Advertisement
ಅಂಕಣ

#ಮನಸ್ಸಿನಕನ್ನಡಿ |ಇತಿಹಾಸಕ್ಕೆ ಬಣ್ಣಗಳಿಲ್ಲ – ಅದು ಸನ್ನಿವೇಶಗಳ ಸಹಜ ಸೃಷ್ಟಿ | ಸಾವರ್ಕರ್‌ – ಟಿಪ್ಪು ಸುಲ್ತಾನ್‌ ಚರ್ಚೆಯ ಬಗ್ಗೆ ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ… |

Share
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿಯನ್ನು ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ವಿವೇಕಾನಂದ ಎಚ್‌ ಕೆ ಅವರು ಸಾವರ್ಕರ್‌ ಹಾಗೂ ಟಿಪ್ಪು ಸುಲ್ತಾನ್‌ ಅವರ ಕಾಲದ ಇತಿಹಾಸಗಳ ಬಗ್ಗೆ ಬರೆದಿದ್ದಾರೆ. ಅದರ ಯಥಾವತ್ತಾದ ಬರಹ ಇಲ್ಲಿದೆ.

ಸಾವರ್ಕರ್ – ಟಿಪ್ಪು ಸುಲ್ತಾನ್……  ಇತಿಹಾಸವೂ ಒಂದು ಕಾಮನಬಿಲ್ಲು….. ಇತಿಹಾಸದ ಪುಟಗಳಿಗೆ ಹೊಸ ಹೊಸ ಬಣ್ಣಗಳನ್ನು ಬಳಿಯಲಾಗುತ್ತಿದೆ……ಒಂದೊಂದು ಪುಟಗಳಿಗೂ ಒಂದೊಂದು ಬಣ್ಣ…ಆ ಪುಟದಲ್ಲಿ ಬರೆದಿರುವ ಘಟನೆಗಳಿಗೂ – ವ್ಯಕ್ತಿಗಳ ವ್ಯಕ್ತಿತ್ವಕ್ಕೂ ಒಂದೊಂದು ಬಣ್ಣ….ಅದು ಅವರವರ ಮೂಗಿನ ನೇರಕ್ಕೆ – ಅವರವರ ಭಾವನೆಗಳ ಸಮಕ್ಕೆ ಅವರವರಿಗೆ ಇಷ್ಟವಾದ ಬಣ್ಣ….ಹೊಸದಾಗಿ ಬರೆಯುವವರು ಮತ್ತು ಓದುವವರು ಸಹ ಒಂದೊಂದು ಬಣ್ಣ ಬಳಿಯುತ್ತಲೇ ಇದ್ದಾರೆ…..ಇದರ ನಡುವೆ ಸತ್ಯ ಮತ್ತು ವಾಸ್ತವದ ಬಣ್ಣವನ್ನು ಹುಡುಕುವುದು ಹೇಗೆ……..

Advertisement
Advertisement

ಇತಿಹಾಸಕ್ಕೆ ಬಣ್ಣಗಳೇ ಇಲ್ಲ ನೀರಿನ ಹಾಗೆ….. ಇತಿಹಾಸಕ್ಕೆ ರುಚಿಯೂ ಇಲ್ಲ ನೀರಿನ ಹಾಗೆ…. ಇತಿಹಾಸವೂ ಕೂಡ ತನ್ನ ಸ್ಥಿತಿಸ್ಥಾಪಕತ್ವವನ್ನು ಆಗಿನ ಸಮಯ ಸಂದರ್ಭಕ್ಕೆ ಅನುಗುಣವಾಗಿ ತಾನೇ ನಿರ್ಧರಿಸುತ್ತದೆ ನೀರಿನ ಹಾಗೆ…. ಆದರೆ ಅದನ್ನು ನಾವು ಗ್ರಹಿಸಬೇಕಾಗಿರುವುದು ಮಾತ್ರ ಸೃಷ್ಟಿಯ ಮೂಲದಿಂದ. ಆಗ ಇತಿಹಾಸ ನಮಗೆ ಸ್ವಲ್ಪ ಅರ್ಥವಾಗಬಹುದು….ಈ ಹಿನ್ನೆಲೆಯಲ್ಲಿ…..

