ನಾವ್ ದನ(Cow) ಸಾಕೋದಿಲ್ಲ..
ನಮಗೆ ದನ ವರ್ಕೌಟ್ ಆಗೋದಿಲ್ಲ..
ನಮ್ಮಲ್ಲಿ ಕೊಟ್ಟಿಗೆ ಕೆಲಸ ಮಾಡೋರ್ ಇಲ್ಲ….
ಇಲ್ಲ ಇಲ್ಲ ಇಲ್ಲ…
ನಾವ್ ದನ ಸಾಕೋದಿಲ್ಲ….
ಹೀಗೆ ಯೋಗರಾಜ್ ಭಟ್ಟರ “ನಾವ್ ಮನೆಗೆ ಹೋಗೋದಿಲ್ಲ ” ಗೀತೆಯ ಸಾಹಿತ್ಯದಂತೆ ಮಲೆನಾಡು(Malenadu) ಕರಾವಳಿಯ(Coastal) ಗೋ ಸಾಕಣೆಯ(Cattle farming) ಸ್ಥಿತಿಯೂ ಹೀಗೆಯೇ ಆಗಿದೆ…!!
ಗೋವುಗಳು ಹೆಚ್ಚಾದರೆ ಏನು ಮಾಡುವುದು…? ಗೋವುಗಳು ಹೋರಿ ಕರ ಹಾಕಿದರೆ ಏನು ಮಾಡುವುದು…?
ಹೆಣ್ಣು ದನವಿದೆ ಆದರೆ ಅದು ಬೆದೆಗೆ ಬಂದರೆ ಹೋರಿ ಇಲ್ಲ. ಇನ್ಸಾಮನೇಶನ್ ಮಾಡಿದರೆ ಯಶಸ್ವಿಯಾಗಿ ಗಬ್ಬ ಗಟ್ಟುತ್ತಿಲ್ಲ.. ಸಾಂಪ್ರದಾಯಿಕ ಮೇಯಲು ಜಾಗವಿಲ್ಲ… ಹೆಚ್ಚು ಹಾಲು ಕೊಡದ ದೇಸಿ ತಳಿಗಳಿಗೆ
ಅಥವಾ ಹಾಲೇ ಕೊಡದ ಹಸುಗಳಿಗೆ ಹೊಟ್ಟೆಗೆ ಹಾಕಿದರೆ ನಷ್ಟ…. ಹಸು ಸಾಕಿದರೆ ನೆಂಟರಿಷ್ಟರ ಮನೆ ಪ್ರವಾಸಕ್ಕೆ ಹೋಗೋಕೆ ಆಗೋಲ್ಲ… ಮನೆಯ ಹೆಂಗಸರು ಕೊಟ್ಟಿಗೆ ಕೆಲಸ ಮಾಡಲು ಇಚ್ಚಿಸುತ್ತಿಲ್ಲ…!!
ನಾವು ವೃದ್ದರು ನಮಗೆ ಕೊಟ್ಟಿಗೆ ಕೆಲಸ ಮಾಡಲಾಗುತ್ತಿಲ್ಲ.. ಯುವಕರು ಹಳ್ಳಿಗೆ ಬರುತ್ತಿಲ್ಲ…
ಯುವಕರು ಹಳ್ಳಿಯ ಕೃಷಿ ಜೀವನಕ್ಕೆ ಬಂದರೂ ಕೊಟ್ಟಿಗೆ ಖಾಲಿ ಮಾಡುತ್ತಾರೆ..
