧೆಗಳಾಗುತ್ತಿವೆ,
ತಿನ್ನುವ ಅನ್ನ ಬೆಳೆವ ರೈತರು ಮಾತ್ರ ಬೀದಿಯ ಹೆಣವಾಗುತ್ತಿದ್ದಾರೆ…….
ಇದೀಗ ಅನ್ನ ತಿನ್ನುವ, ದೇಶ ಪ್ರೀತಿಸುವ, ಜನರನ್ನು ಇಷ್ಟಪಡುವ ಎಲ್ಲರ ಕರ್ತವ್ಯ ಎಂದರೆ,
ಆಡಳಿತಗಾರರನ್ನು ಎಚ್ಚರಿಸುವ, ಹಠಕ್ಕಿಂತ ತಾಳ್ಮೆಗೆ ಮಹತ್ವ ಕೊಡುವ, ದ್ವೇಷಕ್ಕಿಂತ ಪ್ರೀತಿಗೆ ಪ್ರಾಮುಖ್ಯತೆ ನೀಡುವ, ಘರ್ಷಣೆಗಿಂತ ಸಹನೀಯ ವಾತಾವರಣ ನಿರ್ಮಿಸುವ ಒತ್ತಡವನ್ನು ಹಾಕಬೇಕಿದೆ.
ದೇಶ ವಿಭಜಕ ಶಕ್ತಿಗಳು ಇಡೀ ಘಟನಾವಳಿಗಳನ್ನು ದೇಶದ ಒಳಗೆ ಮತ್ತು ಹೊರಗೆ ತದೇಕಚಿತ್ತದಿಂದ ಗಮನಿಸುತ್ತಾ ಅದರ ಲಾಭ ಪಡೆಯಲು ಹೊಂಚು ಹಾಕುತ್ತಾ ಕಾಯುತ್ತಿರುತ್ತವೆ ಎಂಬ ಪ್ರಜ್ಞೆಯನ್ನು ಭಾರತೀಯ ಪ್ರಜೆಗಳಾದ, ಎಲ್ಲಾ ಪಕ್ಷ ಸಿದ್ದಾಂತಗಳ ಮತದಾರರಾದ ನಾವುಗಳು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಇದೇ ರೀತಿ ಕಚ್ಚಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ……
ಅಲೆಗ್ಸಾಂಡರ್, ಘಜ್ನಿ ಘೋರಿ ಮಹಮದ್, ಬ್ರಿಟಿಷ್ ಫ್ರೆಂಚ್ ಡಚ್ಚರ ರೀತಿಯಲ್ಲಿ ಮತ್ಯಾರೋ ಈ ದೇಶಕ್ಕೆ ನುಗ್ಗಬಹುದು. ಆಗ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟರಲ್ಲ ಸಾಮಾನ್ಯ ಜನ ಎಂದು ಎಚ್ವರಿಸುತ್ತಾ…..
ಸಂವಿಧಾನದ ಮೂಲ ಪೀಠಿಕೆಯನ್ನು ಉಲ್ಲೇಖಿಸುತ್ತಾ……
” ಭಾರತೀಯ ಪ್ರಜೆಗಳಾದ ನಾವು…………..”
# ವಿವೇಕಾನಂದ ಎಚ್ ಕೆ
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…