Advertisement

ಸಾರ್ವಕರ್ – ಟಿಪ್ಪು ಸುಲ್ತಾನ್……

ಸಾವರ್ಕರ್ ಅವರಿಗೆ ಕೇಸರಿ ಬಣ್ಣವನ್ನು,
ಟಿಪ್ಪು ಸುಲ್ತಾನ್ ಅವರಿಗೆ ಹಸಿರು ಬಣ್ಣವನ್ನು ಬಳಿಯಲಾಗಿದೆ……

Advertisement

ಗಾಂಧಿ ಕೊಲೆ ಆರೋಪದಲ್ಲಿ ಮತ್ತು ಕಠಿಣ ಹಿಂದುತ್ವ ವಿಷಯದಲ್ಲಿ ಸಾವರ್ಕರ್ ಅವರನ್ನು,
ಮತಾಂಧತೆಯ ವಿಷಯದಲ್ಲಿ ಟಿಪ್ಪು ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ…….

ಸಾವರ್ಕರ್ ಮತ್ತು ಟಿಪ್ಪು ವಿಷಯದಲ್ಲಿ ಪ್ರೀತಿ ಮತ್ತು ದ್ವೇಷ ಈಗ ಅತಿಯಾದ ಚರ್ಚೆಗೆ ಗ್ರಾಸವಾಗಿದೆ…….

Advertisement

ಪ್ರೌಢಶಾಲೆಯಿಂದ ಸ್ನಾತಕೋತ್ತರ ಶಿಕ್ಷಣ ಮುಗಿಸಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ಸುಮಾರು 15 ರಿಂದ 30 ವರ್ಷದ ಯುವಕರಿಗೆ ಮೇಲಿನ ವ್ಯಕ್ತಿಗಳು ಅಥವಾ ಆ ರೀತಿಯ ವ್ಯಕ್ತಿತ್ವಗಳನ್ನು ಹೇಗೆ ಪರಿಚಯಿಸುವುದು..
ಗತಿಸಿ ಹೋಗಿರುವ ಇತಿಹಾಸದಲ್ಲಿ ಹುದುಗಿರುವ ವಾಸ್ತವವನ್ನು ಯಾವ ನೆಲೆಯಲ್ಲಿ ಅರ್ಥಮಾಡಿಸುವುದು….

ಇಡೀ ಭಾರತದ ಇತಿಹಾಸವನ್ನು ಓದಿರುವವರು, ಓದಿ ಅರ್ಥಮಾಡಿಕೊಂಡಿರುವವರು, ಅರ್ಥಮಾಡಿಕೊಂಡು ಅಧ್ಯಯನ ಮಾಡಿರುವವರು, ಅಧ್ಯಯನ ಮಾಡಿ ಅದನ್ನು ತಮ್ಮ ಅನುಭವದ ಆಧಾರದಲ್ಲಿ ಗ್ರಹಿಸಿ ವಾಸ್ತವಕ್ಕೆ ಹತ್ತಿರದ ತೀರ್ಮಾನಕ್ಕೆ ಬಂದು ಅಭಿಪ್ರಾಯ ವ್ಯಕ್ತಪಡಿಸುವವರು ತುಂಬಾ ಕಡಿಮೆ ಜನರಿದ್ದಾರೆ….

Advertisement

ಯಾವುದೋ ಹಿನ್ನೆಲೆಯ, ಯಾರೋ ಬರೆದ ಪುಸ್ತಕಗಳನ್ನು ಓದಿ ಅವರ ವಕೀಲಿಕೆಯ ಅಂಶಗಳಿಂದ ಪ್ರೇರಿತರಾಗಿ ಒಂದು ನಿರ್ದಿಷ್ಟ ಬಲೆಯೊಳಗೆ ಸಿಲುಕಿರುತ್ತಾರೆ. ನಿಜವಾದ ಇತಿಹಾಸಕಾರ ಪಠ್ಯಗಳನ್ನು ಓದಿರುವುದೇ ಇಲ್ಲ.

