ಸ್ನೇಹಯಾನ

ಸಂತೆಯಲ್ಲಿ ಸಾಗುತ್ತಿರುವ ನಾವು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರೀ ದೊಡ್ಡ ಜಾತ್ರೆ. ಅಲ್ಲಿ ವಿಸ್ತಾರವಾದ ವೈವಿಧ್ಯಮಯ ವಸ್ತುಗಳ ಮಾರಾಟದ ಸಂತೆ ಹರಡಿಕೊಂಡಿರುತ್ತದೆ. ದೂರಕ್ಕೆ ನೋಡಿದಷ್ಟೂ ಕಾಣುವುದೇ ಜನಜಂಗುಳಿ. ಎಲ್ಲರೂ ಸುಖಾಪೇಕ್ಷಿಗಳಾಗಿಯೇ ಬಂದವರು. ಕೆಲವರಿಗೆ ನೋಡುವ ಸುಖ, ಕೆಲವರಿಗೆ ಲಾಭ ಮಾಡುವ ಸುಖ, ಇನ್ನು ಕೆಲವರಿಗೆ ಅಪರೂಪದ ವಸ್ತುಗಳನ್ನು ಖರೀದಿಸುವ ಸುಖ. ಹೀಗೆ ಎಲ್ಲರೂ ವ್ಯಾಪಾರದಲ್ಲಿ ತೊಡಗಿದ್ದಾರೆ. ಎಲ್ಲಿ ಖರೀದಿಸುವುದು? ಏನನ್ನು ಖರೀದಿಸುವುದು? ಇದು ತನಗೆ ಬೇಕಾ? ಈಗ ಕೊಳ್ಳದಿದ್ದರೆ ಮತ್ತೆ ಸಿಗದೇ ಹೋದೀತೇ? ಈಗ ಕೊಂಡರೆ ಹೊತ್ತುಕೊಂಡು ತಿರುಗುವುದು ಹೇಗೆ? ಜಾತ್ರೆಯಲ್ಲಿ ಇನ್ನೂ ತಿರುಗಿ ನೋಡಬೇಕಾದ್ದು ಬಹಳ ಇದೆ. ಮುಂದೆ ಕಡಿಮೆ ಬೆಲೆಗೆ ಸಿಗಲೂಬಹುದು. ಜಾತ್ರೆಯನ್ನು ಸಂಪೂರ್ಣವಾಗಿ ಕಾಣಲು ಹಣವನ್ನು ಉಳಿಸಿಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಖರೀದಿಸಬೇಕು. ಹಾಗಾಗಿ ಈಗಲೇ ಹಣವನ್ನು ಮುಗಿಸುವುದು ಸರಿಯಲ್ಲ. ಕಿಸೆಯಲ್ಲಿರುವ ಪರ್ಸನ್ನು ಮುಟ್ಟಿನೋಡುತ್ತಲೇ ಮುಂದಿನ ಖರೀದಿಯ ಮೇಲೆ ಕಣ್ಣು ಹಾಯಿಸುತ್ತಲೇ ಜನರೆಡೆಯಲ್ಲಿ ಜಾಗ ಮಾಡಿಕೊಳ್ಳುತ್ತ, ಎಡವುತ್ತ, ತಳ್ಳುತ್ತ, ಅಲ್ಲೇನಿದೆ, ಇಲ್ಲೇನಿದೆ, ಎಷ್ಟಕ್ಕೆ ಸಿಗುತ್ತದೆ ಎಂದು ವಿಚಾರಿಸುತ್ತ ಸಾಗುವ ವ್ಯಕ್ತಿಗೆ ಸುಸ್ತಾಗಿ ಇನ್ನು ಹೊರಗೆ ಕಾಲಿಡುವಾಗ ತೃಪ್ತಿ ಇರುವುದಿಲ್ಲ. ಬಳಲಿಕೆ ಮಾತ್ರ ಇರುತ್ತದೆ. ಆದರೆ ಅಷ್ಟರಲ್ಲಿ ಸಮಯ ಕಳೆದಿರುತ್ತದೆ.