ಹಳ್ಳಿ ಮನೆಯ ಹುಡುಗರಿಗೆ ಅವರ ಮನೆಯಲ್ಲಿ ಜಾನುವಾರು ಇರೋದು ಆ ಜಾನುವಾರುಗಳ ಕೊಟ್ಟಿಗೆ ಕೆಲಸ ಮಾಡಲಾಗದು ಎಂಬ ಕಾರಣಕ್ಕೆ ಹಳ್ಳಿ ಹುಡುಗರ ಮದುವೆ ಆಗಲು ನಿರಾಕರಣೆ ಆಗುತ್ತಿರುವುದರಿಂದಲೂ ಹಳ್ಳಿ ಮನೆಯಲ್ಲಿ ಜಾನುವಾರು ಕಾಣೆ ಯಾಗುತ್ತಿವೆ.ಆದರೂ ಹಳ್ಳಿ ಹುಡುಗರಿಗೆ ಮದುವೆ ಆಗುತ್ತಿಲ್ಲ.. ಬಿಡಿ …. ಈಗ ನಮ್ಮೂರಿನ ಗ್ರಾಹಕರ ಹಾಲಿನ ಅವಶ್ಯಕತೆಗಾಗಿ ನಂದಿನಿ ಹಾಲು… ತಮಿಳುನಾಡಿನ ಆರೋಗ್ಯ ಹಾಲು ಆಂದ್ರಾದ ದೊಡ್ಲ ಹಾಲು ಕೂಡ ನಮ್ಮೂರಿನ ಅಂಗಡಿಯ ಫ್ರಿಡ್ಜ್ ನ ಸೇರಿ ನಮ್ಮೂರ ಗ್ರಾಹಕ ಕಾಯುತ್ತಿದೆ…!! ಹಾಲಿಗಾಗಿ ಕೊಟ್ಟಿಗೆ ಜಾನುವಾರು ಬೇಡ….. ಕೃಷಿಗೆ ಬಣ್ಣ ಬಣ್ಣದ ಪ್ರೆಸ್ ಮಡ್ ಗೊಬ್ಬರ ಇದೆ… ಕೃಷಿ ಗೊಬ್ಬರ ಕ್ಕಾಗಿಯೂ ಗೋವುಗಳು ಬೇಡ… ಮತ್ತೆ ಗೋವನ್ನ ಯಾಕೆ ಸಾಕಬೇಕು…? ಮಲೆನಾಡು ಕರಾವಳಿಯ ಬುದ್ದಿವಂತ “ಸ್ಟ್ಯಸ್ಟಿಕ್ಕರು ಹಾಲು – ಗೊಬ್ಬರ ಮತ್ತು ಹುಲ್ಲು- ಹಿಂಡಿ – ನಿರ್ವಹಣೆ ಎಲ್ಲಾ ಟೋಟಲ್ ಮಾಡಿ ಲೆಕ್ಕಾಚಾರ ಹಾಕಿ ಜಾನುವಾರು ಸಾಕೋದು “ನಷ್ಟ… ” ಎನ್ನುತ್ತಾರೆ.
ಈಗ ಕೃಷಿಕರಿಗೆ ಅಥವಾ ಗ್ರಾಮೀಣರಿಗೆ ಗೋವು ಜೀವನದ ಅವಿಭಾಜ್ಯ ಅಂಗವಲ್ಲ.ಹಿಂದಿನವರ ನಮೂನೆಯಲ್ಲಿ ಈಗಿನವರಿಗೆ ಗೋವಿನ ಬಗ್ಗೆ ಮಮಕಾರ ಪ್ರೀತಿ ಇಲ್ಲ… ಗೋವಿಗಾಗಿ ನಾವೊಂದು ವಾಟ್ಸಾಪ್ ಗುಂಪಿನಲ್ಲಿ ಸೇರಿದಾಗ ಅಲ್ಲಿ ಹಳ್ಳಿ ಮನೆಯ ಕೃಷಿಕ ಮಹಿಳೆಯೊಬ್ಬರು ನಾವು ಹೊರಗೆ ಪ್ರವಾಸಕ್ಕೆ ಹೋಗಿ ಬರುವ ತನಕ ನಮ್ಮ ಗೋವುಗಳನ್ನ ನೋಡಿ ಕೊಳ್ಳಲು ವ್ಯವಸ್ಥೆ ಇದ್ದಿದ್ದರೆ ಚೆನ್ನಾಗಿತ್ತು ಎಂದಿದ್ದರು.
