ಎರಡು ದಿನದಿಂದ ಎರಡು ಸಾವಿನ ಘಟನೆಗಳು… |

November 6, 2022
2:43 PM

ಎರಡು ದಿನದಿಂದ ಎರಡು ಸಾವಿನ ಘಟನೆಗಳು ಹೆಚ್ಚು ಸುದ್ದಿಯಲ್ಲಿವೆ…… ಒಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೊನ್ನಾಳಿಯ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ್ ಅವರ ದುರಂತ ಸಾವು….. ಮತ್ತು,
ಆಧಾರ್ ಎಂಬ ಗುರುತಿನ ಕಾರ್ಡ್ ಇಲ್ಲದ ಕಾರಣದಿಂದ ತುಂಬು ಗರ್ಭಿಣಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿ ತಾಯಿ ಮತ್ತು ಅವಳಿ ಮಕ್ಕಳ ಸಾವು…… ಎಲ್ಲಾ ಸಾವುಗಳು ದುರಂತವೇ. ಆದರೆ…….

Advertisement
Advertisement

ಮೊದಲನೆಯದು ಚಂದ್ರಶೇಖರ್ ಅವರ ಸಾವು. ಅದು ಅಪಘಾತವೇ ಆಗಿರಲಿ ಅಥವಾ ದ್ವೇಷ ಅಸೂಯೆಯ ಕೊಲೆಯೇ ಆಗಿರಲಿ ಅದು ವೈಯಕ್ತಿಕ ನೆಲೆಯಲ್ಲಿ ಆಗಿರುವಂತಹುದು. ಅದನ್ನು ಪೋಲೀಸ್ ವ್ಯವಸ್ಥೆ ತನಿಖೆ ಮಾಡುತ್ತದೆ. ಆದರೆ ಆ ಅವಳಿ ಮಕ್ಕಳ ಜೊತೆ ತಾಯಿಯ ಸಾವು ವ್ಯವಸ್ಥೆಯ ಕ್ರೌರ್ಯಕ್ಕೆ ಜೀವಂತ ಸಾಕ್ಷಿ. ಆ ಹೆಣ್ಣು ಮಗಳು ಪಾಕಿಸ್ತಾನ ಅಥವಾ ಚೀನಾದ ಪ್ರಜೆಯಲ್ಲ. ನಮ್ಮದೇ ಊರಿನ ಪಕ್ಕದ ಮನೆಯ ಹೆಣ್ಣು ಮಗಳು ಎಂಬುದು ಅವರನ್ನು ನೋಡಿದಾಗ ಯಾವುದೇ ಆರೋಗ್ಯವಂತ ವ್ಯಕ್ತಿಗೆ ಅರಿವಾಗುತ್ತದೆ. ಕೇವಲ ತಾಂತ್ರಿಕವಾಗಿ ಆ ಕ್ಷಣದಲ್ಲಿ ಅವರ ಬಳಿ ಆಧಾರ್ ಕಾರ್ಡ್ ಇಲ್ಲ ಎಂದು ಆಸ್ಪತ್ರೆಯ ಯಾರೇ ಆಗಿರಲಿ ಅಂತಹ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನಿರಾಕರಿಸುವುದು ರಾಕ್ಷಸೀ ಪ್ರವೃತ್ತಿ ಎಂದೇ ಕರೆಯಬೇಕು. ಗುರುತಿನ ಚೀಟಿ ಎಂಬುದು ಮೋಸ ವಂಚನೆ ತಡೆಯಲು ಒಂದು ಮಾರ್ಗವೇ ಹೊರತು ಅದೇ ಅವಶ್ಯಕ ಸೇವೆ ನಿರಾಕರಿಸಲು ಕಾರಣ ಅಲ್ಲ ಎಂಬ ಸಾಮಾನ್ಯ ತಿಳಿವಳಿಕೆ ಮನುಷ್ಯರಿಗೆ ಇಲ್ಲ ಎಂದರೆ ಹೇಗೆ ? ಒಂದು ವೇಳೆ ಆಧಾರ್ ಮಾಡಿಸದೇ ಇರಬಹುದು ಅಥವಾ ಅದು ಕಳೆದು ಹೋಗಿರಬಹುದು‌, ಅಷ್ಟು ಮಾತ್ರಕ್ಕೆ ನಮ್ಮ ನೆರೆ ಮನೆಯವರನ್ನು ಈ ದೇಶದ ಪ್ರಜೆಗಳಲ್ಲ ಎಂದು ಪರಿಗಣಿಸಲಾಗುತ್ತದೆಯೇ ?

ಈ ಘಟನೆಯ ನಂತರ ತುರ್ತು ಚಿಕಿತ್ಸೆಯ ಸಮಯದಲ್ಲಿ ಗುರುತಿನ ಚೀಟಿಯ ಅವಶ್ಯಕತೆ ಇಲ್ಲ ಎಂದು ಸರ್ಕಾರ ಆದೇಶ ಹೊರಡಿಸಲಾಗಿದೆ. ಇಂತಹ ಒಂದು ಸಾಮಾನ್ಯ ಜ್ಞಾನದ ಮತ್ತು ಮಾನವೀಯ ಪ್ರಜ್ಞೆಯ ವಿಷಯಕ್ಕೆ ಆದೇಶದ ಅನಿವಾರ್ಯತೆ ಇದೆಯೇ ? ಹಾಗಿದ್ದರೆ ಮನುಷ್ಯನ ಉಪಯೋಗಕ್ಕೆ ರೂಪಿಸಿದ ನಿಯಮಗಳು ಮನುಷ್ಯನನ್ನೇ ನಿಯಂತ್ರಿಸುತ್ತಿವೆಯೇ ?. ಯಾವುದೇ ಗುರುತಿನ ಚೀಟಿ ಇಲ್ಲದ ನಮ್ಮವರನ್ನು ನಾವೇ ನಂಬದ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಅಷ್ಟೊಂದು ಅನುಮಾನದ ಸಮಾಜದಲ್ಲಿ ಬದುಕು ಅಸಹನೀಯವಾಗುತ್ತದೆ.