Advertisement

ತನ್ನ ಸುತ್ತಾಟದ ಆರಂಭದಲ್ಲಿ ಖರೀದಿಸಬೇಕೆಂದು ಬಯಸಿದ ವಸ್ತುಗಳು ಇನ್ನೂ ಅಲ್ಲೇ ಉಳಿದಿವೆಯೇ ಎಂದು ನೋಡಲು ಹೋಗುತ್ತಾನೆ. ಆದರೆ ಅಷ್ಟರಲ್ಲಿ ಸಂತೆಯ ರೂಪವೇ ಬದಲಾಗಿರುತ್ತದೆ. ಅಲ್ಲಿ ಹೊಸ ಹೊಸ ವಸ್ತುಗಳು ಬಂದು ಸೇರಿರುತ್ತವೆ. ಗುಣಮಟ್ಟ ಕಡಿಮೆಯಾಗಿದ್ದರೂ ಅವುಗಳ ಬೆಲೆ ಹೆಚ್ಚಾಗಿರುತ್ತದೆ. ಗಿರಾಕಿಗಳಲ್ಲಿ ಹೊಸ ಸ್ಪರ್ಧೆಯೂ ಇರುತ್ತದೆ. ವಸ್ತುಗಳ ಆಕರ್ಷಣೆಯ ಕಾರಣಗಳು ಬದಲಾಗಿರುತ್ತವೆ. ಅಂದರೆ ಜಗತ್ತಿನ ಇಂದಿನ ವಿದ್ಯಮಾನಗಳ ವೇಗದಲ್ಲಿ ವಸ್ತುಗಳ ಮತ್ತು ಸೇವೆಗಳ ಆಯ್ಕೆಗಳೂ ಬೆಲೆಗಳು ಏರುತ್ತವೆ. ಈ ಏರಿಕೆಯು ಗಿರಾಕಿಗಳ ಪ್ರತಿಷ್ಠೆಯೊಂದಿಗೆ ಹೊಂದಿಕೊಳ್ಳುವುದರಿಂದ ಜಾತ್ರೆಯ ಮೌಲ್ಯಗಳೂ, ನೀತಿಗಳೂ, ಉದ್ದೇಶಗಳೂ ಹೊಸ ದೃಷ್ಠಿಯನ್ನು ಪಡೆಯುತ್ತವೆ. ಈಗ ದೃಷ್ಠಿ ಇದ್ದಂತೆ ಮನಸ್ಸು ರೂಪುಗೊಳ್ಳುತ್ತದೆ, ಮನಸ್ಸಿನಂತೆ ಭಾವ, ಭಾವದಂತೆ ಯತ್ನ ಹಾಗೂ ಯತ್ನದ ಪ್ರಕಾರ ಫಲ ಇರುತ್ತದೆ.