ಒಬ್ಬರ ವ್ಯಕ್ತಿತ್ವವನ್ನು ಅವರ ಹೋರಾಟ, ತ್ಯಾಗ, ದೈರ್ಯ, ಸಾಮರ್ಥ್ಯ, ಸಂದರ್ಭ, ಭಾವುಕತೆ ಇವುಗಳನ್ನು ಮಾತ್ರ ನೋಡಿ ನಿರ್ಧರಿಸಬಾರದು.

Advertisement

ಒಂದು ವ್ಯಕ್ತಿತ್ವ ಇಡೀ ಸಮಾಜಕ್ಕೆ ಎಲ್ಲಾ ರೀತಿಯಲ್ಲೂ ಆದರ್ಶ ಮತ್ತು ಅನುಕರಣೀಯ ಆಗಬೇಕಾದರೆ ಅವರ ವೈಯಕ್ತಿಕ, ಸಾಮಾಜಿಕ ಬದುಕು ಮತ್ತು ಅದು ಇಡೀ ಸಮುದಾಯದ ಮೇಲೆ ಬೀರಿರುವ ಪ್ರಭಾವ, ಭವಿಷ್ಯದ ಪರಿಣಾಮ ಹಾಗು ಮಾನವ ಜಗತ್ತಿನ ಮೂಲ ಅಂಶಗಳಾದ ನ್ಯಾಯ ನೀತಿ ಧರ್ಮದ ತಳಹದಿಗೆ ಅವರು ಯಾವ ರೀತಿ ಕೊಡುಗೆ ನೀಡಿದ್ದಾರೆ ಎಂಬುದು ಬಹುಮುಖ್ಯವಾಗುತ್ತದೆ.

ಕೇವಲ ನಮ್ಮ ಭಾಷೆಗೆ, ನಮ್ಮ ಧರ್ಮಕ್ಕೆ, ನಮ್ಮ ದೇಶಕ್ಕೆ ಅಥವಾ ನಮ್ಮ ಸ್ವಂತ ಹಿತಾಸಕ್ತಿಗೆ ಲಾಭವಾಗಿದೆ ಎಂದ ಮಾತ್ರಕ್ಕೆ ಅವರನ್ನು ಅತ್ಯುನ್ನತ ಸ್ಥಾನದಲ್ಲಿ ಇಡಬಾರದು.

Advertisement

ಟಿಪ್ಪು ಮತ್ತು ಸಾವರ್ಕರ್ ಜೀವಿತಾವಧಿಯಲ್ಲಿ ಭಾರತ ಈಗಿನಂತೆ ಒಕ್ಕೂಟ ವ್ಯವಸ್ಥೆಯಾಗಿರಲಿಲ್ಲ, ಪ್ರಜಾಪ್ರಭುತ್ವ ಇರಲಿಲ್ಲ, ರಾಜಕೀಯ ಪಕ್ಷಗಳು ಮತ್ತು ಚುನಾವಣೆ ಸಹ ಇರಲಿಲ್ಲ. ಈ ರೀತಿಯ ಸಮೂಹ ಸಂಪರ್ಕ ಮಾಧ್ಯಮಗಳು ಮತ್ತು ವಿದ್ಯಾಭ್ಯಾಸ ಕೂಡ ಇರಲಿಲ್ಲ. ಎಡ ಬಲ ಸಿದ್ದಾಂತಗಳ ಬಡಿದಾಟವೂ ಇರಲಿಲ್ಲ.

ಈ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇತಿಹಾಸ ಮತ್ತು ವ್ಯಕ್ತಿತ್ವಗಳ ತುಲನಾತ್ಮಕ ಅಧ್ಯಯನ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಹೆಚ್ಚು ಚರ್ಚೆಗೆ ಒಳಗಾಗಿರುವ ಸಾವರ್ಕರ್ ಮತ್ತು ಟಿಪ್ಪು ಅವರನ್ನು ವಿಮರ್ಶಿಸಬೇಕಾಗಿದೆ.