ಆದರೆ, ಸೆನ್ಸಿಟೀವ್ ಮಲೆನಾಡು ಗಿಡ್ಡ ತಳಿ ಹಸುಗಳನ್ನು ಅಥವಾ ಜೆರ್ಸಿ ಜಾನುವಾರುಗಳನ್ನೂ ಪೇಟೆಯ ಮಂದಿಯ “ಪೆಟ್ ಕೇರ್” ಸೆಂಟರ್ ಗೆ ಬೆಕ್ಕು ನಾಯಿ ಬಿಟ್ಟು ಬಂದಂತೆ ಸಲೀಸಾಗಿ ಪಿಕ್ ಅಪ್ ವಾಹನ ಹತ್ತಿಸಿ ಎಲ್ಲೋ “ಗೋ ಶಿಬಿರಗಳಿಗೆ ” ಗೋವುಗಳನ್ನ ಕೊಂಡೊಯ್ದು ಬಿಟ್ಟು ಮತ್ತೆ ಬೇಕಾದಾಗ ಮನೆಗೆ ಮರಳಿ ತರುವ ಆಲೋಚನೆ ಸುಲಭವಲ್ಲ…!!! ವಾಸ್ತವ ಅತ್ಯಂತ ಕಠಿಣ. ಇದರ ಬದಲಾಗಿ ಗೋಪಾಲಕರು ಮನೆಯಲ್ಲಿ ಇಲ್ಲದಾಗ ಯಾರೋ ಅವರ ಬದಲಿಗೆ ನಾಕು ದಿನ ಗೋ ನಿರ್ವಹಣೆ ಮಾಡಿಕೊಡೋ ವ್ಯವಸ್ಥೆ ಇಲ್ಲ.
ಇವತ್ತು, ಗೋವು ಖಂಡಿತವಾಗಿಯೂ ಈ ಕಾಲದ ಮನಸ್ಥಿತಿ, “ಮನೆ ಸ್ಥಿತಿ” ಯಲ್ಲಿ ಸಾಕಣೆ ಕಷ್ಟ… ಈಗ ಹತ್ತು ಎಕರೆ ಅಡಿಕೆ ತೋಟ ಇರುವ ನಮ್ಮ ಕಡೆಯ ದೊಡ್ಡ ರೈತರಿಗೂ ಹಸುಗಳ ಪರಿಪಾಲನೆ ಅನಿವಾರ್ಯವಲ್ಲ. ಅವರೂ ಕೂಡ ನಷ್ಟ ನಿರ್ವಹಣೆ ಲೆಕ್ಕಾಚಾರದಲ್ಲಿ ಸಾಕುವುದರಿಂದ ಹಿಂದಡಿ ಇಡುತ್ತಿದ್ದಾರೆ..!! “ಈಗ ಹಸುಗಳ ಸಗಣಿ ಗೊಬ್ಬರ ಕೃಷಿಗೆ ಬೇಡ” ಏಕೆಂದರೆ ನಾವು ಮಲೆನಾಡು ಕರಾವಳಿಯ ಕೃಷಿಕರ ಅಡಿಕೆ, ಕಾಫಿ, ಕಾಳುಮೆಣಸು, ಕೊಕೊ ಸೇರಿದಂತೆ ಎಲ್ಲಾ ತೋಟಗಾರಿಕೆ ಬೆಳೆಗಳು ಕೊಟ್ಟಿಗೆ ಗೊಬ್ಬರ ಹಾಕುವುದನ್ನ ನಿಲ್ಲಿಸಿದರೂ ನಮ್ಮ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಕೃಷಿ ಜಮೀನುಗಳು ಬೆಳೆಯ ಇಳುವರಿ ತಕ್ಷಣ ಒಂದು” ಐದು ಹತ್ತು” ವರ್ಷಗಳ ತನಕವೂ ಹೆಚ್ಚಿನ ವ್ಯತ್ಯಯ ಆಗೋಲ್ಲ.. ಸ್ವಲ್ಪ ನೀರು ಸ್ವಲ್ಪ ರಾಸಾಯನಿಕ ಗೊಬ್ಬರದಲ್ಲಿ ಮಾಮೂಲಿನ ಇಳುವರಿ ನೀಡುತ್ತವೆ…