ಯಥಾ ದೃಷ್ಟಿಃ ತಥಾ ಮನಃ| ಯಥಾ ಮನಃ ತಥಾ ಭಾವಃ||
ಯಥಾ ಭಾವಃ ತಥಾ ಯತ್ನಃ| ಯಥಾ ಯತ್ನಃ ತಥಾ ಫಲಃ||

ಅರ್ಥಾತ್ ಇಂದಿನ ಜನರ ಪ್ರಯತ್ನಗಳು ಅವರ ದೃಷ್ಠಿ ಮತ್ತು ಭಾವಗಳಿಂದ ನಿರ್ದೇಶಿತವಾಗಿರುತ್ತವೆ. ಅದರಂತೆ ಫಲಗಳೂ ಲಭಿಸುತ್ತವೆ. ಇಂದಿನ ಜೀವನದ ಪರಿಸರವು ಜಾತ್ರೆಯ ಪರಿಸರದಂತಾಗಿದೆ. ಇಲ್ಲಿ ಸ್ಥಿರತೆಗಿಂತ ಅಸ್ಥಿರತೆಯೇ ಹೆಚ್ಚಾಗಿದೆ. ಯಾರು ಯಾವಾಗ ಜಾರಬಹುದು, ಬೀಳಬಹುದು ಮತ್ತು ಮುಳುಗಬಹುದು ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಸಂತೃಪ್ತಿಯ ಹೊಸ ನೆಲೆಗಳು ಕಾಣಸಿಗುತ್ತವೆ. ಹಾಗಾಗಿ ನಮ್ಮ ಸಾಮಾಜಿಕ ಜೀವನವು ಜಾತ್ರೆಯೊಳಗಿನ ಸೆಳೆತ ಮತ್ತು ತಳ್ಳುವಿಕೆಯ ಪರಿಸ್ಥಿತಿಗೆ ಒಳಗಾದಂತಿದೆ. ಹಣ ಗಳಿಸುವ ಗುರಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇತ್ತೀಚೆಗೆ ಒಬ್ಬರು ತನ್ನ ಮಗನಿಗೆ ವರ್ಷಕ್ಕೆ ಎರಡು ಕೋಟಿ ರೂಪಾಯಿ ಸಂಬಳ, ದೊಡ್ಡ ಮನೆ ಮತ್ತು ಐಷಾರಾಮಿ ಕಾರು ಸಿಕ್ಕಿದೆ ಎಂದರು. ಅದನ್ನು ಕೇಳಿದಾಗ ಅಲ್ಲಿದ್ದ ಯುವಜನರಿಗೆ “ತಮಗೂ ಇಂಥದ್ದೇ ಆದಾಯ ಬೇಕು” ಎಂತ ಅನಿಸಿದರೆ ಆಶ್ಚರ್ಯವಿಲ್ಲ. ಅದಕ್ಕಾಗಿ ಏನು ಮಾಡಬೇಕು? ಯಾವ ಶಿಕ್ಷಣ ಪಡೆಯಬೇಕು ಎಂಬ ಕಡೆಗೇ ಅವರ ಚಿತ್ತ. ಆದರೆ ಅಷ್ಟೊಂದು ದುಡ್ಡು ದುಡಿಯುವವನಿಗೆ ತನ್ನ ಹೆಂಡತಿ ಮಕ್ಕಳತ್ತ ಮತ್ತು ಹೆತ್ತವರ ನೆಮ್ಮದಿಯತ್ತ ಚಿತ್ತ ಹರಿಸಲು ಸಮಯವಿಲ್ಲ ಎಂಬ ಸತ್ಯದ ಬಗ್ಗೆ ಯಾರೂ ಯೋಚಿಸುವುದಿಲ್ಲ. ಆಸೆಗಳು ಹಣದ ಮೊತ್ತದತ್ತ ಚಿತ್ತವನ್ನು ಸೆಳೆಯುತ್ತವೆ. ಆಸೆ ಹೊತ್ತ ಮಕ್ಕಳು ಎತ್ತೆತ್ತಲೋ ಸಾಗುತ್ತಾರೆ. ಹೆತ್ತವರು ನೆಮ್ಮದಿಯ ಹುಡುಕಾಟ ನಡೆಸುತ್ತಾರೆ.