ಎರಡನೆಯದಾಗಿ, ದೃಶ್ಯ ಮಾಧ್ಯಮಗಳು ಅತ್ಯಂತ ವಿವೇಚನಾ ರಹಿತವಾಗಿ ವರ್ತಿಸಿದವು. ಒಂದು ವೈಯಕ್ತಿಕ ಸಾವನ್ನು ವೈಭವೀಕರಿಸಿ ಬಡ ಹೆಣ್ಣು ಮಗಳ ಸಾವನ್ನು ನಿರ್ಲಕ್ಷಿಸಿ ಪತ್ರಿಕಾ ಧರ್ಮವನ್ನೇ ಅವಹೇಳನ ಮಾಡಿದರು. ರೇಣುಕಾಚಾರ್ಯ ಅವರು ಮಾಜಿ ಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು. ಅಷ್ಟು ಪ್ರಭಾವಿಗಳ ರಕ್ತ ಸಂಭಂದಿಯ ಸಾವಿನ ತನಿಖೆಯನ್ನು ಖಂಡಿತವಾಗಿ ಪೋಲೀಸರು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಅದಕ್ಕೆ ವಿಶೇಷ ಆದ್ಯತೆ ಬೇಕಿಲ್ಲ. ಆದರೆ ಈ ಬಡ ಹೆಣ್ಣು ಮಗಳ ಸಾವು ಮಾಧ್ಯಮಗಳು ಸೇರಿ ಇಡೀ ಸಮಾಜವನ್ನು ಹೆಚ್ಚು ಕಾಡಬೇಕಿತ್ತು. ಸರ್ಕಾರ – ಅಧಿಕಾರಿಗಳು – ವೈಧ್ಯಕೀಯ ಸಿಬ್ಬಂದಿ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿತ್ತು.

ಆದ್ದರಿಂದಲೇ ಮಾಧ್ಯಮಗಳನ್ನು ಕೋಮಾ ಸ್ಥಿತಿ ತಲುಪಿವೆ ಎಂದು ಹೇಳಿರುವುದು. ಮಾಧ್ಯಮಗಳು ಜನಪ್ರಿಯತೆ ಅಥವಾ ಭಾವನಾತ್ಮಕ ವಿಷಯಗಳ ಹಿಂದೆ ಹೋಗುವುದು ಕಡಿಮೆ ಮಾಡಿ ತುಂಬಾ ಜವಾಬ್ದಾರಿಯಿಂದ ಸತ್ಯ ವಾಸ್ತವ ಮತ್ತು ಧ್ವನಿ ಇಲ್ಲದವರ ಧ್ವನಿಯಾಗಬೇಕೆ ಹೊರತು ಸಂಪೂರ್ಣ ವ್ಯಾಪರೀಕರಣ ತುಂಬಾ ಅಪಾಯಕಾರಿ.

Advertisement

ಇಲ್ಲಿ ಯಾರನ್ನು ಶಿಕ್ಷಿಸಬೇಕು ಎಂಬುದು ಮುಖ್ಯವಲ್ಲ ಯಾರಿಗೆ ಹೇಗೆ ಶಿಕ್ಷಣ ಕೊಡಬೇಕು ಎಂಬುದೇ ಮುಖ್ಯವಾಗಬೇಕು. ಪ್ರಾಣ ಮತ್ತು ಗುರುತಿನ ಚೀಟಿ, ಕಾನೂನು ಮತ್ತು ಮಾನವೀಯತೆ ಹಾಗು ಸಾಮಾನ್ಯ ಜ್ಞಾನ ಮತ್ತು ನಿಯಮ ಪಾಲನೆಯಲ್ಲಿ ಯಾವುದು ಮುಖ್ಯವಾಗಬೇಕು ಎಂಬುದೇ ಶಿಕ್ಷಣದ ಉದ್ದೇಶವಾಗಿರಬೇಕು.

ಸುದ್ದಿ ಮಾಧ್ಯಮಗಳು ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದು ಅವರ ಸ್ವಾತಂತ್ರ್ಯ. ಆದರೆ ಅವರ ನೈತಿಕತೆ ಮತ್ತು ಸಚ್ಚಾರಿತ್ರ್ಯ ಪ್ರಶ್ನಿಸುವುದು ಮತ್ತು ವಿಮರ್ಶಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ…….

ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡದ, ಶೋಷಿತರ ಧ್ವನಿಯಾಗದ ಅಭಿವ್ಯಕ್ತಿ ಸ್ವಾತಂತ್ರ್ಯ ನಿಷ್ಪ್ರಯೋಜಕ ಮತ್ತು ಅಪಾಯಕಾರಿ. ಆ ಬಗ್ಗೆ ಜಾಗೃತಿ ಮತ್ತು ಆತ್ಮಾವಲೋಕನಕ್ಕಾಗಿಯೇ ಇಂದಿನ ” ಸತ್ಯಾಗ್ರಹ ”

ಬರಹ:
ವಿವೇಕಾನಂದ ಎಚ್‌ ಕೆ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ
1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?
May 20, 2025
7:32 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!
May 18, 2025
7:07 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group