ಆದರೆ, ಎಲೆಚುಕ್ಕಿ, ಶಿಲೀಂಧ್ರ ರೋಗ, ಹಳದಿ ಎಲೆ ರೋಗ ಮುಂತಾದ ರೋಗ ಬಂದಾಗ ಅಡಿಕೆ ಕಾಳುಮೆಣಸುನಂತಹ ಬೆಳೆಗಳು ಕೊಟ್ಟಿಗೆ ಗೊಬ್ಬರ ಹಾಕಿ ಬೇಸಾಯ ಮಾಡದ ಕಾರಣಕ್ಕೆ ಸುಲಭವಾಗಿ ರೋಗಕ್ಕೆ ಶರಣಾಗಿ ಬಿಡುತ್ತದೆ…!! ಕಳೆದ ಮೂವತ್ತು ವರ್ಷಗಳಿಂದ ಮಲೆನಾಡು ಕರಾವಳಿಯ ಮೂರು ನಾಲ್ಕನೆಯ ತಲೆಮಾರಿನ ಪೀಳಿಗೆ ತಮ್ಮ ಪೂರ್ವಜರ ಕೃಷಿ ಬದುಕನ್ನು ಮುಂದುವರಿಸಿಕೊಂಡು ಹೋಗುವುದನ್ನು ಬಿಟ್ಟು ನಗರ ಜೀವನ ಆಯ್ಕೆ ಮಾಡಿಕೊಂಡ ಪರಿಣಾಮ… ಮತ್ತು ಮನುಷ್ಯ ಈ ಐವತ್ತು ವರ್ಷಗಳ ಹಿಂದೆ ನಿಸರ್ಗದ ಜೊತೆಗೆ ಸಹಬಾಳ್ವೆ ಮಾಡುತ್ತಿದ್ದ. ನಂತರದ ದಿನಗಳಲ್ಲಿ ಮನುಷ್ಯ ತಂತ್ರಜ್ಞಾನದ ಮೂಲಕ ನಿಸರ್ಗವನ್ನು ದಬ್ಬಾಳಿಕೆ ಮಾಡಿ ದೋಚಿ ಬಾಳತೊಡಗಿದ. ಈ ಸಮಯದಲ್ಲಿ ಅಪಾರ ಪ್ರಮಾಣದ ಅರಣ್ಯ ನಾಶ, ಅಪಾರ ಪ್ರಮಾಣದ ನೈಸರ್ಗಿಕ ಹುಲ್ಲು ಗಾವಲಿನ ಒತ್ತುವರಿ ಮಾಡಿಕೊಂಡು “ತೋಟಗಾರಿಕೆ” ಕೃಷಿ ಇನ್ನಿತರ ಚಟುವಟಿಕೆಗಳನ್ನು ಮಾಡು ವುದನ್ನ ಆರಂಭಿಸಿದ ಮೇಲೆ ಈ ನಿಸರ್ಗದ ಜೀವಿ ಗಳಾದ ದೇಸಿ ತಳಿ ಹಸುಗಳು ನಾಶ ವಾಗತೊಡಗಿದವು.
ಜಾಗತಿಕರಣದ ನಂತರ ಮಲೆನಾಡು ಕರಾವಳಿಯಲ್ಲಿ ಕೃಷಿ ಬದುಕು ಮುಕ್ತಾಯದ ದಿಕ್ಕಿನಲ್ಲಿದೆ. ಸಾವಿರಾರು ವರ್ಷಗಳಿಂದ ಮನುಷ್ಯನ ಜೊತೆಗೆ ಬದುಕಿ ಬಾಳಿದ್ದ ದೇಸಿ ತಳಿ ಹಸುಗಳಿಗೀಗ ಮನುಷ್ಯನ ಆಸರೆಯೂ ಇಲ್ಲ ಜೊತೆಯಲ್ಲಿ ನಿಸರ್ಗದ ಆಸರೆಯೂ ಇಲ್ಲ.. ..!! ಮಲೆನಾಡು ಕರಾವಳಿಯ ಕೃಷಿ ಬದುಕು ಕೇವಲ “ಅಡಿಕೆಯೊಂದು” ಬೆಳೆಯ ಮೇಲಿದೆ. ಯಾವುದೇ ಕ್ಷಣದಲ್ಲೂ ಅಡಿಕೆ ಬೆಳೆ ರೋಗವೋ ಅಥವಾ ವಿಸ್ತರಣೆ ಸಮಸ್ಯೆಯ ಕಾರಣವೋ ನೆಲಕಚ್ಚ ಬಹುದು. ಆ ಕ್ಷಣದಿಂದ ಮಲೆನಾಡು ಕರಾವಳಿಯ ಬಹುತೇಕ ಹಳ್ಳಿಗಳು ನಿರ್ಮಾನುಷ ವಾಗತೊಡಗುತ್ತದೆ…