Advertisement

ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದರೆ ಕೃಷಿಯಲ್ಲಿ ತೊಡಗಿದವನಿಗೆ ಅನ್ನ ಇಲ್ಲ ಎಂತಾಗುವುದಿಲ್ಲ ಎಂಬುದೇ ತಾತ್ಪರ್ಯ. ಆದರೆ ಇಂದು ಜನ ಕೃಷಿಯನ್ನು ಬಿಡುತ್ತಿದ್ದಾರೆ. ಏಕೆಂದರೆ ಕೃಷಿಯು ಕೊಟ್ಯಾಂತರ ರೂಪಾಯಿ ಹಣ ಗಳಿಸುವ ದಾರಿಯಲ್ಲ. ಇಂದಿನ ಯುವಜನರ ಆಸಕ್ತಿ “ಅನ್ನವನ್ನು ಬೆಳೆಸುವ ಅಲ್ಲ, ಅನ್ನವನ್ನು ಖರೀದಿಸುವ” ಸಾಮರ್ಥ್ಯವನ್ನು ಗಳಿಸಬೇಕು ಎಂಬುದಾಗಿದೆ. ಆಗ ನಾವು ಅನ್ನವನ್ನಷ್ಟೇ ಅಲ್ಲ, ಬೇರೆ ಅನೇಕ ಸುಖಭೋಗಗಳನ್ನು ಗಳಿಸಲು ಸಾಧ್ಯ ಎಂಬುದು ಅವರ ನಂಬಿಕೆಯಾಗಿದೆ. ಅದಕ್ಕಾಗಿ ಜಾತ್ರೆಯಲ್ಲಿ ಕಡಿಮೆ ಬೆಲೆಗೆ ನಮಗೆ ಬೇಕಾದ ವಸ್ತುವನ್ನು ಹುಡುಕುವಂತೆ ಯಾವ ಶಿಕ್ಷಣವು ಎಲ್ಲಿ ಕಡಿಮೆಗೆ ಸಿಗುತ್ತದೆಂದು ಹುಡುಕುವತ್ತ ನಮ್ಮನ್ನು ತಳ್ಳಿಸಿಕೊಳ್ಳುತ್ತೇವೆ. ಈ ತಳ್ಳಾಟದಲ್ಲಿ ಎಲ್ಲಿಗೋ ಒಂದು ಕಡೆಗೆ ತಳ್ಳಲ್ಪಡುತ್ತೇವೆ. ನಮಗೆ ಸಿಕ್ಕಿದ್ದನ್ನು ಪಡೆಯುತ್ತೇವೆ. ಮತ್ತೆ ಸಿಕ್ಕಿದ ಉದ್ಯೋಗಾವಕಾಶದಲ್ಲಿ ನೆಲೆಗೊಳ್ಳುತ್ತೇವೆ. ಆಗ ಕಳೆದುಹೋದ ಸಾಧ್ಯತೆಗಳು ಕಾಣತೊಡಗುತ್ತವೆ, ಮತ್ತು ಅವು ನಮ್ಮ ನೆಮ್ಮದಿಯನ್ನು ಕೆಡಿಸುತ್ತವೆ. ಉದ್ಯೋಗ ಜಾತ್ರೆಯಲ್ಲಿ ತಳ್ಳಲ್ಪಡದಿರುತ್ತಿದ್ದರೆ ಇನ್ನೂ ಉತ್ತಮ ಅವಕಾಶವ ಪಡೆಯಬಹುದಿತ್ತು ಎಂಬ ಕೊರತೆಯ ಭಾವ ಆವರಿಸುತ್ತದೆ.