Advertisement

ಸಾವರ್ಕರ್ ಮತ್ತು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರೇ ? : ಖಂಡಿತ ಹೌದು, ಯಾವುದೇ ಅನುಮಾನ ಬೇಡ, ದೇಶದ ಸ್ವಾತಂತ್ರ್ಯಕ್ಕಾಗಿ ಅವರವರ ಮಿತಿಯಲ್ಲಿ ಅಪಾರ ನೋವಿನ ಹೋರಾಟ ಮಾಡಿದ ವ್ಯಕ್ತಿಗಳು. ಇಬ್ಬರೂ ಬ್ರಿಟಿಷರಿಂದ ಸಾಕಷ್ಟು ನೋವು ಅನುಭವಿಸಿದರು. ಅದನ್ನು ಯಾರು ಮರೆಯಬಾರದು. ಅವರ ಸೈದ್ಧಾಂತಿಕ ಹಿನ್ನೆಲೆ ಏನೇ ಇದ್ದರೂ ಉದ್ದೇಶ ಏನೇ ಇದ್ದರೂ ಇಬ್ಬರೂ ಹೋರಾಟಗಾರರು ಎಂಬುದು ಸತ್ಯ.

ಸಾರ್ವರ್ಕರ್ ಗಾಂಧಿ ಕೊಲೆಯ ಪಿತೂರಿಗಾರರೇ ?: ಈ ನೆಲದ ಕಾನೂನು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯ ಆಧಾರದಲ್ಲಿ ಯಾವುದೇ ಶಿಕ್ಷೆ ವಿಧಿಸದೆ ಬಿಡುಗಡೆ ಮಾಡಿದೆ. ಆದರೆ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಅವರಿಗೆ ಗಾಂಧಿ ವಿಚಾರಧಾರೆ, ಅವರ ರಾಜಕೀಯ ನಿಲುವುಗಳ ಬಗ್ಗೆ ಬಲವಾದ ವಿರೋಧವಿತ್ತು. ಹಿಂದೂ ರಾಷ್ಟ್ರದ ಮತ್ತು ಹಿಂದುತ್ವದ ಬಗ್ಗೆ ಒಲವಿತ್ತು.ಮುಸ್ಲಿಮರ ಬಗ್ಗೆ ದ್ವೇಷವಿತ್ತು. ಘೋಡ್ಸೆ ಜೊತೆಗೆ ಪರೋಕ್ಷ ಸಂಪರ್ಕವಿತ್ತು ಎಂಬ ಅಂಶಗಳು ಕಂಡುಬರುತ್ತದೆ.
ಭಾರತದ ವಿಭಜನೆ ಮತ್ತು ಹಿಂದೂಗಳ ಹತ್ಯಾಕಾಂಡದ ಬಗ್ಗೆ ಹೆಚ್ಚು ಕೋಪವಿತ್ತು ಎಂದೂ ತಿಳಿದುಬರುತ್ತದೆ. ಆ ಕಾರಣದಿಂದಾಗಿ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿರುವ ಅಥವಾ ಅದನ್ನು ಒಪ್ಪಿರುವ ಸಾಧ್ಯತೆ ಇದೆ. ಅದಕ್ಕಾಗಿಯೇ ಸ್ವಾತಂತ್ರ್ಯ ನಂತರ ಅವರನ್ನು ನಿರ್ಲಕ್ಷಿಸಲಾಯಿತು.

Advertisement

ಟಿಪ್ಪು ಮತಾಂಧರೇ ? : ಟಿಪ್ಪು ಒಂದು ಪ್ರದೇಶದ ಸಾಮಂತ ರಾಜ. ಇಡೀ ರಾಜ್ಯದ ಸಂಪೂರ್ಣ ಅಧಿಕಾರ ಅವರ ಬಳಿಯಿತ್ತು. ಸಹಜವಾಗಿ ಆತನ ವಿರುದ್ಧ ನಿಲುವುಗಳ ಜನರನ್ನು ಹತ್ತಿಕ್ಕಿರುವ ಸಾಧ್ಯತೆಗಳು ಇದ್ದೇ ಇರುತ್ತದೆ. ಕೊಡವರ ವಿಷಯದಲ್ಲಿ ಮತ್ತು ಮಂಗಳೂರು ಕ್ರಿಶ್ಚಿಯನ್ನರ ಹತ್ಯಾಕಾಂಡ ಘಟನೆಯಲ್ಲಿ ಸಾಬೀತಾಗಿದೆ. ಹಾಗೆಯೇ ರಾಜ್ಯಕ್ಕೆ ಅನೇಕ ಅತ್ಯುಪಯುಕ್ತ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತಮ್ಮ ಮಕ್ಕಳನ್ನೇ ಅಡ ಇಟ್ಟಿದ್ದರು. ಯುದ್ಧ ಭೂಮಿಯಲ್ಲಿ ಹೋರಾಡುತ್ತಾ ಅಸು ನೀಗಿದರು. ಆಗಿನ ಎಷ್ಟೋ ಕ್ರೌರ್ಯ ತುಂಬಿದ ರಾಜರ ನಡುವೆ ಟಿಪ್ಪು ಉತ್ತಮ ಆಡಳಿತಗಾರ ಮತ್ತು ಹೋರಾಟಗಾರ ಎಂಬುದು ಸತ್ಯ. ಅದನ್ನು ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಹಿನ್ನೆಲೆಯಲ್ಲಿ ವಿಮರ್ಶಿಸಬಾರದು.