ಸದ್ಯ ಖಂಡಿತವಾಗಿಯೂ ಮಲೆನಾಡು ಕರಾವಳಿಯಲ್ಲಿ ಬದಲಾದ ಹವಮಾನ, ಬದಲಾದ ಸಾಮಾಜಿಕ ಸ್ಥಿತಿ (ಬಹುತೇಕ ಊರಿನಲ್ಲಿ ಉತ್ತರ ಭಾರತದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಬಳಸಿ ಕೃಷಿ ಮಾಡಲಾಗುತ್ತಿದೆ) ಯಲ್ಲಿ ಮನುಷ್ಯನ ಬದುಕೇ ಅತಂತ್ರವಾಗಿರುವಾಗ ಇನ್ನು ಅವನ ಸಾಕು ಪ್ರಾಣಿಗಳ ಭವಿಷ್ಯದ ಬಗ್ಗೆ ಹೇಳುವುದೇ ಬೇಡ… ಮಲೆನಾಡು ಕರಾವಳಿಯ ರೈತಾಪಿಗಳು ಈ ಕಾರಣಕ್ಕೆ ದೇಸಿ ತಳಿ ಹಸುಗಳ ಸಾಕಿ ಸಂವರ್ಧನೆ ಮಾಡಲಾರರು… ಖಂಡಿತವಾಗಿಯೂ ಅವರಿಗೆ ನಷ್ಟ.. ಒಂದು ಜಮೀನು ಎಂದರೆ ಆ ಜಮೀನಿನ ತೋಟಗಾರಿಕೆ ಬೆಳೆಗೆ ಪೂರಕವಾಗಿ ಗೋವುಗಳು, ಈ ಗೋವುಗಳಿಂದ ಗೊಬ್ಬರ ತಯಾರಿಸಲು ಸೊಪ್ಪು, ದರಗಿಗಾಗಿ ಕಾಡು, ಜಾನುವಾರುಗಳ ಮೇವಿಗಾಗಿ ಸ್ವಲ್ಪ ಹುಲ್ಲು ಗಾವಲು . ಜಾನುವಾರುಗಳ ಮೇವು ಮತ್ತು ಮನೆಯ ಆಹಾರದ ಅವಶ್ಯಕತೆಗೆ ಸಾಕಾಗುವಷ್ಟು ಬತ್ತ ಮತ್ತು ಧಾನ್ಯ ಬೆಳೆ ಬೆಳೆಯುತ್ತಿದ್ದರು. ಈಗ ಬರೀ ಅಡಿಕೆ ತೋಟ ಮಾತ್ರ. ಹೊರ ಗಡೆಯಿಂದ ಮೇವು ಹಿಂಡಿಕೊಂಡು ತಂದು ಹಸು ಸಾಕಣೆ ನಷ್ಟದಾಯಕವೇ ಸರಿ.
ದೇಸಿ ತಳಿ ಹಸುಗಳನ್ನು ಸಾಕುವರು ಹಾಲಿನ ಲೆಕ್ಕಾಚಾರದಲ್ಲಿ ಸಾಕಿದರೆ ಖಂಡಿತವಾಗಿಯೂ ನಷ್ಟ.ಈ ಬದಲಾದ ಹವಾಮಾನ ದಲ್ಲಿ ತೋಟಗಾರಿಕೆ ಬೆಳೆ ಕೃಷಿ ಉಳಿಯಬೇಕಾದರೆ ದೇಸಿ ತಳಿ ಹಸುಗಳ ಗೊಬ್ಬರ ಬೇಕೇ ಬೇಕು. ದೇಸಿ ತಳಿ ಹಸುಗಳ ಗೊಬ್ಬರ ಅತ್ಯುತ್ತಮ , ಮಣ್ಣಿಗೆ ಅತ್ಯಮೂಲ್ಯ..