ಇಂದಿನ ಔದ್ಯಮಿಕ ಜಗತ್ತಿನಲ್ಲಿ “ಸುಸ್ಥಿರತೆ” (Sustainability)ಯ ಅವಶ್ಯಕತೆಯು ಮತ್ತೆ ಮತ್ತೆ ಪ್ರತಿಪಾದಿಸಲ್ಪಡುತ್ತದೆ. ಯಾವುದೇ ಹೊಸ ಸಂಶೋಧನೆಯ ಯೋಜನೆಗಳ ಮೌಲ್ಯಮಾಪನದಲ್ಲಿ ಸುಸ್ಥಿರತೆಯ ಪ್ರಶ್ನೆಯೇ ಹೆಚ್ಚು ಮುಖ್ಯವಾಗುತ್ತದೆ. ಕಳೆದ ಎರಡು ಮೂರು ದಶಕಗಳಲ್ಲಿ ಭತ್ತದ ಬೇಸಾಯವು ಕರಾವಳಿಯಲ್ಲಿ ಕಡಿಮೆಯಾಗುತ್ತ ಬಂದಿದೆ. ಇನ್ನು ಮಲೆನಾಡಿನಲ್ಲಿ ಹಿಂದಿನ ಭತ್ತದ ಗದ್ದೆಗಳು ಆರ್ಥಿಕವಾಗಿ ಲಾಭದಾಯಕವಲ್ಲವೆಂದು ಅಡಿಕೆ ತೋಟಗಳಾಗಿ ಪರಿವರ್ತನೆಗೊಂಡಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಮರಗಳಿಗೆ ಹಳದಿ ರೋಗ ಬಂದು ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಪರ್ಯಾಯವಾಗಿ ರಬ್ಬರ್ ಬೆಳೆಸಿದವರು ಜೀವನ ನಿರ್ವಹಣೆಯ ಸವಾಲನ್ನು ಗೆದ್ದಿದ್ದಾರೆ. ಆದರೆ ಅವರಿಗೂ ಆರ್ಥಿಕ ಸ್ಥಿರತೆ ಎಂಬುದು ಮರೀಚಿಕೆಯಾಗಿದೆ. ಅದೇ ರೀತಿ ಕೈಗಾರಿಕಾ ವಲಯದಲ್ಲಿಯೂ ಹೊಸ ಸಂಶೋಧನೆಗಳಿಂದಾಗಿ ಅನೇಕ ಉದ್ಯಮಗಳು ನೆಲ ಕಚ್ಚುತ್ತಿವೆ. ಅಂದರೆ ಹೊಸ ಉದ್ಯಮಗಳ ಆವಿರ್ಭಾವದಷ್ಟೇ ವೇಗದಲ್ಲಿ ಅವುಗಳನ್ನು ಮುಚ್ಚಿಸುವಂತಹ ಹೊಸ ತಾಂತ್ರಿಕತೆಯು ಬಳಕೆಗೆ ಬರುತ್ತಿದೆ. ಒಂದು ಸಣ್ಣ ಉದಾಹರಣೆಯೆಂದರೆ ಕೆಲವು ವರ್ಷಗಳ ಕಾಲ ನಗರಗಳಲ್ಲಿ ಟೆಲಿಫೋನ್ ಬೂತ್‍ಗಳು ಸುಸ್ಥಿರವೆನ್ನಿಸುವಂತಹ ಉದ್ಯಮಗಳಾಗಿ ಯುವಜನರಿಗೆ ಜೀವನೋಪಾಯವನ್ನು ಒದಗಿಸಿದ್ದುವು. ಆದರೆ ಮೊಬೈಲ್ ಫೋನ್‍ಗಳು ಸಾರ್ವತ್ರಿಕವಾಗಿ ಬಳಕೆಗೆ ಬಂದ ಬಳಿಕ ಟೆಲಿಫೋನ್ ಬೂತ್‍ಗಳು ಕಾಣೆಯಾದುವು. ಅವುಗಳಿಗಾಗಿ ಹಾಕಿದ ಬಂಡವಾಳ ಕೈಗೆ ಬಂದಿದ್ದರೆ ಆ ಸ್ವೋದ್ಯೋಗಿಗಳ ಪುಣ್ಯ. ಹಾಗೆಯೇ ಕೊಕ್ಕೊ ಮಾರಾಟಗಾರರಾಗಿ ಬೆಳೆದವರು ಬೆಲೆ ಕುಸಿಯುತ್ತಲೇ ಸ್ಥಿರತೆಯನ್ನು ಕಳೆದುಕೊಂಡರು. ರಬ್ಬರ್ ಬೆಲೆಯ ಏರಿಳಿತವೂ ರೈತರನ್ನು ಹೈರಾಣಾಗಿಸುತ್ತದೆ. ಅಂದರೆ ಸುಸ್ಥಿರತೆ ಎಂಬುದು ಮರೀಚಿಕೆಯಂತಾದಾಗ ಸ್ಥಿರತೆಗಾಗಿ ಹುಡುಕಾಡುವುದು ಜಾತ್ರೆಯೊಳಗಿನ ಓಡಾಟದಂತೆಯೇ ಆಗಿದೆ.