ಸಾವರ್ಕರ್ ಬ್ರಿಟಿಷ್ ಆಡಳಿತಕ್ಕೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆ ಪ್ರಯತ್ನಿಸಿದರೆ ? :ಹೌದು, ಇದು ಬಹುತೇಕ ದೃಢಪಟ್ಟಿದೆ.

Advertisement

ಹಾಗಾದರೆ ಸಾವರ್ಕರ್ ಅವರ ವ್ಯಕ್ತಿತ್ವವನ್ನು ಇದರ ಆಧಾರದ ಮೇಲೆ ನಿರ್ಧರಿಸಬಹುದೆ ? :ಇಲ್ಲ, ಇದು ಖಂಡಿತ ತಪ್ಪಾಗುತ್ತದೆ. ಸಾವರ್ಕರ್ ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಶಿಕ್ಷೆಗೆ ಗುರಿಯಾಗಿ ಅಂಡಮಾನ್ ದ್ವೀಪಗಳ ಅತ್ಯಂತ ಯಾತನಾಮಯ ಜೈಲಿಗೆ ತಳ್ಳಲ್ಪಡುತ್ತಾರೆ. ಬಹಳಷ್ಟು ದೀರ್ಘಕಾಲ ಅಲ್ಲಿಯೇ ಇರಿಸಲಾಗುತ್ತದೆ. ಒಂದೆರಡು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಸಹ ಮಾಡುತ್ತಾರೆ.

ಒಬ್ಬ ವ್ಯಕ್ತಿ ಆತ ಎಂತಹ ಬಲಿಷ್ಠನೇ ಆಗಿರಲಿ ಹಲವಾರು ವರ್ಷಗಳ ಕಾಲ ಅತ್ಯಂತ ಯಾತನಾಮಯ ಪರಿಸ್ಥಿತಿಯಲ್ಲಿ ಜೀವಿಸಿದರೆ ಆತನಲ್ಲಿ ಉಂಟಾಗುವ ಮಾನಸಿಕ ಸ್ಥಿತಿ ನಮ್ಮ ಯಾರ ಊಹೆಗೂ ನಿಲುಕುವುದಿಲ್ಲ. ಅದರಲ್ಲೂ ನಮ್ಮ ವಿರೋಧಿಗಳು ರೂಪಿಸಿರುವ ಶಿಕ್ಷೆಯ ಉಗ್ರ ವಾತಾವರಣದಲ್ಲಿ ಬದುಕುಳಿಯುವುದೇ ಒಂದು ಮಹತ್ಸಾಧನೆ. ಅಂತಹ ಸಂದರ್ಭದಲ್ಲಿ ನಮ್ಮ ಉಳಿವಿಗಾಗಿ ಮಾಡುವ ಯಾವುದೇ ಮಾರ್ಗಗಳನ್ನು ಖಂಡಿತ ತಪ್ಪು ಎಂದು ಭಾವಿಸಬಾರದು.

Advertisement

ನಮ್ಮ ನೆಲವನ್ನು ಪರಕೀಯರು ಆಕ್ರಮಿಸಿ ನಮ್ಮನ್ನೇ ಶಿಕ್ಷಿಸುತ್ತಿರುವಾಗ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾಗಿ ಇನ್ನೇನೋ ತಂತ್ರ ಮಾಡುವ ಯೋಜನೆಯೂ ಇರಬಹುದು ಅಥವಾ ಬದುಕುಳಿಯುವ ಆಸೆಯೂ ಇರಬಹುದು. ಅದನ್ನು ನೆಪವಾಗಿ ಇಟ್ಟುಕೊಂಡು ಅವರನ್ನು ಹೇಡಿ ಎನ್ನುವುದು ಸರಿಯಲ್ಲ.