ದೇಸಿ ತಳಿ ಹಸುಗಳ ಸಗಣಿಗೆ ಗೋಪಾಲಕರು ಬೆಲೆ ಕಟ್ಟಿದರೆ ಖಂಡಿತವಾಗಿಯೂ ದೇಸಿ ತಳಿ ಹಸುಗಳನ್ನು ಸಾಕುವುದು ನಷ್ಟವಲ್ಲ. ಮುಂದಿನ ಪೀಳಿಗೆಗಾಗಿ ಈಗ ಅಳಿದುಳಿದ ದೇಸಿ ತಳಿ ಹಸುಗಳ ಬಗ್ಗೆ ಆಸಕ್ತಿ ಪ್ರೀತಿ ಇರುವವರು ಸಾಮೂಹಿಕ ಗೋ ಸಂವರ್ಧನೆ ಸಾಕಾಣಿಕೆ ಕಾರ್ಯಕ್ರಮ ಮಾಡಿದರೆ ಗೋವುಳಿದೀತು…ಇದೇ ವಾಸ್ತವ…
ಈ ಆಹಾರದ ಹಕ್ಕು, ಗೋಹತ್ಯಾ ನಿಷೇಧ ಇತ್ಯಾದಿ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ತಿನ್ನುವವರು ಮತ್ತು ಸಾಕಲಾಗದವರ ಬುದ್ದಿವಂತಿಕೆಯ ಪಾಲಾಯನವಾದಗಳು. ಈ ಎರಡು ದಶಕಗಳ ಹಿಂದೆ ಸಾಂಪ್ರದಾಯಿಕ ಕೃಷಿ ಮಾಡುವಾಗ ಯಾರಿಗೂ ಗೋ ನಿರ್ವಹಣೆ ನಷ್ಟ ವಾಗಿರಲಿಲ್ಲ. ಆಗ ಯಾರೂ ತಿನ್ನುವ ವರಿಗೆ ಮಾರಾಟ ಮಾಡಿ ರೈತ ಉಳಿಯ ಬೇಕು ಎಂದು ಮಾತನಾಡುತ್ತಿರಲಿಲ್ಲ…!! ಆಗ ರೈತರಿಗೆ ಈಗಿನಷ್ಟು ಆರ್ಥಿಕ ಸಭಲತೆ ಇರಲಿಲ್ಲ. ಗೋವುಗಳು ಶೂನ್ಯ ಬಂಡವಾಳ ದಲ್ಲಿ ನಿರ್ವಹಣೆಯಾಗುತ್ತಿದ್ದವು.
ಈ ಆಹಾರದ ಹಕ್ಕಿನವರು ತಿನ್ನುವವರು ಆಗಲೂ ಇದ್ದರು… ಆಗ ತೀರಾ ಅಪರೂಪ ಕ್ಕೆ ಕಟುಕರ ಕೈಗೆ ಹಸುಗಳು ಸಿಗುತ್ತಿದ್ದವು. ಈಗನಂತೆ ಆಗ ಕಟುಕರಿಗೆ ಮಾರಾಟ ಮಾಡುವುದನ್ನು ಸಮರ್ಥನೆ ಮಾಡಿ ಕೊಳ್ಳುತ್ತಿರಲಿಲ್ಲ. ಆಗ ಒಂದು ಹಸು ಸತ್ತರೆ ಮನೆಯ ಹಿತ್ತಲಿನ ತೆಂಗಿನ ಮರದ ಬುಡದಲ್ಲಿ ಅದನ್ನು ಹೂಳಿ ಅದರಿಂದ ಅಪಾರ ಪ್ರಮಾಣದ ಗೊಬ್ಬರ ಆಗುತ್ತದೆ ಎನ್ಹುತ್ತಿದ್ದರು. ಆಗ ಕೃಷಿ- ಗೋವು ಪರಸ್ಪರ ಪೂರಕವಾದ ವಾತಾವರಣ ಇತ್ತು. “ಈಗ ಗೋವು ಮತ್ತು ಕೃಷಿ ಪರಸ್ಪರ ಪೂರಕವಾದ ವಾತವರಣ ” ಇಲ್ಲ ”
ಕಸಾಯಖಾನೆಗೆ ಕೊಡುವ ಗೋಪಾಲಕ ರಿಗೆ ನೆಪ ಕಾರಣಗಳು ಸಿಗುತ್ತಿದೆ… ಒಂದು ನಿಟ್ಟಿನಲ್ಲಿ ಅದೇ ಸಮ ಎಂದು ಅವರ ಮಾತು ಕೇಳುವವರಿಗೂ ಎನಿಸುತ್ತಿದೆ…
ಆದರೆ.., ಈಗಿರುವ ಗೋವುಗಳನ್ನ ಈ ನೆಪ, ಅನಿವಾರ್ಯತೆ , ಅಸಾಹಾಯಕತೆ ಗಳಾಚೆಯೂ ಮುಂದಿನ ಪೀಳಿಗೆಗಾಗಿ ಈ ನಿಸರ್ಗಕ್ಕಾಗಿ ದೇಸಿ ತಳಿ ಹಸುಗಳನ್ನು ಉಳಿಸುವ ಪ್ರಯತ್ನ ಮಾಡೋಣ..ಗೋವುಗಳನ್ನ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಗೋವಿನ ಹಾಲಿನ ಗೊಬ್ಬರ ದ ಋಣ ನಮ್ಮೆಲ್ಲರ ಮೇಲಿದೆ… ಗೋವು ಉಳಿಯಲಿ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…