ಶಿಕ್ಷಣಕ್ಕಾಗಿ ಹಣ ಸುರಿದವರಿಗೆ ಅದರ ಎಷ್ಟೋ ಹೆಚ್ಚು ಮರಳಿ ಪಡೆಯುವ ಆಸೆ ಇರುತ್ತದೆ. ಆಗ ಇನ್ನೊಬ್ಬರ ದಾಕ್ಷಿಣ್ಯ ನೋಡೋದಕ್ಕಾಗೋದಿಲ್ಲ. ನಿರುದ್ಯೋಗಿಯಾಗಿದ್ದ ತನಗೆ ಉದ್ಯೋಗ ಕೊಟ್ಟು ವೃತ್ತಿಯ ಅನುಭವ ನೀಡಿ ಅನ್ನ ಕೊಡುತ್ತಿರುವ ಸಂಸ್ಥೆಯನ್ನು ಹಾಗೂ ತನ್ನೊಂದಿಗೆ ಹೊಂದಿಕೊಂಡಿರುವ ಸಹೋದ್ಯೋಗಿಗಳನ್ನು ನಿಷ್ಕಾಳಜಿಯಿಂದ ಬಿಟ್ಟುಹೋಗುವುದು ಹೇಗೆ ಎಂಬಿತ್ಯಾದಿ ಭಾವನೆಗಳನ್ನು ಬದಿಗಿರಿಸಿ ಹೆಚ್ಚು ವೇತನದ ಉದ್ಯೋಗಕ್ಕೆ ಹಾರಲು ಇಂದಿನ ವಿದ್ಯಾವಂತರು ಮನಸ್ಸು ಮಾಡುತ್ತಾರೆ. ಹಾಗೆ ಮಾಡುವುದೇ ಜಾಣ್ಮೆ ಎಂಬ ಹೊಸ ಮೌಲ್ಯ ಈಗ ಪ್ರಚಲಿತವಿದೆ. ಈ ಪರಿಪಾಠ ಶಿಕ್ಷಣ ಸಂಸ್ಥೆಗಳಲ್ಲಿಯೂ ಇತ್ತೀಚೆಗೆ ವ್ಯಾಪಿಸಿದೆ. ಪ್ರಭಾವಶಾಲಿಗಳೆಂದು ಪ್ರಸಿದ್ಧರಾದ ಉಪನ್ಯಾಸಕರು ಈಗ ಉದ್ಯೋಗದಾತರನ್ನು ಬದಲಿಸುವಲ್ಲಿ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯರು ಕೂಡಾ ಹೀಗೆಯೇ ಸ್ಥಾನಾಂತರಗೊಳ್ಳುತ್ತಾರೆ. ಇತ್ತೀಚಿನ ಒಂದು ಉದಾಹರಣೆ ಮಾರ್ಮಿಕವಾಗಿದೆ. Cancer ಚಿಕಿತ್ಸೆ ನೀಡುವ ವೈದ್ಯರೊಬ್ಬರು ರೋಗಿಯನ್ನು ಪರೀಕ್ಷಿಸಿ “ಇನ್ನು ಹದಿನೈದು ದಿನ ನೋಡೋಣ, ಅಷ್ಟರಲ್ಲಿ ರೋಗ ವ್ಯಾಪಿಸಿದರೆ ಮಾತ್ರ ಚಿಕಿತ್ಸೆ ನೀಡೋಣ. ಈಗೇನೂ ಬೇಕಾಗಿಲ್ಲ” ಎಂದರು. ನಂತರ ಅವರು ತನ್ನ ನಿಗದಿತ ವಿದೇಶ ಪ್ರವಾಸಕ್ಕೆ ಹೋದರು. ಹಿಂದಿರುಗಿದ ಬಳಿಕ ಪರೀಕ್ಷಿಸಿ “ಇದು ಸ್ವಲ್ಪ ಮುಂದೆ ಹೋಗಿದೆ. ಆಪರೇಶನ್ ಮಾಡೋಣ” ಎಂದರು. ಈ ವೈದ್ಯರಿಗಿದ್ದ ಆಸಕ್ತಿ ಹಣದ್ದೇ ಹೊರತು ಇನ್ನೇನೂ ಅಲ್ಲ. ಅವರ ವಿದೇಶ ಪ್ರವಾಸದ ಸಮಯದಲ್ಲಿ ಇನ್ನೊಬ್ಬ ವೈದ್ಯರಿಗೆ ರೋಗಿಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಇಂತಹ ಸ್ವಾರ್ಥದ ಹಿಂದೆ ಇರುವ ಚಿಂತನೆಯನ್ನು ನೋಡುವಾಗ ಇದು ಸಂತೆಯಲ್ಲಿರುವ ಸಾಮಾಜಿಕ ಬದುಕು ನಮ್ಮದು ಎಂಬುದು ಸ್ಪಷ್ಟವಾಗುತ್ತದೆ.