ಹಾಗಾದರೆ ಸಾವರ್ಕರ್ ಅವರನ್ನು ಭಾರತ ಸ್ವಾತಂತ್ರ್ಯದ ಅತ್ಯಂತ ಮಹತ್ವದ ವ್ಯಕ್ತಿ ಎಂದು ಪರಿಗಣಿಸಿ ಗಾಂಧಿ ನೆಹರು ವಿರುದ್ಧ ಎತ್ತಿಕಟ್ಟಿ ರಾಜಕೀಯ ಮಾಡುವುದು ಸರಿಯೇ. ? ಅವರ ವ್ಯಕ್ತಿತ್ವ ಆ ಮಟ್ಟದಲ್ಲಿ ಇದೆಯೇ ?

Advertisement

ಖಂಡಿತ ಇಲ್ಲ. ತನ್ನ ಚಿಂತನೆ ಹೋರಾಟದಲ್ಲಿ ಹಿಂಸೆಯನ್ನು ಪ್ರತಿಪಾದಿಸಿರುವುದು, ಧಾರ್ಮಿಕ ಸಂಕುಚಿತ ಮನೋಭಾವ ಪ್ರದರ್ಶಿಸಿರುವುದು, ವಿಶ್ವಕ್ಕೆ ಸತ್ಯ ಅಹಿಂಸೆ ಮಾನವೀಯತೆ ಭೋದಿಸಿ ಅನುಸರಿಸಿ ಇಡೀ ವಿಶ್ವದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿದ ಗಾಂಧಿಯವರನ್ನು ಒಂದು ವೇಳೆ ಇಷ್ಟ ಇಲ್ಲದಿದ್ದರೆ ಸೈದ್ದಾಂತಿಕವಾಗಿ ವಿರೋಧಿಸುವುದನ್ನು ಮಾಡದೆ ಕೊಲೆಯಂತ ಕೆಲಸಗಳಿಗೆ ಪ್ರೇರೇಪಿಸುವುದು ಅಥವಾ ಅದನ್ನು ಸಂಭ್ರಮಿಸುವ ತಪ್ಪನ್ನು ಮಾಡಿದ್ದಾರೆ.

ಹಾಗೆಯೇ ಟಿಪ್ಪು ಸುಲ್ತಾನ್ ಸಹ ಭಾರತೀಯರು ಗೌರವಿಸಬೇಕಾದ ಒಬ್ಬ ಹೋರಾಟಗಾರರು. ಟಿಪ್ಪುವಿನಿಂದ ಯಾರಿಗೆ ತೊಂದರೆಯಾಗಿದೆಯೋ ಅವರು ನಿರೋಧಿಸುವುದು ಸಹಜ. ಆದರೆ ಇಡೀ ಜನ ಸಮೂಹ ರಾಜಕೀಯ ಪಕ್ಷದ ಆಧಾರದಲ್ಲಿ ಟಿಪ್ಪುವನ್ನು ವಿರೋಧಿಸುವುದು ಹಾಸ್ಯಾಸ್ಪದ.

Advertisement

ಸಾವರ್ಕರ್ ಅವರನ್ನು ಎತ್ತಿಹಿಡಿಯುವ ನೆಪದಲ್ಲಿ ನೆಹರು ಗಾಂಧಿಯವರನ್ನು ದ್ವೇಷಿಸುವುದು – ಟಿಪ್ಪು ವಿರೋಧಿಸುವ ಭರದಲ್ಲಿ ಅವರ ಹೋರಾಟವನ್ನು ದ್ವೇಷಿಸಿ ಸುಳ್ಳು ಹೇಳುವುದು ಎರಡೂ ಅಕ್ಷಮ್ಯ.

ಎಲ್ಲಕ್ಕಿಂತ ಮುಖ್ಯವಾಗಿ ಯಾರೇ ವ್ಯಕ್ತಿ ಯಾವುದೇ ಕಾಲದಲ್ಲಿ ಯಾವುದೇ ಸಂದರ್ಭದಲ್ಲಿ ತನ್ನ ಬದುಕನ್ನು ತಾನೇ ನಿರ್ದೇಶಿಸುವ ಸ್ವಾತಂತ್ರ್ಯ ಹೊಂದಿರುತ್ತಾನೆ. ಅದು ಆತನ ಪರಮಾಧಿಕಾರ. ನಾವು ಅದನ್ನು ವಿಮರ್ಶಿಸಬಹುದೇ ಹೊರತು ಹೀಗೆ ಇರಬೇಕಿತ್ತು ಎಂದು ತೀರ್ಮಾನ ಕೊಡುವುದು ಅಷ್ಟು ಉತ್ತಮ ನಡೆಯಲ್ಲ.

Advertisement

ಹೀಗೆ ಒಂದು ವಿಷಯ ಹಲವಾರು ಮುಖಗಳನ್ನು ಒಳಗೊಂಡಿರುತ್ತದೆ. ಒಂದು ನಿರ್ದಿಷ್ಟ ಮತ್ತು ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಸ್ವಲ್ಪ ಕಷ್ಟ. ಒಂದು ವೇಳೆ ಸ್ಪಷ್ಟ ತೀರ್ಮಾನ ತೆಗೆದುಕೊಂಡರೆ ಅದು ನಮ್ಮ ಜ್ಞಾನಕ್ಕೆ ಮಿತಿ ಹೇರಿದಂತಾಗುತ್ತದೆ.

ನ್ಯಾಯಾಲಯದಲ್ಲಿ ವಾದ ಮಾಡಿದಂತೆ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ಮತ್ತು ಅವರ ಮಾನವೀಯ ವಿರೋಧಿ ನಿಲುವುಗಳ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಅದೇ ರೀತಿ ಟಿಪ್ಪು ಸುಲ್ತಾನ್ ಮಾಡಿದ ಅನೇಕ ಒಳ್ಳೆಯ ಕೆಲಸಗಳು ಮತ್ತು ದೌರ್ಜನ್ಯಗಳ ಸಾಕ್ಷ್ಯಗಳು ಸಹ ದೊರೆಯುತ್ತದೆ.

Advertisement

ಎಲ್ಲಕ್ಕಿಂತ ಮುಖ್ಯವಾಗಿ ಈಗ ಇತಿಹಾಸದ ಪುಟಗಳಿಂದ ನಾವು ವರ್ತಮಾನ ಮತ್ತು ಭವಿಷ್ಯದ ಪಾಠ ಕಲಿಯಬೇಕೆ ಹೊರತು ಅನಾವಶ್ಯಕವಾಗಿ ಇತಿಹಾಸದ ಘಟನೆಗಳ ನೆನಪಿನಲ್ಲಿ ರಾಜಕೀಯ ಮಾಡುತ್ತಾ ಹೊಡೆದಾಟ ಬಡಿದಾಟ ಮಾಡುವುದು ಅತ್ಯಂತ ಮೂರ್ಖತನ. ಆ ಮೂರ್ಖತನದ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ..

ದಯವಿಟ್ಟು ಅರ್ಥಮಾಡಿಕೊಳ್ಳಿ… ಇತಿಹಾಸಕ್ಕೆ ಬಣ್ಣಗಳಿಲ್ಲ – ಅದು ಸನ್ನಿವೇಶಗಳ ಸಹಜ ಸೃಷ್ಟಿ. ಎಲ್ಲವನ್ನೂ ಒಳಗೊಂಡ ಆದರೆ ಬದಲಿಸಲಾಗದ ಘಟನೆಗಳ ಸರಪಳಿ. ಅದು ಪಾಠವೇ ಹೊರತು ದ್ವೇಷ ಅಸೂಯೆ ಮತಗಳ ಸರಕಲ್ಲ……
.

Advertisement
ಬರಹ :
ವಿವೇಕಾನಂದ ಎಚ್.ಕೆ.
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

19 hours ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

1 day ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

1 day ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

1 day ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

1 day ago

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |

ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…

1 day ago