ತಂತ್ರಜ್ಞರಿಗೂ ಕೂಡಾ ಸ್ಥಿರತೆ ಇಲ್ಲ. ಇಂಜಿನಿಯರ್ ಗಳು ತಮ್ಮ ಉದ್ಯೋಗವನ್ನು ಬದಲಾಯಿಸುತ್ತಲೇ ಇರುತ್ತಾರೆ. ಹೆಚ್ಚು ವೇತನ ಸಿಗುವಲ್ಲಿಗೆ ಅವರ ಒತ್ತುವಿಕೆ. ಇನ್ನು ವ್ಯಾಪಾರ, ಕಾನೂನು, ನೈಸರ್ಗಿಕ ಪ್ರಕೋಪಗಳಿಂದಾಗಿ ಉದ್ಯಮಗಳು ಕುಸಿದರೆ ತಾಳಿಕೊಳ್ಳುವ ತಾಕತ್ತು ಅನೇಕರಲ್ಲಿ ಇರುವುದಿಲ್ಲ. ಹಾಗಾಗಿ ಅಸ್ಥಿರತೆಯ ಖಡ್ಗ ತಲೆಯ ಮೇಲೆ ನೇತಾಡುತ್ತಿರುವ ಪ್ರಜ್ಞೆಯಿಂದಲೇ ಜನರು ಬದುಕುತ್ತಿದ್ದಾರೆ.

ಸ್ನೇಹಯಾನ | 14-05-2025 | ಸಂತೆಯಲ್ಲಿ ಸಾಗುತ್ತಿರುವ ನಾವು

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ

ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…

3 hours ago

ಪ್ರತಿಯೊಂದು  ಗ್ರಾಮ ಪಂಚಾಯಿತಿಯಲ್ಲಿ  ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…

4 hours ago

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ

ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…

4 hours ago

ಹೃದಯಾಘಾತದ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯ ಇಲ್ಲ

ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ…

4 hours ago

ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ – ಗೃಹಸಚಿವ ಡಾ.ಜಿ.ಪರಮೇಶ್ವರ್

ಸುಳ್ಳು ಸುದ್ದಿ ಹರಡುವವರು ಮತ್ತು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ದ ಸೂಕ್ತ ಕಾನೂನು…

5 hours ago

ಬಾಹ್ಯಾಕಾಶದಲ್ಲಿ ಹೆಸರುಕಾಳು, ಮೆಂತ್ಯ ಮೊಳಕೆಯೊಡೆಯುವ ಪ್ರಯೋಗ ಪ್ರಗತಿಯಲ್ಲಿ – ನಾಸಾ ಸ್ಪಷ್ಟನೆ

ಬಾಹ್ಯಕಾಶದಲ್ಲಿ   ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೆಸರುಕಾಳು ಹಾಗೂ ಮೆಂತ್ಯ ಕಾಳುಗಳ ಮೊಳಕೆಯೊಡೆಯುವ ಪ್ರಯೋಗಗಳನ್ನು…

5 hours ago